ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ಸರಣಿ ಗೆಲುವಿನ ಕನಸು

ಕ್ರಿಕೆಟ್: ಇಂದು ನಾಲ್ಕನೇ ಏಕದಿನ; ಇಂಗ್ಲೆಂಡ್‌ಗೆ `ಮಾಡು ಇಲ್ಲವೇ ಮಡಿ' ಪಂದ್ಯ
Last Updated 22 ಜನವರಿ 2013, 19:59 IST
ಅಕ್ಷರ ಗಾತ್ರ

ಮೊಹಾಲಿ: ಭಾರತ ಕ್ರಿಕೆಟ್ ತಂಡ `ತವರು ನೆಲದಲ್ಲಿ ಹುಲಿ' ಎನಿಸಿಕೊಂಡಿದೆ. ಆದರೆ ಇತ್ತೀಚೆಗೆ ಎದುರಾದ ಸಾಲು ಸಾಲು ಸೋಲಿನ ಕಾರಣ ಈ ಹೆಸರಿಗೆ ಕಳಂಕ ಉಂಟಾಗಿತ್ತು. ಇದೀಗ ಕಳೆದುಹೋದ ಗೌರವವನ್ನು ಮರಳಿ ಪಡೆಯುವ ಅವಕಾಶ ಮಹೇಂದ್ರ ಸಿಂಗ್ ದೋನಿ ಬಳಗಕ್ಕೆ ಲಭಿಸಿದೆ.

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ನಾಲ್ಕನೇ ಹೋರಾಟ ಇಲ್ಲಿನ ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ) ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿದೆ. ಬ್ಯಾಟ್ಸ್‌ಮನ್‌ಗಳ ಉತ್ತಮ ಪ್ರದರ್ಶನ, ಬೌಲರ್‌ಗಳ ಪ್ರಭಾವಿ ದಾಳಿ ಮತ್ತು ಸತತ ಎರಡು ಗೆಲುವಿನ ಬಲ ಭಾರತದ ಜೊತೆಗಿದೆ. ಮೊಹಾಲಿಯಲ್ಲೂ ಜಯದ ಓಟ ಮುಂದುವರಿಸಿ ಸರಣಿ ಗೆಲುವಿನ ಮುನ್ನಡೆ ಪಡೆಯುವುದು ತಂಡದ ಗುರಿ.

ಈಗಾಗಲೇ 1-2 ರಲ್ಲಿ ಹಿನ್ನಡೆಯಲ್ಲಿರುವ ಇಂಗ್ಲೆಂಡ್ ಇಲ್ಲೂ ಮುಗ್ಗರಿಸಿದರೆ ಐತಿಹಾಸಿಕ ಸಾಧನೆಯ ಕನಸು ಅಸ್ತಮಿಸಲಿದೆ. 1984-85ರ ಬಳಿಕ ಭಾರತದ ನೆಲದಲ್ಲಿ ಇಂಗ್ಲೆಂಡ್ ಏಕದಿನ ಸರಣಿ ಗೆದ್ದೇ ಇಲ್ಲ. ಸರಣಿ ಜಯದ ಕನಸನ್ನು ಜೀವಂತವಾಗಿರಿಸಿಕೊಳ್ಳಲು ಅಲಸ್ಟೇರ್ ಕುಕ್ ಬಳಗ ಎಲ್ಲ ರೀತಿಯ ಕಸರತ್ತು ನಡೆಸಲಿದೆ.

ಭಾರತ ತವರು ನೆಲದಲ್ಲಿ ಸರಣಿ ಗೆಲುವಿನ ಸಿಹಿ ಅನುಭವಿಸದೆ ತುಂಬಾ ದಿನಗಳು ಕಳೆದಿವೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಹಾಗೂ ಆ ಬಳಿಕ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಸೋಲು ಎದುರಾಗಿತ್ತು. ಮಾತ್ರವಲ್ಲ, ಈ ಎರಡು ತಂಡಗಳ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಸಮಬಲ ಸಾಧಿಸಲಷ್ಟೇ ಯಶಸ್ವಿಯಾಗಿತ್ತು. ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಇನ್ನೂ 131 ಎಸೆತಗಳು ಇರುವಂತೆಯೇ ಏಳು ವಿಕೆಟ್‌ಗಳಿಂದ ಗೆದ್ದಿದ್ದ ಆತಿಥೇಯರು ಆತ್ಮವಿಶ್ವಾಸದಲ್ಲಿದ್ದಾರೆ. ಭಾರತ ಹಿಂದಿನ ಪಂದ್ಯದಲ್ಲಿ         ಆಡಿದ ತಂಡವನ್ನೇ ಇಲ್ಲಿ ಕಣಕ್ಕಿಳಿಸಬಹುದು. ಹಾಗಾದಲ್ಲಿ ಚೇತೇಶ್ವರ ಪೂಜಾರ ಮತ್ತೆ `ಬೆಂಚ್'ನಲ್ಲಿ ಕುಳಿತುಕೊಳ್ಳಬೇಕು.

ಒತ್ತಡದಲ್ಲಿ ರಹಾನೆ, ಗಂಭೀರ್: ಭಾರತ ತಂಡಕ್ಕೆ ಈ ಪಂದ್ಯದಲ್ಲಿ ಯಾವುದೇ ಒತ್ತಡ ಇಲ್ಲ. ಆದರೆ ಆರಂಭಿಕ ಆಟಗಾರರಾದ ಗೌತಮ್ ಗಂಭೀರ್ ಮತ್ತು ಅಜಿಂಕ್ಯ ರಹಾನೆ ಅತಿಯಾದ ಒತ್ತಡದಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಉತ್ತಮ ಆರಂಭ ನೀಡಿದ್ದ ಇವರು ಬಳಿಕ ಲಯ ಕಳೆದುಕೊಂಡಿರುವರು. ಗಂಭೀರ್ ಉತ್ತಮ ಆರಂಭ ಪಡೆದರೂ, ಕೆಟ್ಟ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸುತ್ತಿದ್ದಾರೆ. ರಹಾನೆ ಈ ಹಿಂದಿನ ಎರಡೂ ಪಂದ್ಯಗಳಲ್ಲಿ ಕ್ಲೀನ್‌ಬೌಲ್ಡ್ ಆಗಿದ್ದರು.

ಆದರೆ ಈ ಕ್ರೀಡಾಂಗಣದಲ್ಲಿ ಹಿಂದೆ ತೋರಿದ್ದ ಸಾಧನೆ ರಹಾನೆಗೆ ಅಲ್ಪ ಆತ್ಮವಿಶ್ವಾಸ ತುಂಬಬಹುದು. 2011ರ ಅಕ್ಟೋಬರ್‌ನಲ್ಲಿ ಇಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 91 ರನ್ ಗಳಿಸಿ `ಪಂದ್ಯಶ್ರೇಷ್ಠ' ಎನಿಸಿಕೊಂಡಿದ್ದರು. ಇದು ನಿಗದಿತ ಓವರ್‌ಗಳ ಪಂದ್ಯದಲ್ಲಿ ಅವರ ಗರಿಷ್ಠ ಮೊತ್ತವೂ ಹೌದು.
ಕ್ಯುರೇಟರ್ ಹೇಳುವಂತೆ ಇಲ್ಲಿನ ಪಿಚ್ ಸ್ವಿಂಗ್ ಹಾಗೂ ಬೌನ್ಸ್‌ಗೆ ನೆರವು ನೀಡಿದರೆ ಭುವನೇಶ್ವರ್ ಕುಮಾರ್, ಶಮಿ ಅಹ್ಮದ್ ಮತ್ತು ಇಶಾಂತ್ ಶರ್ಮ ಅದರ ಲಾಭ ಎತ್ತಿಕೊಳ್ಳುವುದು ಖಚಿತ. ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ ಮತ್ತು ಆರ್. ಅಶ್ವಿನ್ ಕೂಡಾ ಮತ್ತೊಮ್ಮೆ ಇಂಗ್ಲೆಂಡ್ ಬ್ಯಾಟಿಂಗ್‌ನ ಬೆನ್ನೆಲುಬು ಮುರಿಯಲು ಸಜ್ಜಾಗಿರುವರು.

ಗೆದ್ದರಷ್ಟೇ ಇಂಗ್ಲೆಂಡ್‌ಗೆ ಉಳಿಗಾಲ: ಭಾರತದಲ್ಲಿ ಕೊನೆಯದಾಗಿ ಆಡಿದ 21 ಏಕದಿನ ಪಂದ್ಯಗಳಲ್ಲಿ 18 ರಲ್ಲೂ ಇಂಗ್ಲೆಂಡ್ ಸೋಲು ಅನುಭವಿಸಿದೆ. ಸರಣಿಯ ಮೊದಲ ಪಂದ್ಯದಲ್ಲಿ ಚೇತರಿಕೆಯ ಪ್ರದರ್ಶನ ನೀಡಿದ್ದ ತಂಡ ಬಳಿಕ ಕುಸಿತದ ಹಾದಿ ಹಿಡಿದಿದೆ. ಸಾಕಷ್ಟು ಒತ್ತಡದಲ್ಲಿರುವ ಇಂಗ್ಲೆಂಡ್‌ಗೆ ಅಲ್ಪ ಸಂತಸ ನೀಡಿರುವುದು ಇಲ್ಲಿನ ಹವಾಮಾನ ಮತ್ತು ಪಿಚ್‌ನ ಗುಣ. ವೇಗದ ಬೌಲರ್‌ಗಳಿಗೆ ನೆರವು ನೀಡುವಂತಹ ಪರಿಸ್ಥಿತಿ ಇಲ್ಲಿದೆ. ಆದರೆ ಇಂಗ್ಲೆಂಡ್ ಬೌಲರ್‌ಗಳು ಅದನ್ನು ಸದುಪಯೋಗಪಡಿಸಿಕೊಳ್ಳಲು ಯಶಸ್ವಿಯಾಗುವೇ ಎಂಬುದನ್ನು ನೋಡಬೇಕು.

ಇಂಗ್ಲೆಂಡ್ ತಂಡ ಕುಕ್ ಮತ್ತು ಇಯಾನ್ ಬೆಲ್ ಅವರಿಂದ ಉತ್ತಮ ಜೊತೆಯಾಟ ನಿರೀಕ್ಷಿಸುತ್ತಿದೆ. ಏಕೆಂದರೆ ಅಗ್ರ ಕ್ರಮಾಂಕದ ಒಂದೆರಡು ವಿಕೆಟ್ ಬೇಗನೇ ಬಿದ್ದರೆ ತಂಡಕ್ಕೆ ಮರುಹೋರಾಟ ನಡೆಸಲು ಆಗುತ್ತಿಲ್ಲ. ಮೊದಲ ಪಂದ್ಯದಲ್ಲಿ ಗೆಲುವಿಗೆ ಕುಕ್ ಹಾಗೂ ಬೆಲ್ ಆಟ ಕಾರಣವಾಗಿತ್ತು.
ಅಂತಿಮ ಇಲೆವೆನ್‌ನಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಲಾಗಿದೆ. ಕ್ರೆಗ್ ಕೀಸ್‌ವೆಟರ್ ಬದಲು ಜಾಸ್ ಬಟ್ಲರ್ ವಿಕೆಟ್ ಕೀಪಿಂಗ್‌ನ ಜವಾಬ್ದಾರಿ ನಿರ್ವಹಿಸುವ ಸಾಧ್ಯತೆಯಿದೆ. ಕೀಸ್‌ವೆಟರ್ ಎಲ್ಲ ಪಂದ್ಯಗಳಲ್ಲೂ ವಿಫಲರಾಗಿದ್ದರು.

ಸ್ಟುವರ್ಡ್ ಬ್ರಾಡ್ ಅವರ ಭಾರತ ಪ್ರಯಾಣ ಮೊಟಕುಗೊಂಡ ಕಾರಣ ಅಲಸ್ಟೇರ್ ಕುಕ್ ಈಗ ಇರುವ ಬೌಲರ್‌ಗಳನ್ನೇ ನೆಚ್ಚಿಕೊಳ್ಳಬೇಕಾಗಿದೆ. ಅಭ್ಯಾಸದ ವೇಳೆ ಕೈಬೆರಳಿಗೆ ಗಾಯಮಾಡಿಕೊಂಡಿದ್ದ ಸ್ಟೀವನ್ ಫಿನ್ ಈ ಪಂದ್ಯದಲ್ಲಿ ಆಡುವರು ಎಂಬುದು ಇಂಗ್ಲೆಂಡ್ ತಂಡದ ವಿಶ್ವಾಸ.
ರಾಂಚಿಯಲ್ಲಿ ಐದು ಓವರ್‌ಗಳಲ್ಲಿ 45 ರನ್ ಬಿಟ್ಟುಕೊಟ್ಟಿದ್ದ ಜೇಡ್     ಡೆರ್ನ್‌ಬಾಕ್ ಬದಲು ಸ್ಟುವರ್ಟ್ ಮೀಕರ್ ಅವಕಾಶ ಗಿಟ್ಟಿಸಿದರೂ ಅಚ್ಚರಿಯಿಲ್ಲ. ಡೆರ್ನ್‌ಬಾಕ್ ಸರಣಿಯಲ್ಲಿ ಒಟ್ಟು 24 ಓವರ್‌ಗಳಲ್ಲಿ 187 ರನ್ ನೀಡಿದ್ದಾರೆ.

ಪಿಸಿಎ ಕ್ರೀಡಾಂಗಣದ ಪಿಚ್ ವೇಗದ ಬೌಲರ್‌ಗಳಿಗೆ ನೆರವು ನೀಡಬಹುದಾದರೂ, ಇಲ್ಲಿ ದೊಡ್ಡ ಮೊತ್ತದ ಹೋರಾಟ ನಿರೀಕ್ಷಿಸಲಾಗಿದೆ. ಚಂಡೀಗಡ ಚಳಿಯಲ್ಲಿ ಗಡ ಗಡ ನಡುಗುತ್ತಿದೆ. ಇಂಗ್ಲೆಂಡ್ ಆಟಗಾರರಿಗೆ ಇಲ್ಲಿನ ವಾತಾವರಣ ಸಂತಸ ಉಂಟುಮಾಡಿದೆ. ಆದರೆ ಭಾರತ ತಂಡದವರು ಚಳಿಬಿಟ್ಟು ಆಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT