ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗ್ಯಲಕ್ಷ್ಮಿ ಬಾಂಡ್ ತಕ್ಷಣ ವಿತರಿಸದಿದ್ದರೆ ಕ್ರಮ

Last Updated 5 ಫೆಬ್ರುವರಿ 2011, 9:05 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮಿ ಬಾಂಡ್‌ಗಳನ್ನು ನಾಲ್ಕು ದಿನಗಳ ಒಳಗಾಗಿ ಫಲಾನುಭಗಳಿಗೆ ವಿತರಿಸದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ ಬೆಳಮಗಿ ಎಚ್ಚರಿಕೆ ನೀಡಿದರು.ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು.

ಭಾಗ್ಯಲಕ್ಷ್ಮಿ ಬಾಂಡ್‌ಗಳನ್ನು ಫಲಾನುಭಗಳಿಗೆ ನೀಡಲು ಹಣ ಕೇಳುತ್ತಿರುವ ಬಗ್ಗೆ ಹಲವು ದೂರುಗಳು ಬರುತ್ತಿವೆ. ಈಗಾಗಲೇ ಸಿದ್ಧವಾಗಿರುವ ಬಾಂಡ್‌ಗಳನ್ನು ವಿತರಿಸದೇ ಸತಾಯಿಸುತ್ತಿರುವ ಕುರಿತು ದೂರುಗಳು ಬಂದರೆ ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೇರ ಹೊಣೆಗಾರ ಮಾಡಲಾಗುವುದು ಎಂದು ಎಚ್ಚರಿಸಿದರು.

ಭಾಗ್ಯಲಕ್ಷ್ಮಿ ಯೋಜನೆ ಅಡಿ ಸಿದ್ಧವಾಗಿರುವ ಎಲ್ಲ ಬಾಂಡ್‌ಗಳನ್ನು ನಾಲ್ಕು ದಿನಗಳ ಒಳಗೆ ವಿತರಣೆ ಮಾಡಬೇಕು. ಬಾಂಡ್ ವಿತರಣೆ ಕುರಿತು ಸಮಗ್ರ ವರದಿ ಸಲ್ಲಿಸಬೇಕು. ಇದೇ ರೀತಿ ಭಾಗ್ಯಲಕ್ಷ್ಮಿ ಯೋಜನೆ ಅಡಿ ನೀಡಲಾಗಿರುವ ಸೀರೆಗಳನ್ನು ಫಲಾನುಭವಿಗಳಿಗೆ ತಕ್ಷಣ ವಿತರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ತಿಳಿಸಿದರು.
ಗಂಗಾಕಲ್ಯಾಣ ಯೋಜನೆ ಅಡಿ ಕೈಗೊಳ್ಳಲಾಗಿರುವ ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿಳಂಬ ಮಾಡಬಾರದು. ವಿದ್ಯುತ್ ಸಂಪರ್ಕ ವಿಳಂಬದಿಂದಾಗಿ ಫಲಾನುಭವಿಗಳಿಗೆ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಗಂಗಾಕಲ್ಯಾಣ ಯೋಜನೆ ಜಾರಿಗೊಳಿಸುತ್ತಿರುವ ಇಲಾಖೆಗಳು ಜೆಸ್ಕಾಂ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಹೇಳಿದರು.

ಗುಡಿಸಲು ರಹಿತ ಗ್ರಾಮ ಯೋಜನೆ ಅಡಿ ಆಯ್ಕೆ ಮಾಡಲಾಗಿರುವ ಗ್ರಾಮದಲ್ಲಿನ ಎಲ್ಲ ಗುಡಿಸಲು ಮನೆಗಳನ್ನು ಪಕ್ಕಾ ಮನೆಯನ್ನಾಗಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿರುವ ಎಲ್ಲ ಗುಡಿಸಲು ಮನೆಯನ್ನು ಇದಕ್ಕಾಗಿ ಪರಿಗಣಿಸಬೇಕು. ಫಲಾನುಭಗಳ ಆಯ್ಕೆಯಲ್ಲಿ ಯಾವುದೇ ತಾರತಮ್ಯ ಉಂಟಾಗಬಾರದು. ಈ ಯೋಜನೆ ಅಡಿ ಬಿಟ್ಟು ಹೋಗಿರುವ ಮನೆಗಳನ್ನು ಪುನಃ ಸಮೀಕ್ಷೆ ಮಾಡುವಂತೆ ಸೂಚನೆ ನೀಡಿದರು.

ಗ್ರಾಮೀಣ ಆಶ್ರಯ ಯೋಜನೆ ಅಡಿ ಮನೆಗಳನ್ನು ನಿರ್ಮಿಸಲು ಬಹುತೇಕ ಎಲ್ಲ ಕಡೆ ನಿವೇಶನಗಳು ಸಿದ್ಧವಿದೆ. 15ದಿನಗಳ ಒಳಗಾಗಿ ಎಲ್ಲ ನಿವೇಶನಗಳು ಸಿದ್ಧವಾಗಲಿವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಸರ್ಕಾರ ಬಜೆಟ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒದಗಿಸಿರುವ ಅನುದಾನವನ್ನು ಮಾರ್ಚ್ ಒಳಗಾಗಿ ಖರ್ಚು ಮಾಡಬೇಕು. ಅನುದಾನ ಲೋಪ ಆಗಲು ಬಿಡಬಾರದು. ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಪ್ರಗತಿ ಪರಿಶೀಲನೆ ಸಭೆಗೆ ಕೆಲವು ಅಧಿಕಾರಿಗಳು ಗೈರು ಹಾಜರಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಪ್ರಸ್ತುತ ವರ್ಷ ಜಿಲ್ಲೆಗೆ 49 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಇದುವರೆಗೆ 38 ಕೋಟಿ ರೂ. ಖರ್ಚು ಮಾಡಲಾಗಿದೆ. ಯೋಜನೆ ಅಡಿ ಅವ್ಯವಹಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿತೇಂದ್ರ ನಾಯಕ್ ತಿಳಿಸಿದರು.

ಶಾಸಕರಾದ ಖಾಜಿ ಅರ್ಷದ್ ಅಲಿ, ರಹೀಮ್‌ಖಾನ್, ಬಂಡೆಪ್ಪ ಖಾಶೆಂಪೂರ, ರಾಜಶೇಖರ ಪಾಟೀಲ್, ಈಶ್ವರ ಖಂಡ್ರೆ, ಕೆಡಿಪಿ ಆಹ್ವಾನಿತ ಸದಸ್ಯರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT