ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಸತತ ಎರಡನೇ ಗೆಲುವು

ಅಮೆರಿಕ ಪ್ರವಾಸದ ಹಾಕಿ ಸರಣಿ; ಕೆನಡಾ ತಂಡಕ್ಕೆ ಕಾಡಿದ ನಿರಾಸೆ
Last Updated 23 ಜುಲೈ 2016, 22:30 IST
ಅಕ್ಷರ ಗಾತ್ರ

ಮ್ಯಾನ್‌ಹೀಮ್‌, ಅಮೆರಿಕ (ಪಿಟಿಐ): ವಂದನಾ ಕಟಾರಿಯ ಮತ್ತು ದೀಪಿಕಾ ಅವರ ಆಟದಲ್ಲಿ ಅರಳಿದ ತಲಾ ಎರಡು ಗೋಲುಗಳ ಬಲದಿಂದ ಭಾರತ ತಂಡ ಒಲಿಂಪಿಕ್ಸ್‌  ಸಿದ್ಧತೆಗೆ ವೇದಿಕೆ ಎನಿಸಿರುವ ಅಮೆರಿಕ ಪ್ರವಾಸದ ಹಾಕಿ ಸರಣಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.

ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ ತಂಡ  5–2 ಗೋಲುಗಳಿಂದ ಕೆನಡಾ ತಂಡವನ್ನು ಪರಾಭವಗೊಳಿಸಿತು. ಹಿಂದಿನ ಪಂದ್ಯದಲ್ಲಿ ಆತಿಥೇಯ ಅಮೆರಿಕಕ್ಕೆ ಆಘಾತ ನೀಡಿ ವಿಶ್ವಾಸದ ಉತ್ತುಂಗದಲ್ಲಿ ತೇಲುತ್ತಿದ್ದ ಭಾರತದ ವನಿತೆಯರು ಕೆನಡಾ ವಿರುದ್ಧದ ಹೋರಾಟದಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು.

ಹೀಗಾಗಿ ಪ್ರವಾಸಿ ತಂಡ ಮೊದಲ ಕ್ವಾರ್ಟರ್‌ನ ಶುರುವಿನಲ್ಲಿಯೇ ಪೆನಾಲ್ಟಿ ಕಾರ್ನರ್‌ ಅವಕಾಶ ಸೃಷ್ಟಿಸಿಕೊಂಡಿತ್ತು. ಆದರೆ ಇದನ್ನು ಗೋಲಾಗಿ ಪರಿವರ್ತಿಸಲು ಭಾರತ ತಂಡದ ಆಟಗಾರ್ತಿಯರು ವಿಫಲರಾದರು.

ಇಷ್ಟಾದರೂ ಪ್ರವಾಸಿ ಬಳಗದವರು ಎದೆಗುಂದಲಿಲ್ಲ. 9ನೇ ನಿಮಿಷದಲ್ಲಿ ವಂದನಾ ಕಟಾರಿಯಾ, ಫೀಲ್ಡ್‌ ಗೋಲು ಗಳಿಸಿ ತಂಡದ ಖಾತೆ ತೆರೆದರು. ಆರಂಭದಲ್ಲಿಯೇ ಗೋಲು ದಾಖಲಿಸಿ ಮುನ್ನಡೆ ಗಳಿಸಿದ್ದರಿಂದ ಭಾರತ ತಂಡದ ವಿಶ್ವಾಸ ಇನ್ನಷ್ಟು ಇಮ್ಮಡಿಸಿತು. ಇದರ ಬೆನ್ನಲ್ಲೇ ಪೂನಮ್‌ ರಾಣಿ ಚೆಂಡಿನೊಂದಿಗೆ ಎದುರಾಳಿ ತಂಡದ ಆವರಣದೊಳಗೆ ನುಗ್ಗಿದರಾದರೂ  ಕೆನಡಾ ತಂಡದ ರಕ್ಷಣಾ  ವಿಭಾಗದ ಆಟಗಾರ್ತಿಯನ್ನು ವಂಚಿಸಿ ಚೆಂಡನ್ನು ಗುರಿ ಸೇರಿಸಲು ಅವರಿಗೆ ಆಗಲಿಲ್ಲ.

ಆ ನಂತರ ಕೆನಡಾ ತಂಡಕ್ಕೆ ಸಮಬಲದ ಗೋಲು ಗಳಿಸಲು ಉತ್ತಮ ಅವಕಾಶ ಲಭಿಸಿತ್ತು. ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಚೆಂಡನ್ನು ಗುರಿ ಮುಟ್ಟಿಸಲು ಈ ತಂಡದ ಆಟಗಾರ್ತಿ ವಿಫಲರಾದರು.

ಎರಡನೇ ಕ್ವಾರ್ಟರ್‌ನಲ್ಲಿ ಈ ತಂಡ ಪುಟಿದೆದ್ದಿತು. 17ನೇ ನಿಮಿಷದಲ್ಲಿ ಸ್ಟೆಫಾನಿ ನೊರ್ಲಾಂಡರ್‌ ಅವರು ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಕೆನಡಾ ಪಾಳಯದಲ್ಲಿ ನೆಮ್ಮದಿ ತಂದರು.

ಹೀಗಾಗಿ ಎರಡೂ ತಂಡಗಳೂ 1–1ರ ಸಮಬಲದೊಂದಿಗೆ ವಿರಾಮಕ್ಕೆ ಹೋದವು. ಮೂರನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ಯೋಜನೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಕಣಕ್ಕಿಳಿ ದವು. ಹೀಗಾಗಿ ಆರಂಭ ದಿಂದಲೇ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. 38ನೇ ನಿಮಿಷದಲ್ಲಿ ಭಾರತ ತಂಡ ಮತ್ತೆ ಮುನ್ನಡೆ ಕಂಡುಕೊಂಡಿತು. ಇದಕ್ಕೆ ಕಾರಣವಾಗಿದ್ದು ದೀಪಿಕಾ.

ಸಹ ಆಟಗಾರ್ತಿ ನೀಡಿದ ಪಾಸ್‌ನಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಅವರು ಅದನ್ನು ಗುರಿ ಮುಟ್ಟಿಸುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ. ಆದರೆ ಈ ಖುಷಿ ಭಾರತದ ಪಾಳಯದಲ್ಲಿ ಹೆಚ್ಚು ಹೊತ್ತು ಉಳಿಯಲು  ಕೆನಡಾ ತಂಡ ಅವಕಾಶ ನೀಡಲಿಲ್ಲ. 42ನೇ ನಿಮಿಷದಲ್ಲಿ ಬ್ರಿಯೆನ್ನೆ ಸ್ಟೇರ್ಸ್‌ ಗೋಲು ದಾಖಲಿಸಿ ತಂಡ 2–2ರಲ್ಲಿ ಸಮಬಲ ಸಾಧಿಸುವಂತೆ ನೋಡಿಕೊಂಡರು.

ನಾಲ್ಕನೇ ಹಾಗೂ ನಿರ್ಣಾಯಕ ಕ್ವಾರ್ಟರ್‌ನಲ್ಲಿ ಭಾರತದ ಆಟ ಕಳೆಗಟ್ಟಿತು. 49ನೇ ನಿಮಿಷದಲ್ಲಿ ದೀಪಿಕಾ ವೈಯಕ್ತಿಕ ಎರಡನೇ ಗೋಲು ದಾಖಲಿಸಿ ತಂಡದ ಮುನ್ನಡೆ ಹೆಚ್ಚಿಸಿದ ರು. ಇದಾದ ಎರಡು ನಿಮಿಷ ದಲ್ಲಿ ವಂದಾನ ತಂಡದ ಖಾತೆಗೆ ಇನ್ನೊಂದು ಗೋಲು ಸೇರ್ಪಡೆ ಮಾಡಿದರು.

ಇದರೊಂದಿಗೆ 4–2ರ ಮುನ್ನಡೆ ಕಂಡುಕೊಂಡ ಭಾರತ ತಂಡ ಪಂದ್ಯದ ಮೇಲಿನ ಹಿಡಿತ ಬಿಗಿ ಮಾಡಿಕೊಂಡಿತು. ಹೀಗಿದ್ದರೂ ಕೆನಡಾ ತಂಡ ಹೋರಾಟ ಮುಂದುವರಿಸಿತ್ತು. ಈ ತಂಡದ ಆಟಗಾರ್ತಿಯರು ಪದೇ ಪದೇ ಭಾರತದ ಆವರಣದೊಳಗೆ ಪ್ರವೇಶಿಸುತ್ತಿದ್ದರಾದರೂ ಗೋಲು ಗಳಿಸಲು ಮಾತ್ರ ಅವರಿಗೆ ಸಾಧ್ಯವಾಗಲಿಲ್ಲ. 58ನೇ ನಿಮಿಷದಲ್ಲಿ ಪೂನಮ್‌ ರಾಣಿ  ಗೋಲು ದಾಖಲಿಸುತ್ತಿದ್ದಂತೆ  ಭಾರತದ ಪಾಳಯದಲ್ಲಿ ಸಂಭ್ರಮ ಮನೆಮಾಡಿತು.

ಮುಖ್ಯಾಂಶಗಳು
* ವಿರಾಮದ ವೇಳೆಗೆ ಉಭ ಯ ತಂಡಗಳು 1–1ರಲ್ಲಿ ಸಮಬಲ ಹೊಂದಿದ್ದವು
* ವಂದನಾ 9 ಮತ್ತು 51, ದೀಪಿಕಾ 38 ಮತ್ತು 49ನೇ ನಿಮಿಷಗಳಲ್ಲಿ ಗೋಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT