ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 14-10-1962

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಪರಿಸ್ಥಿತಿಯ ಒತ್ತಡದಿಂದ ಕೈಗೊಂಡ ಕ್ರಮ
ಕೊಲಂಬೋ, ಅ. 13 - ತನ್ನ ಜನರ ಜೀವನವನ್ನು ಉತ್ತಮ ಪಡಿಸುವುದೇ ಭಾರತದ ಇಂದಿನ ಪ್ರಮುಖ ಕರ್ತವ್ಯವಾದುದರಿಂದ, ಎಷ್ಟೇ ಕಷ್ಟಗಳು ತಲೆದೋರಿದ್ದರೂ ಎಲ್ಲ ರಾಷ್ಟ್ರಗಳೊಡನೆ ಮೈತ್ರಿಯಿಂದಿರಲು ಭಾರತವು ಸರ್ವಪ್ರಯತ್ನ ಮಾಡುವುದಾಗಿ ಭಾರತದ ಪ್ರಧಾನ ಮಂತ್ರಿ ನೆಹರೂ ಅವರು ಇಂದು ಇಲ್ಲಿ ತಿಳಿಸಿದರು.

ಸಿಂಹಳ ಪಾರ್ಲಿಮೆಂಟಿನ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಪ್ರಥಮ ಬಾರಿಗೆ ಮಾತನಾಡುತ್ತ ಅವರು, ಭಾರತದ ಗಡಿ ಘಟನೆಗಳನ್ನೂ ಪ್ರಸ್ತಾಪಿಸಿ ಶಾಂತಿ ಸ್ಥಾಪನೆಯೇ ಗುರಿಯಾಗುಳ್ಳ ಹಾಗೂ ಶಾಂತಿಪ್ರಿಯ ರಾಷ್ಟ್ರವಾದ ಭಾರತವು ಶಾಂತಿಗೆ ಸಹಾಯವಾಗದ ಹಾಗೂ ಹೆಚ್ಚು ತೊಂದರೆಗೆ ಕಾರಣವಾಗಬಹುದಾದಂಥ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂದುದು ಶೋಚನೀಯವೆಂದರು. `ನಾವು ಯಾವುದನ್ನೋ ಮಾಡಬಾರದೆಂದಿರುತ್ತೇವೆ. ಅದನ್ನು ತಪ್ಪಿಸಲು ಯತ್ನಿಸುತ್ತೇವೆ. ಆದರೆ ಪರಿಸ್ಥಿತಿಯ ಒತ್ತಡದಿಂದಾಗಿ ನಾವು ಸ್ವಲ್ಪವೂ ಇಷ್ಟಪಡದ ಕಾರ್ಯ ಮಾಡಬೇಕಾಗುತ್ತದೆ~ ಎಂದರು ಅವರು.


ಹುಚ್ಚನ ಕೈಯಲ್ಲಿ ಬಂದೂಕು: ಐವರ ಪ್ರಾಣಕ್ಕೆ ಸಂಚಕಾರ
 ರಂಗೂನ್, ಅ. 13 - ಬುದ್ಧಿ ವೈಕಲ್ಯದಿಂದ ನರಳುತ್ತಿದ್ದ ಬರ‌್ಮ ವೈಮಾನಿಕ ದಳದ ಕಾರ‌್ಪೊರಲ್ ಒಬ್ಬ ನಿನ್ನೆ ಮಧ್ಯಾಹ್ನ ಗುಂಡು ಹಾರಿಸಿ ಐದು ಜನರನ್ನು ಕೊಂದನು. ಸತ್ತವರಲ್ಲಿ ಇಬ್ಬರು ಮಹಿಳೆಯರು, ಒಬ್ಬಳು ಬಾಲಕಿ.

ಅನಾರೋಗ್ಯದಿಂದ ನರಳುತ್ತಿದ್ದ ಮಿಲಿಟರಿ ಅಧಿಕಾರಿಗಳನ್ನು ಮತ್ತು ಸೈನಿಕರನ್ನು ಸಶಸ್ತ್ರ ಸೈನಿಕರ ಕಾವಲಿನಲ್ಲಿ ಎರಡು ಆಂಬುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಬರ‌್ಮ ನಗರದ ಪ್ರೋಮ್ ರಸ್ತೆಯಲ್ಲಿ ಈ ದುರಂತ ಜರುಗಿತು.

`ವಿಶ್ವವಿದ್ಯಾಲಯಗಳಲ್ಲಿ ಕನ್ನಡದ
ಸ್ಥಾನಮಾನಕ್ಕೆ ಕುಂದು ಬಾರದಿರಲಿ~

ಬೆಂಗಳೂರು, ಅ. 13 - ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯಗಳ ಪಠ್ಯ ಕ್ರಮದಲ್ಲಿ ಏಕರೂಪ ಸಾಧಿಸುವಾಗ, ಮೈಸೂರು ವಿಶ್ವವಿದ್ಯಾಲಯದಲ್ಲಿ ಈಗ ಕನ್ನಡದ ಅಧ್ಯಯನಕ್ಕಿರುವ ಸ್ಥಾನಮಾನವನ್ನು ಯಾವ ರೀತಿಯಲ್ಲಿಯೂ ಕಡಿಮೆ ಮಾಡಬಾರದೆಂದು, ಇಂದು ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಸಭೆಯು ಒತ್ತಾಯಪಡಿಸಿದೆ.

ಪಠ್ಯ ಕ್ರಮದಲ್ಲಿ ಏಕರೂಪ ಸಾಧಿಸುವಾಗ, ಕನ್ನಡಕ್ಕೆ ಮೈಸೂರು ವಿಶ್ವವಿದ್ಯಾಲಯದಲ್ಲಿರುವ ಸ್ಥಾನಮಾನವನ್ನು, ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಅನ್ವಯಿಸಬೇಕೆಂದು ಸಭೆಯು ಈ ಬಗ್ಗೆ ಅಂಗೀಕರಿಸಿದ ನಿರ್ಣಯದಲ್ಲಿ ಅಭಿಪ್ರಾಯ ಪಟ್ಟಿದೆ.

ಭೂಪಾಲ್‌ನಲ್ಲಿ ಘರ್ಷಣೆ; ಅಶ್ರುವಾಯು ಪ್ರಯೋಗ:
ಐವತ್ತು ಮಂದಿಗೆ ಗಾಯ

ಭೂಪಾಲ್, ಅ. 13 - ಇಂದು ಸಂಜೆ ಇಲ್ಲಿನ ಪುರಭವನದಲ್ಲಿ ಕಮ್ಯುನಿಸ್ಟ್ ನಾಯಕ ಶ್ರೀ ಎಸ್. ಎ. ಡಾಂಗೆ ಅವರಿಗೆ ಪೌರ ಸನ್ಮಾನ ನೀಡಬೇಕಾಗಿದ್ದ ಸ್ವಲ್ಪ ಸಮಯಕ್ಕೆ ಮುಂಚೆ ಎರಡು ವಿರೋಧಿ ಪ್ರದರ್ಶನಕಾರರ ಗುಂಪುಗಳಿಗೆ ಘರ್ಷಣೆ ನಡೆದು ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗ ಮಾಡಿದರು.

ಪೌರಸನ್ಮಾನದ ಪರವಾಗಿ ಹಾಗೂ ವಿರೋಧವಾಗಿ ನಡೆದ ಘರ್ಷಣೆಯಲ್ಲಿ ಐವರು ಪೊಲೀಸರು ಸೇರಿ 50 ಜನರಿಗೆ ಗಾಯಗಳಾದುವೆಂದು ವರದಿಯಾಗಿದೆ.

ಶಿಕ್ಷಣ ಮಟ್ಟ ಕಡಿಮೆ ಆಗದಂತೆ
ಪ್ರಾದೇಶಿಕ ಭಾಷೆ ಮಾಧ್ಯಮಕ್ಕೆ
ಉಪಕುಲಪತಿಗಳ ಒಪ್ಪಿಗೆ

ನವದೆಹಲಿ, ಅ. 13 - ಹಿಂದಿ ಮತ್ತು ಇಂಗ್ಲಿಷ್ ಶಿಕ್ಷಣವನ್ನು ಕಡ್ಡಾಯ ಮಾಡುವಲ್ಲಿ ಶಿಕ್ಷಣದ ಮಟ್ಟ ಕಡಿಮೆಯಾದಂತೆ ಶಿಕ್ಷಣ ಮಾಧ್ಯಮವನ್ನು ಇಂಗ್ಲೀಷಿನಿಂದ ಪ್ರಾದೇಶಿಕ ಭಾಷೆಗಳಿಗೆ ಬದಲಾಯಿಸುವ ಅಗತ್ಯವನ್ನು ಇಂದು ಇಲ್ಲಿ ಮುಕ್ತಾಯಗೊಂಡ ಉಪಕುಲಪತಿಗಳ ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಮ್ಮೇಳನ ಒಪ್ಪಿಕೊಂಡಿದೆ.

ರಾಷ್ಟ್ರೀಯ ಐಕ್ಯತಾ ಮಂಡಳಿಯ ನಿರ್ಧಾರಗಳನ್ನು ಸಾಮಾನ್ಯವಾಗಿ ಅನುಮೋದಿಸುವ ತನ್ನ ಉಪ ಸಮಿತಿಯೊಂದರ ವರದಿಯನ್ನು ಸಮ್ಮೇಳನವು ಅಂಗೀಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT