ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಇಂಗ್ಲೆಂಡ್‌ ಸವಾಲು

ಇಂದಿನಿಂದ ವಿಶ್ವ ಹಾಕಿ ಲೀಗ್‌ ಫೈನಲ್ಸ್‌
Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸರ್ದಾರ್‌ ಸಿಂಗ್‌ ಸಾರಥ್ಯದ ಭಾರತ ತಂಡದವರು ಶುಕ್ರವಾರ ಇಲ್ಲಿ ಆರಂಭವಾಗಲಿರುವ ವಿಶ್ವ ಹಾಕಿ ಲೀಗ್‌ ಫೈನಲ್ಸ್‌ನ ತಮ್ಮ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ಪೈಪೋಟಿ ನಡೆಸಲಿದ್ದಾರೆ. 

ಮೇಜರ್‌ ಧ್ಯಾನ್‌ಚಂದ್‌ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ  ಟೂರ್ನಿ ಮುಂಬರುವ ವಿಶ್ವಕಪ್‌ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. ಆದರೆ ಭಾರತದ ಮುಂದೆ ದೊಡ್ಡ ಸವಾಲಿದೆ. ಏಕೆಂದರೆ ಈ ಟೂರ್ನಿಯಲ್ಲಿ ವಿಶ್ವದ ಅಗ್ರ ಆರು ತಂಡಗಳು ಪಾಲ್ಗೊಂಡಿವೆ.

ಒಲಿಂಪಿಕ್‌ ಚಾಂಪಿಯನ್‌ ಜರ್ಮನಿ ಆತಿಥೇಯ ತಂಡವಿರುವ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಜರ್ಮನಿ ಸದ್ಯ ಅಗ್ರ ರ್‍ಯಾಂಕ್‌ ಹೊಂದಿರುವ ತಂಡ. ನಾಲ್ಕನೇ ರ್‍ಯಾಂಕ್‌ನ ಇಂಗ್ಲೆಂಡ್‌, ಏಳನೇ ರ್‍ಯಾಂಕ್‌ನ ನ್ಯೂಜಿಲೆಂಡ್‌ ಕೂಡ ಇದೇ ಗುಂಪಿನಲ್ಲಿವೆ.

ಮುಖ್ಯ ಕೋಚ್‌ ಟೆರ್ರಿ ವಾಲ್ಶ್‌ ಮಾರ್ಗದರ್ಶನದ ಭಾರತ ಸದ್ಯ 10ನೇ ರ್‍ಯಾಂಕ್‌ನಲ್ಲಿದೆ. ಒಟ್ಟು ಎಂಟು ತಂಡಗಳು ಈ ಟೂರ್ನಿಯಲ್ಲಿ ಪೈಪೋಟಿ ನಡೆಸಲಿವೆ. ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳಿವೆ. ‘ಬಿ’ ಗುಂಪಿನಲ್ಲಿರುವ ಅರ್ಜೆಂಟೀನಾ (11ನೇ ಸ್ಥಾನ) ಮಾತ್ರ ಭಾರತಕ್ಕಿಂತ ಕೆಳಗಿನ ರ್‍್ಯಾಂಕ್‌ ಹೊಂದಿದೆ.
ಈ ಟೂರ್ನಿಗೆ ಆತಿಥ್ಯ ವಹಿಸಿರುವುದರಿಂದ ಭಾರತಕ್ಕೆ ಆಡಲು ಅವಕಾಶ ಲಭಿಸಿದೆ. ಏಕೆಂದರೆ ನೇರ ಅರ್ಹತೆ ಗಿಟ್ಟಿಸಲು ಈ ತಂಡದವರು ವಿಫಲರಾಗಿದ್ದರು. ಹಾಗಾಗಿ ಲಭಿಸಿರುವ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವ ವಿಶ್ವಾಸದಲ್ಲಿ ಈ ತಂಡದವರಿದ್ದಾರೆ.

2013ರಲ್ಲಿ ಭಾರತ ತಂಡದವರು ಆರಕ್ಕೇರಿರಲಿಲ್ಲ. ಏಷ್ಯಾ ಕಪ್‌ನಲ್ಲಿ ಲಭಿಸಿದ್ದ ಬೆಳ್ಳಿ ಪದಕ ಹೊರತುಪಡಿಸಿ ದರೆ ಪ್ರಮುಖ ಟೂರ್ನಿಗಳಲ್ಲಿ ವೈಫಲ್ಯ ಕಂಡಿದ್ದರು. ಆ ನಿರಾಸೆಯನ್ನು ಹೋಗಲಾಡಿಸಿ ಈ ವರ್ಷ ಯಶಸ್ಸಿನ ಆರಂಭ ಪಡೆಯಲು ಈ ಟೂರ್ನಿ ಒಂದು ಅತ್ಯುತ್ತಮ ಅವಕಾಶ ಕೂಡ.

ಈ ಟೂರ್ನಿಯಲ್ಲಿ ಪಾಲ್ಗೊಂಡಿರುವ ತಂಡಗಳೆಲ್ಲಾ ಕ್ವಾರ್ಟರ್‌ ಫೈನಲ್‌ ಆಡಲಿವೆ. ಆದರೆ ಅಲ್ಲಿಂದ ಭಾರತಕ್ಕೆ ದೊಡ್ಡ ಸವಾಲು ಎದುರಾಗಲಿದೆ. ಪ್ರಮುಖ ಆಟಗಾರರು ಇರುವ ತಂಡವನ್ನು ಈ ಟೂರ್ನಿಗೆ ಆಯ್ಕೆ ಮಾಡಲಾಗಿದೆ. ಡ್ರ್ಯಾಕ್‌ ಫ್ಲಿಕ್‌ ಪರಿಣತ ವಿ.ಆರ್‌.ರಘುನಾಥ್‌, ಫಾರ್ವರ್ಡ್‌ ಆಟಗಾರ
ಎಸ್‌.ವಿ.ಸುನಿಲ್‌ ಇದ್ದಾರೆ. ಜೊತೆಗೆ ಯುವ ಆಟಗಾರರಾದ ಎಸ್‌.ಕೆ.ಉತ್ತಪ್ಪ, ನಿಕಿನ್‌ ತಿಮ್ಮಯ್ಯ, ಮನ್‌ದೀಪ್‌ ಸಿಂಗ್‌ ಈಗಾಗಲೇ ಭರವಸೆ ಮೂಡಿಸಿದ್ದಾರೆ.
‘ವಿಶ್ವದ ಅತ್ಯುತ್ತಮ ಕೋಚ್‌ ಎನಿಸಿಕೊಂಡಿರುವ ವಾಲ್ಶ್‌ ಮಾರ್ಗದರ್ಶನದಲ್ಲಿ ನಾವು ಈ ಟೂರ್ನಿಗೆ ಸಜ್ಜಾಗಿದ್ದೇವೆ. ಮಿಡ್‌ ಫೀಲ್ಡ್‌ ವಿಭಾಗ ಬಲಿಷ್ಠವಾಗಿದೆ. ಆಕ್ರಮಣಕಾರಿ ಆಟಗಾರರು ನಮ್ಮಲ್ಲಿದ್ದಾರೆ. ಆದರೆ ರಕ್ಷಣಾ ವಿಭಾಗದಲ್ಲಿ ಕೊಂಚ ಸುಧಾರಣೆ ಕಾಣಬೇಕಾಗಿದೆ’ ಎಂದು ನಾಯಕ ಸರ್ದಾರ್‌ ನುಡಿದಿದ್ದಾರೆ.
ಸ್ಟ್ರೈಕರ್‌ ಆ್ಯಷ್ಲೆ ಜಾಕ್ಸನ್ ತಂಡಕ್ಕೆ ಮರಳಿರುವುದು ಇಂಗ್ಲೆಂಡ್‌ ಶಕ್ತಿಯನ್ನು ಹೆಚ್ಚಿಸಿದೆ. ಮಲೇಷ್ಯಾದ ಜೋಹರ್‌ ಬಹ್ರುವಿನಲ್ಲಿ ನಡೆದ ವಿಶ್ವ ಹಾಕಿ ಲೀಗ್‌ ಸೆಮಿಫೈನಲ್ಸ್‌ನಲ್ಲಿ ಈ ತಂಡ ಮೂರನೇ ಸ್ಥಾನ ಪಡೆದಿತ್ತು. 

ಟೂರ್ನಿಯಲ್ಲಿ ಪಾಲ್ಗೊಂಡಿರುವ ತಂಡಗಳು
‘ಎ’ ಗುಂಪು: ಭಾರತ, ಜರ್ಮನಿ, ಇಂಗ್ಲೆಂಡ್‌, ನ್ಯೂಜಿಲೆಂಡ್‌
‘ಬಿ’ ಗುಂಪು: ಆಸ್ಟ್ರೇಲಿಯಾ, ಹಾಲೆಂಡ್, ಬೆಲ್ಜಿಯಂ, ಅರ್ಜೆಂಟೀನಾ

ಭಾರತದ ಪಂದ್ಯಗಳ ವೇಳಾಪಟ್ಟಿ (ಪಂದ್ಯ ಆರಂಭ: ರಾತ್ರಿ 8 ಗಂಟೆಗೆ)
ಜನವರಿ 10: ಭಾರತ–ಇಂಗ್ಲೆಂಡ್‌, ಜ.11: ಭಾರತ–ನ್ಯೂಜಿಲೆಂಡ್‌, ಜ.13: ಭಾರತ–ಜರ್ಮನಿ
ಇಂದಿನ ಇತರ ಪಂದ್ಯಗಳು

‘ಎ’ ಗುಂಪು: ಜರ್ಮನಿ–ನ್ಯೂಜಿಲೆಂಡ್‌ (ಆರಂಭ: ಸಂಜೆ 6 ಗಂಟೆಗೆ)
‘ಬಿ’ ಗುಂಪು: ಆಸ್ಟ್ರೇಲಿಯಾ–ಬೆಲ್ಜಿಯಂ (ಆರಂಭ: ಮಧ್ಯಾಹ್ನ 2  ಗಂಟೆಗೆ) ಹಾಲೆಂಡ್‌–ಅರ್ಜೆಂಟೀನಾ (ಆರಂಭ: ಸಂಜೆ 4 ಗಂಟೆಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT