ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವಾದ ಒಪ್ಪದ ಪಾಕ್

ಹುತಾತ್ಮ ಕ್ಯಾಪ್ಟನ್ ಕಾಲಿಯಾಗೆ ಚಿತ್ರಹಿಂಸೆ
Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾರ್ಗಿಲ್ ಯುದ್ಧದ ವೇಳೆ ಸೆರೆಸಿಕ್ಕ ಕ್ಯಾಪ್ಟನ್ ಸೌರಭ್ ಕಾಲಿಯಾ ಮತ್ತಿತ್ತರ ಭಾರತೀಯ ಯೋಧರ ಅಮಾನುಷ ಹತ್ಯೆ ಪ್ರಕರಣದ ಬಗ್ಗೆ ಪರಿಶೀಲಿಸುವುದಾಗಿ ಪಾಕಿಸ್ತಾನ ಭರವಸೆ ನೀಡಿದೆ. `ನಮ್ಮ ಸೇನಾ ಪಡೆಯು ಸೆರೆಸಿಕ್ಕ ಭಾರತದ ಯೋಧರಿಗೆ ಚಿತ್ರಹಿಂಸೆ ನೀಡಿ ಸಾಯಿಸಿದ್ದರೆ ಅವರೇಕೆ ಶವಗಳನ್ನು ಭಾರತಕ್ಕೆ ನೀಡುತ್ತಿದ್ದರು? ಈ ವಿಷಯದಲ್ಲಿ ಗೊಂದಲಗಳು ಬಹಳ ಇವೆ. ಭಾರತ 15 ವರ್ಷಗಳಲ್ಲಿ ಒಮ್ಮೆಯೂ ಈ ವಿಷಯವನ್ನು ನಮ್ಮಂದಿಗೆ ಚರ್ಚಿಸಿಲ್ಲ. ಈಗ ಈ ವಿಷಯ ನನ್ನ ಗಮನಕ್ಕೆ ಬಂದಿದೆ, ಪರಿಶೀಲಿಸುವೆ' ಎಂದು ಪಾಕ್ ಆಂತರಿಕ ವ್ಯವಹಾರಗಳ ಸಚಿವ ರೆಮಾಹನ್ ಮಲಿಕ್ ಹೇಳಿದ್ದಾರೆ.

ಕ್ಯಾ. ಕಾಲಿಯಾ ಅವರು ಗುಂಡೇಟಿನಿಂದ ಸತ್ತರೋ ಅಥವಾ ಹವಾಮಾನ ವೈಪರೀತ್ಯದಿಂದ ಮೃತಪಟ್ಟರೋ ಎಂಬುದು ತಮಗೆ ಖಚಿತವಾಗಿಲ್ಲ ಎಂಬ ಉಪೇಕ್ಷೆಯ ಹೇಳಿಕೆಯನ್ನು ಶುಕ್ರವಾರ ನೀಡಿದ್ದ ರೆಹಮಾನ್ ಮಲಿಕ್‌ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗಳ ಸುರಿಮಳೆಯೇ ಎದುರಾಯಿತು. ಆದರೂ ಅವರು ಈ ಹಿಂದೆ ನೀಡಿದ್ದ ಹೇಳಿಕೆಗೆ ಬದ್ಧರಾಗಿದ್ದರು.

ಕ್ರಮಕ್ಕೆ ಭಾರತ ಆಗ್ರಹ: ಕ್ಯಾಪ್ಟನ್ ಸೌರಭ್ ಕಾಲಿಯಾ ಮತ್ತಿತರಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತವು ಪಾಕಿಸ್ತಾನವನ್ನು ಆಗ್ರಹಿಸಿದೆ. ಶುಕ್ರವಾರ ರಾತ್ರಿ ಇಲ್ಲಿ ನಡೆದ ಮಾತುಕತೆಯಲ್ಲಿ ಮಲಿಕ್ ಅವರೊಂದಿಗೆ ಈ ವಿಷಯವನ್ನು ಗೃಹ ಸಚಿವ ಸುಶೀಲ ಕುಮಾರ್ ಶಿಂಧೆ ಪ್ರಸ್ತಾಪಿಪಿದ್ದರು.

ಹಿನ್ನೆಲೆ: 1999ರಲ್ಲಿ ಕಾರ್ಗಿಲ್ ವಲಯದ ಭಾರತ- ಪಾಕ್ ಗಡಿ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ 4ನೇ ಜಾಟ್ ರೆಜಿಮೆಂಟ್‌ನ ಕ್ಯಾಪ್ಟನ್ ಸೌರಭ್ ಕಾಲಿಯಾ ಮತ್ತು ಐವರು ಯೋಧರನ್ನು ಪಾಕ್ ಪಡೆ ಬಂಧಿಸಿತ್ತು. ಕೆಲವು ದಿನಗಳ ನಂತರ ಛಿದ್ರ ಛಿದ್ರವಾಗಿ ತುಂಡು ಮಾಡಲಾದ ಅವರ ದೇಹಗಳನ್ನು ಭಾರತಕ್ಕೆ ಹಸ್ತಾಂತರಿಸಿತ್ತು.

ಯುದ್ಧ ಕೈದಿಗಳಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿ ಜೀನಿವಾ ಒಪ್ಪಂದ ಉಲ್ಲಂಘಿಸಿದೆ ಎಂದು ಕ್ಯಾ. ಕಾಲಿಯಾ ಅವರ ತಂದೆ ಎನ್.ಕೆ. ಕಾಲಿಯಾ  ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಡಿ.7ರಂದು ದೂರು ನೀಡಿದ್ದಾರೆ. ಹಾಗೆಯೇ ಈ ಪ್ರಕರಣವನ್ನು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸುವಂತೆ ಭಾರತ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT