ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಸುಲಭ ಜಯ

Last Updated 20 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಚೆನ್ನೈ: ನಾಲ್ಕು ದಿನಗಳಲ್ಲಿ ಎರಡನೇ ಬಾರಿಗೆ ಸೋಲೆಂಬ ಸುನಾಮಿಯೆದುರು ವೆಸ್ಟ್‌ಇಂಡೀಸ್ ತತ್ತರಿಸಿಹೋಯಿತು. ಭಾರತ ವಿರುದ್ಧ ಗೆಲ್ಲುವ ಅದರ ಗುರಿ ಈಡೇರಲಿಲ್ಲ. ಭಾರತ 80 ರನ್ನುಗಳ ಸುಲಭ ಜಯ ಗಳಿಸುವುದರೊಂದಿಗೆ, ಹತ್ತನೇ ವಿಶ್ವ ಕಪ್ ಕ್ರಿಕೆಟ್ ‘ಬಿ’ ಗುಂಪಿನ ಲೀಗ್‌ನಲ್ಲಿ ಎರಡನೇ ಸ್ಥಾನ ಪಡೆಯಿತು.

ಎಂ.ಎ. ಚಿದಂಬರಮ್ ಕ್ರೀಡಾಂಗಣದಲ್ಲಿ ಗುರುವಾರವಷ್ಟೇ ಇಂಗ್ಲೆಂಡ್ ವಿರುದ್ಧ ಗೆಲುವಿನತ್ತ ಹೆಜ್ಜೆ ಇಟ್ಟು ಮುಗ್ಗರಿಸಿದ್ದ ವೆಸ್ಟ್‌ಇಂಡೀಸ್ ಭಾನುವಾರವೂ ಅದೇ ರೀತಿ ಎಡವಿತು. ಒಂದು ಹಂತದಲ್ಲಿ ಭಾರತದ ಆಟಗಾರರ ಮುಖದಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿದ್ದ ವಿಂಡೀಸ್ ದಿಢೀರನೆ ಕುಸಿಯಿತು. ಭಾರತದ ಕೊನೆಯ ಆಟಗಾರರು ಉರುಳಿದಂತೆಯೇ ವಿಂಡೀಸ್ ಆಟಗಾರರೂ ಬೇಜವಾಬ್ದಾರಿಯಿಂದ ಆಡಿ ವಿಕೆಟ್ ಕಳೆದುಕೊಂಡರು. ಒಂದು ಹಂತದಲ್ಲಿ 2 ವಿಕೆಟ್‌ಗೆ 154 ರನ್ ಮಾಡಿ ಗೆಲುವಿನ ವಿಶ್ವಾಸ ಹೊಂದಿದ್ದ ಆ ತಂಡದ ಕೊನೆಯ ಎಂಟು ವಿಕೆಟ್‌ಗಳು 34 ರನ್‌ಗಳ ಅಂತರದಲ್ಲಿ ಬಿದ್ದವು. ಗೆಲ್ಲಲು 269 ರನ್ ಮಾಡುವ ಸವಾಲಿನೆದುರು, ಕೇವಲ 188 ರನ್ನುಗಳಿಗೆ ಅದರ ಆಟ ಮುಗಿದುಹೋಯಿತು.

ಆರಂಭ ಆಟಗಾರ ಡೆವಾನ್ ಸ್ಮಿತ್ ಒಬ್ಬರೇ ಜವಾಬ್ದಾರಿಯಿಂದ ಆಡಿದವರು. ಅವರಿಗೆ ಡರೆನ್ ಬ್ರಾವೊ ಮತ್ತು ರಾಮನರೇಶ್ ಶರವಣ ಅವರಿಂದ ಸ್ವಲ್ಪ ಬೆಂಬಲ ದೊರೆಯಿತಾದರೂ, ಸುರೇಶ್ ರೈನಾ ಮತ್ತು ಜಹೀರ್ ಖಾನ್ ಜೊತೆಯಾಟಗಳನ್ನು ಮುರಿದು ಭಾರತದ ಕೈಮೇಲಾಗುವಂತೆ ಮಾಡಿದರು.

ಕ್ರೀಡಾಂಗಣದ ಸಮೀಪವೇ ಇರುವ ಸಮುದ್ರ ತೀರದಿಂದ ಹಿತವಾದ ಗಾಳಿ ಬೀಸುತ್ತಿದ್ದರೂ ವಿಂಡೀಸರಿಗೆ ಅದು ಸುನಾಮಿಯ ಅಲೆಗಳಂತೆ ಭಾಸವಾಗಿರಬೇಕು. ಭಾರತದ ಬೌಲರುಗಳು ಹಿಡಿತ ಸಡಿಲಿಸಲೇ ಇಲ್ಲ. ಇದೇ ಮೊದಲ ವಿಶ್ವ ಕಪ್ ಪಂದ್ಯವನ್ನು ಆಡಿದ ಆಫ್‌ಸ್ಪಿನ್ನರ್ ಹಾಗೂ ಚೆನ್ನೈ ಕುವರ ಆರ್. ಅಶ್ವಿನ್ ಕೊನೆಯ ಆಟಗಾರ ರವಿ ರಾಮಪಾಲ್ ಅವರ ಸ್ಟಂಪ್ ಹಾರಿಸುತ್ತಿದ್ದಂತೆಯೇ ಚೆನ್ನೈ ಪ್ರೇಕ್ಷಕರ ಹರ್ಷೋದ್ಗಾರ ಮುಗಿಲುಮುಟ್ಟಿತ್ತು.

ಟಾಸ್ ಗೆದ್ದು ಅನುಮಾನವಿಲ್ಲದೇ ಮೊದಲು ಬ್ಯಾಟ್ ಮಾಡಿದ ಭಾರತ, ಈ ಪಿಚ್ ಮೇಲೆ ಉತ್ತಮ ಎನ್ನಬಹುದಾದ 268 ರನ್ ಗಳಿಸಲು ಯುವರಾಜ್ ಸಿಂಗ್ ಅವರ ಶತಕ ನೆರವಾಯಿತು. ಸಚಿನ್ ವಿಫಲವಾದ ಮೇಲೆ ಭಾರತದ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತುಕೊಂಡ ಯುವರಾಜ್, ಅರ್ಧ ಶತಕ ಗಳಿಸಿದ ವಿರಾಟ್ ಕೊಹ್ಲಿ ಜೊತೆ ಮೂರನೇ ವಿಕೆಟ್‌ಗೆ 143 ಎಸೆತಗಳಲ್ಲಿ 122 ರನ್ ಸೇರಿಸಿದ್ದು ಭಾರತಕ್ಕೆ ಅತ್ಯಮೂಲ್ಯವಾಯಿತು. ವಿಶ್ವ ಕಪ್ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಶತಕ ಗಳಿಸಿದ ಗೌರವಕ್ಕೆ ಪಾತ್ರರಾದ ಯುವರಾಜ್ ಕೊನೆಗೆ ‘ಪಂದ್ಯದ ಆಟಗಾರ’ನೆಂಬ ಹಿರಿಮೆಗೂ ಪಾತ್ರರಾದರು. ಆದರೆ ಯುವರಾಜ್ ಔಟಾದ ಮೇಲೆ ಭಾರತ ಮುನ್ನೂರರ ಸಮೀಪ ತಲುಪುವುದೆಂಬ ನಿರೀಕ್ಷೆಯೂ ಹುಸಿಹೋಯಿತು.

ವೆಸ್ಟ್‌ಇಂಡೀಸ್ ಗೆಲುವಿನ ಗುರಿಯತ್ತ ದಿಟ್ಟ ಹೆಜ್ಜೆಯನ್ನೇ ಇಟ್ಟಿತು. ಡೆವಾನ್ ಸ್ಮಿತ್ ಮತ್ತು ಡರೆನ್ ಬ್ರಾವೊ ಎರಡನೇ ವಿಕೆಟ್‌ಗೆ 57 ರನ್ ಸೇರಿಸಿ ತಂಡವನ್ನು ಬಲಪಡಿಸುವ ಯತ್ನ ಮಾಡಿದರು. ಸ್ಮಿತ್ ಹಾಗೂ ರಾಮನರೇಶ್ ಶರವಣ ನಡುವೆ ಮೂರನೇ ವಿಕೆಟ್ ಜೊತೆಯಾಟ ಬೆಳೆಯುವಂತೆ ಕಂಡಾಗ ಜಹೀರ್ ಖಾನ್ ತಮ್ಮ ಎರಡನೇ ಸರದಿಯ ದಾಳಿಗೆ ಇಳಿದರು. 63 ರನ್ನುಗಳ ಈ ಜೊತೆಯಾಟ ಅವರು ಮುರಿದ ಮೇಲೆ ವಿಂಡೀಸ್ ಚೇತರಿಸಿಕೊಳ್ಳಲೇ ಇಲ್ಲ. ಬಿರುಸಿನ ಹೊಡೆತಗಳ ಆಟಗಾರ ಕೀರನ್ ಪೊಲಾರ್ಡ್ ಅವರನ್ನು ಹರಭಜನ್ ಕಬಳಿಸಿದ ಮೇಲೆ ಹಾಗೂ ನಾಯಕ ಡರೆನ್ ಸಮಿ ಅನಗತ್ಯವಾಗಿ ರನ್‌ಔಟ್ ಆದ ಮೇಲೆ ವಿಂಡೀಸ್ ಆಸೆ ಕಮರಿಹೋಯಿತು. ಉಳಿದ ವಿಕೆಟ್‌ಗಳು ಪಟಪಟನೆ ಬಿದ್ದವು. ಕ್ರಿಸ್‌ಗೇಲ್ ಆಡದೇ ಇದ್ದದ್ದು ವೆಸ್ಟ್ ಇಂಡೀಸ್‌ಗೆ ಹಿನ್ನಡೆಯಾಗಿ ಪರಿಣಮಿಸಿತು.

ಅಶ್ವಿನ್ ಅವರೊಂದಿಗೇ ದಾಳಿ ಆರಂಭಿಸಿದ ದೋನಿ ತಮ್ಮೆಲ್ಲ ಸ್ಪಿನ್ನರುಗಳನ್ನು ಉಪಯೋಗಿಸಿದರು. ಅಶ್ವಿನ್ ಅವರಂತೆಯೇ ಯುವರಾಜ್ ಮತ್ತು ಸುರೇಶ್ ರೈನಾ ಕೂಡ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಭಾರತದ ಪ್ರಬಲ ಬ್ಯಾಟಿಂಗ್ ಕ್ರಮಾಂಕದಲ್ಲಿ ಒಬ್ಬರು ಅಥವಾ ಇಬ್ಬರು ಮಾತ್ರ ಹೆಚ್ಚು ರನ್ ಹೊಡೆಯಬೇಕೆಂದು ನಿರ್ಧರಿಸಿದಂತಿದೆ. ಯುವರಾಜ್ ಸಿಂಗ್ ಅವರ ಆಕರ್ಷಕ ಶತಕ ಹಾಗೂ ವಿರಾಟ್ ಕೊಹ್ಲಿ ಅವರ ಉಪಯುಕ್ತ ಅರ್ಧ ಶತಕವನ್ನು ಬಿಟ್ಟರೆ, ಉಳಿದ ಬ್ಯಾಟ್ಸಮನ್ನರು ನಿರೀಕ್ಷಿಸಿದಷ್ಟು ರನ್ ಗಳಿಸಲಿಲ್ಲ.

46ನೇ ಓವರ್‌ನಿಂದ ಬ್ಯಾಟಿಂಗ್ ಪವರ್‌ಪ್ಲೇ ತೆಗೆದುಕೊಂಡ ಭಾರತ ಈ ಬಾರಿಯೂ ಅದರಲ್ಲಿ ವಿಫಲವಾಯಿತು. ಕೊನೆಯ ಆರು ವಿಕೆಟ್‌ಗಳು 36 ರನ್ನುಗಳ ಅಂತರದಲ್ಲಿ ಬಿದ್ದವು. ಇಂಗ್ಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ಕೊನೆಯ ಏಳು ವಿಕೆಟ್‌ಗಳು 33 ರನ್ನುಗಳ ಅಂತರದಲ್ಲಿ; ದಕ್ಷಿಣ ಆಫ್ರಿಕ ವಿರುದ್ಧ ನಾಗಪುರದಲ್ಲಿ ಒಂಬತ್ತು ವಿಕೆಟ್‌ಗಳು 29 ರನ್ನುಗಳ ಅಂತರದಲ್ಲಿ ಹಾಗೂ ಭಾನುವಾರ ಚೆನ್ನೈನಲ್ಲಿ ಕೊನೆಯ ಆರು ವಿಕೆಟ್‌ಗಳು 36 ರನ್ನುಗಳ ಅಂತರದಲ್ಲಿ ಬಿದ್ದವು.

ಮಧ್ಯಾಹ್ನ ಮಹೇಂದ್ರ ಸಿಂಗ್ ದೋನಿ ನಾಣ್ಯ ಚಿಮ್ಮುವುದನ್ನು ನೋಡಲು ಇಡೀ ಕ್ರೀಡಾಂಗಣ ಎದ್ದು ನಿಂತಿತ್ತು. ಅವರು ಟಾಸ್ ಗೆಲ್ಲುತ್ತಿದ್ದಂತೆಯೇ ಭಾರತ ಬ್ಯಾಟಿಂಗ್ ಮಾಡುವುದು ಖಚಿತವಾಗಿ ಹೋಗಿತ್ತು. ವೀರೇಂದ್ರ ಸೆಹ್ವಾಗ್ ಅನುಪಸ್ಥಿತಿಯಲ್ಲಿ ಸಚಿನ್ ತೆಂಡೂಲ್ಕರ್ ಅವರಿಂದ ದೊಡ್ಡ ಆಟದ ನಿರೀಕ್ಷೆಯಲ್ಲಿ ಎಲ್ಲರೂ ಇದ್ದರು. ಆದರೆ ಅವರು ರವಿ ರಾಮಪಾಲ್ ಮಾಡಿದ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್‌ಕೀಪರ್ ಡೆವಾನ್ ಥಾಮಸ್‌ಗೆ ಕ್ಯಾಚಿತ್ತು ಅಂಪೈರ್ ನಿರ್ಣಯಕ್ಕೂ ಕಾಯದೇ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದಾಗ ಒಂದು ಕ್ಷಣ ಮೌನ ಆವರಿಸಿತ್ತು. ಸಚಿನ್ ತಮ್ಮ ನೂರನೇ ಶತಕ (ಟೆಸ್ಟ್ ಮತ್ತು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳು ಸೇರಿ) ಹೊಡೆಯಲು ಮುಂದಿನ ಪಂದ್ಯಗಳಿಗೆ ಕಾಯಬೇಕು. ಭಾನುವಾರದ ಪಂದ್ಯ ಅವರು ಆಡಿದ 450ನೇ ಅಂತರರಾಷ್ಟ್ರೀಯ ಪಂದ್ಯ.

ಸೆಹ್ವಾಗ್ ಇಲ್ಲದ್ದರಿಂದ ಇನಿಂಗ್ಸ್ ಆರಂಭಿಸಿದ ಗೌತಮ್ ಗಂಭೀರ್ ಚೆಂಡಿನ ವೇಗವನ್ನು ಅಂದಾಜಿಸದೇ ಥರ್ಡ್‌ಮ್ಯಾನ್ ಬೌಂಡರಿ ಬಳಿ ಕ್ಯಾಚಿತ್ತರು. ಆನಂತರ ಯುವರಾಜ್ ಸಿಂಗ್ ಅವರ ಕೈಚಳಕ ಆರಂಭವಾಯಿತು.

ಮೂರನೇ ಕ್ರಮಾಂಕದಲ್ಲಿ ಆಡಿದ ವಿರಾಟ್ ಕೊಹ್ಲಿ ಯಾವ ಆತುರವನ್ನೂ ತೋರದೇ ಕೆಟ್ಟ ಎಸೆತಗಳನ್ನು ದಂಡಿಸುತ್ತ ಯುವರಾಜ್‌ಗೆ ಉತ್ತಮ ಬೆಂಬಲ ನೀಡಿದರು. ರಸೆಲ್ ಬೌಲಿಂಗ್‌ನಲ್ಲಿ ಪುಲ್ ಮತ್ತು ಕವರ್‌ಡ್ರೈವ್ ಮೂಲಕ ಸತತ ಬೌಂಡರಿಗಳನ್ನು ಗಿಟ್ಟಿಸಿದ ಯುವರಾಜ್ ಶತಕ ಹೊಡೆಯಲೇಬೇಕೆಂಬ ದೃಢ ನಿಶ್ಚಯದಿಂದ ಆಡಿದರು. ಬಿಸಿಲಿನಿಂದ ಬಳಲಿದರೂ ನೀರು ಕುಡಿಯುತ್ತ ಆಡಿದ ಅವರು ಸಮಿ ಬೌಲಿಂಗ್‌ನಲ್ಲಿ ಲಾಂಗ್ ಆನ್ ಮೇಲೆ ಭರ್ಜರಿ ಸಿಕ್ಸರ್ ಎತ್ತಿದರು. ಎಡಗೈ ಸ್ಪಿನ್ನರ್ ಸುಲೈಮಾನ್ ಬೆನ್ ಮತ್ತು ಲೆಗ್‌ಸ್ಪಿನ್ನರ್ ದೇವೆಂದ್ರ ಬಿಷೂ ಅವರನ್ನೂ ಆರಾಮವಾಗಿ ದಂಡಿಸಿದ ಯುವರಾಜ್ 112 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರುಗಳ ನೆರವಿನಿಂದ, ವಿಶ್ವ ಕಪ್ ಕ್ರಿಕೆಟ್‌ನಲ್ಲಿ ತಮ್ಮ ಮೊಟ್ಟಮೊದಲ ಶತಕವನ್ನು ದಾಖಲಿಸಿದರು. ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಇದು ಅವರ 13ನೇ ಶತಕ.
ವೆಸ್ಟ್‌ಇಂಡೀಸ್ ತಂಡದ ಸ್ಪಿನ್ನರುಗಳು ನಿರೀಕ್ಷಿತ ಯಶಸ್ಸು ಗಳಿಸದಿದ್ದರೂ ವೇಗದ ಬೌಲರುಗಳಾದ ರವಿ ರಾಮಪಾಲ್ ಮತ್ತು ಆಂಡ್ರೆ ರಸೆಲ್ ಶಿಸ್ತಿನಿಂದಲೇ ಬೌಲ್ ಮಾಡಿ ಭಾರತ ಯದ್ವಾತದ್ವಾ ರನ್ ಹೊಡೆಯದಂತೆ ನೋಡಿಕೊಂಡರು. ಈ ವಿಶ್ವ ಕಪ್‌ನಲ್ಲಿ ಇದೇ ಮೊದಲ ಪಂದ್ಯ ಆಡಿದ ರವಿ ರಾಮಪಾಲ್ ಐದು ವಿಕೆಟ್ ಸಾಧನೆ ತೋರಿದರು.

ಯುವರಾಜ್ ಆಡುವಾಗ ಬ್ಯಾಟಿಂಗ್ ಪವರ್ ಪ್ಲೇ ತೆಗೆದುಕೊಳ್ಳದ ಭಾರತ ಅವರು 45 ನೇ ಓವರ್‌ನ ಕೊನೆಯ ಎಸೆತದಲ್ಲಿ ನಿರ್ಗಮಿಸಿದ ನಂತರ ಅದನ್ನು ತೆಗೆದುಕೊಂಡಿತು. ಯೂಸುಫ್ ಪಠಾಣ್ ಸಿಕ್ಸರ್ ಸಿಡಿಸಲು ವಿಫಲರಾದರು. ಉಳಿದವರು ಬಂದ ಹಾಗೆಯೇ ವಾಪಸ್ಸು ಹೋದರು. ಭಾರತ ಇನ್ನೂ ಐದು ಎಸೆತಗಳು ಉಳಿದಿರುವಂತೆಯೇ ಆಲ್‌ಔಟ್ ಆಯಿತು.

ಮಹೇಂದ್ರ ಸಿಂಗ್ ದೋನಿ ನಿರೀಕ್ಷೆಯಂತೆ ವೀರೇಂದ್ರ ಸೆಹ್ವಾಗ್ ಅವರಿಗೆ ವಿಶ್ರಾಂತಿ ನೀಡಿ, ಆಶಿಶ್ ನೆಹ್ರಾ ಅವರನ್ನು ಕೈಬಿಟ್ಟು, ಇವರಿಬ್ಬರ ಸ್ಥಾನದಲ್ಲಿ ಸುರೇಶ್ ರೈನಾ ಮತ್ತು ಚೆನ್ನೈನವರೇ ಆದ ಆರ್. ಅಶ್ವಿನ್ ಅವರನ್ನು ಆಡಿಸಿದರು. ಇಬ್ಬರಿಗೂ ಇದು ಮೊದಲ ವಿಶ್ವ ಕಪ್ ಪಂದ್ಯ.

ಸ್ಕೋರು ವಿವರ

ಭಾರತ: 49.1 ಓವರುಗಳಲ್ಲಿ 268

ಗೌತಮ್ ಗಂಭೀರ್ ಸಿ ರಸೆಲ್ ಬಿ ರವಿ ರಾಮಪಾಲ್  22
(26 ಎಸೆತ, 4 ಬೌಂಡರಿ)
ಸಚಿನ್ ತೆಂಡೂಲ್ಕರ್ ಸಿ ಥಾಮಸ್ ಬಿ ರಾಮಪಾಲ್  02
(4 ಎಸೆತ)
ವಿರಾಟ್ ಕೊಹ್ಲಿ ಬಿ ರಾಮಪಾಲ್  59
(76 ಎಸೆತ, 5 ಬೌಂಡರಿ)
ಯುವರಾಜ್ ಸಿಂಗ್ ಸಿ ಮತ್ತು ಬಿ ಪೊಲಾರ್ಡ್  113
(123 ಎಸೆತ, 10 ಬೌಂಡರಿ, 2 ಸಿಕ್ಸರ್)
ಮಹೇಂದ್ರಸಿಂಗ್ ದೋನಿ ಸ್ಟಂಪ್ಡ್ ಥಾಮಸ್ ಬಿ ದೇವೇಂದ್ರ ಬಿಷೂ  22
(30 ಎಸೆತ, ಒಂದು ಬೌಂಡರಿ)
ಸುರೇಶ್ ರೈನಾ ಸಿ ರಾಮಪಾಲ್ ಬಿ ಡರೆನ್ ಸಮಿ  04
(8 ಎಸೆತ)
ಯೂಸುಫ್ ಪಠಾಣ್ ಬಿ ರಾಮಪಾಲ್  11
(10 ಎಸೆತ, ಒಂದು ಬೌಂಡರಿ)
ಹರಭಜನ್ ಸಿಂಗ್ ಸಿ ಪೊಲಾರ್ಡ್ ಬಿ ರಸೆಲ್  03
(6 ಎಸೆತ)
ಆರ್. ಅಶ್ವಿನ್ ಔಟಾಗದೆ  10
(7 ಎಸೆತ, ಒಂದು ಬೌಂಡರಿ)
ಜಹೀರ್ ಖಾನ್ ಬಿ ರಾಮಪಾಲ್  05
(3 ಎಸೆತ, ಒಂದು ಬೌಂಡರಿ)
ಮುನಾಫ್ ಪಟೇಲ್ ಬಿ ರಸೆಲ್  01
(2 ಎಸೆತ)

ಇತರೆ ರನ್ (ಬೈ-5, ಲೆಗ್‌ಬೈ-2, ವೈಡ್-9)  16

ವಿಕೆಟ್ ಪತನ: 1-8 (ಸಚಿನ್); 2-51 (ಗಂಭೀರ್); 3-173 (ಕೊಹ್ಲಿ); 4-218 (ದೋನಿ); 5-232 (ರೈನಾ); 6-240 (ಯುವರಾಜ್); 7-251 (ಪಠಾಣ್); 8-259 (ಹರಭಜನ್); 9-267 (ಜಹೀರ್); 10-268 (ಮುನಾಫ್)

ಬೌಲಿಂಗ್: ರವಿ ರಾಮಪಾಲ್  10-0-51-5 (ವೈಡ್-5); ಸುಲೈಮಾನ್ ಬೆನ್ 4-0-32-0; ಆಂಡ್ರೆ ರಸೆಲ್ 9.1-1-46-2 (ವೈಡ್- 2); ಡರೆನ್ ಸಮಿ 6-0-35-1 (ವೈಡ್-1); ದೇವೇಂದ್ರ ಬಿಷೂ 10-0-48-1; ಕೀರನ್ ಪೊಲಾರ್ಡ್ 10-0-49-1 (ವೈಡ್-1).

ಪವರ್‌ಪ್ಲೇ: 1 ರಿಂದ 10 ಓವರ್: 53 ರನ್, 2 ವಿಕೆಟ್

ಬೌಲಿಂಗ್ ಪವರ್‌ಪ್ಲೇ: 11 ರಿಂದ 15ನೇ ಓವರ್: ವಿಕೆಟ್ ನಷ್ಟವಿಲ್ಲದೇ 28 ರನ್

ಬ್ಯಾಟಿಂಗ್ ಪವರ್‌ಪ್ಲೇ: 46 ರಿಂದ 49.1 ಓವರ್: 28 ರನ್, 4 ವಿಕೆಟ್.

ವೆಸ್ಟ್‌ಇಂಡೀಸ್: 43 ಓವರುಗಳಲ್ಲಿ 188

ಡೆವಾನ್ ಸ್ಮಿತ್ ಬಿ ಜಹೀರ್ ಖಾನ್  81
(97 ಎಸೆತ, 7 ಬೌಂಡರಿ, ಒಂದು ಸಿಕ್ಸರ್)
ಕರ್ಕ್ ಎಡ್ವರ್ಡ್ಸ್ ಎಲ್‌ಬಿಡಬ್ಲ್ಯು ಬಿ ಅಶ್ವಿನ್  17
(17 ಎಸೆತ, ಒಂದು ಬೌಂಡರಿ, ಒಂದು ಸಿಕ್ಸರ್)
ಡರೆನ್ ಬ್ರಾವೊ ಸಿ ಹರಭಜನ್‌ಸಿಂಗ್ ಬಿ ಸುರೇಶ್ ರೈನಾ  22
(29 ಎಸೆತ,  ಒಂದು ಬೌಂಡರಿ, ಒಂದು ಸಿಕ್ಸರ್)
ರಾಮನರೇಶ್ ಶರವಣ ಸಿ ಅಶ್ವಿನ್ ಬಿ ಜಹೀರ್ ಖಾನ್  39
(68 ಎಸೆತ, 2 ಬೌಂಡರಿ)
ಕೀರನ್ ಪೊಲಾರ್ಡ್ ಸಿ ಪಠಾಣ್ ಬಿ ಹರಭಜನ್ ಸಿಂಗ್  01
(3 ಎಸೆತ)
ಡೆವಾನ್ ಥಾಮಸ್ ಸ್ಟಂಪ್ಡ್ ದೋನಿ ಬಿ ಯುವರಾಜ್  02
(8 ಎಸೆತ)
ಡರೆನ್ ಸಮಿ ರನ್‌ಔಟ್  02
(4 ಎಸೆತ)
ಆಂಡ್ರೆ ರಸೆಲ್ ಸಿ ಪಠಾಣ್ ಬಿ ಯುವರಾಜ್  00
(5 ಎಸೆತ)
ಸುಲೈಮಾನ್ ಬೆನ್ ಸಿ ಮುನಾಫ್ ಬಿ ಜಹೀರ್ ಖಾನ್  03
(12 ಎಸೆತ)
ದೇವೆಂದರ್ ಬಿಷೂ ಔಟಾಗದೆ  06
(11 ಎಸೆತ, ಒಂದು ಬೌಂಡರಿ)
ರವಿ ರಾಮಪಾಲ್ ಬಿ ಅಶ್ವಿನ್  01
(4 ಎಸೆತ)

ಇತರೆ ರನ್  (ಲೆಗ್‌ಬೈ-8, ವೈಡ್-6)  14

ವಿಕೆಟ್ ಪತನ: 1-34 (ಎಡ್ವರ್ಡ್), 2-91 (ಬ್ರಾವೊ), 3-154 (ಸ್ಮಿತ್); 4-157 (ಪೊಲಾರ್ಡ್); 5-160 (ಥಾಮಸ್);6-162 (ಸಮಿ); 7-165 (ರಸೆಲ್); 8-179 (ಬೆನ್); 9-182 (ಶರವಣ); 10-188 (ರಾಮಪಾಲ್)

ಬೌಲಿಂಗ್: ಆರ್. ಅಶ್ವಿನ್ 10-0-41-2 (ವೈಡ್-1), ಜಹೀರ್ ಖಾನ್ 6-0-26-3 (ವೈಡ್-3), ಹರಭಜನ್ ಸಿಂಗ್ 9-1-35-1 ((ವೈಡ್-1), ಯೂಸುಫ್ ಪಠಾಣ್ 7-0-28-0, ಸುರೇಶ್ ರೈನಾ 2-0-12-1, ಯುವರಾಜ್ ಸಿಂಗ್ 4-0-18-2, ಮುನಾಫ್ ಪಟೇಲ್ 5-0-20-0 (ವೈಡ್-1)
ಪಂದ್ಯದ ಆಟಗಾರ: ಯುವರಾಜ್ ಸಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT