ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 23-12-1962

Last Updated 22 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಸ್ವಾತಂತ್ರ್ಯ ರಕ್ಷಣೆಗೆ ಸ್ವಾವಲಂಬನೆಯೇ ಸಿದ್ಧೌಷಧ
ನವದೆಹಲಿ,  ಡಿ. 22
- ಸ್ವಾತಂತ್ರ್ಯದ ಸಂರಕ್ಷಣೆಗಾಗಿ ಜನರು ಮಿತ್ರರಾಷ್ಟ್ರಗಳನ್ನೇ ಅತಿಯಾಗಿ ಅವಲಂಬಿಸಿಕೊಂಡಿರಕೂಡದೆಂದು ಪ್ರಧಾನ ಮಂತ್ರಿ ನೆಹರೂರವರು ಇಂದು ಇಲ್ಲಿ ಎಚ್ಚರಿಕೆ ನೀಡಿದರು.

`ಚೀಣೀ ಆಕ್ರಮಣವನ್ನೆದುರಿಸಲು ತನಗೆ ನೆರವು ನೀಡಿದ್ದ ರಾಷ್ಟ್ರಗಳಿಗೆ ಭಾರತವು ಕೃತಜ್ಞವಾಗಿದೆ. ಮಿತ್ರರಾಷ್ಟ್ರಗಳು ನೀಡುವ ನೆರವನ್ನು ಇನ್ನು ಮುಂದೆಯೂ ನಾವು ಸ್ವೀಕರಿಸುವೆವು. ಆದರೆ ನಮ್ಮ ಸ್ವಾತಂತ್ರ್ಯದ ರಕ್ಷಣೆಯ ಹೊಣೆ ನಮ್ಮದೇ ಎನ್ನುವುದನ್ನು ಜನ ಸದಾ ಜ್ಞಾಪಕದಲ್ಲಿಟ್ಟುಕೊಳ್ಳಬೇಕು.' ಎಂದು ಪ್ರಧಾನ ಮಂತ್ರಿಗಳು ನಲವತ್ತ ನಾಲ್ಕನೆಯ ಅಖಿಲ ಭಾರತ ಸಿಕ್ ಶಿಕ್ಷಣ ಸಮ್ಮೇಳನವನ್ನುದ್ದೇಶಿಸಿ ಭಾಷಣ ಮಾಡುತ್ತಾ ತಿಳಿಸಿದರು.

ಲಡಖ್‌ನಿಂದಲೂ ಚೀಣಿ ಸೇನೆ ವಾಪಸ್
ಪೀಕಿಂಗ್, ಡಿ. 22
- ಚೀಣ ಭಾರತ ಗಡಿಯ ಪೂರ್ವ ವಿಭಾಗ ಮತ್ತು ಲಡಖ್‌ನ ಹಲವು ಕಡೆಗಳಿಂದ ಚೀಣಿ ಸೇನೆ ವಾಪಸಾಗಿದೆಯೆಂದು ಇಂದು ನವಚೀಣಾ ವಾರ್ತಾ ಸಂಸ್ಥೆ ವರದಿ ಮಾಡಿದೆ.

ಚೀಣಿ ಸೇನೆ ವಾಪಸಾತಿ ಇನ್ನೂ ನಡೆಯುತ್ತಿದೆಯೆಂದೂ ಚಿಪ್-ಚಾಪ್ ಕಣಿವೆ ಮತ್ತು ಲಡಖ್‌ಗೆ ಕರ್‌ಕಾಷ್ ನದಿ ಪ್ರದೇಶದಿಂದ ಗಡಿ ರಕ್ಷಕ ದಳಗಳು ಈಗಾಗಲೆ ವಾಪಸಾಗಿವೆಯೆಂದೂ ಅದೇ ಸುದ್ದಿ ತಿಳಿಸಿದೆ.

ಮದರಾಸ್ ಗೌರ‌್ನರ್ ಸ್ಥಾನಕ್ಕೆ ಮೈಸೂರು ರಾಜ್ಯಪಾಲರು
ಮದರಾಸು, ಡಿ. 22
- ಮೈಸೂರಿನ ರಾಜ್ಯಪಾಲರಾಗಿರುವ ಡಾ. ಜಯಚಾಮರಾಜ ಒಡೆಯರ್‌ರವರು ಮುಂದಿನ ತಿಂಗಳು ಶ್ರೀ ವಿಷ್ಣುರಾಂ ಮೇಥಿಯವರ ನಿವೃತ್ತಿ ನಂತರ ಮದರಾಸಿನ ರಾಜ್ಯಪಾಲರಾಗುವರೆಂದು ಇಂದು ಇಲ್ಲಿ ಖಚಿತವಾಗಿ ಗೊತ್ತಾಗಿದೆ.

ಸಿಂಹಳದ ಪ್ರಧಾನಿಯತ್ತ ಕಸದ ಗಂಟಿನ ಎಸೆತ
ಕೊಲಂಬೋ, ಡಿ. 22
- ಇಲ್ಲಿಗೆ ಸುಮಾರು ಆರು ಮೈಲಿಗಳ ದೂರದಲ್ಲಿರುವ ದೇಹಿವೇಲ ಎಂಬಲ್ಲಿ ಆಸ್ಪತ್ರೆಯೊಂದರ ವಾರ್ಡೊಂದರ ಆರಂಭೋತ್ಸವವನ್ನು ನೆರವೇರಿಸಲು ಪ್ರಧಾನ ಮಂತ್ರಿ ಶ್ರೀಮತಿ ಸಿರಿಮಾವೊ ಬಂಡಾರನಾಯಕೆರವರು ನಿನ್ನೆ ಕಾರಿನಲ್ಲಿ ಕುಳಿತು ಮೆರವಣಿಗೆಯಲ್ಲಿ ತೆರಳುತ್ತಿದ್ದಾಗ ಯಾರೋ ಒಬ್ಬನು ಅವರ ಕಾರಿನೊಳಕ್ಕೆ ಕಸದ ಗಂಟೊಂದನ್ನು ಎಸೆದನು.

ಈ ಗಂಟು ಕಾರಿನ ಮೇಲೆ ಹಾರಿ ಮೆರವಣಿಗೆಯಲ್ಲಿ ಕಾರಿನ ಸಮೀಪದಲ್ಲಿ ನಡೆದು ಕೊಂಡು ಹೋಗುತ್ತಿದ್ದ ಪ್ರಧಾನ ಮಂತ್ರಿಯ ಅಂಗರಕ್ಷಕನಿಗೆ ತಗುಲಿತು. ಕಸದ ಗಂಟನ್ನೆಸೆದವನನ್ನು ಬಂಧಿಸಲಾಯಿತು.

ನಾಡಿಗೆ ತಟ್ಟಿದ ಅಪಾಯ ಇನ್ನೂ ನಿವಾರಣೆ ಆಗಿಲ್ಲ: ರಾಷ್ಟ್ರಪತಿ ಸ್ಪಷ್ಟೋಕ್ತಿ
ಮುಂಬೈ, ಡಿ. 22
- ಚೀಣಿ ಸೇನೆ ವಾಪಸಾತಿ ಮತ್ತು ಕೊಲಂಬೊ ಸಮ್ಮೇಳನಗಳ ಕಾರಣ ಚೀಣಿ ದುರಾಕ್ರಮಣ ಭೀತಿ ನಿವಾರಣೆಯಾಗಿದೆಯೆಂದು ಭಾವಿಸಕೂಡದೆಂದು ರಾಷ್ಟ್ರಪತಿ ಡಾ. ರಾಧಾಕೃಷ್ಣನ್‌ರವರು ಇಂದು ನಾಡಿಗೆ ಎಚ್ಚರಿಕೆ ನೀಡಿದರು.

ಮಹಾರಾಷ್ಟ್ರ ರಾಜ್ಯ ಮತ್ತು ಮುಂಬೈ ನಗರ ರಕ್ಷಣಾ ಸಮಿತಿಗಳ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿಯವರು ಭಾಷಣ ಮಾಡುತ್ತ ಅಹಿಂಸೆ ನಮ್ಮ ತಾರಕ ಮಂತ್ರವಾದರೂ ಬಲಪ್ರಯೋಗಕ್ಕೆ ಮಾನ್ಯತೆ ನೀಡುವ ರಾಷ್ಟ್ರಗಳನ್ನು ನಾವೂ ಬಲಯುತರಾಗಿ ಎದುರಿಸಬೇಕು - ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT