ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರಚುಕ್ಕಿ-ಗಗನಚುಕ್ಕಿ: ಪ್ರವಾಸಿಗರ ಜೀವಕ್ಕೆ ಭದ್ರತೆ ಇಲ್ಲ!

2006ರಿಂದ ಇಲ್ಲಿಯವರೆಗೆ 107ಮಂದಿ ಸಾವು
Last Updated 18 ಜುಲೈ 2013, 9:36 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಭರಚುಕ್ಕಿ ಜಲಪಾತ ಪ್ರದೇಶದಲ್ಲಿ ಸುರಕ್ಷತಾ ಕ್ರಮಕ್ಕೆ ಹೆಚ್ಚು ಒತ್ತು ನೀಡದಿರುವ ಪರಿಣಾಮ ಪ್ರವಾಸಿಗರ ಜೀವಕ್ಕೆ ಕಂಟಕ ಎದುರಾಗಿದೆ.

ನಿತ್ಯವೂ ಸಾವಿರಾರು ಪ್ರವಾಸಿಗರು ಜಲಪಾತದ ಸೊಬಗು ನೋಡಲು ದಾಂಗುಡಿ ಇಡುತ್ತಾರೆ. ಧುಮ್ಮಿಕ್ಕುವ ಜಲಧಾರೆ ನೋಡಿ ಪುಳಕಗೊಳ್ಳುತ್ತಾರೆ. ನೀರು ಬೀಳುವ ಸ್ಥಳದ ಮೇಲ್ಭಾಗ ಹಾಗೂ ದೋಣಿ ಮೂಲಕ ನೀರು ಬೀಳುವ ಕೆಳಭಾಗಕ್ಕೆ ತೆರಳುವುದು ಉಂಟು.

ಆದರೆ, ನೀರಿನ ಹರಿವಿನ ಪ್ರಮಾಣ ಈಗ ಹೆಚ್ಚಿರುವ ಪರಿಣಾಮ ಪ್ರವಾಸಿಗರು ಅಪಾಯಕ್ಕೆ ಸಿಲುಕುವುದೇ ಹೆಚ್ಚು. ಇತ್ತೀಚೆಗೆ ಬೆಂಗಳೂರಿನ ಐವರು ಪ್ರವಾಸಿಗರು ನೀರಿನ ಪ್ರವಾಹಕ್ಕೆ ಸಿಲುಕಿದ್ದ ನಿದರ್ಶನವೇ ಇದಕ್ಕೆ ಸಾಕ್ಷಿಯಾಗಿದೆ.

ಭರಚುಕ್ಕಿ ಜಲಪಾತದ ಕೆಳಭಾಗಕ್ಕೆ ತೆರಳಲು ಮೆಟ್ಟಿಲು ನಿರ್ಮಿಸಲಾಗಿದೆ. ಕಡಿದಾದ ಈ ಮೆಟ್ಟಿಲುಗಳ ಮೂಲಕ ತೆರಳುವ ಪ್ರವಾಸಿಗರು ದೋಣಿ ಮೂಲಕ ನೀರು ಬೀಳುವ ಸ್ಥಳಕ್ಕೆ ತೆರಳಲು ಮುಂದಾಗುತ್ತಾರೆ. ಆದರೆ, ಯಾವುದೇ ಪ್ರವಾಸಿಗರಿಗೂ ದೋಣಿಯವರು ಜೀವರಕ್ಷಕ ಜಾಕೆಟ್ ನೀಡುವುದಿಲ್ಲ.

ಹೀಗಾಗಿ, ರಭಸವಾಗಿ ನೀರು ಹರಿಯುವ ಪ್ರದೇಶದಲ್ಲಿ ದೋಣಿ ಮೂಲಕ ತೆರಳುವ ವೇಳೆ ದೋಣಿ ಮುಗುಚಿಕೊಂಡರೆ ಪ್ರವಾಸಿಗರು ಜೀವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದರೆ, ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡಲು ಭರಚುಕ್ಕಿ ಅಭಿವೃದ್ಧಿ ಸಮಿತಿ ಕ್ರಮಕೈಗೊಂಡಿಲ್ಲ ಎನ್ನುವುದು ಪ್ರವಾಸಿಗರ ದೂರು.

ಗಗನಚುಕ್ಕಿ ಪ್ರದೇಶದಲ್ಲೂ ಇದೇ ಪರಿಸ್ಥಿತಿ ಇದೆ. ವಾಸ್ತವವಾಗಿ ಗಗನಚುಕ್ಕಿ ಜಲಪಾತ ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ತಾಲ್ಲೂಕಿಗೆ ಸೇರಿದೆ. ಆದರೆ, ಗಡಿ ಜಿಲ್ಲೆಗೆ ಸೇರಿದ ಪ್ರದೇಶ ದಿಂದ ಈ ಜಲಪಾತದ ಸೊಬಗು ಸವಿಯಬ ಹುದು. ಈ ಜಲಪಾತ ಪ್ರದೇಶದಲ್ಲಿರುವ ದರ್ಗಾದ ಹಿಂಭಾಗದಿಂದ ಪ್ರವಾಸಿಗರು ನೀರು ಧುಮ್ಮಿಕ್ಕುವ ಸ್ಥಳಕ್ಕೆ ತೆರಳುತ್ತಾರೆ.

ನೀರು ಹರಿದು ಕಲ್ಲುಬಂಡೆಗಳು ನುಣುಪಾಗಿರುವ ಪರಿಣಾಮ ಕಾಲು ಜಾರಿದರೆ ಪ್ರಪಾತಕ್ಕೆ ಸೇರುವುದರಲ್ಲಿ ಅನುಮಾನವಿಲ್ಲ. ಬಹುತೇಕ ಯುವ ಜೋಡಿಗಳು ಈ ಪ್ರದೇಶದಲ್ಲಿ ಸಾಹಸಕ್ಕೆ ಮುಂದಾಗುವುದು ಹೆಚ್ಚು. ಇವರಿಗೆ ಕಡಿವಾಣ ಹಾಕಲು ಇಲ್ಲಿ ಯಾವುದೇ ರಕ್ಷಣಾ ಸಿಬ್ಬಂದಿ ನೇಮಿಸಿಲ್ಲ. ಕಲ್ಲುಬಂಡೆಗಳ ಮೇಲೆ ನೀರು ಧುಮ್ಮಿಕ್ಕುವ ಸ್ಥಳದತ್ತ ತೆರಳದಂತೆ ತಂತಿಬೇಲಿ ಅಳವಡಿಸುವ ಕಾರ್ಯವೂ ನಡೆದಿಲ್ಲ.

107 ಪ್ರವಾಸಿಗರ ಸಾವು
ಪೊಲೀಸ್ ಇಲಾಖೆಯ ಮಾಹಿತಿ ಅನ್ವಯ 2006ರಿಂದ 2012ರವರೆಗೆ ಈ ಅವಳಿ ಜಲಪಾತ ಪ್ರದೇಶದಲ್ಲಿ ಜೀವ ಕಳೆದು ಕೊಂಡಿರುವ ಪ್ರವಾಸಿಗರ ಸಂಖ್ಯೆ 98. ಪ್ರಸಕ್ತ ವರ್ಷದ ಜನವರಿಯಿಂದ ಇಲ್ಲಿಯವರೆಗೆ 9 ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ. ಈವರೆಗೆ ಒಟ್ಟು 107 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಮೃತಪಟ್ಟವರಲ್ಲಿ ಶೇ 80ರಷ್ಟು ಯುವಕರೇ ಇದ್ದಾರೆ. ಈ ಜಲಪಾತಗಳು ಮಲೆಮಹದೇಶ್ವರ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿವೆ. ಹೀಗಾಗಿ, ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. ಆದರೆ, ವೀಕ್ಷಣೆಗೆ ಬರುವ ಕೆಲವು ಪ್ರವಾಸಿಗರು ಮೋಜು ಮಾಡಲು ಮುಂದಾಗುತ್ತಾರೆ. ಕೆಲವರು ಮದ್ಯದ ಬಾಟಲಿಗಳೊಂದಿಗೆ ನೀರು ಬೀಳುವ ಮೇಲ್ಭಾಗದ ಸ್ಥಳಕ್ಕೆ ತೆರಳುತ್ತಾರೆ. ನಶೆ ಏರಿದಂತೆ ನಿಯಂತ್ರಣ ಕಳೆದುಕೊಂಡು ಕಾಲುಜಾರಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾರೆ.

2006ರಲ್ಲಿ 12, 2007ರಲ್ಲಿ 12, 2008ರಲ್ಲಿ 10, 2009ರಲ್ಲಿ 15, 2010ರಲ್ಲಿ 13, 2011ರಲ್ಲಿ 18 ಹಾಗೂ 2012ರಲ್ಲಿಯೂ 18 ಮಂದಿ ಅವಳಿ ಜಲ ಪಾತ ಪ್ರದೇಶದಲ್ಲಿ ನೀರುಪಾಲಾಗಿದ್ದಾರೆ. ಪ್ರತಿವರ್ಷವೂ ಪ್ರವಾಸಿಗರ ಸಾವಿನ ಪ್ರಮಾಣ ಹೆಚ್ಚುತ್ತಿದೆ. ಪೊಲೀಸರು,ಪ್ರವಾಸೋದ್ಯಮ ಇಲಾಖೆಯಿಂದ ಜಲಪಾತ ಪ್ರದೇಶದ ಬಳಿ ಪ್ರವಾಸಿಗರಿಗೆ ಎಚ್ಚರಿಕೆಯ ಸೂಚನಾ ಫಲಕ ಅಳವಡಿಸಲಾಗಿದೆ. ಆದರೆ, ಈ ನಿಯಮ ಉಲ್ಲಂಘಿಸಿ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ವನ್ಯಜೀವಿಧಾಮದಲ್ಲಿ ಬೆಂಕಿ
ಭರಚುಕ್ಕಿ ಜಲಪಾತ ಮಲೆಮಹದೇಶ್ವರ ವನ್ಯಜೀವಿಧಾಮಕ್ಕೆ ಸೇರಿದೆ. ಈ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಆದರೆ, ಪ್ರವಾಸಿಗರು ನೀರಿನ ಬಾಟಲಿ ಬಿಸಾಡುತ್ತಾರೆ. ಪ್ಲಾಸ್ಟಿಕ್ ಸೇರಿದಂತೆ ಇತರೇ ತ್ಯಾಜ್ಯ ಸಂಗ್ರಹಿಸಲು ಸಿಬ್ಬಂದಿ ನಿಯೋಜಿಸಲಾಗಿದೆ.

ಪ್ಲಾಸ್ಟಿಕ್, ತ್ಯಾಜ್ಯ ಸಂಗ್ರಹಿಸಿ ರಾಶಿ ಹಾಕುವ ಸಿಬ್ಬಂದಿ ನಂತರ ಬೆಂಕಿಹಚ್ಚಿ ಸುಡುತ್ತಾರೆ. ವನ್ಯಜೀವಿಧಾಮದಲ್ಲಿ ಇಂತಹ ಕೃತ್ಯ ನಡೆಸಲು ಅವಕಾಶವಿಲ್ಲ. ಆದರೆ, ಭರಚುಕ್ಕಿ ಕೆಳಭಾಗದಲ್ಲಿ ತ್ಯಾಜ್ಯಕ್ಕೆ ಬೆಂಕಿಹಚ್ಚಿ ಸುಡಲಾಗುತ್ತಿದೆ. ಈ ಬಗ್ಗೆ ವನ್ಯಜೀವಿಧಾಮದ ಉಪಅರಣ್ಯ ಸಂರಕ್ಷಣಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂಬುದು ಪರಿಸರ ಪ್ರಿಯರ ಒತ್ತಾಯ.

ಜೀವರಕ್ಷಕ ಜಾಕೆಟ್ ಪೂರೈಕೆಗೆ ಚಿಂತನೆ
ಚಾಮರಾಜನಗರ
: `ಭರಚುಕ್ಕಿ ಜಲಪಾತ ಪ್ರದೇಶದಲ್ಲಿ ದೋಣಿ ನಡೆಸುತ್ತಿರುವ ಅಂಬಿಗರು ಪ್ರವಾಸಿಗರಿಗೆ ಜೀವರಕ್ಷಕ ಜಾಕೆಟ್ ನೀಡುತ್ತಿಲ್ಲ. ಈ ವಿಷಯ ನಮ್ಮ ಗಮನಕ್ಕೂ ಬಂದಿದೆ. ಆದರೆ, ಈ ಅಂಬಿಗರನ್ನು ಬಳಸಿಕೊಂಡು ಹಲವು ಮಂದಿಯ ಜೀವ ಉಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಮಿತಿಯಿಂದಲೇ ಜೀವರಕ್ಷಕ ಜಾಕೆಟ್ ವಿತರಿಸಲು ಚಿಂತಿಸಲಾಗಿದೆ' ಎಂದು ಭರಚುಕ್ಕಿ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಉಪ ವಿಭಾಗಾಧಿಕಾರಿ ಎಚ್.ಎಸ್. ಸತೀಶ್‌ಬಾಬು `ಪ್ರಜಾವಾಣಿ'ಗೆ ತಿಳಿಸಿದರು.

`ಈಚೆಗೆ ಭರಚುಕ್ಕಿಗೆ ಭೇಟಿ ನೀಡಿದ್ದ ಹೈಕೋರ್ಟ್‌ನ ಕಾನೂನು ಸೇವಾ ಸಮಿತಿ ಸದಸ್ಯ ಡಾ.ಎ.ಎನ್. ಯಲ್ಲಪ್ಪರೆಡ್ಡಿ ಅವರ ಗಮನಕ್ಕೂ ಈ ವಿಷಯ ತಿಳಿಸಲಾಗಿದೆ. ಸಮಿತಿ ಮುಂದೆ ಈ ಸಂಬಂಧ ಅಫಿಡೆವಿಟ್ ಸಲ್ಲಿಸಲು ಸೂಚಿಸಿದ್ದಾರೆ. ಒಪ್ಪಿಗೆ ದೊರೆತರೆ ಅಭಿವೃದ್ಧಿ ಸಮಿತಿಯಿಂದಲೇ ಅಂಬಿಗರು ಹಾಗೂ ಪ್ರವಾಸಿಗರಿಗೆ ಜೀವರಕ್ಷಕ ಜಾಕೆಟ್ ಪೂರೈಸಲಾಗುವುದು' ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT