ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಎಲ್ಲ ಗಡಿ ನೆಲೆಗಳ ಮೇಲೆ ಚೀಣೀಯರ ಉಗ್ರದಾಳಿ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಭಾನುವಾರ, 21-10-1962

ಭಾರತದ ಎಲ್ಲ ಗಡಿ ನೆಲೆಗಳ ಮೇಲೆ ಚೀಣೀಯರ ಉಗ್ರದಾಳಿ
ನವದೆಹಲಿ, ಅ. 20 - ಚೀಣಾ - ಭಾರತ ಗಡಿಯ ಪೂರ್ವ ಮತ್ತು ಪಶ್ಚಿಮ ವಿಭಾಗಗಳೆರಡರಲ್ಲೂ ಚೀಣೀಯರು ಇಂದು ಬೆಳಿಗ್ಗೆ ಭಾರಿ ದಾಳಿಯನ್ನು ಆರಂಭಿಸಿದರು.

ಇಂದು ಬೆಳಗಿನ ಜಾವ ಐದುಗಂಟೆ ಸಮಯದಲ್ಲಿ ಚೀಣೀ ಸೈನಿಕರು ಮಾರ್ಟರ್ ಮತ್ತು ಮೆಷಿನ್‌ಗನ್‌ಗಳಿಂದ ಭಾರಿ ಪ್ರಮಾಣದಲ್ಲಿ ಗುಂಡುಗಳನ್ನು ಹಾರಿಸುತ್ತ, ಕಿನ್ಸೆಮಾನೆ ಮತ್ತು ಧೋಲಾ ಠಾಣ್ಯ ಪ್ರದೇಶದಲ್ಲಿರುವ ಭಾರತೀಯ ಮುಂಚೂಣಿ ಗಡಿ ಠಾಣ್ಯಗಳ ಮೇಲೆ ದಾಳಿ ಮಾಡಿದವು. ಚೀಣಾ - ಭಾರತ ಗಡಿಯ ಪಶ್ಚಿಮ ವಿಭಾಗ - ಅಂದರೆ ಲಡಕ್‌ನ ಉತ್ತರ ಭಾಗದಲ್ಲಿರುವ ಭಾರತೀಯ ಠಾಣ್ಯಗಳ ಮೇಲೂ ಇದೇ ಸಮಯದಲ್ಲಿ ಚೀಣೀ ದಾಳಿ ನಡೆಯಿತು.

ಭಾರತೀಯ ಸೈನಿಕರಿಗೆ ಅಗತ್ಯವಾದ ಸರಬರಾಜನ್ನು ಕೆಳಕ್ಕೆ ಹಾಕುವ  ಸರಬರಾಜು ವಿಮಾನಗಳ ಮೇಲೆ, ಲಡಕ್ ಹಾಗೂ `ನೀಫಾ~ ಪ್ರದೇಶಗಳೆರಡರಲ್ಲೂ ಚೀಣೀಯರು ದಾಳಿ ನಡೆಸಿದರು. ಆದರೆ ನಮ್ಮ ವಿಮಾನಗಳು ಸುರಕ್ಷಿತವಾಗಿ ನೆಲೆಗೆ ವಾಪಸಾದವು.

ಚೀಣೀ ದಾಳಿ ಹೆಮ್ಮೆಟ್ಟಿಸುತ್ತೇವೆ
ನವದೆಹಲಿ, ಅ. 20 - `ನಮ್ಮ ಸೈನ್ಯಗಳು ಸಾಧ್ಯವಾದಷ್ಟು ಉತ್ತಮವಾಗಿ ಹೋರಾಡಿ ಚೀಣೀ ದಾಳಿಯನ್ನು ಹಿಮ್ಮೆಟ್ಟಿಸುತ್ತವೆ~ ಎಂದು ಭಾರತದ ರಕ್ಷಣಾ ಸಚಿವ ಶ್ರೀ ವಿ. ಕೆ. ಕೃಷ್ಣಮೆನನ್ ಅವರು ಇಲ್ಲಿ ಇಂದು ಪತ್ರಕರ್ತರಿಗೆ ತಿಳಿಸಿದರು.

ಭಾರತದ ಬಗ್ಗೆ ಹೇಳುವುದಾದರೆ ಆ ಪ್ರದೇಶದಲ್ಲಿ ನಮ್ಮ ಮಿಲಿಟರಿ ವಿಮಾನಗಳು ಕಾರ್ಯಾಚರಣೆಯಲ್ಲಿ ತೊಡಗಿಲ್ಲವೆಂದು, ತಮ್ಮ ಕೋಣೆಯಲ್ಲಿ ಪತ್ರಕರ್ತರನ್ನು ಭೇಟಿ ಮಾಡಿದ ಶ್ರೀ ಮೆನನ್ ನುಡಿದರು. ಅಲ್ಲಿರುವ ಎಲ್ಲ ಭಾರತೀಯ ವಿಮಾನಗಳೂ ಅಗತ್ಯವನ್ನು ಸರಬರಾಜು ಕಾರ್ಯದಲ್ಲಿ ಮಾತ್ರ ತೊಡಗಿದೆಯೆಂದು ಸ್ಪಷ್ಟಪಡಿಸಿದರು.

ಭಾರತವೇ ದಾಳಿ ಮಾಡಿತೆಂದು ಪೀಕಿಂಗ್
ಪೀಕಿಂಗ್, ಅ. 20 - ಚೀಣ ಮತ್ತು ಭಾರತ ನಡುವಣ ವಿವಾದಿತ ಗಡಿ ಪ್ರದೇಶದ ಎರಡು ತುದಿಗಳಲ್ಲೂ ಇಂದು ಬೆಳಿಗ್ಗೆ ಹೋರಾಟ ನಡೆಯಿತೆಂದು ನವ ಚೀಣಾ ವಾರ್ತಾ ಸಂಸ್ಥೆ ವರದಿ ಮಾಡಿದೆ. ಭಾರತದ ಗಡಿಯ ಪಶ್ಚಿಮ ವಿಭಾಗದ ಚಿಪ್‌ಚಾಪ್ ಪ್ರದೇಶದಲ್ಲಿ ಆರ್ಟಿಲೆರಿ ಮೆಷಿನ್‌ಗನ್ ಹಾರಿಸುತ್ತ ಭಾರತೀಯ ಪಡೆಗಳು ಇಂದು ಬೆಳಗಿನ ಜಾವ 3ಗಂಟೆಗೆ ದಾಳಿ ನಡೆಸಿದವೆಂದೂ, ಆತ್ಮರಕ್ಷಣೆಗಾಗಿ ದೃಢ ನಿರ್ಧಾರದಿಂದ ಚೀಣೀ ಗಡಿ ರಕ್ಷಕರು ಪ್ರತಿಕ್ರಮ ಕೈಗೊಳ್ಳಬೇಕಾಯಿತೆಂದೂ ವರದಿಯು ಆಪಾದಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT