ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ನಿಗ್ರಹಕ್ಕೆಒತ್ತು

ಭಾರತ, ತಜಕಿಸ್ತಾನ್ ಚರ್ಚೆ
Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ದುಷಾಂಬೆ (ಪಿಟಿಐ): ತಜಕಿಸ್ತಾನ್ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ  ಅವರು ತಜಕಿಸ್ತಾನ್ ಅಧ್ಯಕ್ಷ  ಇಮೊಮಾಲಿ ರಹಮೊನ್  ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.

ಉಭಯ ನಾಯಕರ ನಡುವಿನ `ಫಲಪ್ರದ ಸಭೆ'ಯಲ್ಲಿ ಭದ್ರತೆಗೆ ಸಂಬಂಧಿತ ವಿಷಯಗಳ ಮೇಲೆ ಪರಸ್ಪರ ಸಹಕಾರ ಹಾಗೂ ಅಂತರಗಡಿ  ಭಯೋತ್ಪಾದನೆ ಕುರಿತು  ಚರ್ಚೆ ನಡೆಸಲಾಯಿತು.

ಇಂಧನ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಕೂಡ ಉಭಯ ದೇಶಗಳು ಒಪ್ಪಿಗೆ ಸೂಚಿಸಿದವು.`ನಮ್ಮ ಮಾತುಕತೆಯಲ್ಲಿ, ತಜಕಿಸ್ತಾನದೊಂದಿಗೆ ಸಮಾನ ಸಹಭಾಗಿತ್ವ ಹೊಂದುವ ಭಾರತ ಬದ್ಧತೆಗೆ   ಒತ್ತು ನೀಡಲಾಗಿದೆ. ಇಂಧನ ಕ್ಷೇತ್ರ, ಮಾಹಿತಿ ತಂತ್ರಜ್ಞಾನ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಸಂಬಂಧಗಳನ್ನು ಬಲಪಡಿಸಲು ಮತ್ತು ತಜಕಿಸ್ತಾನ್‌ದಲ್ಲಿ ಸಣ್ಣ ಹಾಗೂ ಅತಿಸಣ್ಣ ಕೈಗಾರಿಕೆಗಳ ಸ್ಥಾಪಿಸಿಲು ನಾವು ಒಪ್ಪಿಕೊಂಡಿದ್ದೇವೆ' ಎಂದು ಅಲ್ಲಿನ ಅಧ್ಯಕ್ಷರ ಜತೆಗಿನ ತಮ್ಮ ಮಾತುಕತೆಯ ಬಳಿಕ ಅನ್ಸಾರಿ ತಿಳಿಸಿದರು.

ಉಭಯ ರಾಷ್ಟ್ರಗಳು ಪ್ರಾದೇಶಿಕ ಭದ್ರತೆಯ ವಿಷಯಗಳ ಬಗ್ಗೆ, ಅದರಲ್ಲೂ ಆಫ್ಘಾನಿಸ್ತಾನ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದವು.`ಪ್ರಾದೇಶಿಕ ಶಾಂತಿ ಹಾಗೂ ಭದ್ರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೇಗೆ ಸಹಕರಿಸಬೇಕು ಎಂಬ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡೆವು. ಇದರಲ್ಲಿ ಆಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಮಹತ್ವ ಪಡೆಯಿತು. ಶಾಂತಿ, ಸ್ಥಿರತೆ ಹಾಗೂ ಆಫ್ಘಾನಿಸ್ತಾನದ ಜನರ ಅಭ್ಯುದಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆ ದೇಶದ ಕಾರ್ಯಕ್ಷಮತೆಯನ್ನು ಈ ಭಾಗದ ದೇಶಗಳು ಹಾಗೂ ಅಂತರ ರಾಷ್ಟ್ರೀಯ ಸಮುದಾಯಗಳು ಬಲಪಡಿಸಬೇಕು ಎಂಬ ಕುರಿತು ಚರ್ಚಿಸಲಾಯಿತು' ಎಂದೂ ಅನ್ಸಾರಿ ವಿವರಿಸಿದರು.

ಈ ಸಂದರ್ಭದಲ್ಲಿ ಉಪರಾಷ್ಟ್ರಪತಿ ಅನ್ಸಾರಿ ಅವರು, ತಜಕಿಸ್ತಾನದ ರಾಷ್ಟ್ರೀಯ ಮ್ಯೂಸಿಯಂಗೆ ಭೇಟಿ ನೀಡಿದರು. ಸಾವಿರಾರು ವರ್ಷಗಳಿಂದ ಭಾರತ -ತಜಕಿಸ್ತಾನ ನಡುವೆ ಇರುವ ಸಾಂಸ್ಕೃತಿಕ ಸಂಬಂಧದತ್ತ ಶ್ಲಾಘನೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT