ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮಹಿಳಾ ತಂಡಕ್ಕೆ ನಿರಾಸೆ

ಹಾಕಿ: ಪೆನಾಲ್ಟಿ ಶೂಟೌಟ್‌ನಲ್ಲಿ ಜಪಾನ್‌ಗೆ ಜಯ
Last Updated 22 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮಹಿಳಾ ತಂಡದವರು ಇಲ್ಲಿ ನಡೆಯುತ್ತಿರುವ `ಹೀರೊ ಹಾಕಿ ವಿಶ್ವ ಲೀಗ್ ರೌಂಡ್-2' ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದರು. ಶುಕ್ರವಾರ ನಡೆದ ಪಂದ್ಯದಲ್ಲಿ ಜಪಾನ್ ಪೆನಾಲ್ಟಿ ಶೂಟೌಟ್‌ನಲ್ಲಿ 3-2 (2-2) ಗೋಲುಗಳಿಂದ ಆತಿಥೇಯ ತಂಡಕ್ಕೆ ಆಘಾತ ನೀಡಿತು.

ಇದೀಗ ಭಾರತ ಮತ್ತು ಜಪಾನ್ ನಾಲ್ಕು ಪಂದ್ಯಗಳಿಂದ 10 ಪಾಯಿಂಟ್ ಕಲೆಹಾಕಿದೆ. ಆದರೆ ಉತ್ತಮ ಗೋಲು ಸರಾಸರಿ ಹೊಂದಿರುವ ಭಾರತ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಶಿಹೊ ಸಕಾಯ್ (4ನೇ ನಿಮಿಷ) ಮತ್ತು ಅಕಿಕೊ ಒಟಾ (31ನಿ.) ಗಳಿಸಿದ ಗೋಲುಗಳ ನೆರವಿನಿಂದ ಜಪಾನ್ ವಿರಾಮದ ವೇಳೆಗೆ 2-0 ರಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಭಾರತ ತಂಡ ಎರಡನೇ ಅವಧಿಯಲ್ಲಿ ಮರುಹೋರಾಟ ನಡೆಸಿತು.

ಸೌಂದರ್ಯಾ (62) ಮತ್ತು ಅನುಪಾ ಬಾರ್ಲಾ (65ನೇ ನಿ.) ಅವರು ಚೆಂಡನ್ನು ಗುರಿ ಸೇರಿಸಿದ ಕಾರಣ ಸಮಬಲ ಸಾಧಿಸಿತು. ನಿಗದಿತ ಅವಧಿಯಲ್ಲಿ ಆ ಬಳಿಕ ಯಾವುದೇ ಗೋಲುಗಳ ದಾಖಲಾಗದ ಕಾರಣ ವಿಜೇತರನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್ ಮೊರೆಹೋಗಲಾಯಿತು.

ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತಕ್ಕೆ ನಿರಾಸೆ ಎದುರಾಯಿತು. ಸೌಂದರ್ಯಾ ಮತ್ತು ರಾಣಿ ರಾಂಪಾಲ್ ಗೋಲು ಗಳಿಸಿದರೆ, ಚಂಚಲ್ ದೇವಿ, ರೀತು ರಾಣಿ ಮತ್ತು ವಂದನಾ ಕಟಾರಿಯಾ ಚೆಂಡನ್ನು ಗುರಿ ಸೇರಿಸಲು ವಿಫಲರಾದರು. ಜಪಾನ್ ಪರ ಪೆನಾಲ್ಟಿ ಶೂಟೌಟ್‌ನಲ್ಲಿ ಮಜುಕಿ ಅರಾಯ್, ಯೂರಿ ನಗಾಯ್ ಹಾಗೂ ರಿಕಾ ಕೊಮಜಾವ ಗೋಲು ಗಳಿಸಲು ಯಶಸ್ವಿಯಾದರು.

ರಷ್ಯಾ, ಮಲೇಷ್ಯಾಕ್ಕೆ ಗೆಲುವು: ದಿನದ ಮೊದಲ ಪಂದ್ಯದಲ್ಲಿ ರಷ್ಯಾ 8-1 ಗೋಲುಗಳಿಂದ ಕಜಕಸ್ತಾನ ತಂಡವನ್ನು ಮಣಿಸಿತು. ವಿರಾಮದ ವೇಳೆಗೆ 2-0 ರಲ್ಲಿ ಮುನ್ನಡೆ ಸಾಧಿಸಿದ್ದ ವಿಜಯಿ ತಂಡ ಆ ಬಳಿಕ ಆರು ೀಲುಗಳನ್ನು ಗಳಿಸಿತು. ಏಕ್ತರೀನಾ ಶಬುರೋವಾ ಮೂರು ಸಲ ಚೆಂಡನ್ನು ಗುರಿ ಸೇರಿಸಿ ರಷ್ಯಾದ ಭಾರಿ ಅಂತರದ ಗೆಲುವಿಗೆ ಕಾರಣರಾದರು.

ಮತ್ತೊಂದು ಪಂದ್ಯದಲ್ಲಿ ಮಲೇಷ್ಯಾ 12-0 ರಲ್ಲಿ ಫಿಜಿ ವಿರುದ್ಧ ಸುಲಭ ಗೆಲುವು ಪಡೆಯಿತು. ನಾದಿಯಾ ಅಬ್ದುಲ್ ರೆಹಮಾನ್ (11, 40 ಮತ್ತು 68ನೇ ನಿಮಿಷ) ಹಾಗೂ ಸಿತಿ ನೂರ್ ಅಮರಿನಾ (44, 66 ಮತ್ತು 69) ತಲಾ ಮೂರು ಗೋಲುಗಳನ್ನು ಗಳಿಸಿ ಮಲೇಷ್ಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT