ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 2-10-1961

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ತಾರಾಸಿಂಗರ ಉಪವಾಸ ಮುಕ್ತಾಯ
ಅಮೃತಸರ, ಅ. 1 - ಜೇನುತುಪ್ಪ ಬೆರೆಸಿದ ಹಣ್ಣಿನ ರಸ ಸೇವಿಸುವುದರ ಮೂಲಕ ಅಕಾಲಿ ನಾಯಕ ಮಾಸ್ಟರ್ ತಾರಾಸಿಂಗ್‌ರು ಇಂದು ಸಂಜೆ ಏಳು ಗಂಟೆಗೆ ತಮ್ಮ ನಲವತ್ತೆಂಟು ದಿನಗಳ ಉಪವಾಸವನ್ನು ಅಂತ್ಯಗೊಳಿಸಿದರು.

ಹಣ್ಣಿನ ರಸವಿದ್ದ ಗಾಜಿನ ಲೋಟವನ್ನು ಪಾಟಿಯಾಲ ಮಹಾರಾಜರು ಹಾಗೂ ಸಂತ್ ಫತೇಸಿಂಗ್‌ರೂ ಸೇರಿ ತಾರಾಸಿಂಗ್‌ರಿಗೆ ಕುಡಿಸಿದ ದೃಶ್ಯವನ್ನು ನೀಲಿ ರುಮಾಲುಧಾರಿ ಅಕಾಲಿ ನಾಯಕರುಗಳು ಹಾಗೂ ಮಾಸ್ಟರ್‌ಜಿವರ ಕುಟುಂಬವರ್ಗದವರೂ ವೀಕ್ಷಿಸಿದರು.

ಆಧುನಿಕ ನೀಲಕಂಠ
ನವದೆಹಲಿ, ಅ. 1 - ಸಮುದ್ರವನ್ನು ಕಡೆದ ನಂತರ ಉದ್ಭವಿಸಿದ ವಿಷವನ್ನು ಸೇವಿಸಿದ ನೀಲಕಂಠನಿಗೆ ಪ್ರಧಾನ ಮಂತ್ರಿ ನೆಹರೂರವರನ್ನು ಇಂದು ಹೋಲಿಸಲಾಯಿತು.

ರಾಜಕೀಯ ಪಕ್ಷಗಳು ಜಾತಿ, ಪಂಗಡ, ಭಾಷೆಗಳ ವಿವಾದವನ್ನು ದುರುಪಯೋಗಪಡಿಸಿ ಕೊಳ್ಳದಿದ್ದಲ್ಲಿ ಇಂದು ಸಂಘಟನೆ ಇಷ್ಟು ಶ್ರಮಿಸಬೇಕಾಗಿರಲಿಲ್ಲವೆಂದು ರಾಷ್ಟ್ರೀಯ ಐಕ್ಯ ಸಾಧನಾ ಸಮ್ಮೇಳನದಲ್ಲಿ ತಿಳಿಸಿದ ಪಾರ್ಲಿಮೆಂಟ್ ಸದಸ್ಯ ಶ್ರೀ ಸಿ. ಕೆ. ಭಟ್ಟಾಚಾರ‌್ಯರು ಮತ್ತು ಶ್ರೀ ಕೆ. ಎಂ. ಮುನ್ಷಿಯವರು, ಪ್ರಧಾನಿ ನೆಹರೂರವರು ನೀಲಕಂಠನೋಪಾದಿಯಲ್ಲಿ ಇಂದಿನ ಸಮಾಜದ ನ್ಯೂನತೆಯನ್ನು ತೊಡೆದು ಹಾಕಲು ತಮ್ಮ ವರ್ಚಸ್ಸನ್ನು ಉಪಯೋಗಿಸಬೇಕೆಂದು ಮನವಿ ಮಾಡಿಕೊಂಡರು.

ಏನಕೇನ ಪ್ರಕಾರೇಣ
ಬೆಂಗಳೂರು, ಅ. 1 - `ನಿಮ್ಮ ಕೋಟಿನ ಹೊಲಿಗೆ ಬಹಳ ಚೆನ್ನಾಗಿದೆ~ ಎಂದು ಮೆಚ್ಚಿಕೆ ವ್ಯಕ್ತಪಡಿಸಿ, ಮಾತು ಬೆಳೆಸಿ, `ಎಲ್ಲಿ ನೋಡೋಣ .... ಯಾರ ಅಂಗಡಿಯಲ್ಲಿ ಹೊಲಿಸಿದ್ದೀರಿ~ ಅಂದು ಕೋಟು ಕಳಚಿಸಿ, ಕಿಸೆಯಲ್ಲಿದ್ದ ಹಣಕ್ಕೆ ಕೈಕೊಡುತ್ತಿದ್ದ 5 ಮಂದಿ ಪ್ರವೀಣ ಜೇಬುಕಳ್ಳರನ್ನು ನಗರದ ಪೊಲೀಸರು ಹಿಡಿದಿದ್ದಾರೆ.

ಈ ಪ್ರವೀಣ ಕಿಸೆಗಳ್ಳರು ದಾರಿಯಲ್ಲಿ ತಿರುಗಾಡುತ್ತಿದ್ದವರೊಡನೆ `ಆ ಟೈಲರ್ ಅಂಗಡಿ ಎಲ್ಲಿ? ... ಈ ಡಾಕ್ಟರ್ ಷಾಪ್ ಯಾವ ಕಡೆ?~ ಎಂದು ಕೇಳಿ, ಅವರು ದಾರಿ ತೋರಿಸುವ ದೃಷ್ಟಿಯನ್ನು ಬೇರೆ ಕಡೆಗೆ ತಿರುಗಿದಾಗ ಕಿಸೆಯಲ್ಲಿದ್ದುದನ್ನು ಅಪಹರಿಸುವ ವಿಧಾನವನ್ನು ಅನುಸರಿಸುತ್ತಿದ್ದರೆಂದು, ಪೊಲೀಸರು ತಮ್ಮ ವಾರದ ವಾರ್ತಾ ಪತ್ರದಲ್ಲಿ ತಿಳಿಸಿ, ಇಂತಹ ಜೇಬು ಕಳ್ಳರ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

120 ವಸ್ತುಗಳ ಆಮದು ಖೋತಾ ಅಥವಾ ನಿಷೇಧ
ನವದೆಹಲಿ, ಅ.  - ಇಲ್ಲಿ ಇಂದು ಪ್ರಕಟವಾದ ಮುಂದಿನ ಆರು ತಿಂಗಳ (ಅಕ್ಟೋಬರ್ - ಮಾರ್ಚ್) ಆಮದು ನೀತಿಯು ಹಲವು ರೀತಿಯಲ್ಲಿ ನಿಯಂತ್ರಣಾತ್ಮಕ ವಾಗಿಯೇ ಇರುವುದಲ್ಲದೇ ರಫ್ತಿಗೆ ಹೆಚ್ಚು ಪ್ರಾಶಸ್ತ್ಯವಿತ್ತಿದೆ. 120 ವಸ್ತುಗಳ ಆಮದು ಪ್ರಮಾಣವನ್ನು ಕಡಿಮೆ ಮಾಡಲಾಗಿದೆ ಅಥವಾ ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT