ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ- ಪಾಕ್ ಮಾತುಕತೆ

Last Updated 10 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಯೋತ್ಪಾದನೆ, ಮುಂಬೈ ಉಗ್ರರ ದಾಳಿಯ ತನಿಖೆ ಪ್ರಗತಿ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಎಲ್ಲಾ ಗಮನಾರ್ಹ ವಿಷಯಗಳ ಬಗ್ಗೆ ಸಮಗ್ರ ಮಾತುಕತೆ ಆರಂಭಿಸುವುದಾಗಿ ಭಾರತ ಮತ್ತು ಪಾಕಿಸ್ತಾನ ಗುರುವಾರ ಹೇಳಿವೆ.ಮುಂಬೈ ದಾಳಿ ಹಿನ್ನೆಲೆಯಲ್ಲಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಉಭಯ ರಾಷ್ಟ್ರಗಳ ನಡುವೆ ಮಾತುಕತೆ ಸ್ಥಗಿತಗೊಂಡಿತ್ತು.ಉಭಯ ರಾಷ್ಟ್ರಗಳ ವಿದೇಶಾಂಗ ವ್ಯವಹಾರಗಳ ಸಚಿವರಾದ ಎಸ್.ಎಂ. ಕೃಷ್ಣ ಮತ್ತು ಖುರೇಷಿ ಜುಲೈನಲ್ಲಿ ಭೇಟಿಯಾಗುವ ಮೊದಲು ಈಗ ಈ ಹೇಳಿಕೆ ಹೊರಬಿದ್ದಿದೆ.

ಇಂತಹ ಮಾತುಕತೆಯ ನೀಲನಕ್ಷೆ ಅನಾವರಣಗೊಳಿಸಿದ ವಿದೇಶಾಂಗ ಸಚಿವಾಲಯವು ‘ಥಿಂಪುವಿನಲ್ಲಿ ಭಾರತ- ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯ ಒಪ್ಪಿತ ನಿರ್ಣಯ’ ಎಂಬ ಹೇಳಿಕೆ ನೀಡಿ, ರಾವಲ್ಪಿಂಡಿ ನ್ಯಾಯಾಲಯದಲ್ಲಿ 26/11 ಪ್ರಕರಣದ ವಿಚಾರಣೆಯ ಪ್ರಗತಿ  ಸೇರಿದಂತೆ ಭಯೋತ್ಪಾದನೆ ನಿಗ್ರಹದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದೆ.

‘ಎಲ್ಲಾ ವಿಷಯಗಳ’ ಬಗ್ಗೆ ದ್ವಿಪಕ್ಷೀಯ ಮಾತುಕತೆ ಪುನರಾರಂಭಿಸಲು ಕೈಗೊಂಡ ನಿರ್ಣಯದ ಹೇಳಿಕೆಗಳನ್ನು ಏಕಕಾಲದಲ್ಲಿ ನವದೆಹಲಿ ಮತ್ತು ಇಸ್ಲಾಮಾಬಾದ್‌ನಲ್ಲಿ ಗುರುವಾರ ಬಿಡುಗಡೆ ಮಾಡಲಾಗಿದೆ. ಖುರೇಷಿ ಭೇಟಿಗೆ ಮುನ್ನ ಭಯೋತ್ಪಾದನೆ ನಿಗ್ರಹ, ಮಾನವೀಯ ವಿಷಯಗಳು,ಜಮ್ಮು ಮತ್ತು ಕಾಶ್ಮೀರ, ಸಿಯಾಚಿನ್ ಮತ್ತು ಆರ್ಥಿಕ ವಿಷಯಗಳ ಬಗ್ಗೆ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಡೆಯಲಿದೆ.

ರಾವ್ ಪ್ರತಿಕ್ರಿಯೆ: ಉಭಯ ದೇಶಗಳ ನಡುವಣ ಮಾತುಕತೆ ಪುನರಾರಂಭ ‘ಆಚರಣೆಗೆ ತರಬಹುದಾಗಿದೆ.’ ಬಹಳ ದೀರ್ಘ ಕಾಲ ಈ ಪ್ರಕ್ರಿಯೆಗೆ ತಡೆ ಹಿಡಿದಿದ್ದರಿಂದ ಯಾವ ರಾಷ್ಟ್ರಕ್ಕೂ ಪ್ರಯೋಜನ ಆಗಿಲ್ಲ ಎಂದು ಭಾರತ ಹೇಳಿದೆ. ಭಾರತ- ಪಾಕಿಸ್ತಾನ ‘ಗಂಭೀರ, ಸ್ಥಿರವಾದ ಮತ್ತು ಸಮಗ್ರವಾದ’ ಮಾತುಕತೆಯಲ್ಲಿ ತೊಡಗಬೇಕು ಎಂದು ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಚಾನೆಲ್‌ವೊಂದಕ್ಕೆ ಹೇಳಿದ್ದಾರೆ.

ಥಿಂಪುವಿನಲ್ಲಿ ಭಾನುವಾರ ಪಾಕ್ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ಜತೆ ಮಾತುಕತೆ ನಡೆಸಿದ್ದ ನಿರುಪಮಾ, ಪರಸ್ಪರ ‘ಬೆನ್ನು ತಿರುಗಿಸಿಕೊಂಡಿರುವುದನ್ನು’ ಭಾರತ ಮತ್ತು ಪಾಕಿಸ್ತಾನ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಪಾಕ್‌ನೊಂದಿಗೆ ಮಾತುಕತೆ ಪ್ರಗತಿ ಕಾಣಲು ಭಾರತ ಯಾವಾಗಲೂ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದೆ. ಏಕೆಂದರೆ ಸಮಸ್ಯೆ ನಿವಾರಣೆಗೆ ‘ಮಾತುಕತೆಯೊಂದೇ ಮಾರ್ಗ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT