ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆ ಮೂಡಿಸಿದ ಸಿರಿಧಾನ್ಯ ಮೇಳ

Last Updated 14 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರಿನ ನಂಜರಾಜ ಬಹದ್ದೂರು ಛತ್ರದ ಆವರಣದ ತುಂಬಾ ನವಣೆ, ಸಾಮೆ, ಸಜ್ಜೆ, ಹಾರಕದಂತಹ ಸಿರಿಧಾನ್ಯಗಳ ತೋರಣ. ಒಂದು ಕಡೆ ಧಾನ್ಯಗಳ ರಾಶಿ, ಮತ್ತೊಂದೆಡೆ ಬಾಳೆ ಎಲೆ ತುಂಬಾ ಅದೇ ಧಾನ್ಯಗಳ ಪೊಂಗಲ್, ಪಾಯಸ, ರೊಟ್ಟಿ, ಚಕ್ಕುಲಿ, ಕೋಡಬಳೆಯಂತಹ ಮೌಲ್ಯವರ್ಧನೆಯ ಪ್ರಯತ್ನ.

ಇದು ಮೈಸೂರಿನಲ್ಲಿ ಇತ್ತೀಚೆಗೆ ನಡೆದ `ಸಿರಿಧಾನ್ಯ ಮೇಳ~ದ ಒಂದು ಝಲಕ್. 
ಸಿರಿಧಾನ್ಯ(ಕಿರುಧಾನ್ಯ)ಗಳನ್ನು ಜನಪ್ರಿಯಗೊಳಿಸುವ ಸಲುವಾಗಿ ನೇಸರ, ಸಹಜ ಸಮೃದ್ಧ ಹಾಗೂ ನಬಾರ್ಡ್ ಸಂಸ್ಥೆಗಳ ಸಹಯೋಗದಲ್ಲಿ ಈ ಮೇಳವನ್ನು ಆಯೋಜಿಸಲಾಗಿತ್ತು.
 
ಹಾವೇರಿ, ಬಿಜಾಪುರ, ದಾವಣಗೆರೆ, ತಿಪಟೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಕೊಳ್ಳೆಗಾಲ, ಬಿ.ಆರ್.ಹಿಲ್ಸ್, ಆಂಧ್ರದ ಕದ್ರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚು ಸಿರಿ ಧಾನ್ಯ ಬೆಳೆಯುವ ರೈತರು ಮೇಳದಲ್ಲಿ ಭಾಗವಹಿಸಿದ್ದರು.
 
22 ಸ್ವಯಂಸೇವಾ ಸಂಸ್ಥೆಗಳು, ರೈತ ಸಂಘಟನೆಗಳು ಪಾಲ್ಗೊಂಡಿದ್ದವು. ಬಿ.ಆರ್.ಹಿಲ್ಸ್ ಮತ್ತು ಕೊಳ್ಳೆಗಾಲ ಭಾಗದಲ್ಲಿ ಬೆಳೆಯುವ 40 ವಿಧದ ಜೋಳ, 30 ತಳಿ ನವಣೆ 48 ತಳಿ ರಾಗಿಗಳು ಮೇಳದ ಆಕರ್ಷಣೆ. ಜೊತೆಗೆ ರೈತರು, ಸಂಸ್ಥೆಗಳ ಪ್ರತಿನಿಧಿಗಳು, ವಿಜ್ಞಾನಿಗಳ ನಡುವೆ ಸಂವಾದ ಏರ್ಪಾಡಾಗಿತ್ತು.

`ಬೆಳೆಯುವುದು ಸುಲಭ, ಸಿಪ್ಪೆ ಬಿಡಿಸಿ, ಸ್ವಚ್ಛ ಮಾಡೋದು ಕಷ್ಟ. ಸಿಪ್ಪೆ ಬಿಡಿಸೋಕೆ ಸುಲಭದ ವಿಧಾನ ಬೇಕು~ ಎಂದು  ಸಿರಿಧಾನ್ಯ ಬೆಳೆಗಾರರು ಸಭೆಯಲ್ಲಿದ್ದ ತಜ್ಞರನ್ನು ಒತ್ತಾಯಿಸಿದರು. `ಸರ್ಕಾರಿ ಸಂಸ್ಥೆಗಳು ಧಾನ್ಯ ಸಂಸ್ಕರಣೆಗೆ ಯಂತ್ರಗಳನ್ನು ಆವಿಷ್ಕರಿಸಬೇಕು. ಕಡಿಮೆ ಬೆಲೆಯಲ್ಲಿ ಯಂತ್ರಗಳು ಲಭ್ಯವಾಗಬೇಕು.ದೇಶದಲ್ಲಿ ಬೇಡದ್ದಕ್ಕೆಲ್ಲ ತಂತ್ರಜ್ಞಾನಗಳಿವೆ.
 
ಆದರೆ ನಿತ್ಯದ ಆಹಾರ ಕಿರುಧಾನ್ಯಗಳ ಸಂಸ್ಕರಣೆಗೆ ಯಂತ್ರಗಳಿಲ್ಲ. ಎಂಥ ವಿಪರ್ಯಾಸ~ ಎಂದು ಆಹಾರ ತಜ್ಞ ರಘು ಧಾನ್ಯ ಸಂಸ್ಕರಣೆಗೆ ಪರಿಹಾರ ಸೂಚಿಸುತ್ತಾ, ಸರ್ಕಾರದ ವ್ಯವಸ್ಥೆ ಕುರಿತು ವಿಷಾದಿಸಿದರು.

`ಮೊದಲು  ಧಾನ್ಯಗಳ ಸಿಪ್ಪೆ ತೆಗೆಯೋಕೆ ಬೀಸುವ ಕಲ್ಲು ಬಳಸುತ್ತಿದ್ದೆವು. ಈಗ ಕಲ್ಲೂ ಇಲ್ಲ, ಅದನ್ನು ತಿರುಗಿಸುವ ಶಕ್ತಿ ಇಲ್ಲ. ಕಷ್ಟಪಟ್ಟು, ನವಣಿ ಸಿಪ್ಪಿ ಬಿಡಿಸ್ತೀವಿ. ಹಾರಕ, ಸಜ್ಜೆ ಶುದ್ಧ ಮಾಡ್ಕೋತೀವಿ. ಹಿಟ್ಟಿನ ಗಿರಣಿ ಹಂಗ ಇವಕ್ಕೂ ಮೆಷಿನ್ ಇದ್ದಿದ್ದರೆ, ನಿಮಗೆ ಎಷ್ಟು ಬೇಕೋ ಅಷ್ಟು ಧಾನ್ಯ ಬೆಳ್ಕೊಡುತ್ತಿದ್ವಿ~ -ಕಿರುಧಾನ್ಯ ಸಂಸ್ಕರಣೆ ಕುರಿತು ಹಾವೇರಿ ಜಿಲ್ಲೆ  ಚಿನ್ನಿಕಟ್ಟೆ ರೈತ ಮೂಕಪ್ಪ ಪೂಜಾರ್ ಪ್ರತಿಕ್ರಿಯಿಸಿದ್ದು ಹೀಗೆ. ಇದು ಮೇಳದಲ್ಲಿದ್ದ ರೈತರ ಬೇಡಿಕೆಯೂ ಆಗಿತ್ತು.

`ಸಿರಿಧಾನ್ಯಗಳು ಪೌಷ್ಟಿಕಾಂಶಗಳ ಖಜಾನೆ. ಅಕ್ಕಿ, ಗೋಧಿಗಿಂತ ಮೂರ‌್ನಾಲ್ಕು ಪಟ್ಟು ಹೆಚ್ಚು ಪ್ರೋಟಿನ್ ಹಾಗೂ ನಾರಿನ ಅಂಶಗಳನ್ನು ಒಳಗೊಂಡಿವೆ. ಮಧುಮೇಹ, ರಕ್ತದೊತ್ತಡ, ಮಲಬದ್ಧತೆಯಂತಹ ರೋಗಕ್ಕೆ ಔಷಧವಾಗುತ್ತವೆ.

ಭಾರತದಲ್ಲಿರುವ ಮಕ್ಕಳ `ಅಪೌಷ್ಟಿಕತೆ~ ಸಮಸ್ಯೆಗೆ ಈ ಧಾನ್ಯಗಳು ಉತ್ತಮ ಪರಿಹಾರವಾಗುತ್ತವೆ. ಆರೈಕೆ ಬೇಡದೇ, ಮಳೆಯಾಶ್ರಯದಲ್ಲಿ ಬೆಳೆಯುವ ಈ ಧಾನ್ಯಗಳಿಂದ ಪರಿಸರಕ್ಕೆ ಹಾನಿಯಿಲ್ಲ. ಕಡ್ಡಾಯವಾಗಿ ಸರ್ಕಾರ ಇಂಥ ಧಾನ್ಯಗಳ ರಕ್ಷಣೆಗೆ ಮುಂದಾಗಬೇಕು. ~ - ಇದು ಸಹಜ ಸಮೃದ್ಧದ ಕೃಷ್ಣಪ್ರಸಾದ್ ಅಭಿಮತ.

`ಸಿರಿ ಧಾನ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ 300 ಕೋಟಿ ರೂಪಾಯಿ ಮೀಸಲಿಟ್ಟಿದೆ. ಅದರಲ್ಲಿ ಕರ್ನಾಟಕದ ಪಾಲು 26 ಕೋಟಿ ರೂ. ಆದರೆ ಆ ಹಣ ಫಂಗಿಸೈಡ್, ಕೀಟನಾಶಕಕ್ಕಾಗಿ ಬಳಕೆಯಾಗುತ್ತಿದೆ. ಇಷ್ಟಕ್ಕೂ ಈ ಬೆಳೆಗಳಿಗೆ ಅಂಥ ಔಷಧಗಳ ಅವಶ್ಯಕತೆ ಇಲ್ಲ. ಇದರ ಬದಲು ಯಂತ್ರ ಆವಿಷ್ಕರಿಸಲು ಹಣ ಮೀಸಲಿಡಬೇಕು~ ಎಂದು ಸಿರಿಧಾನ್ಯ ಸಂರಕ್ಷಣಾ ಸಂಘದ ಸಂಯೋಜಕ ಅನಿಲ್ ಕುಮಾರ್ ವಾಸ್ತವದ ಬೆಳವಣಿಗೆಗಳನ್ನು ವಿವರಿಸಿದರು.

ಸಂವಾದದ ನಡುವೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್(ಎನ್‌ಐಇ) ಸಂಸ್ಥೆಯ ಉಪಾಧ್ಯಕ್ಷ ಶ್ರಿಪಾದರಾವ್, `ಸಂಸ್ಕರಣೆ ಕುರಿತು ಅಗತ್ಯ ಮಾಹಿತಿ ಕೊಡಿ. ಯಂತ್ರ ಅಭಿವೃದ್ಧಿಗೆ ತಮ್ಮ ಸಂಸ್ಥೆ ಪ್ರಯತ್ನಿಸುತ್ತದೆ~ ಎಂದರು.
 
ಚರ್ಚೆ, ಭರವಸೆಗಳ ನಡುವೆ ತುಮಕೂರು ಹಾಗೂ ಹಾವೇರಿ ಜಿಲ್ಲೆಯ ಸಿರಿಧಾನ್ಯ ಬೆಳೆಗಾರರು `ಜಿಲ್ಲಾ ಸಿರಿಧಾನ್ಯ ಸಂರಕ್ಷಣಾ ಸಂಘ~ಕ್ಕೆ ಮೇಳದಲ್ಲೇ ಚಾಲನೆ ನೀಡಿದರು. ಕೃಷಿ, ಸಂಸ್ಕರಣೆ, ಮಾರಾಟ ಎಲ್ಲಾ ವಿಭಾಗದಲ್ಲೂ `ಸಹಕಾರ ತತ್ವದಡಿ~  ಕಾರ್ಯ ನಿರ್ವಹಿಸುವ `ಪ್ರತಿಜ್ಞಾ ವಿಧಿ~ ಸ್ವೀಕರಿಸುವ ಜೊತೆಗೆ, ಸರ್ಕಾರದ ಮುಂದೆ ಒಂದಷ್ಟು ಬೇಡಿಕೆಗಳನ್ನು ಇಟ್ಟರು.

 ಮಳಿಗೆಗಳಲ್ಲಿ ವ್ಯಾಪಾರದ ಭರಾಟೆ ಕೂಡ ಜೋರಾಗಿತ್ತು.  ಪ್ರಿಸ್ಟಿನ್ ಆರ್ಗಾನಿಕ್ಸ್ ತಯಾರಿಸಿದ ಫ್ಲೇಕ್ಸ್, ಮಿಲೆಟ್ ಮಿಕ್ಸ್, ಬೇಬಿ ಫುಡ್‌ನಂತಹ ಉತ್ಪನ್ನಗಳು ಖಾಲಿಯಾದವು. `ಎರಡು ದಿನಗಳಲ್ಲಿ ಹದಿನೆಂಟು ಸಾವಿರ ವ್ಯಾಪಾರವಾಯಿತು. ಆಂಧ್ರಪ್ರದೇಶದ ಕದ್ರಿಯ `ಅರ್ಥ್ 360~ ಸಂಸ್ಥೆ ನಾಲ್ಕೈದು ಕ್ವಿಂಟಾಲ್ ನವಣೆ, ಸಾಮೆ ಮಾರಾಟ ಮಾಡಿತು. ಸಹಜ ಆರ್ಗಾನಿಕ್ಸ್, ಮೈಸೂರಿನ ಪ್ರಕೃತಿ ಸಾವಯವ ಆಹಾರ ಮಳಿಗೆ, ನಿಸರ್ಗ ಹಾಗೂ ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ಗ್ರಾಮೀಣ ಮಹಿಳಾ ವಿಭಾಗದ ಮಳಿಗೆಗಳಿಗೆ ಭರ್ಜರಿ ವ್ಯಾಪಾರವಾಯಿತು.

`ಆಹಾರ ಬುಟ್ಟಿ~ಯವರ ಮಿಲೆಟ್ಸ್ ಕೆಟರಿಂಗ್‌ಗೆ ಸಿಕ್ಕಾಪಟ್ಟೆ ಬೇಡಿಕೆ ಬಂತು. ಒಟ್ಟು ಮೇಳದಲ್ಲಿ ಎರಡು ದಿನಕ್ಕೆ 2.5ಲಕ್ಷ ರೂಗಳಷ್ಟು ವ್ಯಾಪಾರವಾಯಿತು. ಈ ಮೂಲಕ ಸಿರಿ ಧಾನ್ಯಗಳಿಗೆ ಮಾರುಕಟ್ಟೆ ಇದೆ ಎಂಬ ಮಾಹಿತಿಯನ್ನು ಮೇಳ ಹೊರ ಹಾಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT