ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಹಾಕಿ ದಂತಕಥೆ ಕ್ಲಾಡಿಯಸ್ ಇನ್ನಿಲ್ಲ

Last Updated 20 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಭಾರತ ಹಾಕಿ ರಂಗ ಕಂಡ ಅಪರೂಪದ ಆಟಗಾರ ಲೆಸ್ಲಿ ವಾಲ್ಟೆರ್ ಕ್ಲಾಡಿಯಸ್ (85) ಇನ್ನಿಲ್ಲ. ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಅವರು ಗುರುವಾರ ಬೆಳಿಗ್ಗೆ ನಿಧನರಾದರು.

ಇವರು ಭಾರತದ `ಹಾಕಿ ಚಿನ್ನದ ಯುಗ'ದ ಅನನ್ಯ ಆಟಗಾರ.  ಭಾರತ 1948, 52 ಮತ್ತು 56ರಲ್ಲಿ ಕ್ರಮವಾಗಿ ಲಂಡನ್, ಹೆಲ್ಸಿಂಕಿ ಮತ್ತು ಮೆಲ್ಬರ್ನ್ ಗಳಲ್ಲಿ ನಡೆದ ಒಲಿಂಪಿಕ್ಸ್‌ಗಳಲ್ಲಿ ಹಾಕಿ ಸ್ವರ್ಣ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. 1960ರಲ್ಲಿ ರೋಮ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ರಜತ ಪದಕ ಗೆದ್ದ ಭಾರತ ತಂಡಕ್ಕೆ ಇವರು ನಾಯಕರಾಗಿದ್ದರು. ಅತ್ಯುತ್ತಮ ರೈಟ್‌ಹಾಫ್ ಆಟಗಾರರಾಗಿದ್ದ ಇವರ ನೇತೃತ್ವದ ಭಾರತ ತಂಡ ಗಮನಾರ್ಹ ಸಾಮರ್ಥ್ಯ ತೋರಿತ್ತು. 1974 ಮತ್ತು 78ರ ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಭಾರತ ತಂಡದ ಮ್ಯಾನೇಜರ್ ಆಗಿಯೂ ಇವರು ಕಾರ್ಯ ನಿರ್ವಹಿಸಿದ್ದರು. ಕೆಲವು ವರ್ಷಗಳ ಕಾಲ ಇವರು ಭಾರತ ತಂಡದ ಆಯ್ಕೆ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.
 
ಬಿಲಾಸ್‌ಪುರದಲ್ಲಿ 1927ರ ಮಾರ್ಚ್  25ರಂದು ಜನಿಸಿದ ಇವರು ಭಾರತ ಹಾಕಿ ಕಂಡ ದಾಖಲೆ ಸಾಧಕ. ಒಲಿಂಪಿಕ್ಸ್‌ನಲ್ಲಿ ಹೆಚ್ಚು ಸಲ ಆಡಿದ ಮತ್ತು ಹೆಚ್ಚು ಪದಕ ಗಳಿಸಿದ ದಾಖಲೆ ಇವರು ಮತ್ತು ಉಧಾಮ್ ಸಿಂಗ್ ಹೆಸರಲ್ಲಿದೆ. ಭಾರತದ ಪರ ನೂರು ಅಂತರ ರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಮೊದಲ ಸಾಧಕ ಎಂಬ ಹೆಗ್ಗಳಿಕೆ ಇವರದಾಗಿದೆ.  ಮೊದಲಿಗೆ ಬೆಂಗಾಲ್ ರೈಲ್ವೆ ತಂಡದ ಪರ ಫುಟ್‌ಬಾಲ್ ಆಡುತ್ತಿದ್ದ ಇವರು 1945ರ ಸುಮಾರಿಗೆ ಹಾಕಿ ಆಡತೊಡಗಿ ಈ ಕ್ರೀಡೆಯಲ್ಲಿಯೇ ಎತ್ತರದ ಸಾಧನೆ ತೋರಿದರು.
 
ಅವರಿಗೆ ಮೂವರು ಪುತ್ರರು ಮತ್ತು ಪತ್ನಿ ಇದ್ದಾರೆ. ಇಬ್ಬರು ಪುತ್ರರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರೆ, ಇನ್ನೊಬ್ಬ ಪುತ್ರ ಬ್ರಾಂಡನ್ ಕೋಲ್ಕತ್ತಾದಲ್ಲಿ ನೆಲೆಸಿದ್ದಾರೆ.
 
ಕಳೆದ ಹನ್ನೊಂದು ತಿಂಗಳಲ್ಲಿ ಕ್ಲಾಡಿಯಸ್ ತೀವ್ರ ಅಸ್ವಸ್ಥತೆಯಿಂದಾಗಿ ನಾಲ್ಕು ಸಲ ಆಸ್ಪತ್ರೆಗೆ ದಾಖಲಾಗಿದ್ದರು. `ಈಚೆಗೆ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದರಿಂದ ಮೂರು ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದರು. ಆದರೆ ಗುರುವಾರ ಬೆಳಿಗ್ಗೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕೊನೆಯುಸಿರೆಳೆದರು' ಎಂದು ಬ್ರಾಂಡನ್ ಹೇಳಿದ್ದಾರೆ.
 
1971ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಈಚೆಗೆ ನಡೆದ ಲಂಡನ್ ಒಲಿಂಪಿಕ್ಸ್ ಸಂದರ್ಭದಲ್ಲಿ ಆ     ನಗರದ `ನಗರ ರೈಲು ಸಾರಿಗೆ'ಯ ಒಂದು `ಸಬ್‌ವೇ'ಗೆ ಕ್ಲಾಡಿಯಸ್ ಹೆಸರಿಟ್ಟು ಅಲ್ಲಿನ ಒಲಿಂಪಿಕ್ಸ್ ಸಂಸ್ಥೆ ಗೌರವ ತೋರಿತ್ತು.
 
1978ರಲ್ಲಿ ಇವರ ಕಿರಿಯ ಪುತ್ರ ರಾಬರ್ಟ್ ಅವರು ಕಾರು  ಅಪಘಾತದಲ್ಲಿ ಸಾವನ್ನಪ್ಪಿದರು. ರಾಬರ್ಟ್ ಎಪ್ಪತ್ತರ ದಶಕದಲ್ಲಿ ಭಾರತದ ಪ್ರತಿಭಾವಂತ ಆಟಗಾರನಾಗಿದ್ದು, 1978ರಲ್ಲಿ ಮೆಕ್ಸಿಕೊದಲ್ಲಿ ನಡೆದಿದ್ದ ಹಾಕಿ ವಿಶ್ವಕಪ್‌ನಲ್ಲಿ ಆಡಿದ್ದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಆ ದುರಂತ ಕ್ಲಾಡಿಯಸ್ ಅವರನ್ನು ಇನ್ನಿಲ್ಲದಂತೆ ಕಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT