ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಗೆಲುವು: ಮುಗಿಲು ಮುಟ್ಟಿದ ಸಂಭ್ರಮ

Last Updated 31 ಮಾರ್ಚ್ 2011, 6:45 IST
ಅಕ್ಷರ ಗಾತ್ರ

ಮೈಸೂರು: ಅತ್ತ ಮೊಹಾಲಿಯಲ್ಲಿ ಭಾರತ ಎದುರಾಳಿ ತಂಡದ ಕೊನೆಯ ವಿಕೆಟ್ ಪಡೆಯುತ್ತಿದ್ದಂತೆ ಇತ್ತ ಕ್ರಿಕೆಟ್ ಪ್ರೇಮಿಗಳ ಸಂಭ್ರಮ ಮುಗಿಲು ಮುಟ್ಟಿತು.ಕೊನೆಯ ಎರಡು ಓವರ್‌ಗಳು ಮುಗಿಯುವ ಮುನ್ನವೇ ಭಾರತದ ಗೆಲುವು ಖಚಿತವಾಗಿತ್ತು. ಆದಾಗ್ಯೂ, ಭಾರತ ಕೊನೆಯ ವಿಕೆಟ್ ಪಡೆದಾಗ ಅದುವರೆಗೂ ಟಿ.ವಿ ಮುಂದೆ ಕುಳಿತಿದ್ದ ಕ್ರಿಕೆಟ್ ಅಭಿಮಾನಿಗಳು ಮನೆಯಿಂದ ಹೊರ ಬಂದು ಪಟಾಕಿಗಳ ಸುರಿಮಳೆಯನ್ನೇ ಸುರಿಸಿದರು.

ನಗರದ ಕೆ.ಆರ್.ವೃತ್ತ, ರಾಮಸ್ವಾಮಿ ವೃತ್ತ, ಮಾತೃಮಂಡಳಿ ಸೇರಿದಂತೆ ಹಲವೆಡೆ ದ್ವಿಚಕ್ರ ವಾಹನದ ಮೇಲೆ ಆಗಮಿಸಿದ ಕ್ರೀಡಾಭಿಮಾನಿಗಳು ರಾಷ್ಟ್ರಧ್ವಜವನ್ನು ಹಿಡಿದು ಸಂಭ್ರಮಿಸಿದರು. ಪರಸ್ಪರ ಸಿಹಿ ಹಂಚಿ ಖುಷಿ ಪಟ್ಟರು. ಸಾಂಪ್ರಾದಾಯಿಕ ಎದುರಾಳಿ ಎಂದೇ  ಬಿಂಬಿತವಾಗಿರುವ ಪಾಕಿಸ್ತಾನ ಮತ್ತು ಭಾರತ ನಡುವೆ ಕ್ರಿಕೆಟ್ ಆರಂಭವಾಗುತ್ತಿದ್ದಂತೆ ನಗರದ ಪ್ರಮುಖ ರಸ್ತೆಗಳಾದ ಅರಸು ರಸ್ತೆ, ವಿವಿ ಮೊಹಲ್ಲಾ, ವಾಣಿ    ವಿಲಾಸ, ಸೀತಾವಿಲಾಸ ರಸ್ತೆಗಳು ಸೇರಿದಂತೆ ವಿವಿಧ ಬಡಾವಣೆಗಳ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಪ್ರಮುಖ ರಸ್ತೆಗಳಲ್ಲಿ ಜನ ದಟ್ಟಣೆ, ಸಂಚಾರ ವಿರಳವಾಗಿತ್ತು.ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ, ಖಾಸಗಿ ನೌಕರರು ತಮ್ಮ ಕೆಲಸದ ಒತ್ತಡದ ಮಧ್ಯೆಯೂ ಕ್ರಿಕೆಟ್ ನೋಡಿ ಸಂಭ್ರಮಿಸಿದರು. ಪ್ರೆಸಿಡೆಂಟ್ ಹೊಟೇಲ್ ಮತ್ತು ಕೆ.ಜಿ.ಕೊಪ್ಪಲಿನಲ್ಲಿ ಕ್ರಿಕೆಟ್ ಪ್ರೇಮಿಗಳಿಗಾಗಿ ದೊಡ್ಡ ಪರದೆಯನ್ನು ಅಳವಡಿಸಲಾಗಿತ್ತು. ಸೀತಾ ವಿಲಾಸ ರಸ್ತೆಯ ಫಾಸ್ಟ್ ಫುಡ್ ಮಳಿಗೆಯಲ್ಲಿ ವ್ಯಾಪಾರವೇ  ಇರಲಿಲ್ಲ.

ಬೆಟ್ಟಿಂಗ್ ಭರಾಟೆ: ಭಾರತ-ಪಾಕ್ ನಡುವಿನ   ಮ್ಯಾಚ್ ಪ್ರಯುಕ್ತ ಅಲ್ಲಲ್ಲಿ ಕೆಲವರು ಪೊಲೀಸರ ಕಣ್ಣು ತಪ್ಪಿಸಿ  ಬಾಜಿ ಕಟ್ಟಿದ್ದರು. ಬೆಟ್ಟಿಂಗ್ ಭರಾಟೆ ಜೋರಾಗಿಯೇ ನಡೆದಿದೆ ಎನ್ನಲಾಗಿದೆ.
ವಿಶೇಷ ಪೂಜೆ: ಕ್ರಿಕೆಟ್ ಅಭಿಮಾನಿಗಳು ಭಾರತ ತಂಡದ ಗೆಲುವಿಗೆ ಹಾರೈಸಿ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕೆ.ಆರ್.ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೋಗಿ ಮಂಜು ನೇತೃತ್ವದಲ್ಲಿ ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ದ್ವಿಚಕ್ರ ವಾಹನದಲ್ಲಿ ಸಯ್ಯಾಜಿರಾವ್ ರಸ್ತೆಯ ಮೂಲಕ ಜಾಥಾ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT