ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 19-2-1962

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

5 ವರ್ಷದ ಆಡಳಿತ ಭವಿಷ್ಯ  ನಿರ್ಧರಿಸುವ ನಿಮ್ಮ ಓಟು ಯಾರಿಗೆ
ಬೆಂಗಳೂರು, ಫೆ. 18- ಮುಂದಿನ 5 ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸುವ ಪಕ್ಷವನ್ನು ಆರಿಸಲು, ತೃತೀಯ ಮಹಾ ಚುನಾವಣೆಗಳ ಮತದಾನ ನಾಳೆ, ಸೋಮವಾರ ಆರಂಭವಾಗಿ, 8 ಲೋಕಸಭೆ ಹಾಗೂ 63 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 34 ಲಕ್ಷ ಮಂದಿ ಮತದಾರರು 3706 ವೋಟಿನ ಕೇಂದ್ರಗಳಿಗೆ ಭೇಟಿ ಕೊಡುವರು.

ಮತದಾನದ 3 ದಿನಗಳಲ್ಲಿ ಮೊದಲನೆಯ ದಿನವಾದ ನಾಳೆ, ಎಂ.ಪಿ.ಸಿ.ಸಿ. ಅಧ್ಯಕ್ಷರು, ಒಬ್ಬರು ಸಚಿವರು, ಒಬ್ಬರು ಉಪ ಸಚಿವರು, ಪಿ.ಎಸ್.ಪಿ. ಹಾಗೂ ಸೋಷಲಿಸ್ಟ್ ಪಕ್ಷಗಳ ಪಾರ್ಲಿಮೆಂಟರಿ ಸಮಿತಿಗಳ ಅಧ್ಯಕ್ಷರುಗಳು, ಪ್ರಾಂತ ಜನಸಂಘದ ಅಧ್ಯಕ್ಷರು, ಸ್ಪರ್ಧಿಸಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ ಎಂ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ, ಎಲ್.ಎಸ್.ಎಸ್. ಅಧ್ಯಕ್ಷರು ನಿಂತಿರುವ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುವುದು.

ಗಡಿಯಲ್ಲಿ ನೇಪಾಳದ ವಿರುದ್ಧ ಚಟುವಟಿಕೆಗೆ ತಡೆ
ಖಟ್ಮಂಡು, ಫೆ. 18- “ಭಾರತದ ಗಡಿಯಲ್ಲಿ ರಾಷ್ಟ್ರವಿರೋಧಿಗಳ ಆಕ್ಷೇಪಾರ್ಹ ಚಟುವಟಿಕೆಗಳನ್ನು ತಡೆಯುವ ಬಗ್ಗೆ ಭಾರತ ಸರ್ಕಾರು ಶ್ರಿಸೂಕ್ತ ಆಜ್ಞೆಗಳನ್ನಿತ್ತಿದೆ” ಎಂದು ನೇಪಾಳದ ದೊರೆ ಮಹೇಂದ್ರ ಅವರು ಇಂದು ಇಲ್ಲಿ ಹೇಳಿದರು.

 “ಆದರೆ ನಮ್ಮ ದೇಶವನ್ನು ನಾವೇ ರಕ್ಷಿಸಿಕೊಳ್ಳಬೇಕಾದುದು ಎಲ್ಲ ನೇಪಾಳಿಗಳ ಆದ್ಯ ಕರ್ತವ್ಯ” ಎಂದು ಅವರು ರಾಷ್ಟ್ರೀಯ ದಿನದ ಸಂದೇಶದಲ್ಲಿ ತಿಳಿಸಿದ್ದಾರೆ.ಸೇನಾಬಲ, ಪೊಲೀಸರು ಹಾಗೂ ಪ್ರಜಾಸೈನ್ಯದ ಸಹಕಾರದಿಂದ ತಮ್ಮ ಸರ್ಕಾರವು ರಾಷ್ಟ್ರದ ಅಸ್ತಿತ್ವವನ್ನೇ ಅಳಿಸಿಹಾಕುವ ದುರುದ್ದೇಶದಿಂದ ಕೂಡಿದ ರಾಷ್ಟ್ರದ್ರೋಹಿಗಳನ್ನು ನಿರ್ಮೂಲ ಮಾಡಲು ಸಂಕಲ್ಪಿಸಿರುವುದಾಗಿ ಅವರು ಹೇಳಿದರು.

ಮೊರಾಕ್ಕೊ ಸೇನಾ ಶಿಬಿರದ ಮೇಲೆ ಬಾಂಬ್ ದಾಳಿ
ಆಲ್ಜಿಯರ್ಸ್, ಫೆ. 18- ಫ್ರೆಂಚ್ ಸೇನಾಬಲದ ಮೀಸಲು ಪಡೆಯ ಇಬ್ಬರು ಸೈನಿಕರು ಮೊರಾಕ್ಕೊದಲ್ಲಿನ ಸೇನಾ ಶಿಬಿರವೊಂದರ ಮೇಲೆ ರಾಕೆಟ್‌ಗಳ ಮೂಲಕ ದಾಳಿ ನಡೆಸಿದರೆಂದೂ ಆಲ್ಜೀರಿಯಕ್ಕೆ ಹಿಂತಿರುಗಿದ ಬಳಿಕ ಕಾಣೆಯಾಗಿರುವರೆಂದೂ ಇಂದು ಇಲ್ಲಿ ಪ್ರಕಟಿಸಲಾಯಿತು.

ದಾಳಿ ಎಲ್ಲಿ, ಎಷ್ಟು ಹೊತ್ತಿನಲ್ಲಿ ನಡೆಯಿತೆಂಬುದನ್ನು ಪ್ರಕಟಣೆಯಲ್ಲಿ ತಿಳಿಸಿಲ್ಲ.
ಈ ಇಬ್ಬರು “ದ್ರೋಹ” ಬಗೆದಿದ್ದಾರೆಂದೂ ಇವರನ್ನು ಬಂಧಿಸಲು ಪ್ರಯತ್ನ ನಡೆದಿದೆ ಎಂದು ಇಲ್ಲಿನ ಫ್ರೆಂಚ್ ಸೇನಾಪತ್ಯವು ಪ್ರಕಟಿಸಿದೆ.

ವಿಶ್ವಸಂಸ್ಥೆಗೆ ಚೀಣ ಪ್ರವೇಶಕ್ಕೆ ರಷ್ಯ ವಿರೋಧ
ಪೆಬರ್‌ಬೀಚ್, (ಕ್ಯಾಲಿಪೋರ್ನಿಯ) ಫೆ. 18- ವಿಶ್ವರಾಷ್ಟ್ರ ಸಂಸ್ಥೆಗೆ ಚೀಣದ ಪ್ರವೇಶಕ್ಕೆ ಅಮೆರಿಕದಷ್ಟೆ ಸೋವಿಯತ್ ಒಕ್ಕೂಟವೂ ವಿರೋಧವಾಗಿದೆ ಎಂದು ವಿಶ್ವರಾಷ್ಟ್ರ ಸಂಸ್ಥೆಯಲ್ಲಿ ಅಮೆರಿಕದ ಖಾಯಂ ಪ್ರತಿನಿಧಿ ಅಡ್ಕಾಯ್ ಸ್ಟೀವನ್‌ಸನ್ ಅವರು ಇಂದು ಇಲ್ಲಿ ತಿಳಿಸಿದರು.

ಅಮೆರಿಕವನ್ನು ಬಿಟ್ಟರೆ ವಿಶ್ವಸಂಸ್ಥೆಗೆ ಚೀಣ ಪ್ರವೇಶವನ್ನು ವಿರೋಧಿಸುವವರೆಂದರೆ ಸೋವಿಯತ್ ಜನತೆ ಎಂಬುದು ಕಳೆದ ಸಂಧಾನದಲ್ಲಿ ಸ್ಪಷ್ಟವಾಯಿತೆಂದು ಅವರು ಹೇಳಿದರು.

ಒಂದು ವೇಳೆ ಚೀಣಕ್ಕೆ ವಿಶ್ವಸಂಸ್ಥೆಯಲ್ಲಿ ಸ್ಥಾನ ದೊರೆತರೆ ರಷ್ಯವು ಕಮ್ಯುನಿಸ್ಟ್ ಜಗತ್ತಿನಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಬೇಕಾಗುವುದೂ ಒಂದು ಕಾರಣವೆಂದು ಸ್ಟೀವನ್‌ಸನ್ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT