ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಜಯ ಅನಿವಾರ್ಯ

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯ ಇಂದು
Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಡರ್ಬನ್‌: ಮೊದಲ ಪಂದ್ಯದಲ್ಲಿ ಎದುರಾದ ಸೋಲಿನ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಭಾರತ ತಂಡಕ್ಕೆ ಇದೀಗ ‘ಮಾಡು ಇಲ್ಲವೇ ಮಡಿ’ ಪರಿಸ್ಥಿತಿ ಎದುರಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯ ಇಲ್ಲಿನ ಕಿಂಗ್ಸ್‌ಮೇಡ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿದೆ. ಜೋಹಾನ್ಸ್‌ಬರ್ಗ್‌ನಲ್ಲಿ ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ 141 ರನ್‌ಗಳ ಭಾರಿ ಅಂತರದ ಸೋಲು ಅನುಭವಿಸಿತ್ತು.
ಸರಣಿ ಗೆಲುವಿನ ಕನಸನ್ನು ಜೀವಂತವಾಗಿರಿಸಿಕೊಳ್ಳಲು ಮಹೇಂದ್ರ ಸಿಂಗ್‌ ದೋನಿ ಬಳಗ ಇಂದು ಗೆಲುವು ಪಡೆಯುವುದು ಅನಿವಾರ್ಯ. ಇನ್ನೊಂದು ಸೋಲು ಎದುರಾದರೆ ಸರಣಿ ಆತಿಥೇಯರ ಪಾಲಾಗಲಿದೆ.

ಭಾರತ ತಂಡದ ಆಟಗಾರರು ದಕ್ಷಿಣ ಆಫ್ರಿಕಾದ ಪರಿಸ್ಥಿತಿಗೆ ಹೊಂದಿಕೊಂಡಿಲ್ಲ ಎಂಬುದು ಮೊದಲ ಪಂದ್ಯದಲ್ಲಿ ಸಾಬೀತಾಗಿತ್ತು. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ತಂಡ ಪೂರ್ಣ ವೈಫಲ್ಯ ಅನುಭವಿಸಿತ್ತು. ಇಂದು ಎಲ್ಲ ವಿಭಾಗಗಳಲ್ಲಿ ಚೇತರಿಕೆಯ ಪ್ರದರ್ಶನ ನೀಡುವ ಸವಾಲು ಭಾರತದ ಮುಂದಿದೆ.
ಮೊದಲ ಪಂದ್ಯದಲ್ಲಿ ಡೇಲ್‌ ಸ್ಟೇನ್‌ ಒಳಗೊಂಡಂತೆ ದಕ್ಷಿಣ  ಆಫ್ರಿಕಾದ ವೇಗದ ಬೌಲರ್‌ಗಳ ದಾಳಿಯನ್ನು ಎದುರಿಸಿ ನಿಲ್ಲಲು ಭಾರತದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು. ರೋಹಿತ್‌ ಶರ್ಮ, ಯುವರಾಜ್‌ ಸಿಂಗ್ ಮತ್ತು ಸುರೇಶ್‌ ರೈನಾ ಎದುರಾಳಿ ಬೌಲರ್‌ಗಳು ಹರಿಯಬಿಟ್ಟ ಬೌನ್ಸರ್‌ಗಳಿಗೆ ಬೆದರಿದ್ದರು. ವಿರಾಟ್‌ ಕೊಹ್ಲಿ  ಮತ್ತು ದೋನಿ ಮಾತ್ರ ಅಲ್ಪ ಧೈರ್ಯದ ಆಟ ತೋರಿದ್ದರು.

‘ಕೆಟ್ಟ ಬೌಲಿಂಗ್‌ನಿಂದ ಸೋಲು ಎದುರಾಯಿತು’ ಎಂದು ಮೊದಲ ಪಂದ್ಯದ ಬಳಿಕ ದೋನಿ ತಿಳಿಸಿದ್ದರು. ಆದ್ದರಿಂದ ಈ ಪಂದ್ಯದಲ್ಲಿ ಶಿಸ್ತಿನ ದಾಳಿ ನಡೆಸುವ ಜವಾಬ್ದಾರಿ ಬೌಲರ್‌ಗಳ ಮೇಲಿದೆ. ಎದುರಾಳಿ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುವಂತಹ ವೇಗಿಗಳು ತಂಡದಲ್ಲಿ ಇಲ್ಲದೇ ಇರುವುದು ದೋನಿ ಚಿಂತೆಗೆ ಕಾರಣವಾಗಿದೆ. ಭುವನೇಶ್ವರ್‌ ಕುಮಾರ್‌ ಮತ್ತು ಮೋಹಿತ್‌ ಶರ್ಮ  ಅವರಿಗೆ ಚೆಂಡನ್ನು ಸ್ವಿಂಗ್‌ ಮಾಡುವ ಕಲೆ ತಿಳಿದಿದೆ. ಆದರೆ ಇಬ್ಬರ ಬೌಲಿಂಗ್‌ನಲ್ಲಿ ಅಂತಹ ವೇಗ ಇಲ್ಲ.

ಈ ಕಾರಣ ಮೊದಲ ಪಂದ್ಯದಲ್ಲಿ ಕ್ವಿಂಟನ್‌ ಡಿ ಕಾಕ್‌, ಹಾಶಿಮ್‌ ಆಮ್ಲಾ, ನಾಯಕ ಎಬಿ ಡಿವಿಲಿಯರ್ಸ್‌ ಮತ್ತು ಜೆಪಿ ಡುಮಿನಿ ಅಬ್ಬರದ ಆಟ ತೋರಿದ್ದರು. ಮೊಹಮ್ಮದ್‌ ಶಮಿ ಮಾತ್ರ ಆತಿಥೇಯ ಬ್ಯಾಟ್ಸ್‌ಮನ್‌ಗಳಿಗೆ ಅಲ್ಪ ಸವಾಲೊಡ್ಡುವ ರೀತಿಯಲ್ಲಿ ಬೌಲ್‌ ಮಾಡಿದ್ದರು.
ಪಂದ್ಯದ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT