ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಟೂರ್ನಿ ಗೆಲ್ಲುವ ಸಾಮರ್ಥ್ಯವಿದೆ: ಪ್ರವೀಣ್ ಕುಮಾರ್

Last Updated 1 ಫೆಬ್ರುವರಿ 2011, 17:55 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಆಟಗಾರರಲ್ಲಿ ಉತ್ಸಾಹ ತುಂಬುವ ಹಾಗೂ ನಾಯಕತ್ವದ ಕೌಶಲಗಳನ್ನು ಹೊಂದಿರುವ ನಾಯಕ ಮಹೇಂದ್ರ ಸಿಂಗ್ ದೋನಿ ಕ್ರಿಕೆಟ್‌ನಲ್ಲಿ ಅಮೆರಿಕದ ಅಧ್ಯಕ್ಷ  ಬರಾಕ್ ಒಬಾಮ್ ಎಂದು ಆಲ್‌ರೌಂಡರ್ ಪ್ರವೀಣ್ ಕುಮಾರ್ ಬಣ್ಣಿಸಿದ್ದಾರೆ.

‘ಒತ್ತಡದ ಸಂದರ್ಭವನ್ನು ತುಂಬಾ ಅಚ್ಚುಕಟ್ಟುತನದಿಂದ ನಿಭಾಯಿಸುವ ಜಾಣ್ಮೆ ದೋನಿ ಅವರಲ್ಲಿದೆ. ಒಬಾಮ ಕಪ್ಪು ವರ್ಣದ ಮೊದಲ ಅಧ್ಯಕ್ಷರಾದ ಅವರ ಸಾಧನೆ ಹೇಗೆ ಸ್ಪೂರ್ತಿ ದಾಯಕವೋ ಅದೇ ರೀತಿ ಕ್ರಿಕೆಟ್ ನಲ್ಲಿಯೂ ದೋನಿ ಆ ಮಹತ್ವದ ಸಾಧನೆಯನ್ನು ಮಾಡುತ್ತಿದ್ದಾರೆ. ತಂಡವನ್ನು ಸಮತೋಲನದಲ್ಲಿ ತೂಗಿಸಿಕೊಂಡು ಹೋಗುವ ಚಾಣಕ್ಷತನ ಅವರಲ್ಲಿದೆ’ ಎಂದು ಪ್ರವೀಣ್ ಕುಮಾರ್ ಹೇಳಿದ್ದಾರೆ.

ಈ ಸಲದ ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಭಾರತ ಗೆಲ್ಲುವುದೇ ಎನ್ನುವ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಸದ್ಯದ ಭಾರತ ತಂಡ ಅತ್ಯುತ್ತಮವಾಗಿದೆ. ಟೂರ್ನಿ ಗೆಲ್ಲುವ ಎಲ್ಲಾ ಅವಕಾಶಗಳು ತಂಡಕ್ಕಿದೆ. ಆ ಸಾಮರ್ಥ್ಯವು ಭಾರತ ತಂಡ ಹೊಂದಿದೆ. ಪ್ರಶಸ್ತಿ ಗೆಲ್ಲಬೇಕು ಎನ್ನುವ ಮಹತ್ವದ ಆಸೆಯಿಂದ ಆಟಗಾರರು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ’ ಎಂದು ಉತ್ತರಿಸಿದರು.

ಭಾರತ ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ತೋರುವುದು ಅವಶ್ಯಕತೆಯಿದೆ. ಅಂದಾಗ ಮಾತ್ರ ಟ್ರೋಫಿ ಗೆಲ್ಲುವುದು ಸುಲಭವಾಗುತ್ತದೆ. ಉಪ ಖಂಡಗಳಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಪಿಚ್‌ಗಳು ಆತಿಥೇಯ ತಂಡಗಳಿಗೆ ಕೊಂಚ ಮಟ್ಟಿಗೆ ನೆರವು ನೀಡಬಹುದು. ಜಹೀರ್ ಖಾನ್ ಹಾಗೂ ಆಶೀಶ್ ನೆಹ್ರಾ ಅವರು ತಂಡದ ಬೌಲಿಂಗ್ ಬಲ ಹೆಚ್ಚಿಸಲಿದ್ದಾರೆ. ಒತ್ತಡದ ಸನ್ನಿವೇಶಗಳಲ್ಲಿ ಈ ಇಬ್ಬರೂ ಆಟಗಾರರು ನನ್ನ ನೆರವಿಗೆ ದಾವಿಸುತ್ತಾರೆ. ಅಗತ್ಯ ಸಲಹೆಯನ್ನೂ ನೀಡುತ್ತಾರೆ ಎಂದು ಪ್ರವೀಣ್ ಹೇಳಿದರು.

ಜಹೀರ್ ಹಾಗೂ ನೆಹ್ರಾ ಅವರು ತಂಡವನ್ನು ಒತ್ತಡದಿಂದ ಪಾರು ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಈ ಟೂರ್ನಿಯಲ್ಲಿ ನಾನು ಕೂಡ ನನ್ನ ಸಾಮರ್ಥ್ಯವನ್ನು ಮೀರಿ ಆಡಲು ಯತ್ನಿಸುತ್ತೇನೆ. ಮೊದಲ ವಿಶ್ವಕಪ್ ಟೂರ್ನಿ ಆಡುತ್ತಿರುವ ನನಗೆ ನಿಜಕ್ಕೂ ಸಂತಸವಾಗಿದೆ. ನಿರೀಕ್ಷೆಯಂತೆ ಉತ್ತಮ ಆಟವಾಡಿ ತಂಡಕ್ಕೆ ಯಶಸ್ಸು ದೊರಕಿಸಿ ಕೊಡುವಲ್ಲಿ ಯತ್ನಿಸುತ್ತೇನೆ ಎಂದು ಅವರು ನುಡಿದರು.

ಬ್ಯಾಟಿಂಗ್ ಮತ್ತು ಟಾಸ್ ಮುಖ್ಯ: ಭಾರತ ಈ ಸಲದ ವಿಶ್ವಕಪ್ ಟೂರ್ನಿ ಯಲ್ಲಿ ಯಶಸ್ಸು ಕಾಣಲು ಬ್ಯಾಟಿಂಗ್ ವಿಭಾಗದಲ್ಲಿ ಮಿಂಚುವುದು ಹಾಗೂ ಟಾಸ್ ಗೆಲ್ಲುವುದು ಅತ್ಯಂತ ಮುಖ್ಯ ವೆನಿಸುತ್ತದೆ ಎಂದು ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅಭಿಪ್ರಾಯ ಪಟ್ಟಿದ್ದಾರೆ.

ಮೊದಲು ಟಾಸ್ ಗೆಲ್ಲಬೇಕು; ಅದರಲ್ಲೂ ಆತಿಥೇಯ ನಮ್ಮ ಪಿಚ್‌ಗಳಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಮಿಂಚಬೇಕು. ಮೊದಲು ಬ್ಯಾಟ್ ಮಾಡಿದರೆ ಎದುರಾಳಿ ತಂಡಕ್ಕೆ 300 ರನ್‌ಗಳವರೆಗೆ ಸವಾಲು ಒಡ್ಡಬೇಕು. ಬೌಲರ್‌ಗಳು ತಮ್ಮ ವಿಭಾಗದಲ್ಲಿ ಶ್ರಮಿಸಬೇಕು ಎಂದು ಅವರು ಹೇಳಿದ್ದಾರೆ.

ಈ ಸಲದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಉತ್ತಮ ಪ್ರದರ್ಶನ ತೋರ ಲಿದೆ ಎನ್ನುವ ವಿಶ್ವಾಸ ನನ್ನದು. ಭಾರತ ಈ ಸಲ ವಿಶ್ವಕಪ್ ಗೆಲ್ಲುವು ದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ನುಡಿದರು.

ವಿಕೇಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿರುವ ನಾಯಕ ಮಹೇಂದ್ರ ಸಿಂಗ್ ದೋನಿ ಅತ್ಯಂತ ಸಮರ್ಥರಾಗಿದ್ದಾರೆ. ಅವರೊಬ್ಬ ಆಲ್‌ರೌಂಡರ್ ಎಂದು ಮೆಚ್ಚುಗೆ ಸೂಚಿಸಿದರು.

ಯಶಸ್ಸಿನ ಹಾದಿಯಲ್ಲಿ ಸಾಗಬೇಕಾದರೆ ತಂಡಕ್ಕೆ ಬಲಿಷ್ಠ ನಾಯಕನ ಅಗತ್ಯವಿದೆ. ಆ ಕೆಲಸವನ್ನು ದೋನಿ ಮಾಡುತ್ತಿದ್ದಾರೆ ಎಂದು ನುಡಿದರು.

ಭಾರತ ಈ ಸಲ ವಿಶ್ವಕಪ್ ಗೆಲ್ಲಬೇಕು ಎನ್ನುವುದು ನನ್ನ ಅಪೇಕ್ಷೆಯು ಹೌದು. ಅದಕ್ಕೆ ಕೆಲ ದಿನಗಳಲ್ಲಿ ಉತ್ತರ ದೊರೆಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT