ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜಲ ವಿದ್ಯುತ್ ಯೋಜನೆ; ಕೋರ್ಟ್ ಕಟ್ಟೆ ಹತ್ತಲು ನಿರ್ಧಾರ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್, (ಪಿಟಿಐ): ಗಡಿ ಭಾಗದಲ್ಲಿಯ ಪರಿಸರದ ಮೇಲೆ ಆಗುವ ಪರಿಣಾಮದ ಬಗ್ಗೆ ತನ್ನ ಅಭಿಪ್ರಾಯ ಪಡೆಯದೆ ಭಾರತಕ್ಕೆ ಜಲವಿದ್ಯುತ್ ಯೋಜನೆ ಆರಂಭಿಸಲು ವಿಶ್ವಸಂಸ್ಥೆಯ ಪರಿಸರ ವಿಭಾಗವು ಅನುಮತಿ ನೀಡಿರುವುದನ್ನು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಲು ಪಾಕಿಸ್ತಾನ ನಿರ್ಧರಿಸಿದೆ.

ದೇಶದ ಗಡಿ ಭಾಗದಲ್ಲಿ ಭಾರತವು ನಿರ್ಮಿಸಲು ಉದ್ದೇಶಿಸಿರುವ 45 ಮೆ. ವಾ. ಸಾಮರ್ಥ್ಯದ ನಿಮೂ ಬಜಗೊ ಜಲವಿದ್ಯುತ್ ಯೋಜನೆಗೆ ಪಾಕಿಸ್ತಾನದ ಒಪ್ಪಿಗೆ ಇಲ್ಲದೆ ವಿಶ್ವಸಂಸ್ಥೆಯ ಪರಿಸರ ವಿಭಾಗದ ಅನುಮತಿ ಪಡೆದಿರುವ ಕ್ರಮದ ಬಗ್ಗೆ ಜಲಸಂಪನ್ಮೂಲ ಮತ್ತು ವಿದ್ಯುತ್ ಇಲಾಖೆಯು ತೀವ್ರ ಅಸಮಾಧಾನ ಹೊಂದಿದೆ ಎನ್ನಲಾಗಿದೆ.

ಸಿಂಧೂ ನದಿಯಲ್ಲಿ ಭಾರತ ನಿರ್ಮಿಸಲು ಉದ್ದೇಶಿಸಿರುವ ಜಲ ವಿದ್ಯುತ್ ಯೋಜನೆಯಿಂದ ಗಡಿ ಭಾಗದಲ್ಲಿ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಪಾಕಿಸ್ತಾನದ ಜತೆ ಚರ್ಚಿಸದೆ ವಿಶ್ವಸಂಸ್ಥೆಯ ಅನುಮತಿ ಪಡೆದಿರುವ ಭಾರತದ ಕ್ರಮದ ಬಗ್ಗೆ ಪಾಕಿಸ್ತಾನ ಅಸಮಾಧಾನಗೊಂಡಿದೆ.

ಭಾರತಕ್ಕೆ ಪರಿಸರ ಅನುಮತಿ ನೀಡುವಾಗ ವಿಶ್ವಸಂಸ್ಥೆಯ ಪರಿಸರ ವಿಭಾಗವು ಕಾನೂನಿನ ಅಂಶಗಳನ್ನು ಪರಿಪಾಲಿಸಿಲ್ಲ ಎಂಬುದು ಪಾಕಿಸ್ತಾನದ ಅಸಮಾಧಾನವಾಗಿದ್ದು, ಈ ವಿಚಾರವನ್ನು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧರಿಸಿದೆ. ಪರಿಸರದ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಒಪ್ಪಿಗೆ ಪಡೆಯಲಾಗಿದೆ ಎಂದು ವಿಶ್ವಸಂಸ್ಥೆಗೆ ಮನವರಿಕೆ ಮಾಡಿಕೊಡಲು ಭಾರತವು ಕಾಲ್ಪನಿಕ ಮತ್ತು ನಕಲಿ ದಾಖಲೆಗಳನ್ನು ಬಳಸಿದೆ ಎಂದು ಪಾಕಿಸ್ತಾನ ಆಪಾದಿಸಿದೆ.

ಗಡಿ ಭಾಗದಲ್ಲಿ ಸಿಂಧೂ ನದಿಯ ಜಲ ಹಂಚಿಕೆ ಕುರಿತಂತೆ ವಿವಾದವಿರುವಾಗ ಮತ್ತು ಗಡಿ ಭಾಗದ ಯೋಜನೆಗಳಿಗೆ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕಾನೂನಿನ ಕಲಂ 37 (ಬಿ) ಪ್ರಕಾರ ಎರಡೂ ರಾಷ್ಟ್ರಗಳ ಒಪ್ಪಿಗೆ ಅಗತ್ಯವಾಗಿರುವುದರಿಂದ ವಿಶ್ವಸಂಸ್ಥೆಯಿಂದ ಪರಿಸರ ಅನುಮತಿ ಪಡೆಯುವಲ್ಲಿ ಲೋಪವಾಗಿದೆ ಎಂಬುದು ಪಾಕಿಸ್ತಾನದ ಅಧಿಕಾರಿಗಳ ವಾದವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT