ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರದಿಂದ ಸಾಗಿದೆ ದೇವಸ್ಥಾನ ನವೀಕರಣ ಕಾರ್ಯ

Last Updated 9 ಅಕ್ಟೋಬರ್ 2011, 5:55 IST
ಅಕ್ಷರ ಗಾತ್ರ

ಆಲಮಟ್ಟಿಗೆ ಸಮೀಪದ ಯಲ್ಲಮ್ಮನ ಬೂದಿಹಾಳ ಗ್ರಾಮದ ಶ್ರಿ ಯಲ್ಲಮ್ಮದೇವಿಯ ದೇವಸ್ಥಾನದ ಹೊರ ಆವರಣದ ನವೀಕರಣ ಕಾರ್ಯ ಭರದಿಂದ ಸಾಗಿದೆ.

 ಅಪಾರ ಮಹಿಮೆ ಹೊಂದಿರುವ ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಗೋವಾ ರಾಜ್ಯದ ಅನೇಕ ಕಡೆ ಭಕ್ತರನ್ನು ಹೊಂದಿದ ಸಹಸ್ರಾರು ವರ್ಷಗಳ ಈ ಪುರಾತನ ದೇವಸ್ಥಾನಕ್ಕೆ ಪ್ರತಿ ಅಮವಾಸ್ಯೆ, ಹುಣ್ಣಿಮೆ ಹಾಗೂ ಮಂಗಳವಾರ ಮತ್ತು ಶುಕ್ರವಾರ ಸಹಸ್ರಾರು ಜನರು ಆಗಮಿಸುವರು. ಈ ದೇವಿಯ ಜಾತ್ರೆ ಪ್ರತಿ ವರ್ಷ ಐದು ದಿನಗಳ ಕಾಲ ಜರುಗುತ್ತದೆ. ಜಾತ್ರೆಯ ವೇಳೆಯಲ್ಲಿ ಲಕ್ಷಕ್ಕಿಂತಲೂ ಅಧಿಕ ಭಕ್ತರು ಬರುವುದು ಈ ದೇವಸ್ಥಾನದ ವಿಶೇಷ. ಇಂಥ ದೇವಿಯ ದೇವಸ್ಥಾನದ ಹೊರ ಆವರಣದಲ್ಲಿ ಬೃಹತ್ ಪ್ರಮಾಣದಲ್ಲಿ ನವೀಕರಣ ಕಾರ್ಯ ಭರದಿಂದ ಸಾಗಿದೆ. ಭಕ್ತರಲ್ಲಿ ಸಂತಸ ಮೂಡಿಸಿದೆ.

ದೇವಸ್ಥಾನ ಆವರಣದಲ್ಲಿ ಐದು ಗುಡಿಗಳಿವೆ. ಜಮದಗ್ನಿ ದೇವಸ್ಥಾನ, ಪರಶುರಾಮ ದೇವಸ್ಥಾನ, ಮಾತಂಗಿ ದೇವಸ್ಥಾನ, ಉತ್ಸವ ಮೂರ್ತಿ ದೇವಸ್ಥಾನ ಹಾಗೂ ಇನ್ನೊಂದು ದೇವಿಯ ದೇವಸ್ಥಾನ. ಜಾತ್ರೆಯಲ್ಲಿ ಇಲ್ಲಿ ಜೋಗಪ್ಪಗಳು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸುವುದು ಇಲ್ಲಿಯ ಮತ್ತೊಂದು ವಿಶೇಷ.

ಸುಮಾರು ರೂ. 50 ಲಕ್ಷ ವೆಚ್ಚದಲ್ಲಿ ದೇವಸ್ಥಾನದ ಹೊರ ಆವರಣ ಸಂಪೂರ್ಣ ಸಿಮೆಂಟ್‌ನಿಂದ ಸ್ಲ್ಯಾಬ್ ಹಾಕಿ ನವೀಕರಣ ನಡೆಯುತ್ತಿದೆ. ಈ ಮೊದಲಿದ್ದ ತಗಡಿನ ಹೊರ ಆವರಣವನ್ನು ತೆಗೆದಿದ್ದು, ಸಂಪೂರ್ಣ ಕಾಮಗಾರಿದೇವಸ್ಥಾನದ ಸಮಿತಿ ವತಿಯಿಂದಲೇ ನಡೆಯುತ್ತಿದೆ, ಯಾವುದೇ ಜನಪ್ರತಿನಿಧಿಗಳ ಅನುದಾನವಿಲ್ಲದೇ  ಭಕ್ತಾದಿಗಳ ದೇಣಿಗೆಯಿಂದಲೇ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ, ತಾಳೀಕೋಟೆ ಎ.ಪಿ.ಎಮ್.ಸಿ. ಅಧ್ಯಕ್ಷರಾಗಿರುವ ಇದೇ ಗ್ರಾಮದ ಸಿದ್ದಣ್ಣ ತಿಪ್ಪಣ್ಣ ಗೌಡರ ಅಭಿಪ್ರಾಯಪಡುತ್ತಾರೆ.

ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆಯೂ ನಿತ್ಯ ಹೆಚ್ಚುತ್ತಿದ್ದು, ಅವರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದೇ ನಮ್ಮ ಮುಂದಿರುವ ಗುರಿ ಎನ್ನುತ್ತಾರೆ ಅವರು.

ವಿಜಾಪುರ ಸಂಸದರು ತಮ್ಮ ಅನುದಾನದಡಿ ಹಣ ಬಿಡುಗಡೆಗೊಳಿಸಿದರೆ ಯಾತ್ರಿ ನಿವಾಸ ಕಟ್ಟಿಸುವ ಉದ್ದೇಶವಿದೆ. ಆದರೆ ಇದುವರೆಗೂ ಯಾವುದೇ ಜನಪ್ರತಿನಿಧಿಗಳು ಅನುದಾನವನ್ನು ನೀಡಿಲ್ಲ ಎಂದು ಅವರು ವಿಷಾದಿಸುತ್ತಾರೆ.  ರಾಜ್ಯದಾದ್ಯಂತ ಭಕ್ತರು ಈ ಕಾರ್ಯಕ್ಕೆ ದೇಣಿಗೆ ನೀಡಬೇಕೆಂದು ಅವರು ಕೋರುತ್ತಾರೆ. ಈಗಾಗಲೇ ಭಕ್ತಾದಿಗಳು ನೀಡಿದ ಚಿನ್ನದಿಂದಲೇ ದೇವಿಗೆ ಚಿನ್ನದ ಕಿರೀಟವನ್ನು ಮಾಡಿಸಲಾಗಿದೆ.

ಹಿನ್ನೆಲೆ: ಸಹಸ್ರಾರು ವರ್ಷಗಳ ಹಿಂದೆ ಈ ಗ್ರಾಮ ಬೂದನಗುಡಿ. ಆಂಧ್ರಪ್ರದೇಶ ಮೂಲದ ಯಲ್ಲನಗೌಡ ಎಂಬ ವ್ಯಕ್ತಿ ಇಲ್ಲಿ ಬಂದು ನೆಲೆಸಿ ದೇವಿಯ ಭಕ್ತಿಯಲ್ಲಿಯೇ ಕಾಲ ಕಳೆದ. ಆತನ ಭಕ್ತಿಗೆ ಮೆಚ್ಚಿದ ಶಕ್ತಿ ದೇವತೆಯೂ ಆಗಿದ್ದ ಯಲ್ಲಮ್ಮ ಆತನಿಗೆ ದರುಶನ ನೀಡಿದಳು. ಈ ದೇವಿಯ ಅಪಾರ ಮಹಿಮೆ ಕಂಡ ಜನತೆ ಅಂದಿನಿಂದ ಈ ಗ್ರಾಮಕ್ಕೆ ಯಲ್ಲಮ್ಮನ ಬೂದಿಹಾಳ ಎಂದು ನಾಮಕರಣ ಮಾಡಿದರು. ದೇವಿಯೂ ಯಲ್ಲಮ್ಮ ಆದಳು ಎಂಬ ವಿಷಯ ಇಲ್ಲಿನ ದೇವಿಯ ಪುರಾಣದ ಮೂಲಕ ತಿಳಿದು ಬರುತ್ತದೆ.

ಸುಮಾರು 500 ವರ್ಷಗಳ ಹಿಂದೆ ಜುಮ್ಮನಗೌಡ ಎಂಬ 18 ರ ಯುವಕ ದೇವಿಯ ಅನುಗ್ರಹದಿಂದ ಪಂಚ ಲೋಹದ ಗುಂಡು ಕಾದ ಎಣ್ಣೆಯಲ್ಲಿ ಬರಿಗೈಯಲ್ಲಿ ತೆಗೆಯುವಂಥ ಅಪಾರ ಪವಾಡಗಳನ್ನು ಮಾಡಿದ ಎಂದು ಪ್ರತೀತಿ.

ಚಿಕ್ಕಮಕ್ಕಳಿಗೆ ಆಗುವ ಮೈಲಿ, ಹುಣ್ಣು, ಚಿಬ್ಬು, ತುರಿಕೆ ಮೊದಲಾದ ಚರ್ಮ ವ್ಯಾಧಿಗಳು ಈ ದೇವಿಯ ಪವಿತ್ರ ನೀರಿನಿಂದ, ಭಕ್ತಿಯಿಂದ ನಡೆದುಕೊಂಡರೆ ಒಂದೇ ತಿಂಗಳ್ಲ್ಲಲಿ ಹೋಗುತ್ತವೆ ಎಂಬುದು ಸಹಸ್ರಾರು ಜನರ ನಂಬುಗೆ.

1981 ರಲ್ಲಿ ಈ ದೇವಸ್ಥಾನ ಸಂಪೂರ್ಣ ನವೀಕರಣಗೊಂಡು ಬೃಹತ್ ಆಕಾರವಾಗಿ ನಿರ್ಮಾಣವಾಗಿದೆ. ಈಗ ಭಕ್ತರ ಸಂಖ್ಯೆ ಹೆಚ್ಚಿದ್ದು, ದೇವಸ್ಥಾನ ಸಮಿತಿ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಹಲವಾರು ನೂತನ ಕಾಮಗಾರಿ ಆರಂಭಿಸುತ್ತಿದೆ.

ಪಿನ್ ಹೋಲ್: ಈ ದೇವಸ್ಥಾನದಲ್ಲಿ ಹಂಪೆಯ ವಿರೂಪಾಕ್ಷ ಮಂದಿರದಲ್ಲಿರುವ ಪಿನ್ ಹೋಲ್ ಕ್ಯಾಮೆರಾ ಇದ್ದು, ದೇವಸ್ಥಾನದ ಗೋಪುರ ಇಲ್ಲಿ ನಿರ್ಮಿತವಾಗಿರುವ ಪಿನ್‌ಹೋಲ್‌ನಲ್ಲಿ ತಿರುವು ಮುರುವಾಗಿ ಕಾಣುವುದು ವಿಶೇಷ.
ಆಗಿ ಹುಣ್ಣಿಮೆಯಂದು ಐದು ದಿನಗಳ ಕಾಲ ವಿವಿಧ ಕಡೆಗಳಿಂದ ಆಗಮಿಸುವ ಲಕ್ಷಾಂತರ ಭಕ್ತರು ದೇವಿಗೆ ವಿವಿಧ ರೀತಿಯ ಪೂಜೆ ಸಲ್ಲಿಸುತ್ತಾರೆ. ದೀಡ ನಮಸ್ಕಾರ, ತಪ್ಪಲು ಸೇವೆ, ಬೇವು ಇಳಿಸುವುದು ಮೊದಲಾದವುಗಳು ನಡೆಯುತ್ತವೆ.

ಅತ್ಯಂತ ಪುರಾತನ ಕಾಲದಿಂದಲೂ ದೇವಿಗೆ ಒಂದೊಂದು ಮನೆತನದವರು ಒಂದೊಂದು ಸೇವೆ ಸಲ್ಲಿಸುತ್ತಾರೆ. ಹಿರೇ ಬಡ್ಡಿಯವರು ಪಲ್ಲಕ್ಕಿ ಸೇವೆ, ನಡುವಿನ ಬಡ್ಡಿಯವರು ಕಳಸದ ಸೇವೆ, ಸಣ್ಣ ಬಡ್ಡಿಯವರು ಗಂಟೆ ಸೇವೆ ಸಲ್ಲಿಸುತ್ತಾರೆ.

ಗ್ರಾಮೀಣ ಭಾಗದಲ್ಲಿ ಜನಜನಿತವಾಗಿರುವ ಹಾಗೂ ವಿಶಿಷ್ಟ ಸಂಸ್ಕೃತಿ, ಧಾರ್ಮಿಕ ನೆಲೆಯನ್ನು ಹೊಂದಿರುವ ಯಲ್ಲಮ್ಮನಬೂದಿಹಾಳ ಗ್ರಾಮದ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನದ ಹೊರ ಆವರಣದ ನವೀಕರಣ ಕಾರ್ಯ ಪ್ರಾರಂಭವಾಗಿರುವುದು ಭಕ್ತರಲ್ಲಿ ಸಂತಸ ಮೂಡಿಸಿದೆ.

ಬಹುತೇಕ ಹೆಸರು ದೇವರದ್ದೇ: ಪ್ರಸಿದ್ಧ ಯಲಗೂರ ಆಂಜನೇಯ ದೇವಸ್ಥಾನವೂ,  ಯಲ್ಲಮ್ಮನ ಬೂದಿಹಾಳ ಗ್ರಾಮದ ಪಕ್ಕದಲ್ಲಿಯೇ ಇದೆ. ಈ ಎರಡೂ ದೇವಸ್ಥಾನಗಳು ತುಂಬಾ ಪ್ರಸಿದ್ದ. ಅದಕ್ಕಾಗಿ ಈ ಭಾಗದಲ್ಲಿ ಅದರಲ್ಲೂ ವಿಶೇಷವಾಗಿ ಯಲಗೂರ, ಕಾಶೀನಕುಂಟಿ, ಯಲ್ಲಮ್ಮನ ಬೂದಿಹಾಳ, ಮಸೂತಿ ಮೊದಲಾದ ಗ್ರಾಮಗಳಲ್ಲಿ ಪ್ರತಿಯೊಬ್ಬರ ಹೆಸರು ಯಲ್ಲಪ್ಪ, ಯಲಗೂರೇಶ, ಹನುಮಂತ, ಯಲ್ಲಮ್ಮೋ, ರೇಣುಕಾ ಎಂದೇ ತಮ್ಮ ಮಗುವಿಗೆ ನಾಮಕರಣ ಮಾಡುವುದು ವಿಶೇಷ. ಈ ಭಾಗದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಅರ್ಧಕ್ಕೂ ಹೆಚ್ಚು ಮಂದಿಯ ಹೆಸರು ಇವೇ ಆಗಿರುತ್ತವೆ. ಇದಕ್ಕೆ ಕಾರಣ ದೇವಿಯ ಮೇಲಿರುವ ಅಪಾರ ಭಕ್ತಿ. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT