ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಸುಧಾಸಿಂಗ್, ಪ್ರೇಮ್ ಬೆಳ್ಳಿ ನಗು

ಹೇಮಶ್ರೀ, ಸಮರ್‌ಜಿತ್‌ಗೆ ಕಂಚಿನ ಪದಕ
Last Updated 5 ಜುಲೈ 2013, 20:35 IST
ಅಕ್ಷರ ಗಾತ್ರ

ಪುಣೆ: ಭಾರತಕ್ಕೆ ನಿರಾಸೆಯಂತೂ ಆಗಲಿಲ್ಲ. ಇಪ್ಪತ್ತನೇ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮೂರನೇ ದಿನ ಎರಡು ಬೆಳ್ಳಿ ಎರಡು ಕಂಚಿನ ಪದಕಗಳನ್ನು ಪಡೆದ ಸಂತೃಪ್ತಿ ಆತಿಥೇಯರ ಪಾಳಯದಲ್ಲಿತ್ತು.

ಶುಕ್ರವಾರ ರಾತ್ರಿ ಹೊನಲು ಬೆಳಕಿನಲ್ಲಿ ನಡೆದ ಸ್ಪರ್ಧೆಗಳಿಗೆ ಎಂದಿನಂತೆ ಮಳೆರಾಯನ ಕಾಟ ಇದ್ದೇ ಇತ್ತು. ಆದರೆ ಭಾರತದ ಕುಮಾರವೇಲು ಪ್ರೇಮ್ ಕುಮಾರ್, ಸುಧಾಸಿಂಗ್ ಅವರು ರಜತ ಪದಕಗಳನ್ನು ಗೆಲ್ಲಲು, ಸಮರ್‌ಜಿತ್ ಸಿಂಗ್ ಮತ್ತು ಜೆ ಹೇಮಶ್ರೀ ಕಂಚಿನ ಪದಕಗಳನ್ನು ಗಳಿಸಲು ಯಾವುದೇ ಅಡ್ಡಿಯಾಗಲಿಲ್ಲ.

ಎರಡು ಕೂಟದಾಖಲೆಗಳೂ ಮೂಡಿ ಬಂದವು. ಮಹಿಳಾ ಸ್ಟೀಪಲ್‌ಚೇಸ್‌ನಲ್ಲಿ ಕೋಬೆಯಲ್ಲಿ ಜಪಾನಿನ ಮಿನೋರಿ ಓಡಿದ್ದ (9ನಿ.52.42ಸೆ.) ಕಾಲವನ್ನು ಇಲ್ಲಿ ಬಹರೇನ್‌ನ ರುತ್ ಜೆಬೆಟ್ ಹಿಂದಿಕ್ಕಿದರು. ಮಹಿಳಾ ವಿಭಾಗದ ಹ್ಯಾಮರ್ ಎಸೆತದಲ್ಲಿ ಗುವಾಂಗ್‌ಜೌನಲ್ಲಿ (2009) ಚೀನಾದ ವೆಂಕ್ಸುಯು ಮಾಡಿದ್ದ ದಾಖಲೆಯನ್ನು (72.07ಮೀ.) ಇಲ್ಲಿ ಅದೇ ದೇಶದ ವಾಂಗ್‌ಜೆಂಗ್ ಹಿಂದಿಕ್ಕಿದರು.

ಪುರುಷರ ಲಾಂಗ್‌ಜಂಪ್‌ನಲ್ಲಿ ಭಾರತದ ಕುಮಾರವೇಲು ಪ್ರೇಮ್ ಕುಮಾರ್ ಅತ್ಯುತ್ತಮ ಸಾಮರ್ಥ್ಯ ತೋರಿದರು. ಇವರು ತಮ್ಮ ಮೊದಲ ಯತ್ನದಲ್ಲಿ 7.64ಮೀಟರ್ಸ್ ಜಿಗಿದರು. ನಂತರದ ಎರಡು ಯತ್ನಗಳಲ್ಲಿ ಕುಸಿತ (7.54ಮೀ. ಮತ್ತು 7.63ಮೀ.) ಕಂಡರು. ಮತ್ತೆ 7.86ಮೀ. ಮತ್ತು 7.68 ಮೀಟರ್‌ಗಳಿಂದ ಚೇತರಿಕೆ ಕಂಡುಕೊಂಡರು. ಕೊನೆಯ ಯತ್ನದಲ್ಲಿ ಚೀನಾದ ವಾಂಗ್ ಜಿಯಾನನ್ 7.95ಮೀಟರ್ಸ್ ಜಿಗಿದು ವಿಜಯದ ನಗೆ ಬೀರುತ್ತಿದ್ದರು. ಆಗ ಕುಮಾರವೇಲು ತಮ್ಮ ಕೊನೆಯ ಯತ್ನದಲ್ಲಿ ಅತ್ಯುತ್ತಮ ಜಿಗಿತ (7.92ಮೀ.) ಕಂಡರು. ಇದು ಇವರಿಗೆ ಬೆಳ್ಳಿಯ ಪದಕ ತಂದಿತ್ತಿತು.

ಸ್ಪರ್ಧೆಯ ನಂತರ `ಪ್ರಜಾವಾಣಿ' ಜತೆಗೆ ಮಾತನಾಡಿದ ಚೆನ್ನೈಯ ಪ್ರೇಮ್‌ಕುಮಾರ್ `ತುಂತುರು ಹನಿಗಳಿಂದ ಕೂಡಿದ ಗಾಳಿ ಎದುರಿನಿಂದ ಬೀಸುತ್ತಿದ್ದುದರಿಂದ ನನಗೆ ಟೇಕ್‌ಆಫ್ ಸರಿಯಾಗಿ ಮಾಡಲಾಗಲಿಲ್ಲ' ಎಂದರು.

ಇದೇ ವೇಳೆ ಕೋಚ್ ಶ್ಯಾಮ್‌ಕುಮಾರ್ ಮಾತನಾಡಿ `ಇವರು ಟೇಕ್‌ಆಫ್ ಬೋರ್ಡ್‌ಗಿಂತ ಕೆಲವು ಸೆಂಟಿಮೀಟರ್ ದೂರದಿಂದಲೇ ಜಿಗಿತ ಆರಂಭಿಸಿದ್ದು ತಪ್ಪಾಯಿತು. ಒಂದು ವೇಳೆ ಕರಾರುವಾಕ್ಕಾಗಿ ಟೇಕ್‌ಆಫ್ ಆಗಿದ್ದರೆ ಚಿನ್ನವೇ ಬರುವ ಸಾಧ್ಯತೆ ಇತ್ತು' ಎಂದರು.

ಭಾರತದ ಇನ್ನೊಬ್ಬ ಸ್ಪರ್ಧಿ ಅಂಕಿತ್ ಶರ್ಮ 7.35 ಮೀಟರ್ಸ್ ಜಿಗಿಯಲಷ್ಟೇ ಶಕ್ತರಾಗಿ 9ನೇ ಸ್ಥಾನಕ್ಕಿಳಿದರು. ಸ್ಪರ್ಧೆಗೆ ಮೊದಲು ಇಲ್ಲಿ ಪಾಲ್ಗೊಳ್ಳುತ್ತಿದ್ದವರಲ್ಲಿ ಏಷ್ಯಾ ಮಟ್ಟದಲ್ಲಿ ಅತಿ ಹೆಚ್ಚಿನ ಸಾಮರ್ಥ್ಯ ಹೊಂದಿದ್ದ ಕಜಕಸ್ತಾನದ ಕಾನ್‌ಸ್ಟಾಂಟಿನ್ ಸಫ್ರಾನೊವ್ ಇಲ್ಲಿ ತಮ್ಮ ಎಂದಿನ ಸಾಮರ್ಥ್ಯ ತೋರುವಲ್ಲಿ ವೈಫಲ್ಯ ಕಂಡರು. ಕಳೆದ ಜೂನ್‌ನಲ್ಲಿ ಇವರು ಕೊಸನೊವ್‌ನಲ್ಲಿ 8.10 ಮೀಟರ್ಸ್ ದೂರ ಜಿಗಿದಿದ್ದರು. ಆದರೆ ಇಲ್ಲಿ ಅವರು ಕೇವಲ 7.32 ಮೀಟರ್ಸ್ ದೂರ ಜಿಗಿಯಲಷ್ಟೇ ಶಕ್ತರಾಗಿ 10ನೇ ಸ್ಥಾನಕ್ಕಿಳಿದರು.

ಮಹಿಳೆಯರ 3000ಮೀಟರ್ಸ್ ಹರ್ಡಲ್ಸ್‌ನಲ್ಲಿ ಭಾರತದ ಸುಧಾಸಿಂಗ್ (9ನಿ.56.27ಸೆ.) ಎರಡನೆಯವರಾಗಿ ಗುರಿ ತಲುಪಿ ರಜತ ಪದಕ ಗೆದ್ದರು. ಭಾರತದ ಇನ್ನಿಬ್ಬರು ಸ್ಪರ್ಧಿಗಳಾದ ಕಿರಣ್ ತಿವಾರಿ (10ನಿ.48.02ಸೆ.) ಮತ್ತು ಪ್ರಿಯಾಂಕಾ ಸಿಂಗ್ ಪಟೇಲ್ (11ನಿ.07.34ಸೆ.) 7ಮತ್ತು 9ನೆಯವರಾಗಿ ಗುರಿ ತಲುಪಿದರು.

ಸ್ಪರ್ಧೆಯ ನಂತರ ಮಾತನಾಡಿದ ಸುಧಾಸಿಂಗ್ `ಇದಕ್ಕಿಂತ ಉತ್ತಮ ಸಾಮರ್ಥ್ಯ ತೋರಲು ನನಗೆ ಸಾಧ್ಯವಿತ್ತು. ಆದರೆ ನಾನು ವಾರ್ಮ್‌ಅಪ್ ಸ್ಥಳದಿಂದ ಸ್ಪರ್ಧೆಯ ಸ್ಥಳಕ್ಕೆ ಬಂದು ಕುಳಿತು 25 ನಿಮಿಷಗಳ ನಂತರ ಸ್ಪರ್ಧೆ ಆರಂಭವಾಗಿದ್ದು ನನಗೆ ಅನನುಕೂಲವಾಯಿತು. ಆ ವೇಳೆ ಹರ್ಡಲ್ಸ್ ಸ್ಪರ್ಧೆಗೆ ಸಂಬಂಧಿಸಿದಂತೆ ಸುಮಾರು ಆರೇಳು ಸಲ `ಆರಂಭ' ನಡೆದದ್ದು ಬಹಳ ಕಿರಿಕಿರಿ ಉಂಟು ಮಾಡಿತು. ಹೀಗಾಗಿ ದೇಹದ ಬಿಗಿ ಕಡಿಮೆಯಾದಂತೆನಿಸಿತು' ಎಂದರು.

100 ಮೀಟರ್ಸ್ ಹರ್ಡಲ್ಸ್‌ನಲ್ಲಿ ಭಾರತಕ್ಕೆ ಅದೃಷ್ಟದ ಕಂಚು ಒಲಿದು ಬಂದಿತು. ಈ ಸ್ಪರ್ಧೆ ಮುಗಿದಾಗ ಜಪಾನಿನ ಹಿಟೊಮಿ ಶಿಮುರ ಮತ್ತು ಕಜಕಸ್ತಾನದ ಅನಸ್ತಾಸ್ಸಿಯ ಫಿಲಿಪೆಂಕ್ ಕ್ರಮವಾಗಿ 3ನೇ ಮತ್ತು 4ನೆಯವರಾಗಿ ಗುರಿ ತಲುಪಿದ್ದಾರೆಂದು ಇಲೆಕ್ಟ್ರಾನಿಕ್ ಬೋರ್ಡ್‌ನಲ್ಲಿ ಮೂಡಿ ಬಂದಿತ್ತು. ಆದರೆ ಓಟವನ್ನು ಪರಿಶೀಲಿಸಿದ ತಜ್ಞರು ಇವರಿಬ್ಬರೂ ಫೌಲ್ ಎಸಗಿರುವುದನ್ನು ಗುರುತಿಸಿದ್ದು, ಅವರಿಬ್ಬರನ್ನೂ ಅನರ್ಹಗೊಳಿಸಿದರು. ಹೀಗಾಗಿ ಐದನೇ ಮತ್ತು ಆರನೇ ಸ್ಥಾನದಲ್ಲಿದ್ದ ಭಾರತದ ಜೆ.ಹೇಮಶ್ರಿ ಮತ್ತು ಜಿ.ಗಾಯತ್ರಿ ಕ್ರಮವಾಗಿ 3ನೇ ಮತ್ತು 4ನೇ ಸ್ಥಾನಕ್ಕೇರಿದರು.

ಪುರುಷರ ಜಾವಲಿನ್ ಸ್ಪರ್ಧೆಯಲ್ಲಿ ಭಾರತದ ಸಮರ್‌ಜಿತ್ ಸಿಂಗ್ ತಮ್ಮ ಎರಡನೇ ಎಸೆತದಲ್ಲಿ 75.03 ಮೀಟರ್ಸ್ ದೂರ ಎಸೆದದ್ದು ಅವರಿಗೆ ಕಂಚಿನ ಪದಕ ತಂದಿತ್ತಿತು.

ಮಹಿಳೆಯರ 1500 ಮೀಟರ್ಸ್ ಓಟದಲ್ಲಿ ಭಾರತದ ಸಿನಿಮೋಳ್ ಮೊದಲ ಸುತ್ತನ್ನು ಪೂರ್ಣಗೊಳಿಸುವಾಗ ಇತರರಿಗಿಂತ ಐದಾರು ಅಡಿಗಳಷ್ಟು ಮುಂದಿದ್ದರು. ಆದರೆ ಎರಡನೇ ಸುತ್ತು ಪೂರ್ಣಗೊಳಿಸಿದ ಕೆಲವೇ ಕ್ಷಣಗಳಲ್ಲಿ ಅವರನ್ನು ಭಾರತದ ಒ ಪಿ ಜೈಶಾ ಹಿಂದಿಕ್ಕಿದರು. ಆದರೆ ಅಂತಿಮ ಸುತ್ತು ಮುಗಿಯಲು ಇನ್ನೂ 150 ಮೀಟರ್‌ಗಳಿವೆ ಎನ್ನುವಾಗಲೇ ಬಹರೇನ್‌ನ ಮಿಮಿ ಮತ್ತು ಯುಎಇಯ ಬೆತ್ಲೆಹೆಮ್ ಮುನ್ನಡೆ ಪಡೆದು ಅದನ್ನು ಹೆಚ್ಚಿಸಿಕೊಳ್ಳುತ್ತಲೇ ಹೋದರು.

ಪುರುಷರ ವಿಭಾಗದ 1500ಮೀಟರ್ಸ್‌ನಲ್ಲಿ ಭಾರತದ ಸಂದೀಪ್ ಕರಣ್ ಸಿಂಗ್ (3ನಿ.50.41ಸೆ.) ಮತ್ತು ಪ್ರಾಂಜಲ್ ಗೊಗೊಯ್ (3ನಿ.56.01ಸೆ.) ಆರಂಭದಿಂದಲೂ ಐವರಿಗಿಂತ ಹಿಂದೆಯೇ ಇದ್ದು ಕೊನೆಗೆ ಕ್ರಮವಾಗಿ 7ನೇ ಮತ್ತು 9ನೆಯವರಾಗಿ ಗುರಿ ತಲುಪಿದರು. ಎರಡು ವರ್ಷಗಳ ಹಿಂದೆ ಕೋಬೆಯಲ್ಲಿ ನಡೆದಿದ್ದ ಇದೇ ಕೂಟದಲ್ಲಿ ಚಿನ್ನ ಗೆದ್ದಿದ್ದ ಕತಾರ್‌ನ ಮಹಮ್ಮದ್ ಅಲ್‌ಗರಾನಿ ಇಲ್ಲಿ ಈ ಸಲ ಎರಡನೆಯವರಾಗಿ ಗುರಿ ಸೇರಿದರು.

110 ಮೀಟರ್ಸ್ ಹರ್ಡಲ್ಸ್‌ನಲ್ಲಿ ಭಾರತದ ಸಿದ್ಧಾಂತ್ ತಿಂಗಳಾಯ ಅವರಿಂದ ಭಾರತಕ್ಕೆ ಪದಕದ ನಿರೀಕ್ಷೆ ಇತ್ತು. ಆದರೆ ಮುಂಬೈನಲ್ಲಿ ನೆಲೆಸಿರುವ ಮಂಗಳೂರು ಮೂಲದ ಸಿದ್ಧಾಂತ್ ಕೊನೆಯ ಹರ್ಡಲ್‌ವರೆಗೂ ಎರಡು ಮತ್ತು ಮೂರನೇ ಸ್ಥಾನದಲ್ಲಿ ನುಗ್ಗಿ ಬರುತ್ತಿದ್ದವರು, ಕೊನೆಯ ಹರ್ಡಲ್ ಜಿಗಿದು ಮುನ್ನುಗ್ಗುವಲ್ಲಿ ವಿಳಂಬ ಮಾಡಿದರು. ಆ ಕ್ಷಣದಲ್ಲಿ ಜಪಾನ್‌ನ ಯಜಾವಾ ಮುಂದಡಿ ಇಟ್ಟಾಗಿತ್ತು.

ಮಹಿಳಾ ವಿಭಾಗದ ಲಾಂಗ್‌ಜಂಪ್‌ನಲ್ಲಿ ಚಿನ್ನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ತರ ಆಸೆ ಇರಿಸಿಕೊಂಡಿದ್ದ ಭಾರತದ ಮಯೂಕಾ ಜಾನಿ ಮೊದಲ ದಿನ ಕಂಚಿನ ಪದಕ ಪಡೆದರು. ಆ ನಿರಾಸೆ ಅವರನ್ನು ಇನ್ನಿಲ್ಲದಂತೆ ಕಾಡಿತ್ತು. ಶುಕ್ರವಾರ ನಡೆದ ಟ್ರಿಪಲ್‌ಜಂಪ್‌ನಲ್ಲಿ ಅವರು ಪಾಲ್ಗೊಳ್ಳಲಿಲ್ಲ. ಆದರೆ ಭಾರತದ ಇನ್ನೊಬ್ಬ ಸ್ಪರ್ಧಿ ಅಮಿತಾ ಬೇಬಿ 12.57 ಮೀಟರ್ಸ್ ದೂರ ಜಿಗಿದು ಏಳನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು. ಈ ಜಿಗಿತ ಅವರ ಮೊದಲ ಯತ್ನದಲ್ಲಿಯೇ ಬಂದಿತು.

ಪುರುಷರ 4x100 ಮೀಟರ್ಸ್ ರಿಲೆ ಓಟದ ಎರಡನೇ ಹೀಟ್‌ನಲ್ಲಿ ಭಾರತ ಎಡವಿದ್ದೊಂದು ವಿಶೇಷ. ಸಂಜೆ ನಡೆದ ಈ ಸ್ಪರ್ಧೆಯ ವೇಳೆ ಭಾರತದ ಎಂ.ವಿಜಯಕುಮಾರ್ ಕರಾರುವಾಕ್ಕಾಗಿ ಓಡಿ ಬ್ಯಾಟನ್ ಅನ್ನು ಕೃಷ್ಣಕುಮಾರ್ ಕೈಗಿತ್ತರು. ಕೃಷ್ಣ ಕುಮಾರ್ ಕೈನಿಂದ ಬ್ಯಾಟನ್ ಪಡೆದ ಸಮೀರ್ ಮೊನ್ ಕೊನೆಯ ಹಂತದಲ್ಲಿ ಬ್ಯಾಟನ್ ಅನ್ನು ಮನಿಕಂಠ ರಾಜ್ ಅವರ ಕೈಗೊಪ್ಪಿಸಲೆತ್ನಿಸುತ್ತಿದ್ದಂತೆ ಗೊಂದಲದಲ್ಲಿದ್ದ ಮಣಿಕಂಠ ವಿಫಲರಾಗಿ ಕುಸಿದು ಕುಳಿತೇ ಬಿಟ್ಟರು. ಏನೆಂದು ನೋಡುವಷ್ಟರಲ್ಲಿ ಚೀನಾ ತೈಪೆಯ ಓಟಗಾರ ಯೀ ವೆಯ್ ಚೆನ್ ಗುರಿ ಮುಟ್ಟಿಯಾಗಿತ್ತು. ಭಾರತ ಈ ಓಟವನ್ನು ಪೂರ್ಣಗೊಳಿಸಲೇ ಇಲ್ಲ.

ಡೆಕಥ್ಲಾನ್‌ನಲ್ಲಿ ಭಾರತದ ದಯಾರಾಮ್ (6705ಪಾಯಿಂಟ್ಸ್) ಮತ್ತು ಕೆ.ದಿಲಿಪ್ ಕುಮಾರ್ (6544) ಕ್ರಮವಾಗಿ 5 ಮತ್ತು 6ನೇ ಸ್ಥಾನ ಗಳಿಸಲು ಶಕ್ತರಾದರು.

ಏಷ್ಯಾದ ದಾಖಲೆ ಕಜಕಸ್ತಾನದ ಡಿಮಿತ್ರಿ ಕಾರ್ಪೋವ್ (8725ಪಾಯಿಂಟ್ಸ್) ಹೆಸರಿನಲ್ಲಿದ್ದು, ಈ ಸಲ ಇಲ್ಲಿ ಅವರೇ ಚಿನ್ನದ ಪದಕ ಗೆದ್ದರಾದರೂ ಅವರು ಗಳಿಸಿದ ಸಾಮರ್ಥ್ಯ (8037) ಅವರ ದಾಖಲೆಯ ಸಮೀಪವೂ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT