ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯ ಸಮರ್ಥ್‌...

Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಐದು ಪಂದ್ಯ, ಆರು ಶತಕ. ಒಟ್ಟು 850 ರನ್‌!

ಈ ವರ್ಷ ನಡೆದ ಶಫಿ ದಾರಾಶಾ ಕ್ರಿಕೆಟ್‌ ಟೂರ್ನಿಯಲ್ಲಿ ರವಿ ಕುಮಾರ್‌ ಸಮರ್ಥ್‌ ತೋರಿರುವ ಸಾಮರ್ಥ್ಯಕ್ಕೆ ಹರಿಸಿದ ರನ್‌ ಹೊಳೆಗೆ ಈ ಅಂಕಿಅಂಶಗಳಿಗಿಂತ ಇನ್ನೊಂದು ಸಾಕ್ಷಿ ಬೇಕಿಲ್ಲ. ಮೈಸೂರಿನ ಈ ಆಟಗಾರ ವಿವಿಧ ವಯೋಮಿತಿಯೊಳಗಿನ ಟೂರ್ನಿಗಳಲ್ಲಿಯೂ ಉತ್ತಮ ಪ್ರದರ್ಶನ ತೋರಿ ಭರವಸೆ ಮೂಡಿಸಿದ್ದಾರೆ. ಜೊತೆಗೆ ಮೊದಲ ಬಾರಿಗೆ ರಣಜಿ ತಂಡದಲ್ಲಿ ಸ್ಥಾನ ಗಳಿಸಿಕೊಂಡಿದ್ದಾರೆ.

ಸ್ವಸ್ತಿಕ್‌ ಕ್ಲಬ್‌ನಲ್ಲಿ ತರಬೇತಿ ಪಡೆದು, ನಂತರ ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌ ಕ್ರಿಕೆಟ್ ಕ್ಲಬ್‌ ಸೇರಿಕೊಂಡ ಸಮರ್ಥ್‌ 19 ವರ್ಷದೊಳಗಿನವರ ಟೂರ್ನಿಯಲ್ಲೂ ಉತ್ತಮ ಆಟವಾಡಿದ್ದರು. ಈ ವಿಭಾಗದಲ್ಲಿ 2011ರಲ್ಲಿ ಒಟ್ಟು 1000 ರನ್‌ ಗಳಿಸಿದ ಗೌರವಕ್ಕೂ ಪಾತ್ರರಾಗಿದ್ದರು.

ಶಫಿ ದಾರಾಶಾ ಟೂರ್ನಿಯ ಫೈನಲ್‌ ಪಂದ್ಯ ಆಲೂರು ಕ್ರೀಡಾಂಗಣದಲ್ಲಿ ನಡೆದಿತ್ತು. ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್ ತಂಡವನ್ನು ಪ್ರತಿನಿಧಿಸಿದ್ದ ಸಮರ್ಥ್‌ ಫೈನಲ್‌ ಪಂದ್ಯದಲ್ಲಿ ಅಜೇಯ 106 ರನ್‌ ಗಳಿಸಿದ್ದರು. ಈ ಟೂರ್ನಿಯ ಕೊನೆಯ ಎರಡೂ ಪಂದ್ಯಗಳಲ್ಲಿ ಮೇಲಿಂದ ಮೇಲೆ ನಾಲ್ಕು ಶತಕ ಸಿಡಿಸಿದ್ದರು. ಇದರಿಂದ ‘ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌’ ಪ್ರಶಸ್ತಿ ಲಭಿಸಿತ್ತು. ಈ ಪ್ರಶಸ್ತಿ ಪ್ರದಾನ ಮಾಡಿದ್ದ ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅವರು ಬ್ಯಾಟ್‌್ ನೀಡಿ ಸಮರ್ಥ್ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಹೋದ ವರ್ಷ ಬೆಂಗಳೂರಿನಲ್ಲಿ ನಡೆದ ಬಾಂಗ್ಲಾದೇಶ ‘ಎ’ ಎದುರಿನ ಪಂದ್ಯದಲ್ಲೂ ಆಡಿದ್ದರು.

‘ಶತಕ ಗಳಿಸುವುದು ಸಾಮಾನ್ಯ. ಆದರೆ, ಸ್ಥಳೀಯ ಟೂರ್ನಿಯಾಗಲಿ ಅಥವಾ ಶಾಲಾ ಮಟ್ಟದ ಪಂದ್ಯಗಳೇ ಆಗಲಿ. ಸತತ ಬ್ಯಾಟಿಂಗ್‌ ಸ್ಥಿರತೆ ಉಳಿಸಿಕೊಳ್ಳುವುದು ಸುಲಭವಲ್ಲ. ಐದು ಪಂದ್ಯಗಳಲ್ಲಿ ಆರು ಶತಕ ಗಳಿಸಿರುವ ಸಮರ್ಥ್‌ ಆಟ ಮೆಚ್ಚುವಂಥದ್ದು. ಇದೇ ರೀತಿ ಆಡುತ್ತಾ ಹೋದರೆ ರಾಷ್ಟ್ರೀಯ ತಂಡದಲ್ಲಿ ಬೇಗನೆ ಸ್ಥಾನ ಗಳಿಸಬಹುದು’ ಎಂದು ದ್ರಾವಿಡ್‌ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಜೈನ್‌ ಕಾಲೇಜಿನಲ್ಲಿ ಬಿ.ಕಾಂ. ಓದುತ್ತಿರುವ ಸಮರ್ಥ್‌ ಕರ್ನಾಟಕ ತಂಡದ ಜೊತೆ ರೋಹ್ಟಕ್‌ನಲ್ಲಿದ್ದಾರೆ. ರಣಜಿಗೆ ಪದಾರ್ಪಣೆ ಮಾಡಲು ಉತ್ಸುಕತೆಯಿಂದ ಕಾದಿದ್ದಾರೆ. ಆದರೆ, ಅವರಿಗೆ ಇನ್ನು ಅಂತಿಮ ಹನ್ನೊಂದರಲ್ಲಿ ಸ್ಥಾನ ಲಭಿಸಿಲ್ಲ. ಬದುಕಿನ ಕನಸು ಹಾಗೂ ತಮ್ಮ ಆಟದ ಬಗ್ಗೆ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ.

* ಮೊದಲ ಬಾರಿಗೆ ರಣಜಿ ತಂಡದಲ್ಲಿ ಸ್ಥಾನ ಲಭಿಸಿದೆ. ಇದಕ್ಕೆ ಕಾರಣವಾದ ಪ್ರಮುಖ ಅಂಶವೇನು?
ಶಫಿ ದಾರಾಶಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ ರಣಜಿ ತಂಡದಲ್ಲಿ ಸ್ಥಾನ ಗಳಿಸಲು ಸಾಧ್ಯವಾಯಿತು. ಅದಕ್ಕೂ ಮುನ್ನ ಶಾಲಾ, ಕಾಲೇಜು ಮಟ್ಟದಲ್ಲಿಯೂ ಚೆನ್ನಾಗಿ ಆಡಿದ್ದೆ. 19 ವರ್ಷದೊಳಗಿನವರ ಟೂರ್ನಿಯಲ್ಲಿ ಗಳಿಸಿದ ರನ್‌ಗಳು ರಣಜಿ ತಂಡದಲ್ಲಿ ಸ್ಥಾನ ಗಳಿಸಲು ನೆರವಾದವು.

* ಈ ರಣಜಿ ಋತುವಿನಲ್ಲಿ ಅಂತಿಮ ಹನ್ನೊಂದರಲ್ಲಿ ಸ್ಥಾನ ಲಭಿಸುವ ಭರವಸೆಯಿದೆಯೇ?
ಅದು ಕೊಂಚ ಕಷ್ಟ. ನಮ್ಮ ತಂಡದಲ್ಲಿ ಬ್ಯಾಟ್ಸ್‌ಮನ್‌ಗಳು ಹೆಚ್ಚಾಗಿದ್ದಾರೆ. ಜೊತೆಗೆ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕೆ.ಎಲ್‌. ರಾಹುಲ್‌, ಸಿ.ಎಂ. ಗೌತಮ್‌, ಕುನಾಲ್‌ ಕಪೂರ್‌, ಮನೀಷ್‌ ಪಾಂಡೆ ಚೆನ್ನಾಗಿ ಆಡುತ್ತಿದ್ದಾರೆ. ಅವರ ಆಟವನ್ನು ನೋಡುವುದು ಒಂದು ಅನುಭವ. ಇದರಿಂದ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಅಂತಿಮ ಹನ್ನೊಂದರಲ್ಲಿ ಸ್ಥಾನ ನೀಡುವುದು ಬಿಡುವುದು ಅದು ತಂಡದ ನಿರ್ಧಾರ. ಅವಕಾಶ ಸಿಕ್ಕರೆ ಸಾಮರ್ಥ್ಯ ತೋರಿಸುತ್ತೇನೆ.

* ಶಫಿ ದಾರಾಶಾ ಮತ್ತು ನಂತರದ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ನೀಡಿ ಫಾರ್ಮ್‌  ಉಳಿಸಿಕೊಂಡಿದ್ದೀರಿ. ಸತತವಾಗಿ ಲಯ ಕಾಪಾಡಿಕೊಂಡಿರುವುದರ ಹಿಂದಿನ ಗುಟ್ಟೇನು?
ಹೆಚ್ಚು ರನ್‌ ಕಲೆ ಹಾಕಬೇಕು, ಶತಕ ಗಳಿಸಬೇಕು ಎನ್ನುವ ಉದ್ದೇಶವಿಟ್ಟುಕೊಂಡು ಕ್ರೀಸ್‌ಗೆ ಬರುವುದಿಲ್ಲ. ಆದರೆ, ಪ್ರತಿ ಎಸೆತವನ್ನೂ ಖುಷಿಯಿಂದ ಎದುರಿಸಬೇಕು ಎನ್ನುವುದಷ್ಟೇ ನನ್ನ ಗುರಿ. ಇದು ಸಚಿನ್‌ ತೆಂಡೂಲ್ಕರ್‌ ಅವರಿಂದ ಕಲಿತ ಪಾಠ. ಆದ್ದರಿಂದ ಸತತವಾಗಿ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗುತ್ತಿದೆ.

* ಸದ್ಯದ ಗುರಿ ಏನು?
ಮೊದಲು ರಾಜ್ಯ ತಂಡದ ಹನ್ನೊಂದರ ಬಳಗದಲ್ಲಿ ಸ್ಥಾನ ಗಳಿಸಬೇಕು. ಕರ್ನಾಟಕ ರಣಜಿ ಟ್ರೋಫಿ ಗೆದ್ದಾಗ ತಂಡದ ಭಾಗವಾಗಿರಬೇಕು ಎನ್ನುವ ಆಸೆಯಿದೆ. ಪ್ರತಿಯೊಬ್ಬ ಆಟಗಾರನಿಗೂ ರಾಷ್ಟ್ರವನ್ನು ಪ್ರತಿನಿಧಿಸಬೇಕು ಎನ್ನುವ ಕನಸು ಇರುತ್ತದೆ. ಇದರಿಂದ ನಾನೂ ಹೊರತಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT