ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮರಳು ಶಿಲ್ಪಿಗಳ ಪರಿಚಯ

Last Updated 9 ಮೇ 2012, 19:30 IST
ಅಕ್ಷರ ಗಾತ್ರ

ಸುದರ್ಶನ್ ಪಟ್ನಾಯಕ್
`ಮರಳಿನ ಕಲೆ~ ಎನ್ನುತ್ತಿದ್ದಂತೆ  ಮೊದಲು ಕೇಳಿಬರುವುದು ಸುದರ್ಶನ್ ಅವರ ಹೆಸರು. ಒಡಿಶಾದ ಸುದರ್ಶನ್ ಪಟ್ನಾಯಕ್ ಎಲ್ಲರಿಗೂ ಚಿರಪರಿಚಿತ. ಭುವನೇಶ್ವರ ಬಳಿಯ ಪುರಿಯಲ್ಲಿ 1977ರಲ್ಲಿ ಜನಿಸಿದ ಸುದರ್ಶನ್ ಭಾರತದಲ್ಲಿ ಹೆಸರು ಮಾಡಿದ್ದು ಮರಳಿನ ಕಲೆ ಮೂಲಕ. ಆಗಿನ ಕಾಲಕ್ಕೆ ಭಾರತದಲ್ಲಿ ವಿರಳವೆನಿಸಿದ್ದ ಮರಳು ಶಿಲ್ಪವನ್ನು ಬೆಳೆಸಿದ್ದು ಸುದರ್ಶನ್.

ಏಳನೇ ವಯಸ್ಸಿಗೇ ಮರಳಿನಲ್ಲಿ ವಿಭಿನ್ನತೆಯನ್ನು ಹುಡುಕುವ ಗೀಳು ಹತ್ತಿಸಿಕೊಂಡ ಸುದರ್ಶನ್ ಇದುವರೆಗೂ ಸುಮಾರು 100 ಮರಳಿನ ಕಲಾಕೃತಿಗಳ ಪ್ರದರ್ಶನವನ್ನು ನೀಡಿದ್ದಾರೆ. ಕಡಲ ತೀರದಲ್ಲಿನ ಮರಳಿನಲ್ಲಿ ಕಣ್ಸೆಳೆಯುವ ಆಕೃತಿಗಳನ್ನು ರೂಪಿಸಿ ಜನರ ಗಮನವನ್ನು ಈ ಕಲೆಯತ್ತ ಸೆಳೆದವರು.
 
ನಂತರವಷ್ಟೇ ಜನರಿಗೆ ಈ ಮರಳಿನ ಶಿಲ್ಪದ ಪ್ರಾಮುಖ್ಯತೆ ಕುರಿತು ಗಮನ ಹರಿದಿದ್ದು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಈ ವಿಶೇಷ ಕಲೆಯಿಂದ ಭಾರತವನ್ನು ಪ್ರತಿನಿಧಿಸಿ ಹಲವು ಪ್ರಶಸ್ತಿಗಳನ್ನೂ ತಂದುಕೊಟ್ಟವರು.  ಮಾಸ್ಕೊದಲ್ಲಿ ಮೊದಲ ಅಂತರರಾಷ್ಟ್ರೀಯ ಮರಳು ಶಿಲ್ಪ ಚಾಂಪಿಯನ್‌ಶಿಪ್‌ನಲ್ಲಿ `ಪೀಪಲ್ಸ್ ಚಾಯ್ಸ~ ಬಹುಮಾನ ಪಡೆದುಕೊಂಡರು. ಲಿಯಾನಾರ್ಡೊ ಸ್ಮೈಲ್, ಫರ್‌ಗಿವ್‌ನೆಸ್, ಜಾಗತಿಕ ತಾಪಮಾನದ ಕುರಿತ ಗಣೇಶನ ವಿಗ್ರಹ, ಬ್ಲ್ಯಾಕ್ ತಾಜ್‌ಮಹಲ್, ಮೂರು ಕೋತಿಗಳ ಶಿಲ್ಪ, ಸಾಂಟಾ ಕ್ಲಾಸ್ ಹೀಗೆ ನೂರಾರು ಕಲಾಕೃತಿಗಳನ್ನು ರೂಪಿಸಿದ್ದಾರೆ.

ಇದೀಗ ಸುದರ್ಶನ್ ~ದಿ ಗೋಲ್ಡನ್ ಸ್ಯಾಂಡ್ ಆರ್ಟ್ ಇನ್‌ಸ್ಟಿಟ್ಯೂಟ್~ ಅನ್ನುವ ಸಂಸ್ಥೆ ಸ್ಥಾಪಿಸಿ ಹಲವು ವಿದ್ಯಾರ್ಥಿಗಳಿಗೆ ತಮ್ಮ ಮರಳಿನ ಕಲೆಯನ್ನು ಪಸರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಗೌರಿ ಎಂ ಎನ್
ಜೀವನವೆಂದರೆ ಬರೀ ಓದು ಬರಹವಲ್ಲ, ಕೆಲಸವಲ್ಲ, ಈ ಪ್ರಪಂಚದಲ್ಲಿ  ತನ್ನದೇ ಛಾಪು ಮೂಡಿಸುವುದು ಅತ್ಯಗತ್ಯ ಎನ್ನುವ  ಗೌರಿ ಅವರದ್ದು ಮೂಲತಃ ಮೈಸೂರು. ಅತಿ ಚಿಕ್ಕ ವಯಸ್ಸಿಗೇ ಮರಳಿನಲ್ಲಿ ಸುಂದರ ಕಲಾಕೃತಿಗಳನ್ನು ರಚಿಸುವ ಗೌರಿಯವರಿಗೆ ಬೆನ್ನೆಲುಬಾಗಿ ನಿಂತದ್ದು ತಂದೆ ನಂಜುಂಡಸ್ವಾಮಿ.

ಗೌರಿಯವರ ಮೊದಲ ಮರಳಿನ  ಕಲಾಕೃತಿ ಪ್ರದರ್ಶನಗೊಂಡಿದ್ದು ಸುತ್ತೂರು ಮಠದಲ್ಲಿ. 30 ಅಡಿಯ ದೊಡ್ಡ ಶಿವನ ಪ್ರತಿಮೆಯನ್ನು ಮರಳಿನಲ್ಲಿ ತಯಾರಿಸಿ ನಗರದ ಜನರ ಗಮನ ಸೆಳೆದರು. ನಂತರ 28 ಅಡಿ ಅಗಲ ಮತ್ತು 12 ಅಡಿ ಉದ್ದದ ಚಾಮುಂಡೇಶ್ವರಿ ದೇವಿಯನ್ನು ನಿರ್ಮಿಸಿದ್ದಾರೆ. ಮೈತ್ರೇಯ ಬುದ್ದನ ಪ್ರತಿಮೆ ಇವರ ಪ್ರತಿಭೆಯ ಇನ್ನೊಂದು ಅನಾವರಣ.

ಮಶಿನ್ ಟೂಲ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಪಡೆದಿರುವ ಗೌರಿಗೆ ಚಿಕ್ಕಂದಿನಿಂದಲೂ ಮಣ್ಣಿನಲ್ಲಿ ಗೊಂಬೆ ಮಾಡುವುದೆಂದರೆ ಅಚ್ಚುಮೆಚ್ಚು. ಈ ಆಸಕ್ತಿಯೇ ಮುಂದೆ ಮರಳಿನ ಕಲಾಕೃತಿಗಳನ್ನು ನಿರ್ಮಿಸಲು ಅಡಿಪಾಯ ಹಾಕಿತ್ತು. ಇವಿಷ್ಟೇ ಅಲ್ಲ, ಸ್ಯಾಂಡ್ ಬ್ರಶಿಂಗ್, ಸ್ಯಾಂಡ್ ಸ್ಕಲ್ಪ್‌ಚರ್, ಸ್ಯಾಂಡ್ ಪೇಂಟಿಂಗ್‌ನಲ್ಲಿ ಗೌರಿಯವರು ಪರಿಣತಿ ಹೊಂದಿದ್ದಾರೆ. ಇವರ ಈ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಎಕ್ಸಿಬಿಷನ್ ಅಥಾರಿಟಿಯಿಂದ ಕರೆಯೂ ಬಂದಿದೆ.

ತರಾಣಿ ಪ್ರಸಾದ್ ಮಿಸ್ರೊ
ಆಂಧ್ರ ಪ್ರದೇಶ ಮೂಲದ ತರಾಣಿ ಪ್ರಸಾದ್ ಮಿಸ್ರೊ  ಮೂಲತಃ ಚಿತ್ರ ಕಲಾವಿದ. ಆದರೆ ಹೀಗೊಮ್ಮೆ ಒಡಿಶಾಗೆ ಭೇಟಿ ನೀಡಿದ್ದಾಗ ಅಲ್ಲಿ ಕಡಲ ತೀರದಲ್ಲಿ ನಡೆಯುತ್ತಿದ್ದ ಮರಳಿನ ಕಲಾಕೃತಿಗಳ ಸ್ಪರ್ಧೆ ಇವರ ಚಿತ್ತವನ್ನು ಸೆಳೆದಿತ್ತು. ಈ ಮರಳಿನ ಕಲಾಕೃತಿಗಳನ್ನು ಮಾಡುವುದನ್ನು ಕಲಿಯಲೇಬೇಕೆಂಬ ಛಲ ಹೊತ್ತ ಪ್ರಸಾದ್ ತನ್ನಷ್ಟಕ್ಕೆ ತಾನೇ ಮರಳಿನ ಮೇಲೆ ಕಲಾಕೃತಿಗಳನ್ನು ತಯಾರಿಸಲು ಆರಂಭಿಸಿದರು.
 
ಮೊದ ಮೊದಲು ಸರಿಯಾದ ರೂಪತಾಳದೆ ಇದ್ದ ಕಲಾಕೃತಿಗಳು ನಂತರ ಇವರ ಹಿಡಿತಕ್ಕೆ ಸಿಕ್ಕಿದವು. ಮರಳು ಕಲಾಕೃತಿಗಳನ್ನು ತಯಾರಿಸುವ ಜಿ.ಕಾಮೇಶ್ವರರಾವ್ ಅವರ ಬಳಿಯೂ ಅಭ್ಯಾಸದಲ್ಲಿ ತೊಡಗಿದರು. ಇದೀಗ 65ಕ್ಕೂ ಹೆಚ್ಚಿನ ಮರಳು ಕಲಾಕೃತಿಗಳನ್ನು ತಯಾರಿಸಿದ ಖ್ಯಾತಿ ಇವರದ್ದು.

 ಇವರು ಮೊಟ್ಟ ಮೊದಲು ತಯಾರಿಸಿದ್ದು ಶಿವಶಕ್ತಿ ಲಿಂಗಂ ಎನ್ನುವ ಮರಳಿನ ಕಲಾಕೃತಿ. ರಾಮನವಮಿಯ ಕಲಾಕೃತಿ, ನವರಾತ್ರಿ, ಬೀಜಿಂಗ್ ಕಾಲಿಂಗ್, ಕ್ಲೀನ್ ಎಫರ್ಟ್, ನ್ಯೂ ಬಿಗಿನಿಂಗ್, ಸ್ಪ್ರೆಡಿಂಗ್ ಮೆಸೇಜ್, ಪ್ರೇಯಿಂಗ್ ಫಾರ್ ಗ್ರೇಸ್, ವರ್ಕ್ ಆಫ್ ಡಿವೋಶನ್, ಹೆರಾಲ್ಡಿಂಗ್ ನ್ಯೂ ಇಯರ್, ಮೇರಾ ಭಾರತ್ ಮಹಾನ್, ವರ್ಲ್ಡ್ ಕಪ್ ಫೀವರ್ ಹೀಗೆ ಹಲವು ಆಸಕ್ತಿದಾಯಕ ವಿಷಯಗಳನ್ನು ಮರಳಿನಲ್ಲಿ ಮೂಡಿಸಿದ್ದಾರೆ.

ಮಾನಸ್ ಕುಮಾರ್ ಸಾಹು
29 ವರ್ಷದ ಮಾನಸ್ ಕುಮಾರ್ ಸಾಹು ತಮಗೆ 13 ವರ್ಷವಿರುವಾಗಲೇ ದಡದ ಬಳಿಯ ಮರಳಿನ ಕಲಾಕೃತಿಗಳನ್ನು ನೋಡಿ ಪುಳಕಿತಗೊಂಡರು. ಆಗಿಂದಲೇ  ಮರಳಿನಿಂದ ಶಿಲ್ಪಗಳನ್ನು ರೂಪಿಸಲು ಮುಂದಾದರು. ಭಾರತ ಮತ್ತು ವಿಶ್ವದ ಹಲವೆಡೆ ಸಂಚರಿಸಿ ಮರಳಿನ ಕಲಾಕೃತಿಗಳ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗೆದ್ದವರು.

ಮರಳಿನಲ್ಲಿ ಶಿಲ್ಪಗಳನ್ನಷ್ಟೇ ರೂಪಿಸಿದರೆ ಸಾಲದು ಇನ್ನೂ ಏನನ್ನಾದರೂ ಹೊಸತನ್ನು ಕಂಡುಹಿಡಿಯಬೇಕೆಂಬ ಹಂಬಲದಿಂದ ಕಳೆದ ಎರಡು ವರ್ಷದಿಂದ ಮರಳಿನ ಆನಿಮೇಶನ್‌ನಲ್ಲಿ ತೊಡಗಿಕೊಂಡಿದ್ದಾರೆ. ಸ್ಯಾಂಡ್ ಆನಿಮೇಷನ್ ಎಂಬ ಈ ವಿಭಿನ್ನ ಕಲೆಯಿಂದ ಹಲವು ಪ್ರಯೋಗಗಳನ್ನು ಮಾಡಿದ್ದಾರೆ.

ಇಂಟರ್‌ನ್ಯಾಷನಲ್ ಟ್ಯಾಲೆಂಟ್ ಹಂಟ್, ಇಂಡಿಯಾ ಫೆಸ್ಟಿವಲ್, ಏಶಿಯಾ ಫೇರ್, ಕೆನಡದ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಸ್ಯಾಂಡ್ ಸ್ಕಲ್ಪ್ಚರ್, ಮಸ್ಕಾಟ್ ಫೆಸ್ಟಿವಲ್  ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 3ನೇ ವರ್ಲ್ಡ್ ಮಾಸ್ಟರ್ ಸ್ಯಾಂಡ್ ಸ್ಕಲ್ಪ್ ಚರ್ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದುಕೊಂಡರು.

ಅಭಿನಂದನಿಕ ಅವಾರ್ಡ್, ಬೆಸ್ಟ್ ಸಿಟಿಜನ್ ಅವಾರ್ಡ್, ಪ್ರೈಡ್ ಆಫ್ ದಿ ಒಡಿಶಾ, ಬೆಸ್ಟ್ ಅಚೀವರ್ಸ್‌ ಅವಾರ್ಡ್, ಜಿಂದಗಿ ಲೈವ್ ಪ್ರೈಜ್ ಕೂಡ ಲಭಿಸಿದೆ. ಅಷ್ಟೇ ಅಲ್ಲ, ಏಡ್ಸ್, ಸುನಾಮಿ ಹೀಗೆ ಹಲವು ವಿಷಯಗಳ ಬಗ್ಗೆ ಮರಳಿನ ಕಲಾಕೃತಿಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.  2011ರ ಕ್ರಿಕೆಟ್ ವರ್ಲ್ಡ್ ಕಪ್ ಮತ್ತು ಹಾರರ್ಸ್‌ ಆಫ್ 26/11 ಇವರ ಪ್ರಸಿದ್ಧ ಮರಳಿನ ಅನಿಮೇಶನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT