ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ನಿರಾಸೆ

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): ಭಾರತ ತಂಡದವರು ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದರು.
ಆಸ್ಟ್ರೇಲಿಯಾದ ಆಟಗಾರರು ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತವನ್ನು 3-0 ಗೋಲುಗಳಿಂದ ಸೋಲಿಸಿ ತವರಿನ ಪ್ರೇಕ್ಷಕರಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು.

ನಾಯಕನಿಗೆ ತಕ್ಕ ಆಟವಾಡಿದ ಜೇಮಿ ಡ್ವೈರ್ 5 ಮತ್ತು 18ನೇ ನಿಮಿಷಗಳಲ್ಲಿ ತಲಾ ಒಂದು ಗೋಲು ಗಳಿಸಿದರೆ, ಕೀರನ್ ಗೋವರ್ಸ್‌ ಮೂರನೇ ಗೋಲು ತಂದಿತ್ತರು.

ಆಸ್ಟ್ರೇಲಿಯಾದ ಆಟಗಾರರು ಫೈನಲ್‌ನಲ್ಲಿ ನೆದರ್‌ಲೆಂಡ್ಸ್ ವಿರುದ್ಧ ಪೈಪೋಟಿ ನಡೆಸಲಿದ್ದಾರೆ. ಶನಿವಾರ ನಡೆದ ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ನೆದರ್‌ಲೆಂಡ್ಸ್ 5-2 ಗೋಲುಗಳಿಂದ ಪಾಕಿಸ್ತಾನವನ್ನು ಮಣಿಸಿತು.

ಭಾರತ ಅಂತಿಮ ಹಂತ ತಲುಪುವಲ್ಲಿ ವೈಫಲ್ಯ ಕಂಡಿರಬಹುದು. ಆದರೆ ಕಳೆದ ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಪದಕವೊಂದನ್ನು ಗೆಲ್ಲುವ ಅವಕಾಶವನ್ನು ಇನ್ನೂ ನಿಚ್ಚಳವಾಗಿರಿಸಿಕೊಂಡಿದೆ. 1982ರಲ್ಲಿ ಭಾರತ ಈ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿದ್ದಷ್ಟೇ ಈವರೆಗಿನ ಉತ್ತಮ ಸಾಧನೆಯಾಗಿದೆ. ಭಾನುವಾರ ಭಾರತ ಕಂಚಿನ ಪದಕಕ್ಕಾಗಿ ಪಾಕಿಸ್ತಾನದ ವಿರುದ್ಧ ಆಡಲಿದೆ.

ಮೂರನೇ ಸ್ಥಾನಕ್ಕಾಗಿ ಭಾರತ ಮತ್ತು ಪಾಕಿಸ್ತಾನ ಈ ಟೂರ್ನಿಯಲ್ಲಿ ಹಣಾಹಣಿ ನಡೆಸುತ್ತಿರುವುದು ಇದೇ ಮೊದಲೇನಲ್ಲ. 2002ರ ನಂತರ ಇದೇ ರೀತಿ ಕಂಚಿನ ಪದಕಕ್ಕಾಗಿಯೇ ನಡೆದ ಮೂರು ಸೆಣಸಾಟಗಳಲ್ಲಿಯೂ ಪಾಕಿಸ್ತಾನವೇ ಗೆದ್ದಿದೆ. ಆದರೆ ಈ ಸಲ ಭಾರತ ತನ್ನ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.
ಆರಂಭದಿಂದಲೇ ಆಸ್ಟ್ರೇಲಿಯ ಆಕ್ರಮಣಕಾರಿಯಾಗಿಯೇ ಆಡತೊಡಗಿದ್ದು, ಭಾರತದ ಮೇಲೆ ಒತ್ತಡ ಹೇರಿತು. ಹೀಗಾಗಿ ಆತಿಥೇಯ ತಂಡಕ್ಕೆ 2ನೇ ನಿಮಿಷದಲ್ಲಿಯೇ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಆದರೆ ಅದರಲ್ಲಿ ಆಸ್ಟ್ರೇಲಿಯ ಯಶಸ್ಸು ಪಡೆಯಲಿಲ್ಲ.

ಆದರೆ ಐದನೇ ನಿಮಿಷದಲ್ಲಿ ಅದೃಷ್ಟ ಭಾರತದ ಕಡೆ ಇರಲಿಲ್ಲ. ಆಗ ಆಸ್ಟ್ರೇಲಿಯಾಕ್ಕೆ ಸಿಕ್ಕಿದ ಎರಡನೇ ಪೆನಾಲ್ಟಿ ಕಾರ್ನರ್‌ನಲ್ಲಿ ಸಿರಿಯೆಲ್ಲೊ ಅವರು ಗೋಲುಪೆಟ್ಟಿಗೆಯತ್ತ ಕಳುಹಿಸಿದ ಚೆಂಡನ್ನು ಗೋಲ್‌ಕೀಪರ್ ಪೊಟುನುರಿ ತಡೆದರು. ಆಗ ಮುಂದಕ್ಕೆ ಪುಟಿದ ಚೆಂಡನ್ನು ಡ್ವೈರ್ ಗುರಿ ಮುಟ್ಟಿಸಿದರು. ವಿಜಯೀ ತಂಡದವರು 18ನೇ ನಿಮಿಷದಲ್ಲಿ ಸಿಕ್ಕಿದ `ಪೆನಾಲ್ಟಿ' ಅವಕಾಶದಲ್ಲಿ ಯಶಃ ಗಳಿಸಿದರು. ಗೋಲು ಆವರಣದ ಸಮೀಪದಲ್ಲೇ ಡ್ವೈರ್ ಗೋಲು ಗಳಿಸಲು ನಡೆಸಿದ ಯತ್ನಕ್ಕೆ ರಕ್ಷಣಾ ಆಟಗಾರರೊಬ್ಬರು ಅಪಾಯಕಾರಿಯಾಗಿ ಅಡ್ಡಿ ಪಡಿಸಿದ್ದಕ್ಕಾಗಿ ಆಸ್ಟ್ರೇಲಿಯಾಕ್ಕೆ `ಪೆನಾಲ್ಟಿ ಅವಕಾಶ ಸಿಕ್ಕತು. ಅದರಲ್ಲಿ ಡ್ವೈರ್ ಗುರಿ ಮುಟ್ಟಿಸಿದರು.

ಭಾರತ ಗೋಲು ಗಳಿಸಲು ನಡೆಸಿದ ಹಲವು ಯತ್ನಗಳು ವಿಫಲಗೊಂಡವು.

ನಾಬ್ಸ್ ಮೆಚ್ಚುಗೆ: ಭಾರತ ತಂಡದ ರಕ್ಷಣಾ ಆಟಗಾರರು ಈ ಪಂದ್ಯದಲ್ಲಿ ಗಮನಾರ್ಹ ಸಾಮರ್ಥ್ಯ ತೋರಿದ್ದಾರೆಂದು ತಂಡದ ಕೋಚ್ ಮೈಕೆಲ್ ನಾಬ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT