ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 22-7-1962

Last Updated 21 ಜುಲೈ 2012, 19:30 IST
ಅಕ್ಷರ ಗಾತ್ರ

ಅಹಿತಕಾರಕ ಚಳವಳಿ ಬೇಡ ಮುಖ್ಯಮಂತ್ರಿ ಮನವಿ
ಬೆಂಗಳೂರು, ಜು.21 - ಕನ್ನಡದ ಸಮಸ್ಯೆಗಳ ಬಗ್ಗೆ ಅಹಿತಕಾರಕ ಚಳವಳಿ ನಡೆಯುವುದನ್ನು ಸರ್ಕಾರ ಸ್ವಾಗತಿಸುವುದಿಲ್ಲವೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

ಇಂದು ಮಧ್ಯಾಹ್ನ ತಮ್ಮ ಛೇಂಬರಿನಲ್ಲಿ ಅವಸರವಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಗಳು `ಕೆಲವರು ಅಹಿತಕಾರಕ ಚಳವಳಿ ನಡೆಸುವ ಕಾರ್ಯದಲ್ಲಿ ನಿರತರಾಗಿದ್ದಾರೆ~ ಎಂದು ಬಂದಿರುವ ವರದಿಗಳನ್ನು ಪ್ರಸ್ತಾಪಿಸಿ `ಅಂಥಾ ಪರಿಸ್ಥಿತಿ ಉದ್ಭವವಾಗಲು ಮತ್ತು ಅಹಿತ ಚಳವಳಿ ನಡೆಯಲು ಆ ಸ್ನೇಹಿತರು ಕಾರಣವಾಗುವುದಿಲ್ಲ~ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಭಾಷೆಯ ಹೆಸರಿನಲ್ಲಿ `ಆತಂಕಕಾರಕ ಬೆಳವಣಿಗೆಗಳಿಗೆ~ ಎಡೆ ಕೊಡುವ ಮಾರ್ಗಗಳನ್ನು ಅನುಸರಿಬಾರದೆಂದು ಜನತೆಯನ್ನು ಪ್ರಾರ್ಥಿಸಿ ಕನ್ನಡ ಭಾಷೆ ಹಾಗೂ ಸಾಹಿತ್ಯದ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡಿರುವ ನಾನಾ ಕ್ರಮಗಳನ್ನು ವಿವರಿಸಿದರು. ಈಗ ಕೈಗೊಂಡಿರುವ ಕ್ರಮಗಳ ಜೊತೆಗೆ ಇತರೆ ಯೋಜನೆಗಳು ಅಗತ್ಯವಾದಲ್ಲಿ ಈ ಸಂಬಂಧವಾಗಿ ನಿರ್ದಿಷ್ಟ ಸಲಹೆಗಳನ್ನು ಸೂಚಿಸಬೇಕೆಂದು ತಿಳಿಸಿದರು.

ಸುಬ್ಬಯ್ಯ ನಾಯ್ಡು ಅವರ ನಿಧನ: ಕನ್ನಡ ರಂಗಭೂಮಿಯ ಶ್ರೇಷ್ಠ ಕಲಾವಿದ
ಬೆಂಗಳೂರು, ಜು. 21 - ಆಧುನಿಕ ಕನ್ನಡ ರಂಗಭೂಮಿಯ ಹಿರಿಯರೊಬ್ಬರೂ, ಕನ್ನಡ ಚಿತ್ರರಂಗದ ಪಿತಾಮಹಾನೆನಿಸಿದ್ದವರೂ ಆದ ನಟ ನಿರ್ಮಾಪಕ ಎಂ. ವಿ. ಸುಬ್ಬಯ್ಯನಾಯ್ಡು ಅವರು ಇಂದು ಬೆಳಿಗ್ಗೆ ಮಂಡ್ಯದಲ್ಲಿ ಹೃದಯಸ್ತಂಭನದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ದಿವಂಗತ ನಾಯಿಡು ಅವರು `ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿ~ ಈಗ ಮಂಡ್ಯದಲ್ಲಿ ಮೊಕ್ಕಾಂ ಮಾಡಿತ್ತು.

`ಸಹಗಮನ ....~
ಈ ಹಿರಿಯ ಕಲಾವಿದ ಅಗಲಿದ ಸುಮಾರು 12 ಗಂಟೆ ಕಾಲದೊಳಗೆ ಅತ್ಯಂತ ದುಃಖಕ್ಕೊಳಗಾಗಿದ್ದ ಅವರ ಪತ್ನಿ ಶ್ರೀಮತಿ ಮುನಿವೆಂಕಟಮ್ಮನವರೂ ಹೃದಯಸ್ತಂಭನದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಸದ್ಯದಲ್ಲೇ ಕೇಂದ್ರ ಸಂಪುಟದಲ್ಲಿ ಬದಲಾವಣೆ?
ನವದೆಹಲಿ, ಜು. 21 - ಮುಂದಿನ ಪಾರ್ಲಿಮೆಂಟ್ ಅಧಿವೇಶನಕ್ಕೆ ಮುನ್ನ ಇಲ್ಲವೆ ಬಳಿಕ ಕೇಂದ್ರ ಸಂಪುಟದಲ್ಲಿ ಕೆಲವು ಬದಲಾವಣೆಗಳಾಗುವ ಸಂಭವವಿದೆ.

ಸದ್ಯದಲ್ಲೇ ಸಂಪುಟದ ಹಿರಿಯ ಸಚಿವರೊಬ್ಬರು ತಾವಾಗಿಯೇ ಇಲ್ಲವೆ ಪ್ರಧಾನಿಯ ಕೋರಿಕೆಯಂತೆ ಸಂಪುಟ ತ್ಯಜಿಸುವರೆಂದು ಹೇಳಲಾಗಿದೆ.

ಈಗ ಇಲಾಖಾ ರಹಿತ ಸಚಿವ ಶ್ರೀ ಟಿ. ಟಿ. ಕೃಷ್ಣಮಾಚಾರಿಯವರು ಆರ್ಥಿಕ ಹೊಂದಾಣಿಕೆಯ ವಿಶೇಷ ಕಾರ್ಯದ ಜೊತೆಗೆ ಕೆಲವು ಇಲಾಖೆಗಳ ಹೊಣೆಯನ್ನೂ ಹೊರುವ ಸಾಧ್ಯತೆಯಿದೆ.
 

ಈಜಿಪ್ಟ್‌ನ ಪ್ರಥಮರಾಕೆಟ್ ಪ್ರಯೋಗ
ಲಂಡನ್, ಜು. 21 - ಈಜಿಪ್ಟಿನ ಮೊಟ್ಟಮೊದಲ ರಾಕೆಟ್ ಅನ್ನು ಅಂತರಿಕ್ಷಕ್ಕೆ ಹಾರಿಸಲಾಯಿತೆಂದು ಕೈರೊ ರೇಡಿಯೊ ಇಂದು ವರದಿ ಮಾಡಿತು.
ವಿಕ್ಟರ್ ಎಂಬ ಹೆಸರಿನ ಈ ರಾಕೆಟ್ 600 ಕಿಲೋ ಮೀಟರುಗಳಷ್ಟು ಎತ್ತರಕ್ಕೆ ಹಾರಿತೆಂದು ರೇಡಿಯೊ ವರದಿ ತಿಳಿಸಿತು.

ಅಧ್ಯಕ್ಷ ನಾಸೆರ್ ಅವರು ಈ ರಾಕೆಟ್ ಪ್ರಯೋಗವನ್ನು ವೀಕ್ಷಿಸಿದರೆಂದೂ ವರದಿ ಹೇಳಿತು. ಈ ರಾಕೆಟ್ ಅನ್ನು ಈಜಿಪ್ಟಿನ ಜನರೇ ಸ್ವತಃ ನಿರ್ಮಿಸಿ ಪ್ರಯೋಗಿಸಿದರು.


ಗೋದಾವರಿ - ಕೃಷ್ಣ ನೀರಿನ ಬಗೆ ಅಂತರ‌್ರಾಜ್ಯ ವಿವಾದಕ್ಕೆ
ಕೇಂದ್ರ ಸರ್ಕಾರವೇ ಕಾರಣ

ಹೈದರಾಬಾದ್, ಜು. 21 - ಗೋದಾವರಿ ಮತ್ತು ಕೃಷ್ಣಾ ನದಿಗಳ ನೀರಿನ ಹಂಚಿಕೆ ಬಗ್ಗೆ 1951ನೇ ಸಾಲಿನ ಅಂತರರರಾಜ್ಯ ಒಪ್ಪಂದವನ್ನು ಪುನರ್ ಪರಿಶೀಲಿಸಬೇಕೆಂಬ ಸಲಹೆಗೆ ಕೇಂದ್ರ ಒಪ್ಪಿಗೆ ನೀಡದೇ ಹೋಗಿದ್ದಲ್ಲಿ, ಈಗ ವಿವಾದ ಉತ್ಕಟರೂಪ ತಾಳುತ್ತಿರಲಿಲ್ಲವೆಂದು ಆಂಧ್ರ ಪ್ರದೇಶ ನೀರಾವರಿ ಮಂತ್ರಿ ಶ್ರೀ ಎ. ಸಿ. ಸುಬ್ಬರೆಡ್ಡಿಯವರು ಇಂದು ವಿಧಾನ ಸಭೆಯಲ್ಲಿ ತಿಳಿಸಿದರು.

ಈ ರೀತಿ 1951ನೇ ಸಾಲಿನ ಒಪ್ಪಂದದ ಪುನರ್ ವಿಮರ್ಶೆಗೆ ಆಂಧ್ರ ಸರ್ಕಾರ ಒಪ್ಪುತ್ತದೆಂಬ ಭಾವನೆ ಯಾರಿಗೂ ಬೇಡವೆಂದರು.


ಹೇಮಾವತಿ ಯೋಜನೆ: ಸೂಕ್ತ ನಿವೇಶನ

ಬೆಂಗಳೂರು, ಜು. 21 - ಹೇಮಾವತಿ ನದಿಯ ನೀರಿನ ಉಪಯೋಗಕ್ಕೆ ಜಲಾಶಯವನ್ನು ಕಟ್ಟೇಪುರದ ಬಳಿ ನಿರ್ಮಾಣ ಮಾಡುವ ಬದಲು ಗೊರೂರು ಗ್ರಾಮದ ಬಳಿ ನಿರ‌್ಮಾಣ ಮಾಡುವುದೇ ಸೂಕ್ತವೆಂದು ತಜ್ಞರ ಅಭಿಪ್ರಾಯವಿರುವುದಾಗಿ, ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು, ಇಂದು ವಿಧಾನ ಸಭೆಯ ಪ್ರಶ್ನೋತ್ತರ ಕಾಲದಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT