ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಪ್ರಶಸ್ತಿ ಕನಸು ಭಗ್ನ

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ಇಪೋ, ಮಲೇಷ್ಯ (ಪಿಟಿಐ): ಸುಲ್ತಾನ್ ಅಜ್ಲನ್ ಷಾ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆಗಬೇಕೆಂಬ ಭಾರತದ ಕನಸು ಭಗ್ನಗೊಂಡಿತು. ಬುಧವಾರ ನಡೆದ ಅತಿಮಹತ್ವದ ಪಂದ್ಯದಲ್ಲಿ ಅರ್ಜೆಂಟೀನಾ ಕೈಯಲ್ಲಿ 2-3 ರಲ್ಲಿ ಸೋಲು ಅನುಭವಿಸಿದ ಭರತ್ ಚೆಟ್ರಿ ಬಳಗ ಪ್ರಶಸ್ತಿಯೆಡೆಗಿನ ಸ್ಪರ್ಧೆಯಿಂದ ಹೊರಬಿತ್ತು.

ಗೋಲು ಗಳಿಸಲು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸುವಲ್ಲಿ ವಿಫಲವಾದದ್ದು ಹಾಗೂ ರಕ್ಷಣಾ ವಿಭಾಗದಲ್ಲಿ ಕಂಡುಬಂದ ಲೋಪ ಭಾರತದ ಸೋಲಿಗೆ ಕಾರಣ. ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಸೋಲು ಅನುಭವಿಸಿರುವ ತಂಡ ಕೇವಲ ಆರು ಪಾಯಿಂಟ್‌ಗಳನ್ನು ಮಾತ್ರ ಹೊಂದಿದೆ.

ಗುರುವಾರ ನಡೆಯುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಅರ್ಜೆಂಟೀನಾಕ್ಕೆ ಒಲಿದ ಸತತ ಮೂರನೇ ಗೆಲುವು ಇದು. ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ತಂಡದ ಬಳಿ ಇದೀಗ ಒಂಬತ್ತು ಪಾಯಿಂಟ್‌ಗಳಿವೆ. ಪಂದ್ಯದ ಮೊದಲ ಅವಧಿ ಗೋಲುರಹಿತವಾಗಿತ್ತು. ಮತಿಯಾಸ್ ಪರೇದೆಸ್ (37ನೇ ನಿ), ಸ್ಯಾಂಟಿಯಾಗೊ ಮಾಂಟೆಲಿ (38) ಮತ್ತು ಗೊನ್ಸಾಲೊ ಪೆಲಟ್ (58) ಅರ್ಜೆಂಟೀನಾ ಪರ ಗೋಲು ಗಳಿಸಿದರು.

ಸರ್ದಾರ್ ಸಿಂಗ್ (48) ಮತ್ತು ವಿ.ಆರ್. ರಘುನಾಥ್ (61) ಗಳಿಸಿದ ಗೋಲಿನಿಂದ ಭಾರತ ಸೋಲಿನ ಅಂತರವನ್ನು ತಗ್ಗಿಸಿತು. ಪಂದ್ಯದ ಕೊನೆಯ ಕ್ಷಣಗಳಲ್ಲಿ ಭಾರತ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಸಮಬಲದ ಗೋಲಿಗಾಗಿ ಪ್ರಯತ್ನ ನಡೆಸಿತು. ಆದರೆ ಅರ್ಜೆಂಟೀನಾದ ರಕ್ಷಣಾ ವಿಭಾಗದಲ್ಲಿ ಬಿರುಕು ಉಂಟುಮಾಡಲು ಸಾಧ್ಯವಾಗಲಿಲ್ಲ.

ಪಂದ್ಯದ ಮೊದಲ ಅವಧಿಯಲ್ಲಿ ಸಮಬಲದ ಪೈಪೋಟಿ ಕಂಡುಬಂತು. ಆಟ ಮೈದಾನದ ಮಧ್ಯಭಾಗದಲ್ಲೇ ಕೇಂದ್ರೀಕೃತವಾಗಿತ್ತು. ಎರಡೂ ತಂಡದವರು ಎದುರಾಳಿ ಗೋಲು ಪೆಟ್ಟಿಗೆ ಗುರಿಯಾಗಿಸಿ ಚೆಂಡಿನೊಂದಿಗೆ ಮುನ್ನುಗ್ಗುತ್ತಿದ್ದರೂ ಹೊಂದಾಣಿಕೆಯ ಕೊರತೆಯಿಂದ ಗುರಿ ಸೇರಿಸಲು ಸಾಧ್ಯವಾಗಲಿಲ್ಲ.

ಭಾರತಕ್ಕೆ ಆರನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೆ ಸಂದೀಪ್ ಸಿಂಗ್ ಪ್ರಯತ್ನವನ್ನು ಎದುರಾಳಿ ರಕ್ಷಣಾ ಆಟಗಾರ ವಿಫಲಗೊಳಿಸಿದ. ಪೆನಾಲ್ಟಿ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸುವ ಪ್ರಯತ್ನದ ವೇಳೆ ಸಂದೀಪ್ ಹಿಮ್ಮಡಿಯ ಗಾಯಕ್ಕೆ ಒಳಗಾದರು. ಇದರಿಂದ ತುಂಬಾ ಹೊತ್ತು ಅಂಗಳದಲ್ಲಿ ಹೊರಗುಳಿದರು. ಪಾಕಿಸ್ತಾನದ ವಿರುದ್ಧ ಅವರು ಕಣಕ್ಕಿಳಿಯುವ ಸಾಧ್ಯತೆಯಿದೆ.

ಎರಡನೇ ಅವಧಿಯಲ್ಲಿ ಆರಂಭದಿಂದಲೇ ಅರ್ಜೆಂಟೀನಾ ಆಕ್ರಮಣಕಾರಿ ಪ್ರದರ್ಶನ ನೀಡಿತು. ಒಂದು ನಿಮಿಷದ ಅಂತರದಲ್ಲಿ ಎರಡು ಗೋಲುಗಳನ್ನು ಗಳಿಸಿತು. ಭಾರತದ ರಕ್ಷಣಾ ವಿಭಾಗದ ಲೋಪದಿಂದ ಈ ಎರಡು ಫೀಲ್ಡ್ ಗೋಲುಗಳು ದಾಖಲಾದವು. 48ನೇ ನಿಮಿಷದಲ್ಲಿ ಭಾರತಕ್ಕೆ ಎರಡನೇ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ರಘುನಾಥ್ ಅವರು ಹೊಡೆದ ಚೆಂಡನ್ನು ಅರ್ಜೆಂಟೀನಾ ಗೋಲಿ ಜುವಾನ್ ವಿವಾಲ್ಡಿ ತಡೆದರು. ಆದರೆ ಅಲ್ಲೇ ಇದ್ದ ಸರ್ದಾರ್ ಸಿಂಗ್ ಚೆಂಡನ್ನು ಗುರಿ ಸೇರಿಸಲು ಯಾವುದೇ ತಪ್ಪು ಮಾಡಲಿಲ್ಲ.

61ನೇ ನಿಮಿಷದಲ್ಲಿ ರಘುನಾಥ್ ಡ್ರ್ಯಾಗ್‌ಫ್ಲಿಕ್ ಮೂಲಕ ಭಾರತಕ್ಕೆ ಎರಡನೇ ಗೋಲು ತಂದಿತ್ತರು. 66ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ದೊರೆತರೂ, ರಘುನಾಥ್ ಅದನ್ನು ಸದುಪಯೋಗಪಡಿಸುವಲ್ಲಿ ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT