ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರತನಾಟ್ಯ ರಂಗಪ್ರವೇಶ, ನೃತ್ಯ

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ
ADVERTISEMENT

ಶಾರದಾ
ನಾಟ್ಯಶ್ರೀ: ಭಾನುವಾರ ಗುರು ಸುಮಾ ನಾಗೇಶ್ ಅವರ ಶಿಷ್ಯೆ ಶಾರದಾ ಅವರ ಭರತನಾಟ್ಯ ರಂಗಪ್ರವೇಶ (ನಟುವಾಂಗ: ವಿದುಷಿ ಸುಮಾ ನಾಗೇಶ್. ಸಂಗೀತ: ವಿದ್ವಾನ್ ಕೆ. ಹರಿಪ್ರಸಾದ್. ಮೃದಂಗ: ವಿದ್ವಾನ್ ಅನಿಲ್ ಕುಮಾರ್. ವಯಲಿನ್: ವಿದ್ವಾನ್ ದಯಾಕರ್. ಕೊಳಲು: ವಿದ್ವಾನ್ ಗಣೇಶ್ ಕೆ.ಎಸ್).

ಸಾಹಿತ್ಯ ಕಲೆ ವಂಶವಾಹಿನಿಯಾಗಿ ಹರಿದಿರುವ ಕುಟುಂಬದಿಂದ ಬಂದವರು ಶಾರದಾ. ಅಜ್ಜಿ ವನಜಾಕ್ಷಮ್ಮ ಶಾಸ್ತ್ರೀಯ ಸಂಗೀತ, ವೀಣೆ ಮತ್ತು ಸಂಸ್ಕೃತ ಭಾಷಾ ಪ್ರವೀಣೆ. ಅಜ್ಜ ರಾಮಶೇಷಗಿರಿ ರಾವ್ ಸಾಹಿತ್ಯೋಪಾಸಕರು. ದೊಡ್ಡಪ್ಪ ನಾಗೇಶ್ ಸಿನಿಮಾ, ಕಿರುತೆರೆ ಕಲಾವಿದ. ದೊಡ್ಡಮ್ಮ ಸುಮನಾ ಅವರೇ ಶಾರದೆಯ ನಾಟ್ಯಗುರು.

ಶಾರದಾ ಬಾಲ ಪ್ರತಿಭೆ. ನೃತ್ಯದ ಜತೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದಾರೆ. ವೀಣೆ ಸಹ ಅವರಿಗೆ ಪರಮಪ್ರಿಯ. ಸಂಗೀತ ಮತ್ತು ವೀಣೆ ಎರಡರಲ್ಲೂ ಸಿನಿಯರ್ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಭರತನಾಟ್ಯದಲ್ಲಿ ಸೀನಿಯರ್ ಮುಗಿಸಿ ವಿದ್ವತ್ ಅಭ್ಯಾಸದಲ್ಲಿ ನಿರತಳಾಗಿದ್ದಾರೆ. ರಂಗಪ್ರವೇಶದ ದಿನ ಲೋಕಾರ್ಪಣೆಗೊಳ್ಳಲಿರುವ ಹಾಡುಗಳ ಧ್ವನಿಮುದ್ರಿಕೆಯಲ್ಲಿ ಶಾರದಾ ಹಾಡಿದ್ದಾರೆ.

ಪಠ್ಯದಲ್ಲೂ ಮುಂದಿರುವ ಶಾರದಾ ಹತ್ತನೇ ತರಗತಿಯಲ್ಲಿ ಮತ್ತು ಪಿಯುಸಿಯಲ್ಲಿ ಶೇ 94ರಷ್ಟು ಅಂಕ ಗಳಿಸಿದ್ದಾರೆ. ಇದಕ್ಕೆಲ್ಲ ಅಮ್ಮ ಸಾವಿತ್ರಿ ಮತ್ತು ತಂದೆ ಆರ್. ಸುರೇಶ್ ಅವರ ಬೆಂಬಲ.

ಅತಿಥಿಗಳು: ಪದ್ಮಿನಿ ರವಿ, ಡಾ. ಎಂ. ಸೂರ್ಯಪ್ರಸಾದ್. ಅಧ್ಯಕ್ಷತೆ: ಪ್ರೊ. ಎಂ.ಆರ್. ಕೃಷ್ಣಮೂರ್ತಿ.
ಸ್ಥಳ: ಕುವೆಂಪು ಕಲಾಕ್ಷೇತ್ರ, ಕೆ.ಆರ್. ರಸ್ತೆ, ವಿ ವಿ ಪುರಂ. ಸಂಜೆ 5.

ಪೂರ್ಣಿಮಾ
ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ: ಶನಿವಾರ ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ನೃತ್ಯಾಂಜಲಿ ಭರತನಾಟ್ಯ ಶಾಲೆಯ ನಿರ್ದೇಶಕಿ ಪೂರ್ಣಿಮಾ ಅಶೋಕ್ ಅವರಿಂದ ನೃತ್ಯ ಕಾರ್ಯಕ್ರಮ. ಅತಿಥಿಗಳು: ಡಾ. ಬಿ.ವಿ. ಆಚಾರ್ಯ.
ಸ್ಥಳ: ಖಿಂಚ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ.  ಸಂಜೆ: 6.30

ಮಾನಸ ಕಂಬಣ್ಣ
ನಾಟ್ಯಾಂತರಂಗ: ಭಾನುವಾರ ಶುಭ ಧನಂಜಯ ಅವರ ಶಿಷ್ಯೆ ಮಾನಸ ಕಂಬಣ್ಣ ಅವರ ಭರತನಾಟ್ಯ ರಂಗಪ್ರವೇಶ (ನಟುವಾಂಗ: ಶುಭ ಧನಂಜಯ. ಹಾಡುಗಾರಿಕೆ: ಮೋಹನ್ ಪುಟ್ಟಿ. ಮೃದಂಗ:  ವಿ.ಆರ್. ಚಂದ್ರಶೇಖರ್. ಕೊಳಲು: ಎಚ್.ಎಸ್. ವೇಣುಗೋಪಾಲ. ಪಿಟೀಲು: ಬಿ.ಆರ್. ಹೇಮಂತ್ ಕುಮಾರ್. ಮೋರ್ಚಿಂಗ್ ಮತ್ತು ರಿದಮ್ ಪ್ಯಾಡ್: ವಿದ್ವಾನ್ ಡಿ.ವಿ. ಪ್ರಸನ್ನ ಕುಮಾರ್).


ಮಾನಸ ಭರತನಾಟ್ಯದ ಸೆಳೆತಕ್ಕೆ ಸಿಕ್ಕಿ ಎಂಟು ವರ್ಷಗಳಿಂದ ನಾಟ್ಯಾಂತರಂಗದ ಗುರು ಶುಭ ಧನಂಜಯ ಅವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಇದರ ಜೊತೆ ಸಂಗೀತದ ಮೋಹಕ್ಕೂ ಒಳಗಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಗಳಿಸಿದ್ದಾರೆ.

ಗುರು ಶುಭ ಅವರ ಜೊತೆಗೂಡಿ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ, ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ, ವಿಶ್ವ ನೃತ್ಯ ಮಹೋತ್ಸವ ಇತ್ಯಾದಿ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ನೃತ್ಯ, ಸಂಗೀತದ ಹೊರತಾಗಿ ಜಾನಪದ ಹಾಡುಗಾರಿಕೆ, ಸುಗಮ ಸಂಗೀತ, ಚಿತ್ರಕಲೆ, ಕ್ಯಾಲಿಗ್ರಫಿ, ಕ್ರೀಡೆ ಹೀಗೆ ಹತ್ತು ಹಲವು ಆಸಕ್ತಿ ಹೊಂದಿದ್ದಾರೆ. 2007ರಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಜ್ರ ಮಹೋತ್ಸವದಲ್ಲಿ ನಮ್ಮ ದೇಶ ಪ್ರತಿನಿಧಿಸಿ ರಾಜ್ಯ ಪುರಸ್ಕಾರ ಪಡೆದಿದ್ದಾರೆ. ಪ್ರಸ್ತುತ ರಾಷ್ಟ್ರೀಯ ಕಾನೂನು ವಿವಿ ಕಾಲೇಜಿನಲ್ಲಿ ಎಲ್.ಎಲ್. ಬಿ. ವ್ಯಾಸಂಗ ಮಾಡುತ್ತಿದ್ದಾರೆ. ಇವರ ತಂದೆ ತಾಯಿ ಇಬ್ಬರೂ ರಾಜ್ಯ ಸರ್ಕಾರದ ಹಿರಿಯ ಕೆಎಎಸ್ ಅಧಿಕಾರಿಗಳು.

ಮಾನಸಳ ಗುರು ಶುಭ ಧನಂಜಯ ಉತ್ಕೃಷ್ಟ ಕಲಾವಿದೆ. 25 ವರ್ಷಗಳಿಂದ ದೇಶ, ವಿದೇಶದ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ. ಮಧುರೈನ ದಿವಂಗತ ಎಸ್.ವಿ. ಶ್ರೀನಿವಾಸ್ ಬಳಿ ತಂಜಾವೂರು ಶೈಲಿಯ ಭರತನಾಟ್ಯವನ್ನು ಮತ್ತು ಡಾ. ಮಾಯಾರಾವ್ ಬಳಿ ಕಥಕ್ ನೃತ್ಯವನ್ನೂ ಕಲಿತು ಪರಿಣತಿ ಗಳಿಸಿದ್ದಾರೆ. ನೃತ್ಯ ಸಂಯೋಜನೆಯಲ್ಲಿ ಹೆಸರುವಾಸಿ. 1987ರಿಂದ `ನಾಟ್ಯಾಂತರಂಗ~ ಸ್ಥಾಪಿಸಿ ತಮ್ಮ ಕಲೆಯನ್ನು ಅಸಂಖ್ಯಾತ ಬಾಲ ಪ್ರತಿಭೆಗಳಿಗೆ ಧಾರೆ ಎರೆದಿದ್ದಾರೆ. ಅತಿಥಿಗಳು: ಡಾ. ಎಚ್.ಎನ್. ಕೃಷ್ಣ, ಡಿ.ಎನ್. ಮುನಿಕೃಷ್ಣ, ಡಾ. ಮಹೇಶ ಜೋಶಿ ಮತ್ತು ಆರ್.ಎಸ್. ಪೊಂಡೆ.
ಸ್ಥಳ: ರವೀಂದ್ರ ಕಲಾಕ್ಷೇತ್ರ. ಜೆ.ಸಿ. ರಸ್ತೆ. ಬೆಳಿಗ್ಗೆ 10.30.

ಆರ್. ಪದ್ಮಿನಿ

ವೆಂಕಟೇಶ ನಾಟ್ಯ ಮಂದಿರ: ಶನಿವಾರ ಗುರು ರಾಧಾ ಶ್ರೀಧರ್ ಅವರ ಶಿಷ್ಯೆ ಆರ್. ಪದ್ಮಿನಿ ಭರತನಾಟ್ಯ ರಂಗಪ್ರವೇಶ.

ಪದ್ಮಜಾ ಶ್ರೀನಿವಾಸನ್ ಅವರ ಬಳಿ 9 ವರ್ಷದವಳಿದ್ದಾಗ ಭರತನಾಟ್ಯದಲ್ಲಿ ಪ್ರಾಥಮಿಕ ತರಬೇತಿ ಪಡೆದ ಆರ್. ಪದ್ಮಿನಿ, ಆನಂತರ ಕೆ.ಎಸ್. ಮೀರಾ ಅವರಿಂದ ಆಳವಾದ ತರಬೇತಿ ಪಡೆದರು. ಗುರು ಮೀರಾ ಈಶ್ವರನ್ ಮಾರ್ಗದರ್ಶನದಲ್ಲಿ ಭರತನಾಟ್ಯದಲ್ಲಿ ಜ್ಯೂನಿಯರ್ ಪರೀಕ್ಷೆ ಪೂರೈಸಿದರು. ಪ್ರಸ್ತುತ ವೆಂಕಟೇಶ ನಾಟ್ಯ ಮಂದಿರದ ಗುರು ರಾಧಾ ಶ್ರೀಧರ್ ಅವರ ಬಳಿ ಭರತನಾಟ್ಯದಲ್ಲಿನ ಸೂಕ್ಷ್ಮ ಅಂಶಗಳನ್ನೆಲ್ಲ ಅಭ್ಯಾಸ ಮಾಡುತ್ತಿದ್ದಾರೆ. ವೆಂಕಟೇಶ ನಾಟ್ಯ ಮಂದಿರದ ಹಲವು ನೃತ್ಯ ರೂಪಕಗಳಲ್ಲಿ ಅಭಿನಯಿಸಿದ್ದು ಶ್ರೀನಿವಾಸ ಕಲ್ಯಾಣದಲ್ಲಿ ಬಕುಳಾದೇವಿ, ಹನುಮದ್ವಿಲಾಸದಲ್ಲಿ ವನಪಾಲಕ ಮತ್ತು ಸಿಂಹಿಕಾ, ಅಮೃತ ಮಂಥನದಲ್ಲಿ ಅಸುರ ಮತ್ತು ಅಪ್ಸರೆಯ ಭೂಮಿಕೆಯಲ್ಲಿ ಪಾತ್ರ ನಿರ್ವಹಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ 77ನೇ ಸಾಹಿತ್ಯ ಸಮ್ಮೇಳನ, ವಿಶ್ವ ಸಂಸ್ಕೃತ ಪುಸ್ತಕ ಮೇಳ, ಗುಡಿ ಸಂಭ್ರಮ, ಬೆಂಗಳೂರು ಹಬ್ಬ ಇತ್ಯಾದಿ ವೇದಿಕೆಗಳಲ್ಲಿ ತನ್ನ ಪ್ರತಿಭೆ ಪ್ರದರ್ಶಿಸಿದ್ದಾರೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಇ. ಪದವೀಧರೆ. ಪ್ರಸ್ತುತ ಎಚ್‌ಪಿಯಲ್ಲಿ ಸೀನಿಯರ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಪ್ರೊ. ಯು. ಎಸ್. ಕೃಷ್ಣರಾವ್ ಮತ್ತು ಚಂದ್ರಭಾಗಾ ದೇವಿ ಅವರ ಶಿಷ್ಯೆಯಾದ ರಾಧಾ ಶ್ರೀಧರ್ ರಾಜ್ಯದ ಹಿರಿಯ ನೃತ್ಯ ಗುರುಗಳಲ್ಲಿ ಒಬ್ಬರು. 1969ರಲ್ಲಿ ವೆಂಕಟೇಶ ನಾಟ್ಯ ಮಂದಿರ ಸ್ಥಾಪಿಸಿ ನಾಲ್ಕು ದಶಕಗಳಿಂದ ಎಳೆಯರಿಗೆ ನೃತ್ಯ ಶಿಕ್ಷಣ ನೀಡುತ್ತಿದ್ದಾರೆ. 22 ನೃತ್ಯ ರೂಪಕ ಸಂಯೋಜಿಸಿದ್ದಾರೆ. ಚೆನ್ನೈನ ಮ್ಯೂಸಿಕ್ ಅಕಾಡೆಮಿಯಿಂದ ಅತ್ಯುತ್ತಮ ನೃತ್ಯ ಗುರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾ ತಿಲಕ ಮತ್ತು ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.
ಅತಿಥಿಗಳು: ಡಿ.ಕೆ. ವಸಂತ ಲಕ್ಷ್ಮಿ, ಡಾ. ಎಂ. ಸೂರ್ಯ ಪ್ರಸಾದ್.
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ  ಸಂಜೆ:5.30
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT