ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯ ಬೆಳಕು

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಗರಡಿಮನೆ ಮತ್ತು ಕುಸ್ತಿಯಿಂದ ಹೆಣ್ಣುಮಕ್ಕಳನ್ನು ದೂರವೇ ಇಡುವ ಪದ್ಧತಿ ನಮ್ಮಲ್ಲಿತ್ತು. ಪೈಲ್ವಾನರು ಏಕಾಗ್ರತೆ ಕಳೆದುಕೊಳ್ಳಬಾರದು ಎಂಬ ಕಾಳಜಿ ಈ ಪದ್ಧತಿಯ ಹಿಂದೆ ಇತ್ತು ಎಂದು ಹಿರಿಯರು ಹೇಳುತ್ತಾರೆ.

ಆದರೆ ಇದೀಗ ಪುರುಷರ ಕುಸ್ತಿಯು ನಶಿಸುತ್ತಿದೆ ಎಂಬ ಕೂಗಿನ ನಡುವೆ, ಮಹಿಳೆಯರ ಕುಸ್ತಿ ಪ್ರವರ್ಧಮಾನಕ್ಕೆ ಬರುತ್ತಿದೆ. ದಸರಾ ಕುಸ್ತಿ ಸ್ಪರ್ಧೆಯಲ್ಲಿಯೂ ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದ ಮಹಿಳಾ ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.
 
ಫ್ರೀಸ್ಟೈಲ್ ಮತ್ತು ಗ್ರಿಕೋ ರೋಮನ್ ಕುಸ್ತಿ ಆಡಿಸಲಾಗುತ್ತಿದ್ದು, ಮಣ್ಣಿನ ಅಖಾಡಾದ ನಾಡಕುಸ್ತಿಯನ್ನು ಮಹಿಳೆಯರಿಗೆ ಆಡಿಸಲಾಗುವುದಿಲ್ಲ.  ಕುಸ್ತಿಪಟುಗಳು ಮತ್ತು ಕುಸ್ತಿಕಲಿಸುವ ಜಾಗಗಳಿಂದ ಮಹಿಳೆಯರನ್ನು ದೂರವಿಟ್ಟರೂ ಗರಡಿಯ ಮಣ್ಣನ್ನು ಅಂಬಾಭವಾನಿ ಮತ್ತು ನಿಂಬುಜಾದೇವಿಯೆಂದು ಪೂಜಿಸುವ ಸಂಪ್ರದಾಯ ಇಂದಿಗೂ ಇದೆ.
 
ಗರಡಿ ಇರುವ ಓಣಿಯ ಹೆಣ್ಣುಮಕ್ಕಳನ್ನು ತಾಯಿ ಮತ್ತು ಸಹೋದರಿಯರಂತೆ ನೋಡಿ ಅವರನ್ನು ರಕ್ಷಿಸಬೇಕು ಎಂಬ ಪಾಠವನ್ನು ಗರಡಿಯಲ್ಲಿ ಹೇಳಿಕೊಡಲಾಗುತ್ತದೆ. 

ಭಾರತದ ಎಲ್ಲೆಡೆಯೂ ಇದೇ ಸಂಪ್ರದಾಯವಿದೆ. ಮಹಿಳಾ ಕುಸ್ತಿಗೂ ಬಹಳ ಹಳೆಯ ಇತಿಹಾಸವೂ ಇದೆ. ಮೈಸೂರು ವಿವಿಯ ಪುರಾತತ್ವ ಮತ್ತು ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎ.ವಿ. ನರಸಿಂಹಮೂರ್ತಿ ಅವರ ಸಂಶೋಧನೆಯು ಈ ಬಗ್ಗೆ ಅಮೂಲ್ಯವಾದ ಮಾಹಿತಿ ನೀಡುತ್ತದೆ.

15ನೇ ಶತಮಾನದ ಅವಧಿಯಲ್ಲಿ ಜಟ್ಟಿ ವಂಶದ ಹರಿಯಕ್ಕ ಮಲ್ಲಯುದ್ಧ ಪ್ರವೀಣೆಯಾಗಿದ್ದು, ತನ್ನ ತಂದೆಯನ್ನು ಮಲ್ಲಯುದ್ಧದಲ್ಲಿ ಸಾಯಿಸಿದ ಮಲ್ಲನನ್ನು ಕುಸ್ತಿಯಲ್ಲಿ ಮಣಿಸಿ, ಕೊಂದು ಹಾಕಿದಳಂತೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಸಿಕ್ಕಿರುವ ಶಿಲಾಶಾಸನದಲ್ಲಿ ಈ ಬಗ್ಗೆ ಉಲ್ಲೇಖವಿದೆ ಎಂದು ನರಸಿಂಹಮೂರ್ತಿಯವರು ವೈಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಲೇಖನದಲ್ಲಿ ಬರೆದಿದ್ದಾರೆ.

ರಾಜ-ಮಹಾರಾಜರ ಕಾಲದಲ್ಲಿ ರಾಣಿಯರು ತಮ್ಮ ಪತಿಗೆ ಮತ್ತು ರಾಜ್ಯಕ್ಕೆ ಆಪತ್ತು ಎದುರಾದಾಗ ವೀರವನಿತೆಯರಾಗಿ ಹೋರಾಡಿದ ಉದಾಹರಣೆಗಳು ಹಲವು. ಆದರೆ ಆಧುನಿಕ ಯುಗದಲ್ಲಿಯೇ ಮಹಿಳೆಯರಿಗೆ ವೀರಕಲೆಗಳನ್ನು ಕಲಿಸುವ ಕಾರ್ಯ ಆಗಿಲ್ಲ. ಇದಕ್ಕೆ ಸಾಮಾಜಿಕ ಕಟ್ಟುಪಾಡುಗಳೂ ಕಾರಣವಾಗಿವೆ.

ಇದೆಲ್ಲದರ ನಡುವೆಯೂ ಕಳೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳಾ ಕುಸ್ತಿಯಲ್ಲಿ ಚಿನ್ನ ಗೆದ್ದ ಭಾರತದ ಗೀತಾ ಪೋಗಟ್ ಮತ್ತು ಬೆಳ್ಳಿ ಗೆದ್ದ ಆಕೆಯ ಸಹೋದರಿ ಬಬಿತಾ ಪೋಗಟ್ ಭಾರತದ ಭರವಸೆಯ ಕಿರಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT