ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಭಾರತ-ಅಮೆರಿಕ ಸ್ನೇಹ ಗಟ್ಟಿಗೊಳ್ಳಲಿ'

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸಿ ಅವಕಾಶಗಳನ್ನು ಬಾಚಿಕೊಳ್ಳಲು ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಹಾಗೂ ಅಮೆರಿಕದ ನಡುವಿನ ಸ್ನೇಹ ಸಂಬಂಧ ಇನ್ನಷ್ಟು ಗಾಢವಾಗಬೇಕು' ಎಂದು ಅಮೆರಿಕ ಸಂಯುಕ್ತ ಸಂಸ್ಥಾನ ಕಾಂಗ್ರೆಸ್‌ನಲ್ಲಿರುವ ಭಾರತ ಮೂಲದ ಸದಸ್ಯ ಡಾ.ಅಮಿ ಬೆರಾ ಅಭಿಪ್ರಾಯಪಟ್ಟರು.

ನಗರದ ದಯಾನಂದ ಸಾಗರ್ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ `ಭಾರತ ಹಾಗೂ ಅಮೆರಿಕದ ನಡುವೆ ಗಾಢ ಸಂಬಂಧದ ಅಗತ್ಯ' ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

`ಉಭಯ ರಾಷ್ಟ್ರಗಳ ನಡುವಿನ ಸ್ನೇಹ ಸಂಬಂಧಕ್ಕೆ ಬಲವಾದ ಪರಂಪರೆ ಇದೆ. ಎಲ್ಲ ವರ್ಗದ ಜನರು ಗುಣಮಟ್ಟದ ಜೀವನ ನಡೆಸಬೇಕು. ಯಶಸ್ಸಿನ ವ್ಯಕ್ತಿಯ ಕಥನ ಎಲ್ಲರ ಕಥನವಾಗಬೇಕು. ಮುಂಬೈ ಹಾಗೂ ಕ್ಯಾಲಿಫೋರ್ನಿಯಾದ ವ್ಯಕ್ತಿಗಳ ಜೀವನ ಶೈಲಿ, ಜೀವನದ ಗುಣಮಟ್ಟ ಒಂದೇ ರೀತಿ ಇರಬೇಕು. ನಮ್ಮ ಕೌಶಲಗಳನ್ನು ಆವಿಷ್ಕಾರಕ್ಕೆ ಬಳಸಿಕೊಳ್ಳಬೇಕು. ಕಟ್ಟುಪಾಡುಗಳನ್ನು ಮುರಿದು ಅಭಿವೃದ್ಧಿಗೆ ಶ್ರಮಿಸಬೇಕು. ಹೊಸ ಆಲೋಚನಾ ಕ್ರಮಗಳನ್ನು ಮೈಗೂಡಿಸಿಕೊಂಡು ಸಂಶೋಧನಾ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು' ಎಂದು ಅವರು ತಿಳಿಸಿದರು.

`ಉಭಯ ರಾಷ್ಟ್ರಗಳು ಎಲ್ಲ ವರ್ಗದ ಜನರಿಗೆ ವ್ಯಕ್ತಿ ಸ್ವಾತಂತ್ರ್ಯ, ನ್ಯಾಯ, ಸಮಾನತೆ ನೀಡಿರುವ ಶ್ರೇಷ್ಠ ಗಣತಂತ್ರಗಳು. ನಮ್ಮದು ಮುಕ್ತ ಆರ್ಥಿಕ ವ್ಯವಸ್ಥೆ. ನಾವೀನ್ಯತೆ ಮೂಲಕ ಇಡೀ ವಿಶ್ವದ ದಿಕ್ಕನ್ನೇ ಬದಲಾಯಿಸಬಹುದು. ಈ ಎರಡೂ ರಾಷ್ಟ್ರಗಳ ಜನರು ಆಲೋಚನಾ ಕ್ರಮ ಹಾಗೂ ನಾವೀನ್ಯತೆಗಳನ್ನು ಹಂಚಿಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾರೆ' ಎಂದು ಅವರು ಪ್ರತಿಪಾದಿಸಿದರು.

`ಇತ್ತೀಚಿನ ವರ್ಷಗಳಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ ಹೆಚ್ಚಾಗಿದೆ. ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚುತ್ತಿವೆ ಹಾಗೂ ದೇಶದ ಭದ್ರತೆಗೆ ಕುತ್ತು ತರುವ ಕೃತ್ಯಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಏಷ್ಯಾ ಹಾಗೂ ಇತರ ರಾಷ್ಟ್ರಗಳಲ್ಲಿ ಅಮೆರಿಕವು ಪ್ರಾದೇಶಿಕ ನಾಯಕತ್ವವನ್ನು ಬಲಪಡಿಸುತ್ತಿದೆ. ಈ ತಳಪಾಯದ ಮೇಲೆ ಉಭಯ ರಾಷ್ಟ್ರಗಳು ಮುಕ್ತ ಮನಸ್ಸಿನಿಂದ ಸಂಬಂಧ ಬಲಪಡಿಸಿ ಸಮಸ್ಯೆಗಳನ್ನು ಬಗೆಹರಿಸಿ ವಿಶ್ವದ ಇತರ ರಾಷ್ಟ್ರಗಳಿಗೆ ಮಾದರಿಯಾಗಬೇಕು' ಎಂದು ಅವರು ಅಭಿಪ್ರಾಯಪಟ್ಟರು.

`ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಮಸ್ಯೆಯನ್ನು ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಬೇಕು. ಉಭಯ ರಾಷ್ಟ್ರಗಳು ಸಹಯೋಗದ ಮೂಲಕ ದೇಶದ ಅಭಿವೃದ್ಧಿಗೆ ಮುಂದಾಗಬೇಕು. ವ್ಯಾಪಾರ ಸಂಬಂಧ ವೃದ್ಧಿಯಿಂದ ಎರಡೂ ರಾಷ್ಟ್ರಗಳ ನಡುವೆ ಸ್ನೇಹ ಸಂಬಂಧ ಹೆಚ್ಚಲಿದೆ. ಆಯಾ ದೇಶದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾರ್ಯೋನ್ಮುಖವಾಗಬೇಕು' ಎಂದು ಅವರು ಕಿವಿಮಾತು ಹೇಳಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, `ಭಾರತ ವಿಶಿಷ್ಟ ರಾಷ್ಟ್ರ. ಇಲ್ಲಿ ಅನೇಕ ಜಾತಿ ಧರ್ಮಗಳಿವೆ. ಜನಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ಇದರಿಂದಾಗಿ ಸವಾಲುಗಳು ಹೆಚ್ಚಿವೆ. ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ತಜ್ಞರ ಸಲಹೆ ಹಾಗೂ ಮಾರ್ಗದರ್ಶನ ಅಗತ್ಯ. ಭಾರತ ಯಶಸ್ಸು ಸಾಧಿಸಿದರೆ ಇಡೀ ಜಗತ್ತು ಯಶಸ್ಸು ಸಾಧಿಸಿದಂತೆ' ಎಂದರು.

ದಯಾನಂದ ಸಾಗರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಡಿ. ಪ್ರೇಮಚಂದ್ರ ಸಾಗರ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಸಚಿವ ಕೃಷ್ಣ ಬೈರೇಗೌಡ, ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT