ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಗೆಲುವು ಅನಿವಾರ್ಯ

ಕ್ರಿಕೆಟ್: ಪಾಕಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯ ಇಂದು
Last Updated 2 ಜನವರಿ 2013, 19:59 IST
ಅಕ್ಷರ ಗಾತ್ರ

ಕೋಲ್ಕತ್ತ: ಸಂಜೆಯಾಗುತ್ತಿದ್ದಂತೆ ಕೊರೆಯುವ ಚಳಿಯಿರುವ ಕೋಲ್ಕತ್ತದಲ್ಲಿ ಈಗ ಭಾರತ ಕ್ರಿಕೆಟ್ ತಂಡದವರು `ಚಳಿ' ಬಿಟ್ಟು ಆಡಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ. ಕಳೆದ ಭಾನುವಾರ ಚೆನ್ನೈನಲ್ಲಿ ಮೊದಲ ಒಂದು ದಿನದ ಪಂದ್ಯವನ್ನು ಸೋತ ಪರಿಣಾಮ, ಪಾಕಿಸ್ತಾನ ವಿರುದ್ಧ ಸರಣಿ ಜೀವಂತವಾಗಿಟ್ಟುಕೊಳ್ಳಬೇಕಾದರೆ ಭಾರತ ತಂಡ ಗುರುವಾರ ಎರಡನೇ ನಡೆಯುವ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಹೊಸ ವರ್ಷದ ಮೊದಲ ಪಂದ್ಯ ಆಡುತ್ತಿರುವ ಭಾರತ ತಂಡ ವಿವಿಧ ರೀತಿಯ ಸಮಸ್ಯೆ ಎದುರಿಸುತ್ತಿದೆ. ಇನ್ನೊಂದು ಕಡೆ ಗೆಲುವಿನೊಡನೆ ಸರಣಿ ಆರಂಭಿಸಿರುವ `ಸಾಂಪ್ರದಾಯಿಕ ಎದುರಾಳಿ' ಪಾಕಿಸ್ತಾನ ಅಷ್ಟೊಂದು ಒತ್ತಡದಲ್ಲಿಲ್ಲ. ಸಾಲದ್ದಕ್ಕೆ ಈ ಪಂದ್ಯ ನಡೆಯುವ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಪ್ರವಾಸಿ ತಂಡ ಹಿತಕರ ನೆನಪುಗಳನ್ನು ಹೊಂದಿದೆ. ಭಾರತ ವಿರುದ್ಧ ಇಲ್ಲಿ ಆಡಿರುವ ಎಲ್ಲ ಮೂರೂ ಪಂದ್ಯಗಳನ್ನು ಪಾಕಿಸ್ತಾನ ಗೆದ್ದುಕೊಂಡಿದೆ.

ಭಾರತ ತಂಡಕ್ಕೆ ಹೆಚ್ಚಿನ ಸಮಸ್ಯೆ ಇರುವುದು ಬ್ಯಾಟಿಂಗ್‌ನಲ್ಲಿ. ತಂಡದ ಅನುಭವಿಗಳ ಜತೆಗೆ ಭವಿಷ್ಯದ ಆಟಗಾರರು ಎನಿಸಿದವರೂ ಕೈಕೊಡುತ್ತಿದ್ದಾರೆ. ವಿರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅವರಿಂದ ಉತ್ತಮ ಆರಂಭ ಸಿಗಬೇಕಾಗಿದೆ. ಶ್ರೀಲಂಕಾ ವಿರುದ್ಧ ಕಳೆದ ಜುಲೈ ವೇಳೆ ಏಕದಿನ ಸರಣಿಯಲ್ಲಿ ಗಂಭಿರ್ ಸಾಕಷ್ಟು ರನ್ ಹರಿಸಿದ್ದರು.

ಸೆಹ್ವಾಗ್, 2011ರ ಡಿಸೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂದೋರ್‌ನಲ್ಲಿ ದಾಖಲೆ 219 ರನ್ ಹೊಡೆದ ನಂತರ ಒಂದೂ ಶತಕ ಗಳಿಸಿಲ್ಲ. ಶ್ರೀಲಂಕಾ ವಿರುದ್ಧ 96 ರನ್ ಬಿಟ್ಟರೆ ಉಳಿದ 9 ಪಂದ್ಯಗಳಲ್ಲಿ ವೀರೂ `ಅಬ್ಬರಿಸಿಲ್ಲ'. ರೋಹಿತ್ ಶರ್ಮಾ ಸ್ಥಾನ ಅಲುಗಾಡುತ್ತಿದೆ. ಇದರಿಂದ ಯುವರಾಜ್ ಸಿಂಗ್ ಮೇಲೆ ಹೆಚ್ಚು ಒತ್ತಡವಿದೆ. ಮೊದಲ ಪಂದ್ಯದಲ್ಲಿ ದೋನಿ ಮತ್ತು ಸುರೇಶ್ ರೈನಾ ಅವರೇ ತಂಡವನ್ನು ಕುಸಿತದಿಂದ ರಕ್ಷಿಸಿದ್ದರು.

ಚೆನ್ನೈನ ಮೊದಲ ಪಂದ್ಯದಲ್ಲಿ ಬೌಲಿಂಗ್ ವೇಳೆ ಕಾಲು ಉಳುಕಿಸಿಕೊಂಡಿದ್ದ ವಿರಾಟ್ ಕೊಹ್ಲಿ ಆಡಲು ಅರ್ಹರಿದ್ದಾರೆ ಎಂದು ದೋನಿ ಖಚಿತಪಡಿಸಿದರು.

ವೇಗದ ಬೌಲರ್ ಇಶಾಂತ್ ಶರ್ಮ ಅವರಿಗೆ ಹೋಲಿಸಿದರೆ ಹೊಸಬರಾದ ಅಶೋಕ್ ದಿಂಡಾ ಮತ್ತು ಭುವನೇಶ್ವರ ಕುಮಾರ್ ಬೌಲಿಂಗ್ ವಿಭಾಗದಲ್ಲಿ ನಿರಾಸೆ ಮೂಡಿಸಿಲ್ಲ. ದಿಂಡಾ ಇಲ್ಲಿನವರೇ. ರವಿಚಂದ್ರನ್ ಅಶ್ವಿನ್ ಜತೆಗೆ ಇನ್ನೊಬ್ಬ ಪರಿಣಿತ ಬೌಲರ್ ಕೊರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಆಲ್‌ರೌಂಡರ್ ರವೀಂದ್ರ ಜಡೇಜ ಸ್ಥಾನ ಪಡೆದರೆ ಆಶ್ಚರ್ಯವಿಲ್ಲ.

ಒಂದು ದಿನದ ಪಂದ್ಯಗಳ ನಿಯಮ ಬದಲಾವಣೆಯಿಂದ ಐದು ಮಂದಿ ಪರಿಣಿತ ಬೌಲರ್‌ಗಳನ್ನು ಹೊಂದಬೇಕೆನ್ನುವ ಬಯಕೆ ತಂಡಕ್ಕೆ ಇದೆ. ಆದರೆ ಈಗ ಇರುವ ಆರು ಬ್ಯಾಟ್ಸ್‌ಮನ್ನರು ಸರಿಯಾಗಿ ಆಡದೇ ಇನ್ನೊಬ್ಬ ಬೌಲರ್‌ಗೆ ಹೇಗೆ ಸ್ಥಾನ ನೀಡಬೇಕು ಎಂಬ ದ್ವಂದ್ವ ದೋನಿ ಅವರದ್ದು.

ಮೊದಲ ಹತ್ತು ಮತ್ತು ಐದು ಓವರುಗಳ ಬ್ಯಾಟಿಂಗ್ ಪವರ್ ಪ್ಲೇ ಅವಧಿ ಬಿಟ್ಟರೆ ಉಳಿದೆಲ್ಲ ಅವಧಿಯಲ್ಲಿ ಕೇವಲ ನಾಲ್ಕು ಮಂದಿ ಮಾತ್ರ `ಬೌಂಡರಿ'ಗಳನ್ನು ಕಾಯಬೇಕಾದ ಪರಿಸ್ಥಿತಿಯಿದೆ. ಉಳಿದ ಐದು ಫೀಲ್ಡರ್‌ಗಳು  20 ಯಾರ್ಡ್ ವೃತ್ತದಲ್ಲೇ ಇರಬೇಕು. ಪಾಕ್ ನಾಯಕ ಮಿಸ್ಬಾ ಉಲ್ ಹಕ್ ಮಾತಿನಲ್ಲಿ ಹೇಳುವುದಾದರೆ `ಇಂಥ ನಿಯಮದಡಿ ಒಂಟಿ ರನ್ (ಸ್ಟ್ರೈಕ್ ರೋಟೆಟ್) ಕಷ್ಟ. ಬೌಂಡರಿ ಬಾರಿಸುವುದು ಸುಲಭ'.

ಹೀಗಾಗಿ ಐದು ಬೌಲರ್‌ಗಳನ್ನು ಹೊಂದಿದರೆ ಉತ್ತಮ ಎನ್ನುವ ಇಂಗಿತ ದೋನಿ ಅವರದು. ಬ್ಯಾಟಿಂಗ್ ಆಲ್‌ರೌಂಡರ್‌ಗಳಿಗೆ ಚೆಂಡು ನೀಡುವುದು ಸುರಕ್ಷಿತ ಉಪಾಯವಲ್ಲ ಎಂಬುದು ಚೆನ್ನೈನಲ್ಲಿ ಅವರ ಅರಿವಿಗೆ ಬಂದಿದೆ.

ಸಮಸ್ಯೆ ಕಡಿಮೆ:
ಪಾಕಿಸ್ತಾನ ತಂಡದಲ್ಲಿ ಆರಂಭ ಆಟಗಾರ ಜಮ್ಷೆದ್ ನಾಸಿರ್, ಅನುಭವಿ ಯೂನಿಸ್ ಖಾನ್, ಶೋಯೆಬ್ ಮಲಿಕ್ ಕಳೆದ ಪಂದ್ಯದಲ್ಲಿ ಉಪಯುಕ್ತ ಕೊಡುಗೆ ನೀಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜುನೇದ್ ಖಾನ್ ಮಿಂಚಿದ್ದಾರೆ. ಉಮರ್ ಗುಲ್ ಅವರ ಅನುಭವವಂತೂ ಇದೆ. ಏಳಡಿ ಒಂದಿಂಚು ಎತ್ತರದ ಮಹಮದ್ ಇರ್ಫಾನ್ ಅವರನ್ನು ಪಾಕ್ `ಬೆದರು ಬೊಂಬೆ' ರೀತಿ ಬಳಸುತ್ತಿದೆ. ಚೆನ್ನೈ ಪಂದ್ಯದಲ್ಲಿ ಅವರ ಕೊನೆಯ ಓವರ್‌ನಲ್ಲಿ ದೋನಿ 21 ರನ್ ಬಾಚಿದ್ದರೂ ಒಟ್ಟಾರೆ ದುಬಾರಿ ಎನಿಸಲಿಲ್ಲ. ಸ್ಪಿನ್ ವಿಭಾಗದಲ್ಲಿ ಸಯೀದ್ ಅಜ್ಮಲ್, ಮಹಮದ್ ಹಫೀಜ್ ಉತ್ತಮ ನಿರ್ವಹಣೆ ನೀಡುತ ಬಂದಿದ್ದಾರೆ. ಹೀಗಾಗಿ ಪಾಕ್ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ.

ಕೆಲವು ಆಟಗಾರರ ಸ್ಫೂರ್ತಿಯುತ ಪ್ರದರ್ಶನ ಮಾತ್ರ ಭಾರತ ತಂಡಕ್ಕೆ ಚೈತನ್ಯ ತುಂಬಬಲ್ಲದು. ಇಲ್ಲಿ ಗೆದ್ದರೆ ಕೊನೆಯ ಪಂದ್ಯದಲ್ಲೂ ಆಸಕ್ತಿ ಉಳಿಸಬಹುದು.

ಕತ್ತಲಾಗುತ್ತಿರುವಂತೆ ಇಬ್ಬನಿ ಬೀಳುವುದರಿಂದ ಈ ಹಗಲು ರಾತ್ರಿ ಪಂದ್ಯವನ್ನು ಬೇಗನೇ- ಅಂದರೆ ಮಧ್ಯಾಹ್ನ 12 ಗಂಟೆಗೆ ಆರಂಭಿಸಲಾಗುತ್ತಿದೆ. ಪಿಚ್ ಬ್ಯಾಟ್ಸಮನ್ನರಿಗೆ ಅನುಕೂಲವಾಗುವ ನಿರೀಕ್ಷೆಯಿದ್ದು, ರಾತ್ರಿ ಇಬ್ಬನಿಯ ಸಮಸ್ಯೆಯಿಂದ ಮೊದಲು ಆಡುವ ತಂಡಕ್ಕೆ ಅನುಕೂಲವಾಗುವ ಸಾಧ್ಯತೆ ಇದೆ.

ತಂಡಗಳು:
ಭಾರತ: ಎಂ.ಎಸ್.ದೋನಿ (ನಾಯಕ), ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್,  ಸುರೇಶ್ ರೈನಾ, ರೋಹಿತ್ ಶರ್ಮ, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮ, ಭುವನೇಶ್ವರ ಕುಮಾರ್, ಅಶೋಕ್ ದಿಂಡಾ.

ಪಾಕಿಸ್ತಾನ: ಮಿಸ್ಬಾ ಉಲ್ ಹಕ್ (ನಾಯಕ), ನಾಸಿರ್ ಜಮ್ಷೆದ್, ಮಹಮದ್ ಹಫೀಜ್, ಅಜರ್ ಅಲಿ, ಯೂನಿಸ್ ಖಾನ್, ಶೋಯೆಬ್ ಮಲಿಕ್, ಕಮ್ರಾನ್ ಅಕ್ಮಲ್, ಸಯೀದ್ ಅಜ್ಮಲ್, ಜುನೇದ್ ಖಾನ್, ಉಮರ್ ಗುಲ್, ಮಹಮದ್ ಇರ್ಫಾನ್
ಅಂಪೈರ್ಸ್: ಬಿಲಿ ಬೌಡೆನ್ ಮತ್ತು ಎಸ್.ರವಿ. ಮೂರನೇ ಅಂಪೈರ್: ವಿನೀತ್ ಕುಲಕರ್ಣಿ.
ಪಂದ್ಯದ ಆರಂಭ: ಮಧ್ಯಾಹ್ನ 12.00 ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT