ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಪ್ರಧಾನಿ ಅಭ್ಯರ್ಥಿಗಳ ಬಗ್ಗೆ ಅಮೆರಿಕ ಸಂಸ್ಥೆ ವರದಿ

Last Updated 15 ಸೆಪ್ಟೆಂಬರ್ 2011, 6:00 IST
ಅಕ್ಷರ ಗಾತ್ರ

ವಾಷಿಂಗ್ಟನ್, (ಪಿಟಿಐ): `ಭಾರತದ ಲೋಕಸಭೆಗೆ 2014ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಮಂತ್ರಿ ಹುದ್ದೆಗೆ ಕಾಂಗ್ರೆಸ್‌ನ ಯುವ ನಾಯಕ ರಾಹುಲ್ ಗಾಂಧಿ ಮತ್ತು ಗುಜರಾತ್‌ನ ವಿವಾದಿತ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮಧ್ಯೆ ನೇರ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ~.

-ಹೀಗೆಂದು ಅಮೆರಿಕದ ಕಾಂಗ್ರೆಸ್‌ನ ಸ್ವತಂತ್ರ ಸಂಶೋಧನಾ ಸೇವಾ ಸಂಸ್ಥೆ (ಸಿಆರ್‌ಎಸ್) ಈಚೆಗೆ ನೀಡಿರುವ ವರದಿ ಹೇಳಿದೆ. ಭವಿಷ್ಯದ ಪ್ರಧಾನಿ ಅಭ್ಯರ್ಥಿ ಕುರಿತು ಭಾರತದಲ್ಲಿ ಗಂಭೀರ ಚರ್ಚೆ ಆರಂಭವಾಗಿರುವ ಬೆನ್ನಲ್ಲೇ ಅಮೆರಿಕ ಕಾಂಗ್ರೆಸ್‌ನ ಈ ವರದಿ ಕುತೂಹಲ ಮೂಡಿಸಿದೆ.
 
ಮತ್ತೆ ಅಧಿಕಾರದ ಕನಸು ಕಾಣುತ್ತಿರುವ ವಿರೋಧ ಪಕ್ಷ ಬಿಜೆಪಿಯಿಂದ ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮಲಿದ್ದಾರೆ. ರಾಹುಲ್ ಗಾಂಧಿ ಅವರನ್ನು ಭವಿಷ್ಯದ ಪ್ರಧಾನಿಯಾಗಿ ಬಿಂಬಿಸುವ ಕುರಿತು ಕಾಂಗ್ರೆಸ್‌ನಲ್ಲಿ  ಚಿಂತನೆ ನಡೆಯುತ್ತಿದೆ ಎಂದು ವರದಿ ವಿವರಿಸಿದೆ.

ಭಾರತದ ರಾಜಕೀಯ ಬೆಳವಣಿಗೆಗಳ ಸಂಪೂರ್ಣ ಚಿತ್ರಣ ನೀಡಿರುವ ವರದಿಯಲ್ಲಿ, 2014ರ ಚುನಾವಣೆ ರಾಹುಲ್ ಮತ್ತು ಮೋದಿ ನಡುವಿನ ಹೋರಾಟವಾಗಲಿದೆಯೇ ಎಂಬ ಬಗ್ಗೆ ನಿಖರವಾಗಿ ಏನನ್ನೂ ಹೇಳಿಲ್ಲ. 

`2009ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಭರವಸೆಯ ಯುವ ನಾಯಕ ರಾಹುಲ್ ಅವರನ್ನು ಮುಂದಿನ ಪ್ರಧಾನಿ ಎಂದೇ ಕಾಂಗ್ರೆಸ್ ಬಿಂಬಿಸಿತ್ತು~ ಎಂದು ಸೆಪ್ಟೆಂಬರ್ 1ರಂದು ಸಲ್ಲಿಸಲಾದ ಸಿಆರ್‌ಎಸ್ ವರದಿಯಲ್ಲಿ ತಿಳಿಸಲಾಗಿದೆ.

ಕೇವಲ ಶಾಸನಸಭೆಯ ಪ್ರತಿನಿಧಿಗಳಿಗೆ ಮಾತ್ರ ಲಭ್ಯವಿರುವ ವರದಿಯ ರಹಸ್ಯ ಅಂಶಗಳು ಸಾಮಾನ್ಯವಾಗಿ ಸಾರ್ವಜನಿಕರಿಗೆ ದೊರೆಯುವುದಿಲ್ಲ. ಆದರೆ, ಅನೇಕ ಬಾರಿ ಚಿಂತಕರ ಚಾವಡಿ ಮತ್ತು ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳ ಯತ್ನದಿಂದ ವರದಿಯಲ್ಲಿನ ಕೆಲವು ಅಂಶಗಳನ್ನು  ಬಹಿರಂಗಗೊಳಿಸಲಾಗುತ್ತದೆ. ಅದೇ ರೀತಿ ಅಮೆರಿಕದ ವಿಜ್ಞಾನಿಗಳ ಒಕ್ಕೂಟ ಈ ವರದಿಯಲ್ಲಿನ ಅನೇಕ ಅಂಶಗಳನ್ನು ಮಂಗಳವಾರ ಬಹಿರಂಗಗೊಳಿಸಿದೆ.

ರಾಹುಲ್ ಕಾಂಗ್ರೆಸ್‌ನ ಉತ್ತರಾಧಿಕಾರಿ ಎಂಬ ಬಗ್ಗೆ ಪಕ್ಷದಲ್ಲಿ ಯಾರಲ್ಲೂ ಸಂದೇಹವಿಲ್ಲ. ಆದರೆ, ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗಬಲ್ಲ ಮತ್ತು ಚುನಾವಣಾ ತಂತ್ರಗಾರಿಕೆ ಹೆಣೆಯುವ ಸಾಮರ್ಥ್ಯ ಅವರಲ್ಲಿದೆಯೇ ಎಂಬ ಪ್ರಶ್ನೆಗಳು ಕೇಳಿಬಂದಿವೆ.

ಸೋನಿಯಾ ಅವರಿಗೆ ಅವರ ವಿದೇಶಿ ಮೂಲ ಅಡ್ಡಿಯಾಗಿತ್ತು. ಹೀಗಾಗಿ ಅವರು ಪ್ರಧಾನಿ ಹುದ್ದೆಯಿಂದ ಹಿಂದೆ ಸರಿಯಬೇಕಾಯಿತು. ಆದರೆ ರಾಹುಲ್ ವಿಷಯದಲ್ಲಿ ಹಾಗಾಗದು. ಪಕ್ಷ ಅವರನ್ನು ಈಗಾಗಲೇ ಮುಂದಿನ ಪ್ರಧಾನಿ ಎಂದೇ ಮಾನಸಿಕವಾಗಿ ಒಪ್ಪಿಕೊಂಡಾಗಿದೆ ಎಂದು ವರದಿ ವಿಶ್ಲೇಷಿಸಿದೆ.

ಬಿಜೆಪಿಯಲ್ಲಿ ಪ್ರಧಾನಿ ಹುದ್ದೆಗೆ ಮೋದಿ ಮುಂಚೂಣಿಯಲ್ಲಿದ್ದಾರೆ.  ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಖಾಸಗೀಕರಣಕ್ಕೆ ಬೆಂಬಲವಾಗಿ ನಿಂತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪಕ್ಷ ಆಂತರಿಕ ವಿದ್ಯಮಾನಗಳಿಂದ ಸದ್ಯ ಹಿನ್ನಡೆ ಅನುಭವಿಸಿದರೂ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುತ್ತದೆ ಎಂದು ವರದಿ ಅಂದಾಜು ಮಾಡಿದೆ.

ಮೋದಿ, ನಿತೀಶ್, ಮಾಯಾ ಕಾರ್ಯವೈಖರಿ ಪ್ರಶಂಸೆ

ವಾಷಿಂಗ್ಟನ್, (ಪಿಟಿಐ): ಒಳ್ಳೆಯ ಆಡಳಿತ ಮತ್ತು ಅಭಿವೃದ್ಧಿಗೆ ಗುಜರಾತ್ ಸರ್ಕಾರ ಉತ್ತಮ ಮಾದರಿ ಎಂದು ಸಿಆರ್‌ಎಸ್ ವರದಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದೆ.

ಮೋದಿ ನಾಯಕತ್ವದಲ್ಲಿ ಗುಜರಾತ್ ಸರ್ಕಾರ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಆ ರಾಜ್ಯದ ಮಾದರಿ ಅನುಸರಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಕೂಡಾ ಉತ್ತಮ ಆಡಳಿತ ನೀಡಿದ್ದಾರೆ ಎಂದು ಪ್ರಶಂಸಿಸಿದೆ.

ಉತ್ತಮ ದರ್ಜೆಯ ಅತ್ಯಾಧುನಿಕ ರಸ್ತೆಗಳು, ವಿದ್ಯುತ್ ಸಂಪರ್ಕಗಳಿಂದಾಗಿ ಮೋದಿ 2002ರಲ್ಲಿ ನಡೆದ ಕೋಮುದಳ್ಳುರಿಯ ಕಪ್ಪುಚುಕ್ಕೆಯಿಂದ ಹೊರಬರುವ ಪ್ರಯತ್ನ ಮಾಡಿದ್ದಾರೆ. ಜನರಲ್ ಮೋಟಾರ್ಸ್, ಮಿತ್ಸುಬಿಶಿಯಂತಹ ದೈತ್ಯ ಕಂಪೆನಿಗಳಿಂದ ಬಂಡವಾಳ ಸೆಳೆಯಲು ಸಫಲರಾಗಿದ್ದಾರೆ.
 
ಅದರಂತೆ ನಿತೀಶ್ ಅವರು ಬಿಹಾರದಲ್ಲಿ ಹದಗೆಟ್ಟಿದ್ದ ಕಾನೂನು, ಸುವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಮೂಲಸೌಕರ್ಯ, ಶಿಕ್ಷಣಕ್ಕೆ ಆದ್ಯತೆ ನೀಡಿ ಒಳ್ಳೆಯ ಆಡಳಿತ ನೀಡಿದ್ದಾರೆ. ಮಾಯಾವತಿ ಕೂಡ ಇದೇ ಹಾದಿ ತುಳಿದಿದ್ದಾರೆ ಎಂದು 94 ಪುಟಗಳ ವರದಿ ಶ್ಲಾಘಿಸಿದೆ.

ಪ್ರತ್ಯೇಕ ರಾಜ್ಯಕ್ಕಾಗಿ ಆಂಧ್ರ ಪ್ರದೇಶದಲ್ಲಿ ನಡೆಯುತ್ತಿರುವ ತೆಲಂಗಾಣ ಹೋರಾಟ, ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಆಡಳಿತದ ಚುಕ್ಕಾಣಿ ಹಿಡಿದಿರುವ ಮಮತಾ ಬ್ಯಾನರ್ಜಿ ಅವರ ಬಗ್ಗೆಯೂ ಇದರಲ್ಲಿ ಪ್ರಸ್ತಾಪವಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT