ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ರತ್ನ ಪಂಡಿತ್ ರವಿಶಂಕರ್ ಇನ್ನಿಲ್ಲ

Last Updated 12 ಡಿಸೆಂಬರ್ 2012, 8:38 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್‌ಎಸ್): ಖ್ಯಾತ ಸಿತಾರ ವಾದಕ, ಭಾರತ ರತ್ನ ಪಂಡಿತ್ ರವಿಶಂಕರ್ ಅವರು ಸ್ಥಳಿಯ ಕಾಲಮಾನ ಮಂಗಳವಾರ ಸಂಜೆ 4.30ರಲ್ಲಿ ಅಮೆರಿಕದಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಈ ವಿಷಯವನ್ನು ಅಮೆರಿಕದಲ್ಲಿರುವ ಭಾರತದ ರಾಯಭಾರಿ ನಿರುಪಮಾರಾವ್ ಅವರು ಟ್ವಿಟರ್ ಮೂಲಕ ಖಚಿತಪಡಿಸಿದ್ದಾರೆ.

ಉಸಿರಾಟದ ತೊಂದರೆಗಾಗಿ ಅವರನ್ನು ಇಲ್ಲಿನ ಸ್ಯಾನ್ ಡಿಯಾಗೋದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪ್ರಾಚೀನ ಭಾರತದ ವಾದ್ಯಗಳಲ್ಲಿ ಒಂದಾದ ಸಿತಾರ್ ಅನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಿದ ಇವರಿಗೆ 1999ರಲ್ಲಿ ಭಾರತ ರತ್ನ ಲಭಿಸಿತ್ತು. 1986ರಿಂದ 1992ರವರೆಗೆ ರಾಜ್ಯಸಭಾ ಸದಸ್ಯರಾಗಿಯೂ ಇವರು ಸೇವೆ ಸಲ್ಲಿಸಿದ್ದರು. ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಇವರಿಗೆ ಮೂರು ಬಾರಿ ಒಲಿದಿತ್ತು.

ಪತ್ನಿ ಸುಕನ್ಯಾ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಸಿತಾರ್ ವಾದಕಿ ಅನುಷ್ಕಾ ಹಾಗೂ ನೋರಾ ಜೋನ್ಸ್ ಅವರನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಅತೀವ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮನಮೋಹನಸಿಂಗ್ ಅವರು ರವಿಶಂಕರ್ ಅವರು ಭಾರತದ ಸಾಂಸ್ಕೃತಿಕ ಪರಂಪರೆಯ ಜಾಗತಿಕ ರಾಯಭಾರಿಯಾಗಿದ್ದರು. ಇವರ ನಿಧನದೊಂದಿಗೆ ಒಂದು ದೊಡ್ಡ ಪರಂಪರೆಯೇ ಮರೆಯಾಯಿತು ಎಂದು ತಮ್ಮ ಶೋಕಸಂದೇಶದಲ್ಲಿ ತಿಳಿಸಿದ್ದಾರೆ.

1920 ರ ಏಪ್ರಿಲ್ 7 ರಂದು ವಾರಣಾಸಿಯಲ್ಲಿ ಜನಿಸಿದ ಇವರು ಬಾಲ್ಯದಲ್ಲೇ ನೃತ್ಯ ತಂಡವೊಂದರ ಜತೆ ದೇಶ ವಿದೇಶ ಸುತ್ತಿ ವಿವಿಧ ರೀತಿಯ ಸಂಗೀತ ಉಪಕರಣಗಳನ್ನು ನುಡಿಸಲು ಕಲಿತರು. ಪ್ರಸಿದ್ಧ ಸಂಗೀತಗಾರರಾದ ಅಲ್ಲಾದ್ದೀನ್ ಖಾನ್ ಅವರ ಬಳಿ ಸಿತಾರ್ ವಾದನವನ್ನು ಅಭ್ಯಾಸ ಮಾಡಿದ ಇವರು ಖ್ಯಾತ ನಿರ್ದೇಶಕ ಸತ್ಯಜಿತ್ ರಾಯ್ ಅವರ ನಿರ್ದೇಶನದ `ಅಪು ಟ್ರಿಲಜಿ' ಹಾಗೂ ರಿಚರ್ಡ್ ನಿರ್ದೇಶನದ `ಗಾಂಧಿ' ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದರು.

1949 ರಿಂದ 1956ರ ವರೆಗೆ ಆಕಾಶವಾಣಿಯಲ್ಲಿ ಸಂಗೀತ ನಿರ್ದೇಶಕರಾಗಿದ್ದ ರವಿಶಂಕರ್ ಅವರು 1960ರ ನಂತರ ವಿದೇಶಗಳಲ್ಲಿ ಭಾರತೀಯ ಸಂಗೀತ ಹೆಚ್ಚು ಜನಪ್ರಿಯಗೊಳಿಸಲು ಅವಿರತ ಶ್ರಮಿಸಿದರು.

ಜಾರ್ಜ್ ಹ್ಯಾರಿಸನ್ ಅವರು ನಿರ್ಮಿಸಿ, ಭಾಗವಹಿಸಿದ್ದ `ಶಂಕರ್ ಕುಟುಂಬ ಹಾಗೂ ಸ್ನೇಹಿತರು' ಮತ್ತು `ಭಾರತದ ಹಬ್ಬಗಳು' ಎಂಬ ಎರಡು ದಾಖಲೆಯ ಆಲ್ಬಂಗಳಿಗೆ ರವಿಶಂಕರ್ ಅವರೇ ಸಂಗೀತ ಸಂಯೋಜಕರಾಗಿದ್ದರು.

ಪ್ರಶಸ್ತಿ, ಪುರಸ್ಕಾರಗಳು;
ದಂತಕಥೆಯೇ ಆಗಿದ್ದ ಪಂಡಿತ್ ರವಿಶಂಕರ್ ಅವರನ್ನು ಹುಡುಕಿಬಂದ ಪ್ರಶಸ್ತಿಗಳು ಹಲವಾರು.

ಇವರು ಸಂಗೀತ ಸಂಯೋಜಿಸಿದ್ದ ಕಾಬೂಲಿವಾಲ ಚಿತ್ರದ ಸಂಗೀತ ಸಂಯೋಜನೆಗೆ ಇವರಿಗೆ 1957ರ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.

1962ರಲ್ಲಿ ಸಂಗೀತ ನಾಟಕ ಅಕಾಡೆಮೆ ಪ್ರಶಸ್ತಿ, 1967ರಲ್ಲಿ ಪದ್ಮಭೂಷಣ, 1981ರಲ್ಲಿ ಪದ್ಮ ವಿಭೂಷಣ, 1999ರಲ್ಲಿ ಭಾರತ ರತ್ನ ಗೌರವ ನೀಡಿ ಭಾರತ ಸರ್ಕಾರ ಸನ್ಮಾನಿಸಿತ್ತು.

1975ರಲ್ಲಿ ಯುನೆಸ್ಕೋ ಅಂತರರಾಷ್ಟ್ರೀಯ ಸಂಗೀತ ಸಮಿತಿಯು ಇವರಿಗೆ ಸಂಗೀತ ಪ್ರಶಸ್ತಿ ನೀಡಿ ಗೌರವ ನೀಡಿತ್ತು. ಅಲ್ಲದೆ ಕಾಳಿದಾಸ್ ಸಮ್ಮಾನ್, ಫುಕುವೊಕ ಏಷ್ಯಾ ಸಂಸ್ಕೃತಿ ಪ್ರಶಸ್ತಿ, ರಾಮನ್ ಮ್ಯಾಗೆಸ್ಸೆ ಪ್ರಶಸ್ತಿ, ಪೋಲಾರ್ ಸಂಗೀತ ಪ್ರಶಸ್ತಿಗಳಲ್ಲದೆ ದೇಶ-ವಿದೇಶಗಳ ಹಲವು ವಿಶ್ವವಿದ್ಯಾನಿಲಯಗು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವ ಸಲ್ಲಿಸಿವೆ. ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಇವರಿಗೆ ಮೂರು ಬಾರಿ ಒಲಿದಿತ್ತು ಅಲ್ಲದೆ 2013ರ ಗ್ರ್ಯಾಮಿ ಪ್ರಶಸ್ತಿಗೂ ಇವರನ್ನೇ ನಾಮನಿರ್ದೇಶನ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT