ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯಾಗಿಯೆ ಉಳಿದ ಪುಷ್ಕರಣಿ ಅಭಿವೃದ್ಧಿ!

Last Updated 14 ಫೆಬ್ರುವರಿ 2011, 12:00 IST
ಅಕ್ಷರ ಗಾತ್ರ

ಕನಕಗಿರಿ: ಕಳೆದ ಎರಡು ವರ್ಷಗಳ ಹಿಂದೆ ಇಲ್ಲಿನ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗೆ ಆಗಮಿಸಿದ್ದ ಮೂಲ ಸೌಲಭ್ಯ ಹಾಗೂ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನರೆಡ್ಡಿ ನೀಡಿದ ಭರವಸೆ ಈಡೇರದೆ ನೆನೆಗುದಿಗೆ ಬಿದ್ದಿದೆ.  ಐತಿಹಾಸಿಕ ಹಾಗೂ ಧಾರ್ಮಿಕ ತಾಣವಾದ ಪುಷ್ಕರಣಿ ಮೌರ್ಯರ ಅಶೋಕ ಹಾಗೂ ವಿಜಯನಗರದ ಕೃಷ್ಣದೇವರಾಯನ ಕಾಲದಿಂದಲೂ ಪ್ರಸಿದ್ಧಿ ಪಡೆದಿದೆ. ಕನಕಾಚಲಪತಿ ದೇವಸ್ಥಾನ, ಚಿಕ್ಕ ಕನಕಪ್ಪನ ಭಾವಿ, ತೊಂಡೆತೇವರಪ್ಪ ದೇವಳ, ಪುಷ್ಕರಣಿ ಹೀಗೆ ಅನೇಕ ದೇಗುಲಗಳು ನೋಡುಗರ ಕಣ್ಮನ ಸೆಳೆಯುತ್ತವೆ.
ಅನೇಕ ಸ್ಮಾರಕಗಳಲ್ಲಿ ಪುಷ್ಕರಣಿ (ಕೊಂಡ) ಕೂಡ ಒಂದು.

ಪುಷ್ಕರಣಿ ಮಧ್ಯೆ ಇರುವ ಮಂಟಪ ನೋಡುಗರನ್ನು ಆಕರ್ಷಿಸುತ್ತದೆ. ವಿಶಾಲವಾದ ಜಾಗೆಯಲ್ಲಿರುವ ಪುಷ್ಕರಣಿಯಲ್ಲಿ ನೀರಿನ ಸಂಗ್ರಹ ಇದ್ದು, ಜನತೆ ಬಟ್ಟೆ ಸ್ವಚ್ಛಗೊಳಿಸಲು ಉಪಯೋಗಿಸುತ್ತಿದ್ದಾರೆ, ಗಿಡಗಂಟೆಗಳು ಬೆಳೆದು ನಿಂತಿದ್ದು ಸರ್ಕಾರದ ತೀರ ನಿರ್ಲಕ್ಷ್ಯಕ್ಕೆ ಒಳಗಾಗಿದೆ.    ಸುತ್ತಮುತ್ತಲಿನ ವಾತಾವರಣ ಕೂಡ ಗಲೀಜಿನಿಂದ ಕೂಡಿದೆ. ತಲೆ ಮಂಡೆ ನೀಡುವ ಪದ್ಧತಿ ಇಲ್ಲಿದ್ದು ಭಕ್ತರು ಕೂದಲುಗಳನ್ನು ಹಾಗೆಯೆ ಬಿಟ್ಟು ಹೋಗಿರುವುದು ಕಾಣಿಸುತ್ತದೆ. 

ಎರಡು ವರ್ಷಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದ ಪ್ರವಾಸೋದ್ಯಮ, ಮೂಲ ಸೌಲಭ್ಯ ಸಚಿವರು ಅಭಿವೃದ್ಧಿಗೆ 20 ಲಕ್ಷ ರೂಪಾಯಿ ಕೊಡುವುದಾಗಿ ಭರವಸೆ ನೀಡಿದರಲ್ಲದೆ ಸ್ಥಳದಲ್ಲಿ ಹಾಜರಿದ್ದ ಇಲಾಖೆಯ ಅಧಿಕಾರಿಗಳಿಗೆ ಈ ಕೂಡಲೇ ನೀಲ ನಕಾಶೆ ತಯಾರಿಸಿ ಅಭಿವೃದ್ಧಿಗೊಳಿಸಿ ಎಂದು ಸೂಚಿಸಿದ್ದರು.   ಈ ಹಿಂದಿನ ಶಾಸಕರು, ಸಚಿವರ ಅಭಿವೃದ್ಧಿಯ ಮಾತು ಕೇಳಿ ಸುಸ್ತಾಗಿದ್ದ ಇಲ್ಲಿನ ಜನತೆ ಪ್ರವಾಸೋದ್ಯಮ ಸಚಿವ ಜನಾರ್ದನರೆಡ್ಡಿ ನೀಡಿದ ಭರವಸೆಯಿಂದ ಕೊಂಚ ಆಶಾಭಾವನೆ ವ್ಯಕ್ತಪಡಿಸಿ ಅಭಿವೃದ್ಧಿ ಆಗಬಹುದೆಂದು ಭಾವಿಸಿದ್ದರು. ಇಲಾಖೆಯ ಅಧಿಕಾರಿಗಳು ಸಹ ಖುದ್ದಾಗಿ ಸ್ಥಳ ವೀಕ್ಷಿಸಿದ್ದರಿಂದ ಭರವಸೆ ಈಡೇರುತ್ತದೆ ಎಂದೇ ಜನ ತಿಳಿಸಿದ್ದರು. ರೆಡ್ಡಿ ನೀಡಿದ ಭರವಸೆ ಕಳೆದ ಜನವರಿಗೆ ಎರಡು ವರ್ಷ ಕಳೆಯಿತು, ಇತ್ತ ಸಚಿವರು, ಅತ್ತ ಅಧಿಕಾರಿಗಳ ದರ್ಶನ ಮತ್ತೆ ಈ ಕಡೆಗೆ ಆಗಲಿಲ್ಲ, ಪುಷ್ಕರಣಿ ಅಭಿವೃದ್ಧಿ ಮಾಡುವ ಭರವಸೆ ಮಾತ್ರ ನೆನಗುದಿಗೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT