ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಲೇ ಬಿಎಂಟಿಸಿ!

Last Updated 6 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಳಿಗ್ಗೆ ಹಾಗೂ ಕಚೇರಿ ಬಿಡುವ ವೇಳೆಯಲ್ಲಿ ವಿಲ್ಸನ್ ಗಾರ್ಡನ್‌ನಿಂದ ಹೊಸೂರು ಕಡೆ ಹೋಗುವ ಮಾರ್ಗದಲ್ಲಿ ಫೋರಂ ಮಾಲ್‌ವರೆಗೆ ಹಾಗೂ ಯಶವಂತಪುರ- ಶಿವಾಜಿನಗರ ಮಾರ್ಗದಲ್ಲಿ ಮೇಖ್ರಿ ಸರ್ಕಲ್‌ನಿಂದ ಸದಾಶಿವನಗರ ಪೊಲೀಸ್ ಠಾಣೆ ಸಮೀಪದ ಬಸ್ ನಿಲ್ದಾಣದವರೆಗೆ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಇವೆರಡು ಮಾರ್ಗಗಳಲ್ಲದೇ ನಗರದ ಬಹುತೇಕ ಕಡೆ ಸಂಚಾರ ದಟ್ಟಣೆ ಸಮಸ್ಯೆ ಸಂಚಾರ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ. ಅದರಲ್ಲೂ ಕಾರುಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೂ ಬಿಎಂಟಿಸಿ ಬಸ್ ಅವಲಂಬಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ.
 

ಬಿಎಂಟಿಸಿ ಲಾಭಸೂಚಿ...
ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಕೇಂದ್ರೀಯ ಎಂಬ ಐದು ವಲಯ ವ್ಯಾಪ್ತಿಯಲ್ಲಿ 2009-10 ರಲ್ಲಿದ್ದುದು 5758 ಶೆಡ್ಯೂಲ್.

ಕ್ರಮಿಸುತ್ತಿದ್ದ ದೂರ: 13,53,091 ಕಿ.ಮೀ.

ಟ್ರಿಪ್‌ಗಳು: 78,214
2012-13ರಲ್ಲಿ...

ಶೆಡ್ಯೂಲ್‌ಗಳು: 6,071.

ಗುರಿ: 6195.

ಕ್ರಮಿಸುತ್ತಿರುವ ದೂರ: 14,07,557 ಕಿ.ಮೀ

ಪ್ರಸ್ತುತ 550 ವೋಲ್ವೊ, (ಈ ಪೈಕಿ ವಾಯುವಜ್ರ 14)4ಏಸಿ ಸುವರ್ಣ   ಮಾರ್ಕೊಪೋಲೊ 98 4ಕರೋನಾ ಏಸಿ 25

ವೋಲ್ವೊ ಲಾಭ
2009-10ರಲ್ಲಿ    1.75 ಕೋಟಿ. 2010-11ರಲ್ಲಿ 15ಕೋಟಿ.
2011-12ರಲ್ಲಿ     22.33 ಕೋಟಿ
.


ತುತ್ತಿನ ಬಾಬತ್ತಿಗಾಗಿ ಮಂದಿ ಎಲ್ಲೆಲ್ಲಿಂದಲೋ ನಗರದಲ್ಲಿ ಪ್ರತಿದಿನ ಜಮಾವಣೆಯಾಗುತ್ತಲೇ ಇದ್ದಾರೆ. ಟಿಕೆಟ್, ದೈನಿಕ ಪಾಸ್, ಮಾಸಿಕ ಪಾಸ್‌ಗಳ ಮೂಲಕ ಪ್ರತಿನಿತ್ಯ ಸಂಚರಿಸುವ ಮಂದಿ ಅಷ್ಟಿಷ್ಟಲ್ಲ.. ಬರೋಬ್ಬರಿ 48 ಲಕ್ಷಕ್ಕೂ ಅಧಿಕ!
ಇಷ್ಟು ದೊಡ್ಡ ಜನಸಮೂಹವನ್ನು ತೃಪ್ತಿಪಡಿಸುವುದು ಸುಲಭದ ಮಾತಲ್ಲ, ಬಿಡಿ. ಆದರೂ ಬಿಎಂಟಿಸಿ ಪ್ರಯಾಣಿಕರನ್ನು ತೃಪ್ತರನ್ನಾಗಿಸಲು ವಿಧವಿಧವಾಗಿ ಯತ್ನಿಸುತ್ತಲೇ ಇದೆ. ಬಹುಶಃ ಅದರ ಯಶಸ್ಸಿನ ಗುಟ್ಟೂ ಇದೇ ಇರಬೇಕು.

ಪಾರದರ್ಶಕ ಗಾಜು, ಆರಾಮ ಆಸನಗಳುಳ್ಳ ಕೆಂಪು ಬಸ್ಸು ರಸ್ತೆಗಿಳಿದಾಗ ಅದೂ ವೋಲ್ವೊ ಎಂದೇ ಭಾವಿಸಿ ಜನ ಹಿಂದೆ ಸರಿಯುತ್ತಿದ್ದರು. ಅದಕ್ಕೆಂದೇ ಈಗ ಈ ಬಸ್‌ಗಳಲ್ಲಿ `ಸಾಮಾನ್ಯ ದರ~ ಎಂಬ ಹಣೆಪಟ್ಟಿ ಹಾಕಲಾಗಿದೆ. ನೀಲಿ, ತಿಳಿನೀಲಿ, ಹಸಿರು (ಜಿ ಸರಣಿ), ಬಿಗ್10, ಬಿಗ್ ಸರ್ಕಲ್, ಎಲೆ ಹಸಿರು ಬಣ್ಣದ ಪುಷ್ಪಕ್...

ಬಿಎಂಟಿಸಿಗೆ ಒಂದೇ ಎರಡೇ ಬಣ್ಣ? ಈ ಬಣ್ಣಗಳೇ ಪ್ರಯಾಣಿಕರನ್ನು ಸೆಳೆಯುತ್ತಿರುವುದೂ ಸುಳ್ಳಲ್ಲ. ಇವೆಲ್ಲ ಸಾಮಾನ್ಯ ದರದ ಬಸ್ಸುಗಳು ಎಂಬುದು ಗಮನಾರ್ಹ. ಅಂದರೆ ವೋಲ್ವೊದಲ್ಲಿ ಸಂಚರಿಸುವಷ್ಟು ಆರ್ಥಿಕವಾಗಿ ಸದೃಢರಲ್ಲದ ಸಾಮಾನ್ಯ ಪ್ರಯಾಣಿಕರಿಗಾಗಿ ವರ್ಣರಂಜಿತ ಯೋಜನೆ!

ವಾಹನಗಳ ಒತ್ತು... ಮೈಲೇಜ್ ಕುತ್ತು
ವಾಹನ ದಟ್ಟಣೆ ಬೆಂಗಳೂರಿನ ಸಾರ್ವಕಾಲಿಕ ಸಮಸ್ಯೆ. ಒಂದೊಂದು ಸಿಗ್ನಲ್‌ನಲ್ಲಿಯೂ ಹಸಿರು ದೀಪ ನಿರೀಕ್ಷಿಸುತ್ತಲೇ ಪ್ರಯಾಣಿಸುವ ಮಂದಿ ಸಂಚಾರ ದಟ್ಟಣೆಯ ಸುಖ-ದುಃಖದ ಪ್ರತ್ಯಕ್ಷ ಫಲಾನುಭವಿಗಳು. ರಸ್ತೆಗಳು ಬ್ಲಾಕ್ ಆದಾಗಲಂತೂ ಪಾಡು ಹೇಳತೀರದು.

ಮೆಟ್ರೊ ಕಾಮಗಾರಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ, ಟ್ರಾಫಿಕ್ ಸಮಸ್ಯೆ ಬಿಎಂಟಿಸಿಯ ಪ್ರತಿ ಬಸ್ಸಿನ ಮೈಲೇಜ್ ಮೇಲೆ ನೇರ ಪರಿಣಾಮ ಬೀರಿರುವುದು ಸ್ಪಷ್ಟ.

`ಎರಡು ವರ್ಷಗಳ ಹಿಂದೆ ನಗರದಲ್ಲಿ ದಿನಕ್ಕೆ ಸರಾಸರಿ 234 ಕಿ.ಮೀ. ದೂರ ಕ್ರಮಿಸುತ್ತಿದ್ದ ಬಸ್‌ಗಳು ಈಗ ಸಂಚಾರ ದಟ್ಟಣೆ ಹಾಗೂ ಮೆಟ್ರೊ ಕಾಮಗಾರಿಯಿಂದಾಗಿ ದಿನಕ್ಕೆ ಸರಾಸರಿ 225 ಕಿ.ಮೀ. ಮಾತ್ರ ಸಂಚರಿಸಲು ಸಾಧ್ಯವಾಗುತ್ತಿದೆ. ಅಂದರೆ, ಆರು ಟ್ರಿಪ್ ಓಡಾಡುತ್ತಿದ್ದ ಬಸ್ಸು ನಾಲ್ಕು ಟ್ರಿಪ್ ಮಾಡುವಂತಾಗಿದೆ. ಇಂತಹ ಸಂದರ್ಭಗಳಲ್ಲಿ ಶಿಫ್ಟ್ ಗಾಡಿಗಳನ್ನು ಒದಗಿಸಿ ಆಯಾ ಮಾರ್ಗದಲ್ಲಿ ಬಸ್‌ನ ಕೊರತೆಯಾಗುವುದನ್ನು ತಪ್ಪಿಸುವ ಪ್ರಯತ್ನ ಮಾಡುತ್ತೇವೆ~ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.
51 ಆಸನಗಳ ಏಸಿ ಕರೋನಾ

ದೇಶದಲ್ಲಿಯೇ ಪ್ರಥಮ ಬಾರಿಗೆ ವೋಲ್ವೊ ವಜ್ರ ಬಸ್ಸುಗಳ ಸಂಚಾರ ಆರಂಭಿಸಿದ ಹೆಗ್ಗಳಿಕೆ ಬಿಎಂಟಿಸಿಯದು. ಇದೀಗ ಮತ್ತೊಂದು ಮೈಲಿಗಲ್ಲು. ಅದು 51 ಆಸನ ಸಾಮರ್ಥ್ಯದ ಕರೋನಾ ಎಂಬ ಬಿಳಿಯ ಬಣ್ಣದ ಏಸಿ ಬಸ್ಸು.

ಪ್ರಸ್ತುತ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚರಿಸುವ ಕರೋನಾಗಳನ್ನೂ ವಿಮಾನ ನಿಲ್ದಾಣ ಸಂಪರ್ಕ ಸೇವೆಯಡಿ ಹೆಚ್ಚಿಸಲು ಸಂಸ್ಥೆ ಮುಂದಾಗಿದೆ.

ಬಿಎಂಟಿಸಿ ಮತ್ತಷ್ಟು ಇನ್ನಷ್ಟು ಪ್ರಯಾಣಿಕಸ್ನೇಹಿ ಚಿಂತನೆ ನಡೆಸುತ್ತಿರುವುದಕ್ಕೆ ಅದು ಅನುಷ್ಠಾನಕ್ಕೆ ತರುತ್ತಿರುವ ಯೋಜನೆಗಳೇ ಸಾಕ್ಷಿ. ಜಯನಗರ, ಶಾಂತಿನಗರ ಮುಂತಾದ ಬಸ್ಸು ನಿಲ್ದಾಣಗಳಲ್ಲಿ ಆರಂಭಿಸಲಾದ `ವಿಮಾನ ಪ್ರಯಾಣಿಕರಿಗಾಗಿ ಏಸಿ ಲಾಂಜ್~ ಬನಶಂಕರಿ, ವಿಜಯನಗರ, ಮೈಸೂರು ರಸ್ತೆ ಮತ್ತಿತರ ಟಿಟಿಎಂಸಿಗಳಲ್ಲಿ ಇಷ್ಟರಲ್ಲೇ ಕಾರ್ಯರೂಪಕ್ಕೆ ಬರಲಿದೆ.

ಎಲ್ಲಾ ಮಾದರಿಯ ಬಸ್ ಹೆಚ್ಚಿಸುತ್ತೇವೆ
ಬಿಎಂಟಿಸಿ ಪಾಲಿಗೆ ವೋಲ್ವೊ, ವಾಯು ವಜ್ರದಂತಹ ಹವಾನಿಯಂತ್ರಿತ ಬಸ್ಸುಗಳು ಬಿಳಿಯಾನೆ ಸಾಕಿದಂತೆ ಎಂಬುದು ಸಾಮಾನ್ಯ ಅಭಿಪ್ರಾಯವಾಗಿತ್ತು. ವೋಲ್ವೊ ಆರಂಭಿಕ ವರ್ಷಗಳಲ್ಲಿ ನಷ್ಟದಲ್ಲೇ ಸಾಗಿದ್ದರೂ ಮರುವರ್ಷದಲ್ಲೇ ಬಿಎಂಟಿಸಿಗೆ ಲಾಭದ ಗಳಿಕೆ ತಂದುಕೊಟ್ಟಿತು. ಈಗ ವೋಲ್ವೊದ ವಾರ್ಷಿಕ ಲಾಭ ಬರೋಬ್ಬರಿ 15 ಕೋಟಿ ರೂಪಾಯಿ.

ಈ ಖುಷಿಯಲ್ಲಿ, ತಲಾ ಕಿ.ಮೀ.ಗೆ ಉತ್ತಮ ಆದಾಯ ತರುತ್ತಿರುವ ಮಾರ್ಗಗಳಿಗಷ್ಟೇ ಅಲ್ಲದೆ ಹೊಸ ಮಾರ್ಗಗಳಿಗೂ ವೋಲ್ವೊ ವಿಸ್ತರಣೆ ಮಾಡುತ್ತಿದೆ ಬಿಎಂಟಿಸಿ. ಮೊನ್ನೆಯಷ್ಟೇ ಕೆಂಪೇಗೌಡ ಬಸ್ ನಿಲ್ದಾಣ- ಹೊಸಕೋಟೆ ಮಾರ್ಗಕ್ಕೆ ವೋಲ್ವೊ ಸೌಲಭ್ಯ ಸಿಕ್ಕಿದ್ದು ಮತ್ತಷ್ಟು ಮಾರ್ಗಗಳಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಇನ್ನೂ 100 ವೋಲ್ವೊ ಬಸ್ ಖರೀದಿಸಲಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಕೋರಮಂಗಲ, ವೈಟ್‌ಫೀಲ್ಡ್, ಐಟಿಪಿಎಲ್ ಮಾರ್ಗಗಳಲ್ಲಿ ಸಂಚರಿಸುವ ವೋಲ್ವೊಗಳು ಹೆಚ್ಚಿನ ಆದಾಯ ಗಳಿಸುತ್ತಿವೆ. (80ರಿಂದ 90 ಲಕ್ಷ ರೂಪಾಯಿ ಮೌಲ್ಯದ ವೋಲ್ವೊಗೆ ವಿಧಿಸಲಾಗಿರುವ ಪ್ರಯಾಣದರವು ಅದರ ವಿಲಾಸಿ ನೋಟ, ಆರಾಮದಾಯಕ ಆಸನ, ಏಸಿ ವ್ಯವಸ್ಥೆ, ಬೇಕೆಂದಲ್ಲಿ ನಿಲುಗಡೆ ಮುಂತಾದ ಪ್ರಯಾಣಿಕಸ್ನೇಹಿ ಸೌಕರ್ಯಗಳ ದೃಷ್ಟಿಯಲ್ಲಿ ನೋಡಿದರೆ ದುಬಾರಿಯೇನಲ್ಲ. ಮುಖ್ಯವಾಗಿ, `ಕ್ಲಾಸ್ ಒನ್ ಪೀಪಲ್~ ಎಂಬ ಹೆಗ್ಗಳಿಕೆಯ ಐಟಿ-ಬಿಟಿ, ಕಾರ್ಪೊರೇಟ್ ವಲಯದ ಮಂದಿಯೇ ಹೆಚ್ಚಾಗಿ ಸಂಚರಿಸುವ ವೋಲ್ವೊ ಬಸ್ ದರ ಮತ್ತು ಪಾಸ್ ದರ ಅವರ ಗಳಿಕೆಯ ಮಟ್ಟಕ್ಕೆ ಹೋಲಿಸಿದರೆ ಕೈಗೆಟಕುವಂತಿದೆ ಅನ್ನುವುದು ನಿಜ). ಎಂಟೂವರೆ ಲಕ್ಷ ಕಿ.ಮೀ. ಓಡಿರುವ 300 ಬಸ್ಸುಗಳನ್ನು ಹರಾಜು ಹಾಕಲಾಗುವುದು. ಬಿಎಂಟಿಸಿಯ 2012-13ನೇ ಸಾಲಿನ ಕ್ರಿಯಾ ಯೋಜನೆ ಪ್ರಕಾರ 100 ವೋಲ್ವೊ, 210 ಪರಿಸರಸ್ನೇಹಿ ಬಸ್‌ಗಳೂ ಸೇರ್ಪಡೆಯಾಗಲಿವೆ. ಪ್ರಸ್ತುತ ಇರುವ 6150 ಶೆಡ್ಯೂಲ್‌ಗಳನ್ನು ಇದೇ ಸೆಪ್ಟೆಂಬರ್ ಒಳಗೆ 6195ಕ್ಕೆ ಹೆಚ್ಚಿಸುವ ಗುರಿ ನಮ್ಮದು.

-ಕೆ.ಆರ್. ಶ್ರೀನಿವಾಸ್, ವ್ಯವಸ್ಥಾಪಕ ನಿರ್ದೇಶಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT