ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗಶಃ ಮುಳುಗಿದ ಲಾಂಚ್: ಪ್ರಯಾಣಿಕರು ಪಾರು

Last Updated 8 ಮೇ 2012, 19:30 IST
ಅಕ್ಷರ ಗಾತ್ರ

ತುಮರಿ(ಶಿವಮೊಗ್ಗ ಜಿಲ್ಲೆ): ಅತಿಯಾದ ಪ್ರಯಾಣಿಕರ ಭಾರದಿಂದ ದ್ವೀಪದ ಸಂಪರ್ಕ ಕೊಂಡಿ ಲಾಂಚ್‌ನ ಹಿಂಭಾಗ ನದಿಯಲ್ಲಿ ಮುಳುಗಿದ ಘಟನೆ ಸಮೀಪದ ಸಿಗಂದೂರು ಲಾಂಚ್ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ 11ರ ಸುಮಾರಿಗೆ ನಡೆದಿದೆ.

ನದಿ ದಡದ ಫ್ಲ್ಯಾಟ್‌ಫಾರಂ ಬಳಿಯೇ ಘಟನೆ ನಡೆದ ಕಾರಣ ಪ್ರಯಣಿಕರು ಲಾಂಚ್ ಹಿಂಭಾಗ ಮುಳುಗುತ್ತಿದ್ದಂತೆ ನದಿ ದಡಕ್ಕೆ ಧಾವಿಸಿದ್ದರಿಂದ ಸಂಭವಿಸಬಹುದಾಗಿದ್ದ ಅಪಾಯವೊಂದು ತಪ್ಪಿದಂತಾಗಿದೆ.

ಘಟನೆ ನಡೆದ ಸಂದರ್ಭದಲ್ಲಿ ಲಾಂಚ್‌ನಲ್ಲಿ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು, ಜತೆಗೆ ಜಲ್ಲಿ, ಮರಳು ತುಂಬಿದ ಲಾರಿಗಳೂ ಕೂಡ ಲಾಂಚ್‌ನಲ್ಲಿದ್ದವು. ಅತಿಯಾದ ಭಾರ, ನೂಕು-ನುಗ್ಗಲಿನ ಸ್ಥಿತಿಯ ಕಾರಣ ಲಾಂಚ್‌ನ ಹಿಂಭಾಗ ಮುಳುಗಲು ಆರಂಭವಾಯಿತು. ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.ಲಾಂಚಿನ ಸಾಮರ್ಥ್ಯ 15 ಟನ್.

ಲಾಂಚ್‌ನ ಒಳರಚನೆಯಲ್ಲಿ ಖಾಲಿ ಜಾಗದಲ್ಲಿ ನೀರು ತುಂಬಲು ಕಾಲಾವಕಾಶ ಹಿಡಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ದಡ ಸೇರಿಕೊಳ್ಳುವುದಕ್ಕೆ ಅವಕಾಶವಾಯಿತು ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.
ಘಟನಾ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಲಾಂಚ್ ವ್ಯವಸ್ಥೆ ಜಾರಿಗೆ ಬಂದ 50 ವರ್ಷಗಳಲ್ಲಿ ಇದೇ ಮೊದಲ ಬಾರಿ ಇಂತಹ ಘಟನೆ ನಡೆದಿರುವುದರಿಂದ ನದಿ ದಡದ ಗ್ರಾಮಸ್ಥರು ತಂಡೋಪತಂಡವಾಗಿ ಮುಳುಗಿರುವ ಲಾಂಚ್‌ನ್ನು ವೀಕ್ಷಿಸುತ್ತಿದ್ದ ದೃಶ್ಯ ಕಂಡಬಂತು.
ಘಟನೆ ನಡೆದ ಸ್ಥಳಕ್ಕೆ ಸಾಗರ ತಹಶೀಲ್ದಾರ್ ಯೋಗೀಶ್ ಭಟ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಷಣ್ಮುಖಪ್ಪ, ಸದಸ್ಯ ಹರೀಶ್ ಗಟ್ಟೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಈ ಪ್ರದೇಶ ಮುಳುಗಡೆಯಾಗಿ 50 ವರ್ಷ ಕಳೆದರೂ ಸೇತುವೆ ನಿರ್ಮಿಸದ ಸರ್ಕಾರದ ಕ್ರಮ ಖಂಡಿಸಿದರು. ಹೆಚ್ಚುವರಿ ಲಾಂಚ್‌ಗಳನ್ನು ನೀಡುವಲ್ಲಿ ಮತ್ತು ಲಾಂಚ್ ನಿಲ್ದಾಣಗಳಲ್ಲಿ ಸೂಕ್ತ ಆಡಳಿತಾತ್ಮಕ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿಲ್ಲ ಎಂದು ತೀವ್ರವಾಗಿ ಆಕ್ಷೇಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT