ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಹಾಕಿಗೊಬ್ಬ ಮಂಡೇಲಾ ಬೇಕು

Last Updated 30 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ

ಕಾಮನ್‌ವೆಲ್ತ್  ಕ್ರೀಡೆಗಳ ಫೈನಲ್‌ನಲ್ಲಿ ಭಾರತ ಹಾಕಿ ತಂಡ ಅವಮಾನಕರ ರೀತಿಯಲ್ಲಿ ಸೋತಾಗ ಮನಸ್ಸಿನಲ್ಲೊಂದು ವಿಚಾರ ಹೊಳೆದಿತ್ತು. ‘ಭಾರತ ಹಾಕಿ ತಂಡಕ್ಕೊಬ್ಬ ನೆಲ್ಸನ್ ಮಂಡೇಲಾ ಬೇಕು.’ ದಕ್ಷಿಣ ಆಫ್ರಿಕದ ಈ ಮಹಾತ್ಮನಿಗೂ ಭಾರತದ ಹಾಕಿಗೂ ಏನು ಸಂಬಂಧ ಎಂದು ನೀವು ಕೇಳಬಹುದು. ಇಲ್ಲ, ಯಾವ ರೀತಿಯ ಸಂಬಂಧವೂ ಇಲ್ಲ. ಆದರೆ, ನೆಲ್ಸನ್ ಮಂಡೇಲಾ ಕ್ರೀಡಾಶಕ್ತಿಯಿಂದ ದಕ್ಷಿಣ ಆಫ್ರಿಕದಲ್ಲಿ ಒಡೆದುಹೋಗಿದ್ದ ಬಿಳಿಯ ಮತ್ತು ಕರಿಯ ಮನಸ್ಸುಗಳನ್ನು ಒಂದುಗೂಡಿಸಿದವರು.

ಆ ಒಂದು ರಗ್ಬಿ ವಿಶ್ವ ಕಪ್ ಗೆಲುವು ದಕ್ಷಿಣ ಆಫ್ರಿಕದಲ್ಲಿ ಹರಿಯಬಹುದಾಗಿದ್ದ ರಕ್ತದ ಹೊಳೆಯನ್ನು ನಿಲ್ಲಿಸಿತ್ತು. ನೂರಾರು ವರ್ಷಗಳಿಂದ ತಮ್ಮನ್ನು ತುಳಿದು ಪ್ರಾಣಿಗಳಂತೆ ನಡೆಸಿಕೊಂಡಿದ್ದ ವರ್ಣಭೇದಿ ಬಿಳಿಯರ ವಿರುದ್ಧ ಕರಿಯರಲ್ಲಿ ತುಂಬಿದ್ದ ದ್ವೇಷ, ಆಕ್ರೋಶ ತಣ್ಣಗಾಗಿತ್ತು. ಇಬ್ಬರ ದೇಹದಲ್ಲೂ ಹರಿಯುತ್ತಿರುವ ರಕ್ತದ ಬಣ್ಣ ಒಂದೇ ಎಂಬುದು ಇಬ್ಬರಿಗೂ ಅರಿವಾಗಿತ್ತು.


ಭಾರತ ದೇಶದಲ್ಲೇನೂ ದಕ್ಷಿಣ ಆಫ್ರಿಕ ಕಂಡಂಥ ಪರಿಸ್ಥಿತಿ ಇಲ್ಲ. ಆದರೆ ಭಾರತದ ಹಾಕಿ ಮಾತ್ರ ಅಧೋಗತಿ ಕಂಡಿದೆ. 27 ವರ್ಷಗಳ ಕಾಲ ಜೈಲಿನ ಕತ್ತಲೆ ಕೋಣೆಯಲ್ಲಿ ಕಳೆದಿದ್ದ ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕದ ಕಪ್ಪು ಜನರಿಗಷ್ಟೇ ಅಲ್ಲ ತಮ್ಮನ್ನು ಸದಾ ದ್ವೇಷಿಸಿದ ಬಿಳಿಯರಿಗೂ ಬೆಳಕನ್ನು ತೋರಿಸಿದವರು. ಆ ಬೆಳಕು ಪ್ರಜ್ವಲಿಸಿದ್ದು ರಗ್ಬಿ ಆಟದ ಮೂಲಕ. ‘ಒಂದು ತಂಡ, ಒಂದು ದೇಶ’ ಎಂದು ಮಂಡೇಲಾ ಹೇಳಿದ್ದು ಚಮತ್ಕಾರವನ್ನೇ ಮಾಡಿತ್ತು. ‘ಒಂದು ತಂಡ’ ಎಂದರೆ ಅದರಲ್ಲಿ ಬಿಳಿಯರು ಮತ್ತು ಕರಿಯರಿಬ್ಬರಿಗೂ ಸ್ಥಾನ.

‘ಒಂದು ದೇಶ’ ಎಂದರೆ ಅದರಲ್ಲೂ ಎಲ್ಲರಿಗೂ ಸಮಾನ ಸ್ಥಾನಮಾನ. ಭಾರತದ ಹಾಕಿ ತಂಡವೂ ಈಗ ‘ಒಂದು ದೇಶ’ದ ತಂಡವಾಗಿ ಹೊರಹೊಮ್ಮಬೇಕಾಗಿದೆ. ಭಾರತದಲ್ಲೂ ಮನಸ್ಸುಗಳು ಒಡೆದುಹೋಗಿವೆ. ಒಳಗೊಳಗೆ ಮತಾಂಧ ದ್ವೇಷ ಕುದಿಯುತ್ತಿದೆ. ಕಾಮನ್‌ವೆಲ್ತ್ ಕ್ರೀಡೆಗಳ ಸಮಯದಲ್ಲಿ ಎಲ್ಲೂ ಕೋಮು ಗಲಭೆಗಳಾಗಲಿಲ್ಲ. ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಕ್ರೀಡೆಗಿದೆ ಎಂಬುದಕ್ಕೆ ಇದು ನಿದರ್ಶನ. ನಮ್ಮ ದೇಶದ ರಾಷ್ಟ್ರೀಯ ಕ್ರೀಡೆ ಎಂದು ಅಲಂಕಾರಿಕವಾಗಿ ಕರೆಸಿಕೊಳ್ಳುವ ಹಾಕಿ ಆಟವನ್ನು ಬಲಪಡಿಸಿದಲ್ಲಿ, ಭಾರತ ಮರಳಿ ಒಲಿಂಪಿಕ್ ಚಾಂಪಿಯನ್ ಆದಲ್ಲಿ, ಅದು ಕೂಡ ಚಮತ್ಕಾರ ಮಾಡಬಹುದು. ಆದರೆ ಭಾರತದ ಹಾಕಿಯನ್ನು ಪಾತಾಳದಿಂದ ಮೇಲಕ್ಕೆತ್ತುವ ನೆಲ್ಸನ್ ಮಂಡೇಲಾ ಸಿಗುತ್ತಾನೆಯೇ?


ಖ್ಯಾತ ಲೇಖಕ ರಾಮಚಂದ್ರ ಗುಹಾ ‘ಪ್ರಜಾವಾಣಿ’ಯ ತಮ್ಮ ‘ಗುಹಾಂಕಣ’ದಲ್ಲಿ ಎರಡು ಪುಸ್ತಕಗಳ ಬಗ್ಗೆ ಬರೆದಿದ್ದರು. ಅದರಲ್ಲಿ ಒಂದು ಜಾನ್ ಕಾರ್ಲಿನ್ ಎಂಬ ಪತ್ರಕರ್ತ ಬರೆದ ‘ಪ್ಲೇಯಿಂಗ್ ದಿ ಎನೆಮಿ’ (ನೆಲ್ಸನ್ ಮಂಡೇಲಾ ಆ್ಯಂಡ್ ದಿ ಗೇಮ್ ದಟ್ ಮೇಡ್ ಎ ನೇಷನ್). ನನ್ನ ಸಂಪಾದಕರು ಅದನ್ನು ಓದು ಎಂದು ಕಳಿಸಿಕೊಟ್ಟರು. “ನೆಲ್ಸನ್ ಮಂಡೇಲಾ 1994 ರಲ್ಲಿ ದಕ್ಷಿಣ ಆಫ್ರಿಕದ ಅಧ್ಯಕ್ಷರಾದ ಮೇಲೆ, 1995 ರಲ್ಲಿ ಅಲ್ಲಿ ರಗ್ಬಿ ವಿಶ್ವಕಪ್ ನಡೆಯುತ್ತದೆ. ಮಂಡೇಲಾ ಇದನ್ನು ದೇಶ ಕಟ್ಟುವ ಕೆಲಸಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ನ್ಯೂಜಿಲೆಂಡ್‌ನ ಆಲ್ ಬ್ಲ್ಯಾಕ್ಸ್ ವಿರುದ್ಧದ ಫೈನಲ್ ಪಂದ್ಯ ನೋಡಲು ಮಂಡೇಲಾ ತಮ್ಮ ತಂಡದ ಹಸಿರು ಜೆರ್ಸಿ ಮತ್ತು ಕ್ಯಾಪ್ ಧರಿಸಿಯೇ ಹೋಗುತ್ತಾರೆ.

ಅವರ ಜೆರ್ಸಿ ನಂಬರ್ 6. ಅದು ದಕ್ಷಿಣ ಆಫ್ರಿಕ ತಂಡದ ನಾಯಕ ಫ್ರ್ಯಾಂಕೊಯ್ಸಾ ಪಿಯೆನಾರ್ ಅವರ ಜೆರ್ಸಿ ನಂಬರ್. ಕ್ರೀಡಾಂಗಣ 60 ಸಾವಿರ ಜನರಿಂದ (ಕಪ್ಪು ಮತ್ತು ಬಿಳಿಯರು ಸೇರಿ) ತುಂಬಿರುತ್ತದೆ. ಇಡೀ ದೇಶದ ರಸ್ತೆಗಳಲ್ಲಿ ಒಂದು ನರಪಿಳ್ಳೆ ಇಲ್ಲ. ಎಲ್ಲರೂ ಮನೆಯಲ್ಲಿ, ಹೊಟೆಲ್‌ನಲ್ಲಿ ಟಿವಿ ಮುಂದೆ ಕುಳಿತಿದ್ದಾರೆ. ದಕ್ಷಿಣ ಆಫ್ರಿಕ ಜಯ ಗಳಿಸಿದಾಗ ಕ್ರೀಡಾಂಗಣದಲ್ಲಿ ಒದ್ದೆಯಾಗದ ಕಣ್ಣು ಒಂದೂ ಇರಲಿಲ್ಲ.

ಕ್ರೀಡಾಂಗಣದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲೇ ಒದ್ದೆಯಾಗದ ಕಣ್ಣು ಒಂದೂ ಇರಲಿಲ್ಲ. ನಾಯಕ ಪಿಯೆನಾರ್ ಅವರನ್ನು ಅಭಿನಂದಿಸಿದ ಮಂಡೇಲಾ ‘ದೇಶಕ್ಕಾಗಿ ನೀನು ಮಾಡಿದ ಉಪಕಾರಕ್ಕಾಗಿ ಧನ್ಯವಾದ’ ಎಂದು ಹೇಳುತ್ತಾರೆ. ಆಗ ಪಿಯೆನಾರ್, ‘ಅಲ್ಲ ಅಧ್ಯಕ್ಷರೇ ಅಲ್ಲ. ನಮ್ಮ ದೇಶಕ್ಕಾಗಿ ನೀವು ಮಾಡಿದ ಉಪಕಾರಕ್ಕಾಗಿ ಧನ್ಯವಾದ’ ಎಂದು ಉತ್ತರ ಕೊಡುತ್ತಾರೆ. ಯಾರು ಮಂಡೇಲಾನನ್ನು ನೇಣು ಹಾಕಿ ಎಂದು ಕೂಗುತ್ತಿದ್ದರೋ ಅವರೇ ನೆಲ್ಸನ್, ನೆಲ್ಸನ್ ಎಂದು ಧನ್ಯತಾ ಭಾವದಿಂದ ಅಭಿನಂದಿಸಿದ್ದರು.” ಪುಸ್ತಕ ಓದುತ್ತಿರುವವರ ಕಣ್ಣುಗಳೂ ಒದ್ದೆಯಾಗುತ್ತವೆ.


ಆಗ ಅನಿಸಿದ್ದು, ಭಾರತದ ಹಾಕಿ ತಂಡಕ್ಕೂ ಇಂಥ ಒಬ್ಬ ಮಂಡೇಲಾ ಬೇಕು ಎಂದು. ಭಾರತ ಹಾಕಿ ತಂಡಕ್ಕೆ ಏನಾಗಿದೆ ಎನ್ನುವುದಕ್ಕಿಂತ ಏನಾಗಬೇಕಾಗಿದೆ ಎಂದು ಯೋಚಿಸುವ ಸಮಯ ಇದು. ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ನೂರೊಂದು ಪದಕಗಳ ಸಂಭ್ರಮದಲ್ಲಿ ಎಲ್ಲರೂ ತೇಲುತ್ತಿದ್ದಾಗ, ಆ ಖುಷಿಯ  ದೊಡ್ಡ ಬಲೂನನ್ನು ಹಾಕಿ ಸೋಲು ಢಮಾರ್ ಎನಿಸಿಬಿಟ್ಟಿತ್ತು.

ಆಸ್ಟ್ರೇಲಿಯನ್ನರ ಕೈಲಿ ಅಂದು ಅನುಭವಿಸಿದ ಎಂಟು ಗೋಲುಗಳ ಸೋಲು ಮನಸ್ಸಿನೊಳಗೆ ಆಳವಾದ ಗಾಯವನ್ನು ಮಾಡಿಬಿಟ್ಟಿತ್ತು. ಅದೂ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧೀ ಹಾಗೂ ಭಾವೀ ಪ್ರಧಾನಿ ಎಂದು ಹೊಗಳಿಸಿಕೊಳ್ಳುತ್ತಿರುವ ರಾಹುಲ್ ಗಾಂಧೀ ಎದುರು. ಭಾರತದ ಹಾಕಿಯ ಈ ದುರವಸ್ಥೆಗೆ ಕಾರಣರಾಗಿರುವ ಹಾಕಿ ಇಂಡಿಯಾ ಸಂಸ್ಥೆಯ ಪದಾಧಿಕಾರಿಗಳನ್ನು ಜವಾಹರಲಾಲ್ ನೆಹರೂ ಕ್ರೀಡಾಂಗಣದ ಮಧ್ಯದಲ್ಲಿ ನಿಲ್ಲಿಸಿ ಛಡಿ ಏಟು ಕೊಟ್ಟಿದ್ದರೆ ಸರಿಹೋಗುತ್ತಿತ್ತೇನೋ! ಭಾರತದ ಹಾಕಿ ಆಟಗಾರರಿಗೆ ಸಿಗಬೇಕಾದ ಮರ್ಯಾದೆ ಎಂದೂ ಸೂಕ್ತವಾಗಿ ಸಿಕ್ಕಿಲ್ಲ.

ಹಾಕಿ ರಾಷ್ಟ್ರೀಯ ಕ್ರೀಡೆ ಎಂದು ಹೇಳಲು ಅವರಿಗೆ ನಾಚಿಕೆಯಾಗಬೇಕು. ಈ ಭ್ರಷ್ಟ ಪದಾಧಿಕಾರಿಗಳು ತಂಡದ ಏಳ್ಗೆಗೆ ಏನೂ ಮಾಡಿಲ್ಲ. ಆದರೆ ಎಲ್ಲ ಲಾಭವನ್ನೂ ಭಕ್ಷಿಸಿದ್ದಾರೆ. ದಕ್ಷಿಣ ಆಫ್ರಿಕದಲ್ಲಿ ಒಂದು ಸ್ಪಷ್ಟವಾದ ಕಂದಕ ಇತ್ತು. ಆದರೆ ಭಾರತದ ಹಾಕಿ ರಂಗದಲ್ಲಿ ನೂರಾರು ತೂತುಗಳು. ಇವುಗಳನ್ನು ಮುಚ್ಚುವುದು ಹೇಗೆ? ಮುಚ್ಚುವವರು ಯಾರು?


ಇದೇ ತಿಂಗಳು ಚೀನಾದ ಗ್ವಾಂಗ್‌ಜೂನಲ್ಲಿ ನಡೆಯುವ ಏಷ್ಯನ್ ಕ್ರೀಡೆಗಳಲ್ಲಿ ಭಾರತ ತಂಡ ಚಿನ್ನದ ಪದಕ ಗೆದ್ದರೆ ಲಂಡನ್‌ನಲ್ಲಿ 2012ರಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುತ್ತದೆ. 2008 ರಲ್ಲಿ ನಡೆದ ಬೀಜಿಂಗ್ ಒಲಿಂಪಿಕ್ಸ್‌ಗೆ ಭಾರತ ಅರ್ಹತೆ ಗಳಿಸಿರಲಿಲ್ಲ. ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತ ಹಾಕಿ ತಂಡ ಆಡಲು ವಿಫಲವಾಗಿದ್ದು ಅದೇ ಮೊದಲಾಗಿತ್ತು. ಸೋಲಿಗಿಂತ ದೊಡ್ಡ ಅವಮಾನ ಅದಾಗಿತ್ತು.  1980 ರಿಂದ ಒಲಿಂಪಿಕ್ಸ್ ಹಾಕಿಯಲ್ಲಿ ಭಾರತ ಚಿನ್ನದ ಪದಕ ಗೆದ್ದಿಲ್ಲ. 2006 ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಕ್ರೀಡೆಗಳಲ್ಲಿ ಭಾರತ ತಂಡ ಐದನೇ ಸ್ಥಾನ ಗಳಿಸಿತ್ತು. ಏಷ್ಯನ್ ಕ್ರೀಡೆಗಳಲ್ಲೇ ಭಾರತ ತಂಡ ವಿಫಲವಾದರೆ ಒಲಿಂಪಿಕ್ಸ್ ಅಥವಾ ವಿಶ್ವ ಕಪ್‌ನಲ್ಲಿ ದೊಡ್ಡ ಸಾಧನೆ ನಿರೀಕ್ಷಿಸುವುದು ಸಾಧ್ಯವಿಲ್ಲ. ಭಾರತ ಹಾಕಿ ತಂಡದಲ್ಲಿ ತುಂಬಿರುವ ಹೊಲಸು ರಾಜಕೀಯ ಮೊದಲು ತೊಲಗಬೇಕು. ಆಯ್ಕೆ ವಿಧಾನ ಬದಲಾಗಬೇಕು.

ದೇಶದಲ್ಲಿ ಹೆಚ್ಚು ಹೆಚ್ಚು ಟೂರ್ನಿಗಳಾಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಹಾಕಿ ಆಟಗಾರನಿಗೂ ಉತ್ತಮ ಭವಿಷ್ಯ ಇದೆ ಎಂಬ ಭರವಸೆ ಮೂಡಬೇಕು. ಹಾಕಿ ಇಂಡಿಯಾ ಎಂಬುದು ಒಂದು ಹೆಸರಾಗಿ ಉಳಿಯದೇ ಆಟಗಾರರ ಮತ್ತು ಜನರ ಉಸಿರಾಗಬೇಕು. ಆದರೆ ಇದಕ್ಕೆ ಮಂಡೇಲಾರಿಗಿದ್ದ ಪ್ರಾಮಾಣಿಕ ಕಳಕಳಿ ಹಾಕಿ ಇಂಡಿಯಾ ಪದಾಧಿಕಾರಿಗಳಿಗೆ ಬೇಕು. ಆದರೆ ಭಾರತದ ಕ್ರೀಡಾರಂಗದಲ್ಲಿ ತುಂಬಿರುವ ಭ್ರಷ್ಟಾಚಾರವನ್ನು ಗಮನಿಸಿದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಒಂದು ಕಾಲದಲ್ಲಿ ನಾವೇ ಸಾರ್ವಭೌಮರಾಗಿದ್ದೆವು ಎಂದು ಹೇಳುತ್ತ ಕೂಡುವುದು ಸಾಕು. ಇಂದು ನಾವು ಏನಿದ್ದೇವೆ, ನಾಳೆ ಏನಿರುತ್ತೇವೆ ಎಂಬುದಷ್ಟೇ ಮುಖ್ಯ. 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT