ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗಶಃ ಬಂದ್: ಜನಜೀವನ ಅಸ್ತವ್ಯಸ್ತ

Last Updated 7 ಅಕ್ಟೋಬರ್ 2012, 5:10 IST
ಅಕ್ಷರ ಗಾತ್ರ

 ಚಿತ್ರದುರ್ಗ:  ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್‌ಗೆ ನಗರದಲ್ಲಿ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ಬಿ.ಡಿ. ರಸ್ತೆ, ಗಾಂಧಿ ವೃತ್ತ, ಹೊಳಲ್ಕೆರೆ ರಸ್ತೆ, ಮೆದೇಹಳ್ಳಿ ರಸ್ತೆ, ಲಕ್ಷ್ಮೀಬಜಾರ್ ರಸ್ತೆ, ವಾಸವಿಮಹಲ್ ರಸ್ತೆ, ದಾವಣಗೆರೆ ರಸ್ತೆ, ಜೆಸಿಆರ್ ಬಡಾವಣೆ ಮುಖ್ಯರಸ್ತೆಗಳಲ್ಲಿ ಅಂಗಡಿ ಮುಗ್ಗಟ್ಟುಗಳು ಬೆಳಿಗ್ಗೆಯಿಂದಲ್ಲೇ ಮುಚ್ಚಿದವು. ಬಹುತೇಕ ಮಾಲೀಕರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿದ್ದರು.

ಬಂದ್ ಹಿನ್ನೆಲೆಯಲ್ಲಿ ಬ್ಯಾಂಕ್, ಚಲನಚಿತ್ರ ಮಂದಿರ, ಹೋಟೆಲ್‌ಗಳು, ವಾಣಿಜ್ಯ ಮಳಿಗೆಗಳು ಮುಚ್ಚಿದ್ದವು. ಬಹುತೇಕ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಶುಕ್ರವಾರವೇ ದಸರಾ ರಜೆ ಘೋಷಿಸಿದ್ದರಿಂದ ಬಂದ್ ಪರಿಣಾಮ ಬೀರಲಿಲ್ಲ. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆದರೆ, ಸಾರ್ವಜನಿಕರ ಸಂಖ್ಯೆ ವಿರಳವಾಗಿತ್ತು. ನ್ಯಾಯಾಲಯ ಕಲಾಪಗಳು ನಡೆದವು.

ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳ ಸಂಚಾರಕ್ಕೆ ಲಭ್ಯವಿದ್ದರೂ ಪ್ರಯಾಣಿಕರೇ ಇರಲಿಲ್ಲ. ಚಾಲಕರು ಮತ್ತು ನಿರ್ವಾಹಕರು ಬಸ್‌ನಿಲ್ದಾಣದಲ್ಲಿ ವಿಶ್ರಾಂತಿ ತೆಗೆದಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. ಆಟೋಗಳ ಸಂಚಾರ ಎಂದಿನಂತೆ ಇತ್ತು. ಬ್ಯಾಂಕ್‌ಗಳು ಮುಚ್ಚಿದ್ದರೂ ಸಿಬ್ಬಂದಿ ಬಾಗಿಲು ಹಾಕಿಕೊಂಡು ಕಾರ್ಯ ನಿರ್ವಹಿಸಿದರು.

ಮಿಶ್ರ ಪ್ರತಿಕ್ರಿಯೆ
ಹೊಳಲ್ಕೆರೆ:
  ಬಂದ್‌ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.ಬಸ್ ಸಂಚಾರ ವಿರಳವಾಗಿತ್ತು. ಪಕ್ಕದ ಹಳ್ಳಿಗಳಿಂದ ಪಟ್ಟಣಕ್ಕೆ ಬಂದಿದ್ದ ಜನ ಲಗೇಜ್ ಆಟೋಗಳನ್ನು ಆಶ್ರಯಿಸಬೇಕಾಯಿತು. ಅಂಗಡಿಮುಂಗಟ್ಟುಗಳು ಮಧ್ಯಾಹ್ನದವರೆಗೆ ತೆರೆದು, ಶನಿವಾರದ ರಜೆಯಂತೆ ಮಧ್ಯಾಹ್ನದ ನಂತರ ಮುಚ್ಚಿದ್ದವು. ಶಾಲಾ ಕಾಲೇಜುಗಳು, ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಕಾವೇರಿ ಕರ್ನಾಟಕದ ಹಕ್ಕು

ಹಿರಿಯೂರು: ಕಾವೇರಿ ಕರ್ನಾಟಕದ ಜೀವನಾಡಿ. ಕಾವೇರಿ ನೀರಿನ ಮೇಲೆ ತಮಿಳುನಾಡು ಹಕ್ಕು ಸ್ಥಾಪನೆ ಮಾಡಲು ಹೊರಟರೆ ತಕ್ಕಪಾಠ ಕಲಿಸಬೇಕಾಗುತ್ತದೆ. ಕಾವೇರಿ ಅಥವಾ ಬೇರೆ ಯಾವುದೇ ನದೀ ನೀರು, ಗಡಿ, ಭಾಷೆಯ ವಿಚಾರದಲ್ಲಿ ಅನ್ಯಾಯವಾಗಲು ಕನ್ನಡಿಗರು ಬಿಡುವುದಿಲ್ಲ ಎಂದು  ಮುಖಂಡರು ಘೋಷಿಸಿದರು.

 ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಾವೇರಿ ವಿಚಾರದಲ್ಲಿ ಅನ್ಯಾಯ ಆಗಲು ಬಿಡಬಾರದು. ಅಧಿಕಾರ ಹೋದರೂ ಚಿಂತೆಯಿಲ್ಲ, ಲೋಕಸಭಾ ಸದಸ್ಯರು, ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿ, ಹೋರಾಟಕ್ಕೆ ಧುಮುಕಬೇಕು ಎಂದು ಮುಖಂಡರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ವರ್ತಕರ ಹಿತರಕ್ಷಣಾ ವೇದಿಕೆ, ಬಿಜೆಪಿ, ವಂದೇಮಾತರಂ ಜಾಗೃತಿ ವೇದಿಕೆ, ಕರ್ನಾಟಕ ಸಮರಸೇನೆ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ತಾಲ್ಲೂಕು ವಕೀಲರ ಸಂಘ, ಜನಜಾಗೃತಿ ವೇದಿಕೆ, ಜಯಕರ್ನಾಟಕ ಸಂಘ, ರಾಜ್ಯಪಡಿತರ ನ್ಯಾಯಬೆಲೆ ಅಂಗಡಿ ಅನಿಲ ಗ್ರಾಹಕರ ಸಂಘ, ಜೆಡಿಎಸ್ ಯುವ ಘಟಕಗಳ ಎ. ಕೃಷ್ಣಸ್ವಾಮಿ, ಕೆ.ಸಿ. ಹೊರಕೇರಪ್ಪ, ತುಳಸೀದಾಸ್,

ಕಾಂತರಾಜ್‌ಹುಲಿ, ಕೃಷ್ಣಮೂರ್ತಿ, ಭೋವಿ (ರೆಡ್ಡಿ), ಚಂದ್ರಶೇಖರ್, ಜಿ.ಎಲ್. ಮೂರ್ತಿ, ಕೆ. ತಿಮ್ಮರಾಜು, ವೈ.ಎಸ್. ಅಶ್ವತ್ಥಕುಮಾರ್, ಕೆ.ಪಿ. ಶ್ರೀನಿವಾಸ್, ಧನಂಜಯ, ಕೇಶವಮೂರ್ತಿ, ವಿ.ಎಚ್. ರಾಜು, ವಿ. ಅರುಣ್‌ಕುಮಾರ್, ಹುಚ್ಚವ್ವನಹಳ್ಳಿ ಪ್ರಸನ್ನ, ಎಂ.ಎಲ್. ಗಿರಿಧರ್, ಪ್ರಕಾಶ್, ಅಮ್ಮನಹಟ್ಟಿ ಪ್ರಸನ್ನ, ವಿನೋದಮ್ಮ, ಜಗದೀಶ್, ಎಂ.ಡಿ. ಗೌಡ, ಶಂಕರ್‌ಭಾಗವತ್, ಕೃಷ್ಣಪೂಜಾರಿ, ಹನುಮಂತರಾಯಪ್ಪ, ಗುರು, ಮಸ್ಕಲ್‌ಕುಮಾರ್, ವಿಜಯ್ ಪಾಲ್ಗೊಂಡಿದ್ದರು.

ಮಹಾತ್ಮಗಾಂಧಿ ವೃತ್ತದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಕೃತಿ ದಹಿಸಿ, ಧಿಕ್ಕಾರ ಕೂಗಲಾಯಿತು. ವಕೀಲರು ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ವಾರದ ಸಂತೆ ನಡೆಯಲಿಲ್ಲ. ಶಾಲಾ-ಕಾಲೇಜುಗಳು, ಅಂಗಡಿಗಳು, ಹೋಟೆಲ್‌ಗಳು, ಚಿತ್ರಮಂದಿರಗಳು ಬಂದ್ ಆಗಿದ್ದವು. ಆಟೋ, ಬಸ್ ಓಡಾಟ ಸಂಪೂರ್ಣ ಸ್ಥಗಿತವಾಗಿತ್ತು.

ಉತ್ತಮ ಬೆಂಬಲ

ಮೊಳಕಾಲ್ಮುರು: ತಾಲ್ಲೂಕಿನಾದ್ಯಂತ ಶನಿವಾರ ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ಕರೆ ನೀಡಲಾಗಿದ್ದ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಯಿತು.ಅಂಗಡಿ ಮುಂಗಟ್ಟುಗಳು, ಸರ್ಕಾರಿ ಕಚೇರಿಗಳು ಬಾಗಿಲು ತೆರೆದಿದ್ದವು. ಬಿ.ಜಿ.ಕೆರೆಯಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಸಭೆ ನಡೆಯಿತು.

ಪಟ್ಟಣದಲ್ಲಿ ಕರವೇ (ನಾರಾಯಣಗೌಡ) ಮತ್ತು(ಪ್ರವೀಣಶೆಟ್ಟಿ ಬಣ)ಗಳು ಪ್ರತ್ಯೇಕವಾಗಿ ಮೆರವಣಿಗೆ ನಡೆಸಿ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ನಾರಾಯಣಗೌಡ ಬಣದ ಅಧ್ಯಕ್ಷ ಬಸಣ್ಣ, ಪ್ರವೀಣಶೆಟ್ಟಿ ಬಣದ ಅಧ್ಯಕ್ಷ ಶಿವಕುಮಾರ್ ನೇತೃತ್ವ ವಹಿಸಿದ್ದರು.

ರಾಂಪುರದಲ್ಲಿ ಕರವೇ ದೇವಸಮುದ್ರ ಹೋಬಳಿ ಕಾರ್ಯಕರ್ತರು ಬೆಂಗಳೂರು-ಬಳ್ಳಾರಿ ರಾಜ್ಯಹೆದ್ದಾರಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆತಡೆ ನಡೆಸಿದರು. ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. 
ಅಧ್ಯಕ್ಷ ರಾಮಕೃಷ್ಣ, ಅಶೋಕ, ಅಂಜಿನಪ್ಪ. ಪುರುಷೋತ್ತಮ್ ನೇತೃತ್ವ ವಹಿಸಿದ್ದರು.

ಕೊಂಡ್ಲಹಳ್ಳಿಯಲ್ಲಿ ಕರವೇ, ಜನಮುಖಿ ಸಂಘ ಹಾಗೂ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಿ.ಎನ್. ಬೀರಲಿಂಗಪ್ಪ, ಬಿ.ಎಸ್. ಮುರಳೀಕೃಷ್ಣ, ಬಿ.ಎಂ. ರಾಮಚಂದ್ರ, ತಿಮ್ಮಾರೆಡ್ಡಿ, ಎಚ್.ಸಿ. ಪ್ರದೀಪ್, ರುದ್ರಪ್ಪ ಇದ್ದರು.

ಕೋನಸಾಗರದಲ್ಲಿ ಕರವೇ ಕಾರ್ಯಕರ್ತರು ರಸ್ತೆತಡೆ ಹಾಗೂ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು. ಸಿದ್ದಲಿಂಗಮೂರ್ತಿ, ಆನಂದ್, ಗುರುಮಹಾಂತೇಶ್, ಬೋರಣ್ಣ ನೇತೃತ್ವ ವಹಿಸಿದ್ದರು.

 ಬೆಂಬಲ
ಹೊಸದುರ್ಗ: ಬಂದ್‌ಗೆ ಪಟ್ಟಣದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.ಬೆಳಗ್ಗಿನಿಂದಲೇ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ವಾನಹಗಳ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪ್ರಯಾಣಿಕರ ವಾಹನಗಳು ರಸ್ತೆಗಿಳಿಯದ ಕಾರಣ ಪರಸ್ಥಳಗಳಿಗೆ ಹೋಗುವ ಸಾರ್ವಜನಿಕರು ಪರದಾಡುವಂತಾಯಿತು.

ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಎಟಿಎಂಗಳು, ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸಲಿಲ್ಲ.
ಸ್ಥಳೀಯ ಕನ್ನಡಪರ ಸಂಘಟನೆಗಳ ಸದಸ್ಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತ ಕನ್ನಡ ಧ್ವಜ ಹಿಡಿದು ಮೆರವಣಿಗೆ ನಡೆಸಿ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಒತ್ತಾಯಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಗೂ ಸದಸ್ಯರು ಅಧ್ಯಕ್ಷ ಎಂ.ಬಿ. ತಿಪ್ಪೇಸ್ವಾಮಿ ನೇತೃತ್ವದಲ್ಲಿ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್‌ಗೆ ಮನವಿ  ಸಲ್ಲಿಸಲಾಯಿತು.

ನೀರಸ ಪ್ರತಿಕ್ರಿಯೆ
ಧರ್ಮಪುರ:
ಕರ್ನಾಟಕ ಬಂದ್ ಇಲ್ಲಿ ನೀರಸವಾಗಿತ್ತು.ಬೆಳಿಗ್ಗೆಯಿಂದಲೇ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ಬಾರ್ ಹಾಗೂ ಔಷಧಿ ಅಂಗಡಿಗಳು ಎಂದಿನಂತೆ ವಹಿವಾಟ ನಡೆಸಿದವು. ವಾಹನ ಸಂಚಾರ ಸ್ಥಗಿತವಾಗಿತ್ತು. ಆದರೆ, ವಂದೇ ಮಾತರಂ ಜಾಗೃತಿ ವೇದಿಕೆ, ಮಾರುತಿ ಯುವಕ ಸಂಘ ಮತ್ತು ವಿವಿಧ ಸಂಘಟನೆಯ ಸದಸ್ಯರು 11ಗಂಟೆ ಸುಮಾರಿಗೆ  ಅಂಗಡಿ ಮುಂಗಟ್ಟು, ಹೋಟೆಲ್, ಬಾರ್ ಮತ್ತು ಪೆಟ್ರೋಲ್ ಬಂಕ್‌ಗಳನ್ನು ಬಲವಂತವಾಗಿ ಮುಚ್ಚಿಸಿದರು. ಆದರೆ, ಆಸ್ಪತ್ರೆ ಮತ್ತು ಔಷಧಿ ಅಂಗಡಿಗಳಿಗೆ  ಹೊರತಾಗಿತ್ತು. ಸಂಜೆಯವರೆಗೂ ಅದೇ ಪರಿಸ್ಥಿತಿ ಮುಂದುವರೆದಿತ್ತು. ಶಾಲಾ-ಕಾಲೇಜುಗಳಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT