ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಗೆಲುವು ಅನಿವಾರ್ಯ

ಕ್ರಿಕೆಟ್: ಇಂದು ಲಂಕಾ ಜೊತೆ ಮಹತ್ವದ ಪೈಪೋಟಿ
Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ಪೋರ್ಟ್ ಆಫ್ ಸ್ಪೇನ್ (ಪಿಟಿಐ): ಭಾರತ ತಂಡದವರು ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಕೊನೆಯ ಲೀಗ್ ಪಂದ್ಯದಲ್ಲಿ ಮಂಗಳವಾರ ಶ್ರೀಲಂಕಾ ತಂಡದ ಸವಾಲನ್ನು ಎದುರಿಸಲಿದ್ದಾರೆ. ಫೈನಲ್ ಪ್ರವೇಶಿಸಬೇಕಾದರೆ ವಿರಾಟ್ ಕೊಹ್ಲಿ ಬಳಗಕ್ಕೆ ಈ ಪಂದ್ಯದಲ್ಲಿ ಗೆಲುವು ಪಡೆಯುವುದು ಅನಿವಾರ್ಯ.
ಭಾರತ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಆದರೆ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿಕೊಂಡಿತ್ತು.

ಮೂರು ಪಂದ್ಯಗಳನ್ನಾಡಿರುವ ವಿಂಡೀಸ್ ತಂಡದ ಬಳಿ ಒಂಬತ್ತು ಪಾಯಿಂಟ್‌ಗಳಿವೆ. ಭಾರತ ಇಷ್ಟೇ ಪಂದ್ಯಗಳಿಂದ ಐದು ಪಾಯಿಂಟ್ ಹೊಂದಿದೆ. ಎರಡು ಪಂದ್ಯಗಳನ್ನಾಡಿರುವ ಲಂಕಾ ಬಳಿ ಐದು ಪಾಯಿಂಟ್‌ಗಳಿವೆ. ಆದ್ದರಿಂದ ಭಾರತಕ್ಕೆ ಫೈನಲ್ ಪ್ರವೇಶಿಬೇಕಾದರೆ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ಫಲಿತಾಂಶವನ್ನು ಅವಲಂಬಿಸುವುದು ಕೂಡಾ ಅಗತ್ಯ. ಭಾನುವಾರ ನಡೆಯಬೇಕಿದ್ದ ವಿಂಡೀಸ್- ಲಂಕಾ ಪಂದ್ಯವನ್ನು ಮಳೆಯ ಕಾರಣ ಸೋಮವಾರಕ್ಕೆ ಮುಂದೂಡಲಾಗಿತ್ತು. ಈ ಪಂದ್ಯ ರದ್ದುಗೊಂಡರೆ, ಉಭಯ ತಂಡಗಳು ತಲಾ ಎರಡು ಪಾಯಿಂಟ್‌ಗಳನ್ನು ಪಡೆಯಲಿವೆ.

ವಿಂಡೀಸ್ ವಿರುದ್ಧ ಲಂಕಾ ಗೆದ್ದರೆ, ಭಾರತದ ಫೈನಲ್ ಹಾದಿ ಮತ್ತಷ್ಟು ಕಠಿಣವಾಗಲಿದೆ. ಹಾಗಾದಲ್ಲಿ ಕೊಹ್ಲಿ ಬಳಗ ಮಂಗಳವಾರ ಬೋನಸ್ ಪಾಯಿಂಟ್‌ನೊಂದಿಗೆ ಗೆಲುವು ಪಡೆಯುವುದು ಅಗತ್ಯ. ಭಾರತ ತಂಡ ತನ್ನ ಕೊನೆಯ ಪಂದ್ಯದಲ್ಲಿ ವಿಂಡೀಸ್ ಎದುರು ಭರ್ಜರಿ ಗೆಲುವು ಪಡೆದಿತ್ತು. ಮಳೆಯಿಂದ ತೊಂದರೆಗೊಳಗಾದ ಪಂದ್ಯದಲ್ಲಿ ಕೊಹ್ಲಿ ಬಳಗ ಡಕ್ವರ್ಥ್ ಲೂಯಿಸ್ ನಿಯಮದಂತೆ 102 ರನ್‌ಗಳ ಜಯ ಸಾಧಿಸಿತ್ತು. ಈ ಗೆಲುವು ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಕೊಹ್ಲಿ ಆಕರ್ಷಕ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಮೊದಲ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಶಿಖರ್ ಧವನ್ ಕೂಡಾ ಲಯ ಕಂಡುಕೊಂಡಿದ್ದರು. ಲಂಕಾ ವಿರುದ್ಧದ ಪಂದ್ಯದಲ್ಲೂ ತಂಡ ಇವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿದೆ. ಏಂಜೆಲೊ ಮ್ಯಾಥ್ಯೂಸ್ ನೇತೃತ್ವದ ಶ್ರೀಲಂಕಾ ತಂಡಕ್ಕೂ ಈ ಪಂದ್ಯದಲ್ಲಿ ಜಯ ಅನಿವಾರ್ಯ. ಆದ್ದರಿಂದ ತುರುಸಿನ ಪೈಪೋಟಿ ನಿರೀಕ್ಷಿಸಲಾಗಿದೆ. 
ಪಂದ್ಯದ ಆರಂಭ: ರಾತ್ರಿ 7.00ಕ್ಕೆ   (ಭಾರತೀಯ ಕಾಲಮಾನ)

ಜಡೇಜಗೆ ಬಿಸಿಸಿಐ ವಾಗ್ದಂಡನೆ?

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ವೇಳೆ ಸುರೇಶ್ ರೈನಾ ಜೊತೆ ಅಂಗಳದಲ್ಲಿ ಮಾತಿನ ಚಕಮಕಿ ನಡೆಸಿದ್ದ ರವೀಂದ್ರ ಜಡೇಜ ಅವರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಾಗ್ದಂಡನೆ ವಿಧಿಸಿರುವುದಾಗಿ ವರದಿಯಾಗಿದೆ. ತಂಡದ ಮ್ಯಾನೇಜರ್ ರಂಜಿಬ್ ಬಿಸ್ವಾಲ್ ಮತ್ತು ಕೋಚ್ ಡಂಕನ್ ಫ್ಲೆಚರ್ ಅವರ ಜೊತೆ ಸಮಾಲೋಚನೆ ನಡೆಸಿ ಘಟನೆಯ ಸಂಪೂರ್ಣ ವಿವರ ತಿಳಿದುಕೊಂಡ ಬಳಿಕ ಬಿಸಿಸಿಐ ಜಡೇಜಗೆ ಅಧಿಕೃತವಾಗಿ ಎಚ್ಚರಿಕೆ ನೀಡಿದೆ ಎಂದು ಕೆಲವು ವೆಬ್‌ಸೈಟ್‌ಗಳು ವರದಿ ಮಾಡಿವೆ.

ವಿಂಡೀಸ್ ವಿರುದ್ಧದ ಪಂದ್ಯದ ವೇಳೆ ಜಡೇಜ ಬೌಲಿಂಗ್‌ನಲ್ಲಿ ರೈನಾ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು. ಇದು ಜಡೇಜ ಕೋಪಕ್ಕೆ ಕಾರಣವಾಗಿತ್ತು. ರೈನಾ ಬಳಿ ತೆರಳಿ ಏನನ್ನೋ ಹೇಳಿದ್ದರು. ಈ ವೇಳೆ ರೈನಾ ಕೂಡಾ ಪ್ರತಿಕ್ರಿಯಿಸಿದ್ದರು. ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದ್ದರು.

`ತಂಡವನ್ನು ಮುನ್ನಡೆಸುವ (ದೋನಿ ಅನುಪಸ್ಥಿತಿಯಲ್ಲಿ) ಅವಕಾಶ ಕಳೆದುಕೊಂಡಿರುವ ಕಾರಣ ನೀನು ಫೀಲ್ಡಿಂಗ್ ಮೇಲಿನ ಆಸಕ್ತಿಯನ್ನೂ ಕಳೆದುಕೊಂಡಿರುವಿ' ಎಂದು ಜಡೇಜ ಅವರು ರೈನಾಗೆ ನುಡಿದದ್ದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT