ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ-ಪಾಕ್ ಮುಖಾಮುಖಿ

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಓರ್ಡೊಸ್, ಚೀನಾ (ಪಿಟಿಐ): ಫೈನಲ್ ಕನಸು ನನಸು ಮಾಡಿಕೊಳ್ಳಲು ಭಾರತ ತಂಡದವರು ಏಷ್ಯನ್ ಚಾಂಪಿಯ ನ್ಸ್ ಟ್ರೋಫಿಯ ಶುಕ್ರವಾರದ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆಲ್ಲುವುದು ಅಗತ್ಯ ಮಾತ್ರವಲ್ಲ ಅನಿವಾರ್ಯ.

ಭಾರತವು ಈ ಟೂರ್ನಿಯಲ್ಲಿ ಈವರೆಗೆ ಯಾವುದೇ ಪಂದ್ಯದಲ್ಲಿ ಸೋಲನುಭವಿಸಿಲ್ಲ. ಆದರೆ ಅದಕ್ಕೆ ಜಪಾನ್ ಹಾಗೂ ಮಲೇಷ್ಯಾ ವಿರುದ್ಧದ ಪಂದ್ಯಗಳನ್ನು `ಡ್ರಾ~ ಮಾಡಿಕೊಂಡಿದ್ದು ದುಬಾರಿ ಎನಿಸಿದೆ. ಆತಿಥೇಯ ಚೀನಾ ವಿರುದ್ಧ ಗೆದ್ದು ಆನಂತರ ಜಪಾನ್ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ಭಾರತಕ್ಕೆ ಕೊರಿಯಾ ವಿರುದ್ಧ ಜಯ ಸಿಕ್ಕಿತ್ತು. ಆದರೆ ಏಷ್ಯನ್ ಕ್ರೀಡಾಕೂಟದ ಚಾಂಪಿಯನ್ ಮಲೇಷ್ಯಾ ಎದುರು ಗೆಲುವು ಪಡೆಯುವುದು ಸಾಧ್ಯವಾಗಲಿಲ್ಲ.

ಮಲೇಷ್ಯಾ ವಿರುದ್ಧ ಗೆಲುವು ಪಡೆದಿದ್ದರೆ ಭಾರತವು ಹತ್ತು ಪಾಯಿಂಟುಗಳೊಂದಿಗೆ ಫೈನಲ್‌ನಲ್ಲಿನ ಸ್ಥಾನವನ್ನು ಖಚಿತವಾಗಿಸಿಕೊಳ್ಳಲು ಅವಕಾಶವಿತ್ತು. ಆದರೆ ಈಗ ಅದು ಪಾಕಿಸ್ತಾನ ವಿರುದ್ಧ ಗೆಲ್ಲಲೇ ಬೇಕು ಎನ್ನುವಂಥ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದೆ.
 
ಪಾಕಿಸ್ತಾನವು ಒಂಬತ್ತು ಪಾಯಿಂಟುಗಳೊಂದಿಗೆ ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅದು ಭಾರತದಷ್ಟು ಒತ್ತಡದಲ್ಲಿಲ್ಲ. ಡ್ರಾ ಮಾಡಿಕೊಂಡರೂ ಸುರಕ್ಷಿತವಾಗಬಹುದು.ಆದರೆ ಕಷ್ಟ ಎದುರಾಗಿರುವುದು ಭಾರತಕ್ಕೆ. ಎಂಟು ಪಾಯಿಂಟುಗಳೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ.

ಜಪಾನ್ (7) ಹಾಗೂ ದಕ್ಷಿಣ ಕೊರಿಯಾ (6) ಲೀಗ್ ಪಟ್ಟಿಯಲ್ಲಿ ನಂತರದಲ್ಲಿವೆ. ಆದ್ದರಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳಿಗೆ ಶುಕ್ರವಾರದ ಪಂದ್ಯವು ಸೆಮಿಫೈನಲ್ ಎನ್ನುವಂತಾಗಿದೆ.

ಭಾರತವಂತೂ ಈ ಪಂದ್ಯವನ್ನು ಗೆಲ್ಲಲೇಬೇಕು. ಅದೊಂದೇ ದಾರಿ. ಡ್ರಾ ಮಾಡಿಕೊಂಡರೆ ಪಾಕಿಸ್ತಾನವು ಗೋಲುಗಳ ಲೆಕ್ಕಾಚಾರದಲ್ಲಿ ಭಾರತವನ್ನು ಹಿಂದೆ ಹಾಕಬಲ್ಲದು. ಒಂದು ವೇಳೆ ಈ ಪಂದ್ಯದಲ್ಲಿ ಭಾರತ ಸೋಲನುಭವಿಸಿದರೆ ಇನ್ನೊಂದು ಲೆಕ್ಕಾಚಾರಕ್ಕಾಗಿ ಕಾಯಬೇಕಾಗುತ್ತದೆ.

ಮತ್ತೊಂದು ಲೀಗ್ ಪಂದ್ಯದಲ್ಲಿ ಚೀನಾ ಎದುರು ಕೊರಿಯಾ ಗೆದ್ದರೆ ಮಾತ್ರ ಪರ ವಿರುದ್ಧ ಗೋಲುಗಳ ಲೆಕ್ಕವು ಭಾರತಕ್ಕೆ ಸಹಕಾರಿ ಆಗುತ್ತದೆ.ಬೇರೆ ಪಂದ್ಯದ ಫಲಿತಾಂಶವನ್ನು ನೆಚ್ಚಿಕೊಂಡು ಕುಳಿತುಕೊಳ್ಳುವುದು ಭಾರತ ತಂಡದ ಕೋಚ್ ಮೈಕಲ್ ನಾಬ್ಸ್ ಉದ್ದೇಶವಾಗಿಲ್ಲ.

ಅವರು ತಮ್ಮ ತಂಡವು ಗೆಲುವು ಪಡೆಯುವ ಮೂಲಕವೇ ಫೈನಲ್ ಪ್ರವೇಶಿಸಬೇಕೆಂದು ಆಶಿಸಿದ್ದಾರೆ. ಅದಕ್ಕಾಗಿ ಪಾಕ್ ಎದುರು ದಾಳಿಗೆ ಒತ್ತು ನೀಡುವಂಥ ಆಟವಾಡುವ ಯೋಜನೆಯನ್ನು ಕೂಡ ಸಿದ್ಧಪಡಿಸಿಕೊಂಡಿದ್ದಾರೆ.

ಸಾಂಪ್ರದಾಯಿಕ ಎದುರಾಳಿ ಎನಿಸಿರುವ ಪಾಕ್ ತಂಡವನ್ನು ಭಾರತ ಮಣಿಸುವ ಮಹತ್ವ ಏನೆನ್ನುವುದನ್ನು ನಾಬ್ಸ್ ಕೂಡ ಅರಿತಿದ್ದಾರೆ. ಒತ್ತಡದಿಂದ ಮುಕ್ತವಾಗಿ ಸಹಜವಾದ ಆಟವಾಡುವಂತೆ ತಮ್ಮ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT