ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಇತರೆ ತಂಡಕ್ಕೆ ಇರಾನಿ ಕಪ್

ಕ್ರಿಕೆಟ್: ಮುಂಬೈ ವಿರುದ್ಧದ ಪಂದ್ಯ ಡ್ರಾ; ಜಾಫರ್ ಶತಕ
Last Updated 10 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಭಾರತ ಇತರೆ ತಂಡದವರು ಸತತ ಎಂಟನೇ ಬಾರಿ ಇರಾನಿ ಕಪ್ ಕ್ರಿಕೆಟ್‌ನಲ್ಲಿ ಚಾಂಪಿಯನ್‌ಪಟ್ಟ ತಮ್ಮದಾಗಿಸಿಕೊಂಡರು. ಮುಂಬೈ ವಿರುದ್ಧದ ಪಂದ್ಯ ಭಾನುವಾರ ನಿರೀಕ್ಷೆಯಂತೆಯೇ ಡ್ರಾದಲ್ಲಿ ಕೊನೆಗೊಂಡಿತು. ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಪ್ರಶಸ್ತಿ ಭಾರತ ಇತರೆ ತಂಡಕ್ಕೆ ಒಲಿಯಿತು.

ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಅಂತಿಮ ದಿನ ಭಾರತ ಇತರೆ 120 ಓವರ್‌ಗಳಲ್ಲಿ 5 ವಿಕೆಟ್‌ಗೆ 389 ರನ್ ಗಳಿಸಿ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಮುಂಬೈ ತಂಡದ ಗೆಲುವಿಗೆ 63 ಓವರ್‌ಗಳಲ್ಲಿ 507 ರನ್‌ಗಳ ಗುರಿ ನೀಡಿತು.

ಪಂದ್ಯ ಡ್ರಾದಲ್ಲಿ ಕೊನೆಗೊಂಡಾಗ ಮುಂಬೈ ಎರಡನೇ ಇನಿಂಗ್ಸ್‌ನಲ್ಲಿ 54 ಓವರ್‌ಗಳಲ್ಲಿ 4 ವಿಕೆಟ್‌ಗೆ 160 ರನ್ ಗಳಿಸಿತ್ತು. ಟೂರ್ನಿಯ 51 ವರ್ಷಗಳ ಇತಿಹಾಸದಲ್ಲಿ ಭಾರತ ಇತರೆ ತಂಡ 26 ಬಾರಿ ಕಪ್ ಗೆದ್ದುಕೊಂಡ ಸಾಧನೆ ಮಾಡಿದೆ.
ರಣಜಿ ಚಾಂಪಿಯನ್ ಮುಂಬೈ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವಾಸಿಮ್ ಜಾಫರ್ ಅಜೇಯ ಶತಕ (101, 141 ಎಸೆತ, 10 ಬೌಂ) ಗಳಿಸಿದ್ದು ಅಂತಿಮ ದಿನದವಾಟದ ವಿಶೇಷವಾಗಿತ್ತು.  ಪ್ರಥಮ ದರ್ಜೆ ಪಂದ್ಯಗಳಲ್ಲಿ ಜಾಫರ್ ಗಳಿಸಿದ 48ನೇ ಶತಕ ಇದಾಗಿದೆ.

ಕಠಿಣ ಸವಾಲು ಬೆನ್ನಟ್ಟಿದ ಮುಂಬೈ ಆದಿತ್ಯ ತಾರೆ (11) ಅವರನ್ನು ಬೇಗನೇ ಕಳೆದುಕೊಂಡಿತು. ಜಾಫರ್ ಮತ್ತು ಅಜಿಂಕ್ಯ ರಹಾನೆ (25) ಎರಡನೇ ವಿಕೆಟ್‌ಗೆ 53 ರನ್ ಸೇರಿಸಿದರು. ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುವ ಮುನ್ನ ರೋಹಿತ್ ಶರ್ಮ (1) ಮತ್ತು ಅಭಿಷೇಕ್ ನಾಯರ್ (2) ಅವರೂ ಔಟಾದರು.

ಆದರೆ ಮತ್ತೊಂದು ಬದಿಯಲ್ಲಿ ಜಾಫರ್ ಕ್ರೀಸ್ ಬಳಿ ನೆಲೆಯೂರಿ ನಿಂತ ಕಾರಣ ಭಾರತ ಇತರೆ ತಂಡ ಗೆಲುವಿನ ಆಸೆ ಕೈಬಿಟ್ಟಿತು. 200 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಜಾಫರ್ ಎದುರಾಳಿ ತಂಡದ ಎಲ್ಲ ಬೌಲರ್‌ಗಳನ್ನು ಧೈರ್ಯದಿಂದ ಎದುರಿಸಿದರು.
ಭಾರತ ಇತರೆ ತಂಡದ ನಾಯಕ ಹರಭಜನ್ ಸಿಂಗ್ 38 ರನ್‌ಗಳಿಗೆ ಎರಡು ವಿಕೆಟ್ ಪಡೆದರು. ಪ್ರಗ್ಯಾನ್ ಓಜಾ ಮತ್ತು ಸುರೇಶ್ ರೈನಾ ತಲಾ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ 296 ರನ್‌ಗಳಿಂದ ಆಟ ಮುಂದುವರಿಸಿದ್ದ ಭಾರತ ಇತರೆ ತನ್ನ ಮೊತ್ತವನ್ನು ಮತ್ತಷ್ಟು ಹಿಗ್ಗಿಸಿತು. ಶನಿವಾರ 118 ರನ್ ಗಳಿಸಿದ್ದ ರಾಯುಡು ಅಂತಿಮ ದಿನವೂ ಬ್ಯಾಟಿಂಗ್ ವೈಭವ ಮುಂದುವರಿಸಿದರು. ಅವರು 156 ರನ್ ಗಳಿಸಿ ಔಟಾಗದೆ ಉಳಿದುಕೊಂಡರು. 289 ಎಸೆತಗಳನ್ನು ಎದುರಿಸಿದ ಈ ಬ್ಯಾಟ್ಸ್‌ಮನ್ 12 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಸಿಡಿಸಿದರು.
ಸುರೇಶ್ ರೈನಾ 71 ರನ್ (106 ಎಸೆತ, 8 ಬೌಂ, 3 ಸಿಕ್ಸರ್) ಗಳಿಸಿ ಔಟಾದರು. ವೃದ್ಧಿಮನ್ ಸಹಾ 20 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT