ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ-ಮಲೇಷ್ಯಾ ವಾಣಿಜ್ಯ ಒಪ್ಪಂದ

Last Updated 18 ಫೆಬ್ರುವರಿ 2011, 17:00 IST
ಅಕ್ಷರ ಗಾತ್ರ

ಕ್ವಾಲಾಲಂಪುರ (ಪಿಟಿಐ): ಆಗ್ನೇಯ ಏಷ್ಯಾ ದ್ವಿಪಕ್ಷೀಯ ವಾಣಿಜ್ಯ ವಹಿವಾಟು ಅಭಿವೃದ್ಧಿಗಾಗಿ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (ಸಿಇಸಿಎ)   ಭಾರತ ಮತ್ತು ಮಲೇಷ್ಯಾ ಶುಕ್ರವಾರ ಇಲ್ಲಿ ಸಹಿ ಹಾಕಿವೆ.

ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ ಶರ್ಮಾ ಮತ್ತು ಮಲೇಷ್ಯಾದ ವಾಣಿಜ್ಯ ಸಚಿವ ಮುಸ್ತಫಾ ಮಹಮ್ಮದ್ ಈ ಆರ್ಥಿಕ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದರು. ಮಲೇಷ್ಯಾ ಪ್ರಧಾನಿ ನಜೀಬ್ ರಜಾಕ್ ಮತ್ತು ಎರಡೂ ದೇಶಗಳ ವಾಣಿಜ್ಯ ನಿಯೋಗಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

‘ಮಲೇಷ್ಯಾದ ಜತೆಗಿನ ವಾಣಿಜ್ಯ ವಹಿವಾಟುಗಳಿಗೆ ಭಾರತ ಉತ್ತಮ ಸಹಕಾರ ನೀಡುತ್ತಿದೆ. ಹೊಸ ಪಾಲುದಾರಿಕೆ ಒಪ್ಪಂದವು ಎರಡೂ ದೇಶಗಳ ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಲಿದೆ’ ಎಂದು ನಜೀಬ್ ರಜಾಕ್ ಅಭಿಪ್ರಾಯಪಟ್ಟರು.

ಸುಮಾರು ಏಳು ಸುತ್ತಿನ ಮಾತುಕತೆಯ ನಂತರ ಎರಡೂ ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಮೂಲಕ ಭಾರತದ ಮಾವಿನ ಹಣ್ಣು, ಹತ್ತಿ, ಮೋಟಾರ್ ವಾಹನ, ಟ್ರಕ್, ಬಾಸ್ಮತಿ ಅಕ್ಕಿಗೆ ಮಲೇಷ್ಯಾದಲ್ಲಿ ಆಮದು ಶುಲ್ಕ ಕಡಿಮೆಯಾಗಲಿದೆ. ಹಾಗೆಯೇ ಆಗ್ನೇಯ ಏಷ್ಯಾ ದೇಶಗಳ ಹಣ್ಣುಗಳು, ರಾಸಾಯನಿಕಗಳು ಮತ್ತು ಎಂಜಿನಿಯರಿಂಗ್ ಸರಕುಗಳಿಗೆ  ಭಾರತದ ಮಾರುಕಟ್ಟೆಯಲ್ಲಿ ವ್ಯಾಪಾರ ನಿರ್ಬಂಧ ಸಡಿಲವಾಗಲಿದೆ.

‘ಸಮಗ್ರ ಆರ್ಥಿಕ ಒಪ್ಪಂದದಿಂದ ದೂರಸಂಪರ್ಕ, ಸಂಶೋಧನೆ, ಅಭಿವೃದ್ಧಿ, ಸರಕು ಸಾರಿಗೆ, ಚಿಲ್ಲರೆ ವಹಿವಾಟು ಮತ್ತು ವೃತ್ತಿಪರ ಸೇವೆಗಳು ಮತ್ತಷ್ಟು ಮುಕ್ತವಾಗಲಿದ್ದು, 2015ರ ವೇಳೆಗೆ ಮಲೇಷ್ಯಾ ಜತೆಗಿನ ಭಾರತದ ವಾಣಿಜ್ಯ ವಹಿವಾಟು ಗುರಿ 15 ಶತಕೋಟಿ ಡಾಲರ್‌ಗಳನ್ನು ( ್ಙ 69,000 ಕೋಟಿಗಳಿಗೆ) ತಲುಪಲಿದೆ. ಎರಡೂ ದೇಶಗಳ ನಡುವೆ ಕೌಶಲ್ಯ ಹೊಂದಿದ ಐಟಿ ವೃತ್ತಿಪರರು, ಕಟ್ಟಡ ವಿನ್ಯಾಸಗಾರರು, ಬ್ಯಾಂಕಿಂಗ್ ಸೇವೆಗಳಿಗೆ ಸಂಬಂಧಿಸಿದ ಮಾನವ ಸಂಪನ್ಮೂಲ ವಿನಿಮಯಕ್ಕೆ ಇದು ಅವಕಾಶ ಕಲ್ಪಿಸಲಿದೆ. ಒಪ್ಪಂದದಿಂದ ವಿದೇಶಿ   ಹೂಡಿಕೆ ನೀತಿ ಇನ್ನಷ್ಟು ಉದಾರಿಕರಣಗೊಳ್ಳಲಿದೆ ಎಂದೂ ಶರ್ಮಾ ಹೇಳಿದರು.

2010ನೇ ಸಾಲಿನಲ್ಲಿ ಮಲೇಷ್ಯಾ ಜತೆಗಿನ ಭಾರತದ ರಫ್ತು ವಹಿವಾಟು 6.5 ಶತಕೋಟಿ ಡಾಲರ್ (್ಙ 29,900 ಕೋಟಿ) ಹಾಗೂ ಆಮದು 2.4 ಶತಕೋಟಿ ಡಾಲರ್ ( ್ಙ 11,040 ಕೋಟಿ) ತಲುಪಿದೆ.  ಸದ್ಯ ಮಲೇಷ್ಯಾದಲ್ಲಿ 15.9 ಶತಕೋಟಿ ಡಾಲರ್ (್ಙ 73,600 ಕೋಟಿ) ಮೌಲ್ಯದ ಹೂಡಿಕೆಯನ್ನು ಭಾರತ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT