ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರಚುಕ್ಕಿಯಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಒತ್ತು

Last Updated 24 ಸೆಪ್ಟೆಂಬರ್ 2011, 9:45 IST
ಅಕ್ಷರ ಗಾತ್ರ

ಚಾಮರಾಜನಗರ: `ಭರಚುಕ್ಕಿ ಜಲಪಾತ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗುವುದು~ ಎಂದು ರಾಜ್ಯ ಲೋಕ ಅದಾಲತ್ ಸದಸ್ಯ ಹಾಗೂ ಪರಿಸರ ತಜ್ಞ ಡಾ.ಯಲ್ಲಪ್ಪರೆಡ್ಡಿ ತಿಳಿಸಿದರು.

ಜಿಲ್ಲೆಯ ಭರಚುಕ್ಕಿ ಜಲಪಾತ, ಶಿವನಸಮುದ್ರ ದೇವಾ ಲಯ ಸೇರಿದಂತೆ ಈ ಭಾಗದ ಪ್ರದೇಶಗಳಲ್ಲಿ ಕೈಗೊಳ್ಳ ಲಾಗಿರುವ ಪ್ರವಾಸೋದ್ಯಮ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ಅವರು ಮಾತನಾಡಿದರು.

ಭರಚುಕ್ಕಿ ಜಲಪಾತ ಪ್ರದೇಶದ 400 ಎಕರೆ ಪ್ರದೇಶದಲ್ಲಿ ವಿವಿಧ ಜಾತಿಯ ಸಸಿ ನೆಡಲಾಗುವುದು. ವಿಭಿನ್ನ ಮಾದರಿಯ ಪರಿಸರ ಆಧಾರಿತ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸಲಾಗುವುದು. ಜಲಪಾತದ ನೀರು ಧುಮ್ಮಿಕ್ಕುವ ಪ್ರದೇ ಶದ ಮೇಲ್ಭಾಗದಲ್ಲಿ ಬಣ್ಣಬಣ್ಣದ ಅಲಂಕಾರಿಕ ಹೂ ಗಿಡ ನೆಟ್ಟು ಆಕರ್ಷಣೀಯವಾಗಿ ಮಾಡಲಾಗುವುದು ಎಂದರು.

ವೈವಿಧ್ಯಮಯ ಹೆಸರಿನ ವನ ನಿರ್ಮಾಣ ಮಾಡುವ ಉದ್ದೇಶವಿದೆ. ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದ ಅವರು, ಭರಚುಕ್ಕಿ ಪ್ರದೇಶದ ವ್ಯಾಪ್ತಿ ಒತ್ತುವರಿಯಾಗಿರುವ ಭೂಮಿಯ ತೆರವಿಗೆ ಕಂದಾಯ ಇಲಾಖೆ ಮುಂದಾಗಬೇಕು ಎಂದು ಹೇಳಿದರು.

ಜಲಪಾತದ ವ್ಯಾಪ್ತಿ ಮೀನುಗಾರಿಕೆ ನಿಷೇಧಿಸಬೇಕು. ಮೀನುಗಾರಿಕೆ ಮುಂದುವರಿದರೆ ಮೀನು ಸಂತತಿ ಸಂಪೂರ್ಣ ನಶಿಸಲಿದೆ. ಜತೆಗೆ, ಮಾಲಿನ್ಯ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ಅರಣ್ಯಾಧಿಕಾರಿಗಳು ಕಡಿವಾಣ ಹಾಕಬೇಕು.

ಭರಚುಕ್ಕಿಗೆ ಸಾಗುವ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಸಸಿನೆಟ್ಟು ಬೆಳೆಸಬೇಕು ಎಂದರು. ಇದೇ ವೇಳೆ ಶಿಂಷಾ ಮಾರಮ್ಮ ದೇವಾಲಯ, ಸೋಮೇಶ್ವರ ದೇವಾಲಯಕ್ಕೂ ಭೇಟಿ ನೀಡಿದ ಯಲ್ಲಪ್ಪರೆಡ್ಡಿ, ದೇವಾಲಯ ಆವರಣದ ಪ್ರದೇಶದಲ್ಲಿ ದೇವವನ ನಿರ್ಮಾಣ ಮಾಡಲು ಸ್ಥಳ ಗುರುತಿಸಿ ಅಗತ್ಯ ಪ್ರಸ್ತಾವ ಸಲ್ಲಿಸುವಂತೆ ಉಪ ವಿಭಾಗಾಧಿಕಾರಿ ಎ.ಬಿ. ಬಸವರಾಜುಗೆ ಸೂಚಿಸಿದರು.

ಐತಿಹಾಸಿಕ ವೆಸ್ಲಿ ಸೇತುವೆ ಪಾರಂಪರಿಕ ಮೌಲ್ಯ ಹೊಂದಿದೆ. ಸೇತುವೆ ಬಳಿ ಲಭ್ಯವಿರುವ ಸ್ಥಳದಲ್ಲಿ ಆರೋಗ್ಯ ಧಾಮ ಆರಂಭಿಸಬೇಕು. ಉಳಿದ ಪ್ರದೇಶಗಳಲ್ಲಿ ಪರಿಸರ ಪೂರಕ ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಪ್ರಸ್ತಾವ ಸಲ್ಲಿಸುವಂತೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಫಣೀಶ್‌ಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕೆ. ಅಮರನಾರಾಯಣ ಮಾತನಾಡಿ, ಧಾರ್ಮಿಕ ಕ್ಷೇತ್ರಗಳು ಸಾಕಷ್ಟಿವೆ. ಇಲ್ಲಿ ಧಾರ್ಮಿಕ ಆಧಾರಿತ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಕ್ರಮವಹಿಸಲಾಗಿದೆ ಎಂದು ವಿವರಿಸಿದರು.

ಬಿಳಿಗಿರಿರಂಗನಬೆಟ್ಟ, ಮಲೆಮಹದೇಶ್ವರ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ ಸೇರಿದಂತೆ ಪ್ರವಾಸಿ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಲಾಗಿದೆ. ಭರಚುಕ್ಕಿಯಲ್ಲಿ ವೀಕ್ಷಣೆ ಮಾಡಿದ ವೇಳೆ ಪ್ಲಾಸ್ಟಿಕ್ ತ್ಯಾಜ್ಯ ಕಂಡುಬಂದಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡದಂತೆ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಅರಣ್ಯಾಧಿಕಾರಿಗೆ ತಿಳಿಸಿದರು.

ಕೊಳ್ಳೇಗಾಲ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಾವೀದ್ ಮಮ್ತಾಜ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT