ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ-ಪಾಕ್ ಸ್ನೇಹ ಸಮರಕ್ಕೆ ಮತ್ತೆ ಮುನ್ನುಡಿ

ಇಂದು ಮೊದಲ ಟ್ವೆಂಟಿ-20 ಪಂದ್ಯ, ದೋನಿ ಬಳಗಕ್ಕೆ ಹಫೀಜ್ ಪಡೆಯ ಸವಾಲು
Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ `ಕ್ರಿಕೆಟ್ ಬಾಂಧವ್ಯ'ದ ಹೊಸ ಶಕೆಯ ಆರಂಭಕ್ಕೆ ವೇದಿಕೆ ಸಿದ್ಧಗೊಂಡಿದೆ. ಐದು ವರ್ಷಗಳ ಬಿಡುವಿನ ಬಳಿಕ ಉಭಯ ತಂಡಗಳು ಸರಣಿಯೊಂದರಲ್ಲಿ ಪರಸ್ಪರ ಎದುರಾಗುತ್ತಿದ್ದು, ಅಭಿಮಾನಿಗಳ ಕಾತರ, ಕುತೂಹಲ ಗರಿಗೆದರಿದೆ.

2008ರ ಮುಂಬೈ ಮೇಲಿನ ಉಗ್ರರ ದಾಳಿ ಘಟನೆಯ ಬಳಿಕ ಎರಡೂ ದೇಶಗಳ ನಡುವಿನ ಕ್ರಿಕೆಟ್ `ಸಂಬಂಧ' ಮುರಿದು ಬಿದ್ದಿತ್ತು. ಐಸಿಸಿ ಟೂರ್ನಿಯಲ್ಲಿ ಪರಸ್ಪರ ಎದುರಾಗಿದ್ದನ್ನು ಬಿಟ್ಟರೆ, ಯಾವುದೇ ಸರಣಿಯಲ್ಲಿ ಆಡಿರಲಿಲ್ಲ. ಇದೀಗ ಐದು ಪಂದ್ಯಗಳನ್ನು (ಎರಡು ಟಿ-20, ಮೂರು ಏಕದಿನ) ಆಡಲಿಕ್ಕಾಗಿ ಪಾಕ್ ಬಳಗ ಇಲ್ಲಿಗೆ ಆಗಮಿಸಿದೆ.

ಟ್ವೆಂಟಿ-20 ಸರಣಿಯ ಮೊದಲ ಹಣಾಹಣಿ ಮಂಗಳವಾರ ನಡೆಯಲಿದ್ದು, ಚಿನ್ನಸ್ವಾಮಿ ಕ್ರೀಡಾಂಗಣ ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿದೆ. ಮಹೇಂದ್ರ ಸಿಂಗ್ ದೋನಿ ಹಾಗೂ ಮೊಹಮ್ಮದ್ ಹಫೀಜ್ ಟಾಸ್‌ಗಾಗಿ ಅಂಗಳಕ್ಕೆ ಆಗಮಿಸುವ ಆ ಕ್ಷಣಕ್ಕಾಗಿ ಉಭಯ ದೇಶಗಳ ಕೋಟಿ ಕೋಟಿ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದಾರೆ.

ಇಂದು ರಾತ್ರಿ 7.00 ಗಂಟೆಯ ಬಳಿಕ ದೇಶದ ಪ್ರಮುಖ ನಗರಗಳು ಒಂದು ರೀತಿಯಲ್ಲಿ ಸ್ತಬ್ಧಗೊಳ್ಳಲಿದೆ. ಕೋಟ್ಯಂತರ ಜನರು ಟಿ.ವಿ ಎದುರು ಅಂಟಿಕೊಳ್ಳಲಿದ್ದಾರೆ. ನೆರೆಯ ಪಾಕಿಸ್ತಾನದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಾರದು.ಪರಸ್ಪರ ಪೈಪೋಟಿ ನಡೆಸುವಾಗ ಉಭಯ ತಂಡಗಳ ಆಟಗಾರರಲ್ಲಿ ಹೊಸ ಆವೇಶ ಕಂಡುಬರುವುದು ಸಹಜ. ಪಾಕ್ ಎದುರು ಭಾರತ ಸೋಲು ಅನುಭವಿಸುವುದನ್ನು ಇಲ್ಲಿಯ ಅಭಿಮಾನಿಗಳು ಸಹಿಸರು. ಪಾಕಿಸ್ತಾನದಲ್ಲೂ ಅದೇ ಪರಿಸ್ಥಿತಿ ಇದೆ. ಕ್ರಿಕೆಟ್ ಪ್ರೇಮಿಗಳ ಈ ಮನೋಭಾವ ಆಟಗಾರರ ಮೇಲಿನ ಒತ್ತಡವನ್ನು ಹೆಚ್ಚಿಸಲಿದೆ.

ಇಂಗ್ಲೆಂಡ್ ವಿರುದ್ಧದ ನೀರಸ ಪ್ರದರ್ಶನದ ಕಾರಣ ಎಲ್ಲರಿಂದಲೂ ಟೀಕೆಗೆ ಗುರಿಯಾಗಿರುವ `ಮಹಿ' ಬಳಗಕ್ಕೆ ಕಳೆದುಹೋದ ಘನತೆಯನ್ನು ಮರಳಿ ಪಡೆಯಲು ಈ ಸರಣಿ ಸುವರ್ಣಾವಕಾಶ ಒದಗಿಸಿದೆ. ಪಾಕ್ ವಿರುದ್ಧ ಗೆದ್ದರೆ, ದೇಶದ ಜನತೆ ಈ ಹಿಂದಿನ ಸೋಲಿನ ಕಹಿಯನ್ನೆಲ್ಲ ಮರೆಯುವರು ಎಂಬ ಅರಿವು ಭಾರತದ ಆಟಗಾರರಿಗೆ ಇದೆ.

ಸಮಬಲದ ಪೈಪೋಟಿ ಸಾಧ್ಯತೆ:
ಎರಡೂ ತಂಡಗಳು ಯುವ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡಿದ್ದು, ಸಮಬಲದ ಪೈಪೋಟಿ ನಿರೀಕ್ಷಿಸಬಹುದು. ಬೌಲಿಂಗ್ ವಿಭಾಗದಲ್ಲಿ ಪಾಕಿಸ್ತಾನ ಅಲ್ಪ ಬಲಶಾಲಿಯಾಗಿ ಕಂಡುಬಂದರೂ, ಬ್ಯಾಟಿಂಗ್‌ನಲ್ಲಿ ಭಾರತವೇ ಬಲಾಢ್ಯ ಎಂಬುದರಲ್ಲಿ ಅನುಮಾನವಿಲ್ಲ.

ಹಫೀಜ್ ನೇತೃತ್ವದ ತಂಡದಲ್ಲಿ ಕೆಲವು ಅಪಾಯಕಾರಿ ಆಟಗಾರರಿದ್ದಾರೆ. ಕಮ್ರನ್ ಅಕ್ಮಲ್, ಉಮರ್ ಅಕ್ಮಲ್, ಸಯೀದ್ ಅಜ್ಮಲ್ ಹಾಗೂ ಉಮರ್ ಗುಲ್ ಅವರಲ್ಲಿ ಪ್ರಮುಖರು. `ಅಚ್ಚರಿಯ ಫಲಿತಾಂಶ ನೀಡಬಲ್ಲ ಯುವ ಪ್ರತಿಭೆಗಳಿದ್ದಾರೆ' ಎಂಬ ಎಚ್ಚರಿಕೆಯನ್ನು ಪಾಕ್ ನಾಯಕ ಹಫೀಜ್ ನೀಡಿದ್ದಾರೆ. ಆದರೆ ಅವರ ಪ್ರತಿಭೆ ಅನಾವರಣಗೊಳ್ಳಲು ಭಾರತ ಅವಕಾಶ ನೀಡುವುದೇ ಎಂಬುದನ್ನು ನೋಡಬೇಕು. ಶಾಹಿದ್ ಅಫ್ರಿದಿ ಇತ್ತೀಚಿನ ದಿನಗಳಲ್ಲಿ ಮಂಕಾಗಿದ್ದರೂ, ಅವರನ್ನು ಕಡೆಗಣಿಸುವುದು ಸುಲಭವಲ್ಲ.

ಭಾರತ ತಂಡ ಪೂರ್ಣ ಸಾಮರ್ಥ್ಯದೊಂದಿಗೆ ಹೋರಾಟ ನಡೆಸಲಿದೆ. ನಾಯಕ ದೋನಿ ಅಲ್ಲದೆ ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ, ಸುರೇಶ್ ರೈನಾ ಎದುರಾಳಿ ಬೌಲಿಂಗ್ ದಾಳಿಯನ್ನು ಎದುರಿಸಲು ತಕ್ಕ ರೀತಿಯಲ್ಲಿ ಸಜ್ಜಾಗಿದ್ದಾರೆ. ಅನನುಭವಿ ಬೌಲರ್‌ಗಳು ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಎಷ್ಟರಮಟ್ಟಿಗೆ ಕಡಿವಾಣ ತೊಡಿಸುವರು ಎಂಬುದು ಕೂಡಾ ಭಾರತದ ಯಶಸ್ಸಿನಲ್ಲಿ
ನಿರ್ಣಾಯಕ ಪಾತ್ರ ವಹಿಸಲಿದೆ.ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡಲಿರುವ ಕಾರಣ ಬ್ಯಾಟಿಂಗ್ ಮೇಲಾಟವನ್ನು ನೋಡಬಹುದು.

ಯೋಜನೆ ರೂಪಿಸುವುದು ಕಷ್ಟ:  ಮುಂಚಿತವಾಗಿಯೇ ಒಂದು ಯೋಜನೆ ರೂಪಿಸಿಕೊಂಡು ಪಾಕ್ ವಿರುದ್ಧ ಕಣಕ್ಕಿಳಿಯುವುದು ಕಷ್ಟ. ಏಕೆಂದರೆ ಆ ತಂಡ ಯಾವ ದಿನ ಹೇಗೆ ಆಡುವುದು ಎಂಬುದನ್ನು ನಿರ್ಧರಿಸುವುದು ಸುಲಭವಲ್ಲ. ಒಂದು ಒಳ್ಳೆಯ ದಿನ ಯಾವುದೇ ಬಲಿಷ್ಠ ತಂಡವನ್ನು ನೆಲಕ್ಕುರುಳಿಸುವ ಪಾಕ್, ಮತ್ತೊಂದು ದಿನ ದುರ್ಬಲ ತಂಡದ ಎದುರೂ ಮುಗ್ಗರಿಸುತ್ತದೆ.

ಈ ತಂಡದ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಇಂತಹ ಹಲವು ಉದಾಹರಣೆಗಳನ್ನು ಕಾಣಲು ಸಾಧ್ಯ. ಅನಿಶ್ಚಿತತೆಯನ್ನು ಬೆನ್ನಲ್ಲಿ ಕಟ್ಟಿಕೊಂಡಿರುವ ಪಾಕ್ ತಂಡದ ಈ `ವಿಶೇಷ ಗುಣ' ಭಾರತಕ್ಕೆ ಸವಾಲಾಗಿ ಪರಿಣಮಿಸಲಿದೆ.

ದೋನಿಗೆ ಸವಾಲಿನ ಪಂದ್ಯ:ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೋಲು ಅನುಭವಿಸಿರುವ ಭಾರತ, ಟ್ವೆಂಟಿ-20 ಸರಣಿಯನ್ನು ಸಮಬಲ ಮಾಡುವಲ್ಲಿ ಮಾತ್ರ ಯಶಸ್ವಿಯಾಗಿತ್ತು. ಇದರಿಂದ ನಾಯಕ ದೋನಿ ಅತಿಯಾದ ಒತ್ತಡದಲ್ಲಿದ್ದಾರೆ. ಕಳೆದ ಕೆಲ ದಿನಗಳಲ್ಲಿ ಅವರು ಕೇಳಿದ ಟೀಕೆಗಳಿಗೆ ಲೆಕ್ಕವಿಲ್ಲ, ಇವೆಲ್ಲವೂ ಅವರ ತಲೆಯನ್ನು ಕೊರೆಯುತ್ತಿರಬಹುದು. ಇಂತಹ ಪರಿಸ್ಥಿತಿಯ ನಡುವೆ ಈ ಮಹತ್ವದ ಪಂದ್ಯದಲ್ಲಿ ತಂಡವನ್ನು ಹೇಗೆ ಯಶಸ್ಸಿನತ್ತ ಮುನ್ನಡೆಸುವರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಬಿಗಿ ಭದ್ರತೆ:
ಪಂದ್ಯಕ್ಕೆ ಅಡ್ಡಿಪಡಿಸುವುದಾಗಿ ಕೆಲವು ಸಂಘಟನೆಗಳು ಬೆದರಿಕೆ ಹಾಕಿರುವ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣ ಪೊಲೀಸರ ಭದ್ರ ಕೋಟೆಯಾಗಿ ಪರಿವರ್ತನೆಗೊಂಡಿದೆ. ಅತಿಯಾದ ಭದ್ರತೆಯು ಪಂದ್ಯ ನೋಡಲು ಆಗಮಿಸುವವರಿಗೆ ಅಲ್ಪ ಕಿರಿಕಿರಿ ಉಂಟುಮಾಡಲಿದೆ. ಆದರೆ ಇದನ್ನು ಲೆಕ್ಕಿಸದೆ ಆಟದ ಸೊಬಗು ಸವಿಯುವ ಲೆಕ್ಕಾಚಾರದೊಂದಿಗೆ ಜನಸಾಗರ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಹರಿದುಬರಲಿದೆ. ಕ್ರಿಸ್‌ಮಸ್ ದಿನದಂದು ಕಿಕ್ಕಿರಿದು ನೆರೆಯಲಿರುವ ಪ್ರೇಕ್ಷಕರಿಗೆ ರಸದೌತಣ ಉಣಬಡಿಸುವ ಜವಾಬ್ದಾರಿ ದೋನಿ ಬಳಗದ ಮೇಲಿದೆ.

ಭಾರತಕ್ಕೆ ಇತಿಹಾಸದ ಬಲ
ಭಾರತ ಮತ್ತು ಪಾಕಿಸ್ತಾನ ತಂಡಗಳು ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಇದುವರೆಗೆ ಮೂರು ಸಲ ಪರಸ್ಪರ ಎದುರಾಗಿವೆ. ಎಲ್ಲ ಪಂದ್ಯಗಳಲ್ಲೂ ಗೆಲುವಿನ ನಗು ಬೀರಿರುವ ಭಾರತ, ಇಲ್ಲೂ ಅಜೇಯ ಓಟವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.

2007ರ ಟಿ-20 ವಿಶ್ವಕಪ್ ಟೂರ್ನಿಯ ಎರಡೂ ಪಂದ್ಯಗಳನ್ನು ಭಾರತ ಜಯಿಸಿತ್ತು. ಲೀಗ್ ಹಂತದ ಹೋರಾಟ `ಟೈ'ನಲ್ಲಿ ಅಂತ್ಯಕಂಡಿತ್ತು. ಆದರೆ `ಬೌಲ್ ಔಟ್'ನಲ್ಲಿ ಭಾರತ ಗೆಲುವು ಪಡೆದಿತ್ತು. ಮಾತ್ರವಲ್ಲ ಅದೇ ಟೂರ್ನಿಯ ಫೈನಲ್‌ನಲ್ಲಿ ಐದು ರನ್‌ಗಳಿಂದ ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್ ಆಗಿತ್ತು.

ಶ್ರೀಲಂಕಾದಲ್ಲಿ ನಡೆದ 2012ರ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತ `ಸಾಂಪ್ರದಾಯಿಕ ಎದುರಾಳಿ'ಗಳ ವಿರುದ್ಧ ಎಂಟು ವಿಕೆಟ್‌ಗಳ ಜಯ ಸಾಧಿಸಿತ್ತು. ಆದರೆ ಕೇವಲ ಒಂದೆರಡು ಓವರ್‌ಗಳಲ್ಲಿ ಪಂದ್ಯದ ಗತಿಯೇ ಬದಲಾಗುವ ಟ್ವಿಂಟಿ-20 ಪ್ರಕಾರದಲ್ಲಿ ಇತಿಹಾಸಕ್ಕೆ ಯಾವುದೇ ಮಹತ್ವವಿಲ್ಲ ಎಂಬುದು ಎರಡೂ ತಂಡಗಳ ಆಟಗಾರರಿಗೆ ತಿಳಿದಿದೆ.

`ತಂಡದಲ್ಲಿ ಯುವ ಆಟಗಾರರಿದ್ದಾರೆ. ಅವರ ಪ್ರತಿಭೆಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಅದರ ಬದಲು ಅವರ ಮೇಲೆ ಒತ್ತಡ ಹೇರಬಾರದು.  ಮಹೇಂದ್ರ ಸಿಂಗ್ ದೋನಿ

`ಪಿಸಿಬಿ ರಾಷ್ಟ್ರೀಯ ಆಯ್ಕೆ ಸಮಿತಿ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಿದೆ. ಭಾರತದ ನೆಲದಲ್ಲಿ ಯಶಸ್ಸು ಗಳಿಸುವ ವಿಶ್ವಾಸ ಈ ತಂಡಕ್ಕಿದೆ'
ಮೊಹಮ್ಮದ್ ಹಫೀಜ್

ತಂಡಗಳು ಇಂತಿವೆ

ಭಾರತ
ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ಅಜಿಂಕ್ಯ ರಹಾನೆ, ಯುವರಾಜ್   ಸಿಂಗ್, ರೋಹಿತ್ ಶರ್ಮ, ಸುರೇಶ್ ರೈನಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜ, ಆರ್. ಅಶ್ವಿನ್, ಅಶೋಕ್ ದಿಂಡಾ, ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಪರ್ವಿಂದರ್ ಅವಾನ, ಪಿಯೂಷ್ ಚಾವ್ಲಾ, ಅಂಬಟಿ ರಾಯುಡು

ಪಾಕಿಸ್ತಾನ
ಮೊಹಮ್ಮದ್ ಹಫೀಜ್ (ನಾಯಕ), ಅಹ್ಮದ್ ಶೆಹಜಾದ್, ಅಸದ್ ಅಲಿ, ಜುನೈದ್ ಖಾನ್, ಕಮ್ರನ್ ಅಕ್ಮಲ್, ಮೊಹಮ್ಮದ್ ಇರ್ಫಾನ್, ನಾಸಿರ್ ಜಮ್‌ಶೆದ್, ಸಯೀದ್ ಅಜ್ಮಲ್, ಶಾಹಿದ್ ಅಫ್ರಿದಿ, ಶೋಯಬ್ ಮಲಿಕ್, ಸೊಹೇಲ್ ತನ್ವೀರ್, ಉಮರ್ ಅಕ್ಮಲ್, ಉಮರ್ ಅಮೀನ್, ಉಮರ್ ಗುಲ್, ಜುಲ್ಫಿಕರ್ ಬಾಬರ್

ಅಂಪೈರ್: ಎಸ್. ರವಿ ಹಾಗೂ ಶಂಸುದ್ದೀನ್; ಮೂರನೇ ಅಂಪೈರ್: ವಿನೀತ್ ಕುಲಕರ್ಣಿ; ಮ್ಯಾಚ್ ರೆಫರಿ: ರೋಶನ್ ಮಹಾನಾಮ
ಪಂದ್ಯದ ಆರಂಭ: ರಾತ್ರಿ 7.00ಕ್ಕೆ. ನೇರ ಪ್ರಸಾರ: ಸ್ಟಾರ್ ಕ್ರಿಕೆಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT