ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಬಹುಸಂಸ್ಕೃತಿ ದೇಶ: ಶಿವಮೊಗ್ಗ ಸುಬ್ಬಣ್ಣ

Last Updated 15 ಅಕ್ಟೋಬರ್ 2011, 9:35 IST
ಅಕ್ಷರ ಗಾತ್ರ

ದಾವಣಗೆರೆ:  ಭಾರತ ಬಹುಸಂಸ್ಕೃತಿ ದೇಶ. ಆದ್ದರಿಂದಲೇ ಈ ನೆಲದಲ್ಲಿ ಸಂತ ಶಿಶುನಾಳ ಶರೀಫರಂತಹ ದಾರ್ಶನಿಕರು ಹುಟ್ಟಿಬೆಳೆದರು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕ ಡಾ.ಶಿವಮೊಗ್ಗ ಸುಬ್ಬಣ್ಣ ಅಭಿಪ್ರಾಯಪಟ್ಟರು.

ನಗರದ ಬಾಪೂಜಿ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ ವರ್ಷದ ಅಂಗವಾಗಿ ಶುಕ್ರವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತ ಹಿಂದೂ ದೇಶ ಅಲ್ಲ; ಅದು ಬಹು ಸಂಸ್ಕೃತಿ ಹಾಗೂ ಬಹು ಧರ್ಮಗಳ ರಾಷ್ಟ್ರ. ಆದ್ದರಿಂದಲೇ ಇಲ್ಲಿ ಸಂತ ಕಬೀರ, ಸಂತ ಶಿಶುನಾಳ ಶರೀಫರಂತವರು ತಮ್ಮ ಪ್ರತಿಭೆಯಿಂದ ಇಂದಿಗೂ ಜನಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.

ಸಂತ ಶಿಶುನಾಳ ಶರೀಫ ಅವರು ಜನಪರ ಕವಿಯಾಗಿದ್ದವರು. ಅವರ ರಚನೆಗಳಲ್ಲಿ ಮಾನವೀಯ ಮೌಲ್ಯಗಳು ಎದ್ದು ಕಾಣುತ್ತವೆ. ಅದೇ ರೀತಿ ರಾಷ್ಟ್ರಕವಿ ಕುವೆಂಪು ಅವರೂ ಸಹ ತಮ್ಮ ರಚನೆಗಳಲ್ಲಿ ವಿಶ್ವಮಾನವ ತತ್ವಗಳನ್ನು ತಿಳಿಸಿದ್ದಾರೆ.

ಅವರ ಕವಿತೆಗಳಲ್ಲಿ ವಿನಯವಂತಿಕೆ ಕಾಣುತ್ತದೆ. ಇಂದಿನ ಕಾಲದಲ್ಲಿ ಪ್ರಶಸ್ತಿಯೊಂದು ಸಿಕ್ಕರೆ ಮನುಷ್ಯ ಅಹಂಕಾರದಲ್ಲಿ ಮೆರೆಯುತ್ತಾನೆ. ಆದರೆ, ಕುವೆಂಪು ಅವರು ತಾನು ಗಳಿಸಿರುವುದೆಲ್ಲವೂ ಭಗವಂತನ ಕರುಣೆಯಿಂದ ಎಂದು ತಮ್ಮ ರಚನೆಯೊಂದರಲ್ಲಿ ಹೇಳುತ್ತಾರೆ. ಇವರೆಲ್ಲರ ಗೀತೆಗಳನ್ನು ಆಲಿಸುವುದರಿಂದ ಮನರಂಜನೆಗಿಂತ ಮಿಗಿಲಾಗಿ ಮನೋವಿಕಾಸ ಆಗುತ್ತದೆ ಎಂದರು.

ಕೋಡಗನಾ ಕೋಳಿ ನುಂಗಿತ್ತಾ..., ಬಿದ್ದಿಯಬ್ಬೇ ಮುದುಕಿ..., ಕಾಡುಕುದುರೆ..., ಆನಂದಮಯ... ಮುಂತಾದ ಜನಪ್ರಿಯ ಗೀತೆಗಳನ್ನು ಹಾಡಿ ಸಭಿಕರ ಮನರಂಜಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹಾಗೂ ಸಂಸ್ಥೆಯ ಗೌರವ ಕಾರ್ಯದರ್ಶಿ ಶಾಮನೂರು ಶಿವಶಂಕರಪ್ಪ, ಸಂಸ್ಥೆಯ ಹುಟ್ಟಿಗೆ ಕಾರಣರಾದ ರಾಜನಳ್ಳಿ ಮದ್ದೂರಾಯರ ಸಾಧನೆಯನ್ನು ಸ್ಮರಿಸಿದರು.

ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳೆಯಲು ಆಡಳಿತ ಮಂಡಳಿಯ ಎಲ್ಲಾ ಸಹೋದ್ಯೋಗಿಗಳ ಸಹಕಾರ ಕಾರಣ ಎಂದ ಅವರು, ಸಂಸ್ಥೆಯ ಎಲ್ಲಾ ಉದ್ಯೋಗಿಗಳು ಮುಂದೆಯೂ ಇದೇ ರೀತಿ ಪರಿಶ್ರಮದಿಂದ ಕೆಲಸ ಮಾಡಿ ಇನ್ನೂ ಹೆಚ್ಚಿನ ಬೆಳವಣಿಗೆಗೆ ಸಹಕಾರಿಯಾಗಲು ಕೋರಿದರು.

ಸುವರ್ಣಮಹೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾಸಲ್ ಎಸ್. ವಿಠ್ಠಲ್, ಎ.ಸಿ. ಜಯಣ್ಣ, ಆರ್.ಎಲ್. ರಮಾನಂದ್, ಕೆ. ಷಡಾಕ್ಷರಪ್ಪ, ವೈ. ವೃಷಭೇಂದ್ರಪ್ಪ ಹಾಜರಿದ್ದರು. ಕುಮಾರಿ ರಕ್ಷಾ ಹಾಗೂ ಅಮಿತ್ ಶೇಖರ್ ಪ್ರಾರ್ಥಿಸಿದರು. ಎಂ.ಜಿ. ಈಶ್ವರಪ್ಪ ಸ್ವಾಗತಿಸಿದರು. ಮುರುಗೇಶ್ ಬಾಬು ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT