ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ಜರಿ ಸಿಗಡಿ ಬೇಟೆ!

ರಸಾಸ್ವಾದ
Last Updated 10 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಆಕರ್ಷಕ ಒಳಾಂಗಣ ವಿನ್ಯಾಸ, ಮನಸ್ಸಿಗೆ ಮುದ ನೀಡುವ ಹಿತವಾದ ಸಂಗೀತ. ಮಂದ ಬೆಳಕಿನಲ್ಲಿ ಝಗಮಗಿಸುವ ಚೆಲುವಿನಿಂದ ಗ್ರಾಹಕರ ಮನಸೆಳೆಯುತ್ತದೆ `ದಿ ಗ್ರಿಲ್ ಅಂಡ್ ದಿ ಕರ‌್ರಿ ಬೌಲ್' ರೆಸ್ಟೋರೆಂಟ್.  ಹೋಟೆಲ್ ಒಳಗೆ ಕಾಲಿಟ್ಟ ಕ್ಷಣದಿಂದಲೇ ಕಡಲ ಖಾದ್ಯಗಳ ಪರಿಮಳ ಮೂಗಿಗೆ ಅಡರುತ್ತದೆ.

ಅಂದಹಾಗೆ, ಕಡಲ ಖಾದ್ಯಗಳನ್ನು ಸಿಕ್ಕಾಪಟ್ಟೆ ಇಷ್ಟಪಡುವವರಿಗಾಗಿ ಈ ರೆಸ್ಟೋರೆಂಟ್ ಮೇ 30ರವರೆಗೆ `ಪ್ರಾನ್ಸ್ ಫೆಸ್ಟಿವಲ್' ನಡೆಸುತ್ತಿದೆ. ಆಹಾರೋತ್ಸವಕ್ಕೆಂದೇ ಒಂದು ವಿಶೇಷ ಮೆನು ಕೂಡ ಸಿದ್ಧಪಡಿಸಲಾಗಿದೆ. ಈ ಮೆನುವಿನಲ್ಲಿ ಬಗೆ ಬಗೆ ಸಿಗಡಿಯಿಂದ ತಯಾರಿಸಿದ ಖಾದ್ಯಗಳ ದೊಡ್ಡ ಪಟ್ಟಿ ಇದೆ. ಪ್ರತಿನಿತ್ಯ ಬದಲಾಗುವ ಮೆನುವಿನಲ್ಲಿ ದಿನವೊಂದಕ್ಕೆ ಬರೋಬ್ಬರಿ ಮೂವತ್ತಕ್ಕೂ ಅಧಿಕ ಬಗೆಯ ಸಿಗಡಿ ಖಾದ್ಯಗಳನ್ನು ಸವಿಯುವ ಅವಕಾಶ ಗ್ರಾಹಕರಿಗಿದೆ.

`ದಿ ಗ್ರಿಲ್ ಅಂಡ್ ದಿ ಕರ‌್ರಿ ಬೌಲ್' ರೆಸ್ಟೋರಾದ ಮುಖ್ಯ ಬಾಣಸಿಗ ಥಾಮ್ಸನ್ ಆಹಾರೋತ್ಸವದ ವಿಶೇಷತೆಯನ್ನು ವಿವರಿಸಿದ್ದು ಹೀಗೆ...
`ಕಡಲ ಖಾದ್ಯಗಳಲ್ಲಿ ಸಿಗಡಿಗೆ ವಿಶೇಷ ಸ್ಥಾನ. ಲಘು ಸಿಹಿ ಸ್ವಾದವಿರುವ, ಪರಿಮಳ ಬೀರುವ ಸಿಗಡಿ ಖಾದ್ಯ, ಕರ‌್ರಿ ಆರೋಗ್ಯಕ್ಕೆ ಅತ್ಯುತ್ತಮ. ತೂಕ ಇಳಿಸಿಕೊಳ್ಳಲು ನೆರವಾಗುವ ಸಿಗಡಿ ಖಾದ್ಯಗಳಲ್ಲಿ ಪೌಷ್ಠಿಕಾಂಶಗಳು ಹೇರಳವಾಗಿವೆ. ಅದೂ ಅಲ್ಲದೇ ಸಿಗಡಿ ಖಾದ್ಯಗಳನ್ನು ಇಷ್ಟಪಡುವ ಆಹಾರಪ್ರಿಯರು ನಗರದಲ್ಲಿ ಸಾಕಷ್ಟಿದ್ದಾರೆ. ಅಂಥವರಿಗೆಂದೇ ಈ ಬಾರಿ ವಿಶೇಷವಾಗಿ ಸಿಗಡಿ ಖಾದ್ಯಗಳ ಆಹಾರೋತ್ಸವ ಆಯೋಜಿಸಲಾಗಿದೆ' ಎಂದರು ಅವರು.

ಅದೇ ವೇಳೆಗೆ ವೈಟರ್ ಟ್ರಾಲಿಯ ಮೇಲೆ ಆಕರ್ಷಕವಾಗಿ ಜೋಡಿಸಿಟ್ಟಿದ್ದ ಹಸಿಯಾದ ಟೈಗರ್ ಪ್ರಾನ್ಸ್, ರಿಂಗ್ ಪ್ರಾನ್ಸ್, ಇಂಡಿಯನ್ ಸಾಲೊಮನ್ ಫಿಶ್ ಹೀಗೆ ನಾನಾ ನಮೂನೆಯ ಸಿಗಡಿಗಳನ್ನು ನೋಡುವಂತೆ ತಿಳಿಸಿದರು. ಆನಂತರ, ಥಾಮ್ಸನ್ ಒಂದೊಂದೇ ಸಿಗಡಿಯ ಮಹತ್ವನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ಆಮೇಲೆ, ಥಾಮ್ಸನ್ ಮಾತು ಮುಂದುವರಿಸಿದರು. `ಸ್ಟಾರ್ಟರ್ಸ್ ಹಾಗೂ ಮುಖ್ಯ ಮೆನುವಿನಲ್ಲಿ ಇಪ್ಪತ್ತಕ್ಕೂ ಅಧಿಕ ಬಗೆಯ ಸಿಗಡಿ ಖಾದ್ಯಗಳನ್ನು ಪರಿಚಯಿಸಲಾಗಿದೆ. ಇವುಗಳ ಜತೆಗೆ ಮಲಬಾರ್ ಪರಾಟ, ನೀರ್ ದೋಸೆ, ರೋಟಿ ಇರುತ್ತವೆ. ಆಹಾರೋತ್ಸವದ ಮೆನು ನಿತ್ಯ ಬದಲಾಗುತ್ತಿರುತ್ತದೆ. ಅದೂ ಅಲ್ಲದೇ ಈ ಆಹಾರೋತ್ಸವದಲ್ಲಿ ಗ್ರಾಹಕರಿಗೆ ಎರಡು ವಿಧಧ ಆಯ್ಕೆಗಳಿವೆ. ಒಂದೆಡೆ ಕರಾವಳಿ ಸೊಗಡಿದ್ದರೆ, ಮತ್ತೊಂದೆಡೆ ಅಂತರರಾಷ್ಟ್ರೀಯ ಸಿಗಡಿ ರುಚಿಯನ್ನು ಸವಿಯುವ ಅವಕಾಶವಿದೆ. ದಕ್ಷಿಣದ ಜನಪ್ರಿಯ ಸಿಗಡಿ ಖಾದ್ಯಗಳಾದ ರಾಯಲ್ಲ ವೆಪ್ಪುಡು, ಗೋಲ್ಡನ್ ಪ್ರಾನ್ಸ್, ಚೆಟ್ಟಿನಾಡು ಪ್ರಾನ್ ಸುಕ್ಕಾ, ಗೋನ್ ಪ್ರಾನ್ ಕರಿ, ಪ್ರಾನ್ ರೆಚೆಡೊ, ಚೀಮೆನ್ ತುಯಾಲ್ ಮತ್ತು ಪ್ರಾನ್ ಕೊಕನಟ್ ಫ್ರೈ ಪರಿಚಯಿಸಲಾಗಿದೆ. ಅಂತರರಾಷ್ಟ್ರೀಯ ಮೆನುವಿನಲ್ಲಿ ಮೆಲಾಂಜೆ ಆಫ್ ಲೋಕೊ ಪೊಕೊ ಪ್ರಾನ್ಸ್, ಟೈಗರ್ ಪ್ರಾನ್, ವೋಡ್ಕಾ ಮತ್ತು ಬಾಸಿಲ್ ಬೇಕ್ಡ್ ಫ್ಲವರ್ ಪ್ರಾನ್ಸ್, ಜಂಬೋ ಪ್ರಾನ್ಸ್, ಗ್ರಿಲ್ಡ್ ರಿಂಗ್ ಪ್ರಾನ್ಸ್ ಮೊದಲಾದ ಆಯ್ಕೆಗಳು ಗ್ರಾಹಕರಿಗಿವೆ' ಎಂದರು.

ಆ ವೇಳೆಗೆ ವೈಟರ್ ಬ್ರೆಡ್‌ಬಾಸ್ಕೆಟ್ ಅನ್ನು ಟೇಬಲ್ ಮೇಲೆ ತಂದಿಟ್ಟರು. ಮೀನಿನಿಂದ ತಯಾರಿಸಿದ ಹಸಿರು ಸಾಸ್, ಆಲಿವ್ ಆಯಿಲ್ ಹಾಗೂ ಬೆಣ್ಣೆ ತುಣುಕಿನ ಜತೆಗೆ ಮೂರು ಬಗೆಯ ಬ್ರೆಡ್ಡಿನ ತುಂಡುಗಳಿದ್ದವು. ಬ್ರೆಡ್ ತುಂಡು ಮಾಡಿ, ಅದಕ್ಕೆ ಬೆಣ್ಣೆ ಸವರಿ ನಂತರ ಅದರ ಮೇಲೊಂದಿಷ್ಟು ಮೀನಿನ ಸಾಸ್ ಸವರಿ ಸವಿದಾಗ ವಿಶೇಷ ರುಚಿ ಸಿಕ್ಕಿತು. ಆನಂತರ ಥಾಮ್ಸನ್ `ಚೆನ್ನಾಗಿದೆಯೇ?' ಎನ್ನುತ್ತಾ ಪ್ರತಿಕ್ರಿಯೆ ಪಡೆದುಕೊಂಡರು. ನಂತರ ಒಂದರ ಹಿಂದೆ ಒಂದರಂತೆ ಸಿಗಡಿ ಖಾದ್ಯಗಳು ಟೇಬಲ್ಲನ್ನು ಆಕ್ರಮಿಸಿಕೊಳ್ಳತೊಡಗಿದವು. ಮೊದಲಿಗೆ `ಚಿಲ್ಲಿ ಲೆಂಟಿಲ್ ಕ್ರಸ್ಟೆಡ್ ಪ್ರಾನ್ಸ್', ನಂತರ ದಕ್ಷಿಣದ ಬಂಗಾರ ಪ್ರಾನ್ಸ್‌ನ ಸರದಿ. ಥಾಮ್ಸನ್ ಆ ಖಾದ್ಯಗಳನ್ನು ಸವಿಯುವ ಅವಕಾಶ ಮಾಡಿಕೊಟ್ಟರು. ರುಚಿ ಅದ್ಭುತವಾಗಿತ್ತು. ಆನಂತರ, ಅವುಗಳ ವಿಶೇಷತೆ ಮತ್ತು ತಯಾರಿಸುವ ಕ್ರಮ ವಿವರಿಸಿದರು.

`ಚಿಲ್ಲಿ ಲೆಂಟಿಲ್ ಕ್ರಸ್ಟೆಡ್ ಪ್ರಾನ್ಸ್‌ಗೆ ಭರ್ಜರಿ ಮಸಾಲೆ ಕೊಟ್ಟಿರುತ್ತೇವೆ. ಖಾರವನ್ನು ಇಷ್ಟಪಡುವವರಿಗೆ ಈ ಖಾದ್ಯ ಇಷ್ಟವಾಗುತ್ತದೆ. ಬಂಗಾರ ಪ್ರಾನ್ಸ್ ಆಂಧ್ರ ಶೈಲಿಯಲ್ಲಿ ತಯಾರು ಮಾಡಲಾಗುತ್ತದೆ. ಇದೂ ಕೂಡ ಸ್ವಲ್ಪ ಸ್ಟೈಸಿ' ಎಂದರು ಅವರು.

ವಿವರಣೆ ನಂತರ ತರಹೇವಾರಿ ಸಿಗಡಿ ಖಾದ್ಯಗಳನ್ನು ಸವಿಯುವ ಅವಕಾಶ ಮಾಡಿಕೊಟ್ಟರು ಥಾಮ್ಸನ್. ಎಲ್ಲ ಖಾದ್ಯಗಳ ರುಚಿಯೂ ಭಿನ್ನ ಮತ್ತು ನಾಲಿಗೆಗೆ ಹಿತವಾಗಿತ್ತು. ಕಡಲ ಖಾದ್ಯ ಪ್ರೇಮಿಗಳಿಗೆ ಮೀನಿನಿಂದ ತಯಾರಿಸಿದ ಖಾದ್ಯಗಳಂತೆ ಸಿಗಡಿ ಖಾದ್ಯಗಳು ಇಷ್ಟವಾಗುತ್ತದೆ. `ದಿ ಗ್ರಿಲ್ ಅಂಡ್ ಕರ‌್ರಿ ಬೌಲ್' ರೆಸ್ಟೊರಾದಲ್ಲಿ ನಡೆಯುತ್ತಿರುವ `ಪ್ರಾನ್ಸ್ ಫೆಸ್ಟಿವಲ್'ನಲ್ಲೆಗ ಬಾಯಲ್ಲಿ ನೀರೂರಿಸುವ ಪ್ರಾನ್ಸ್ ಕರ‌್ರಿ, ಫ್ರೈ, ಮೊದಲಾದ ಸಿಗಡಿ ತಿನಿಸುಗಳದ್ದೇ ಕಾರುಬಾರು. ಸಿಗಡಿ ಪ್ರಿಯರು ಒಮ್ಮೆ ರೆಸ್ಟೋರಾಗೆ ಹೋಗಿ ಸಿಗಡಿ ಖಾದ್ಯಗಳನ್ನು ಸವಿಯಬಹುದು.

ಸ್ಥಳ: ದಿ ಗ್ರಿಲ್ ಅಂಡ್ ಕರ‌್ರಿ ಬೌಲ್ ರೆಸ್ಟೋರೆಂಟ್, ಒನ್ ಎಂ.ಜಿ.ಮಾಲ್, ಟ್ರಿನಿಟಿ ಸರ್ಕಲ್. ಮಾಹಿತಿಗೆ ಮತ್ತು ಟೇಬಲ್ ಕಾಯ್ದಿರಿಸಲು: 080 2208 2266. ಮಧ್ಯಾಹ್ನ 11 ರಿಂದ ರಾತ್ರಿ 11.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT