ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವನಿತೆಯರಿಗೆ ಡ್ರಾ ಪಂದ್ಯ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಆತಿಥೇಯ ಭಾರತದ ವನಿತೆಯರಿಗೆ ಶನಿವಾರ ಸಂಜೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ  ಆರಂಭವಾದ ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಸಂಘಟಿತ ಹೋರಾಟ ಪ್ರದರ್ಶಿಸಿದ ಉಕ್ರೇನ್ ತಂಡವನ್ನು ಸೋಲಿಸುವ ಅವಕಾಶ ತಪ್ಪಿಸಿಕೊಂಡ  ಭಾರತ ಡ್ರಾಗೆ (1-1) ತೃಪ್ತಿಪಟ್ಟುಕೊಂಡಿತು.

32 ವರ್ಷಗಳ ನಂತರ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಕನಸು ಕಾಣುತ್ತಿರುವ ಭಾರತದ ಮಹಿಳಾ ತಂಡದ ಆರಂಭ  ಚೆನ್ನಾಗಿರಲಿಲ್ಲ. ಅದೃಷ್ಟವೂ ಜೊತೆಗಿರಲಿಲ್ಲ. ಆದರೆ ಮ್ಯಾನ್ ಟು ಮ್ಯಾನ್ ಮಾರ್ಕಿಂಗ್ ಅನ್ನು ಶಿಸ್ತುಬದ್ಧವಾಗಿ ಪಾಲಿಸಿದ ಉಕ್ರೇನ್ ಪ್ರಥಮಾರ್ಧದಲ್ಲಿ 1-0ಯಿಂದ ಮೇಲುಗೈ ಗಳಿಸಿತು. ನಾಯಕಿ ಮರೀನಾ ವೆನರಾಡೋವಾ ಪಂದ್ಯದ 26ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಚೆಂಡನ್ನು ಡೈರೆಕ್ಟ್ ಹಿಟ್ ಮೂಲಕ  ಗೋಲುಪೆಟ್ಟಿಗೆ ಸೇರಿಸಿದರು. ಇದಕ್ಕೂ ಮುನ್ನ ಗೋಲ್ ಕೀಪರ್ ಯೋಗಿತಾ ಬಾಲಿ ಎರಡು ಬಾರಿ ಗೋಲಿನ ಅಪಾಯವನ್ನು ತಪ್ಪಿಸಿದ್ದರು.

ಎರಡನೇ ಅವಧಿಯಲ್ಲಿ ಸಂಪೂರ್ಣ ಆಕ್ರಮಣಕಾರಿಯಾದ ಆತಿಥೇಯರು ಕಡೆಗೂ ಉಕ್ರೇನ್‌ನ ಉಕ್ಕಿನ ಕೋಟೆಯನ್ನು ಬೇಧಿಸುವಲ್ಲಿ ಯಶಸ್ವಿಯಾದರು. 42ನೇ ನಿಮಿಷದಲ್ಲಿ ಡಿ ವೃತ್ತದಲ್ಲಿ ಕಿರಣ್‌ದೀಪ್ ಕೌರ್ ಕೊಟ್ಟ ಪಾಸ್ ಅನ್ನು ಬಲಬದಿಯಲ್ಲಿದ್ದ ಸೌಂದರ್ಯ ಯೆಂಡೆಲಾ ಗೋಲುಪೆಟ್ಟಿಗೆಗೆ ಹೊಡೆದರು. 55ನೇ ನಿಮಿಷದಲ್ಲಿ ಗೋಲು ಹೊಡೆಯುವ ಯತ್ನದಲ್ಲಿ ಪೂನಂ ಸ್ಕೂಪ್‌ನಿಂದ ಗಾಳಿಯಲ್ಲಿದ್ದ ಚೆಂಡನ್ನು ಬ್ಯಾಡ್ಮಿಂಟನ್‌ನಲ್ಲಿ ಶಟಲ್ ತಳ್ಳುವ ರೀತಿಯಲ್ಲಿ ಅನುರಾಧಾ ತಮ್ಮ ಸ್ಟಿಕ್‌ನಿಂದ ಪೆಟ್ಟಿಗೆ ತಳ್ಳಿದರು. ಫೀಲ್ಡ್ ಅಂಪೈರ್ ಗೋಲು ನೀಡಿದರೂ, ರೆಫರಿಗಳು ಇದನ್ನು ರದ್ದುಗೊಳಿಸಿದರು. 

ನಂತರವೂ ಚೆಂಡು ಆತಿಥೇಯರ ಪಾಳಯದಲ್ಲಿ ಹೆಚ್ಚು ಹೊತ್ತು ಉರುಳಿತು. ಆದರೆ ಸಿಕ್ಕ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಬಳಸಿಕೊಳ್ಳಲು ಲಕ್ರಾ ಬಳಗಕ್ಕೆ ಸಾಧ್ಯವಾಗಲಿಲ್ಲ. ಭಾನುವಾರ ಭಾರತವು ಕೆನಡಾ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT