ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆಯೇ?

Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನಿಜ; ಭಾರತೀಯ ಸಂವಿಧಾನದ ಪರಿಚ್ಛೇದ  ೧೯.೧ (ಎ) ಸ್ಪಷ್ಟವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ­ವನ್ನು ಪ್ರತಿಯೊಬ್ಬ ಪ್ರಜೆಗೂ ನೀಡುತ್ತದೆ: “All citizens shall have the right a) to freedom of speech and expression”  (ಎಲ್ಲಾ ಪ್ರಜೆಗಳಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ). ಈ ಸ್ವಾತಂತ್ರ್ಯ ಭಾರತೀಯ ಪ್ರಜೆಗಳ ಮೂಲ­ಭೂತ ಹಕ್ಕು; ಆದರೆ ಸಂಪೂರ್ಣ ಹಾಗೂ ಪ್ರಶ್ನಾತೀತ ಹಕ್ಕಲ್ಲ (not an absolute right).

ಇದಾದ ನಂತರವೇ ಬರುವ ೧೯.೨: ಆ ಮೂಲಭೂತ ಹಕ್ಕಿನ ಮೇಲಿರುವ ಕೆಲವು ‘ಉಚಿತ ಅಥವಾ ಸಕಾರಣ ನಿರ್ಬಂಧ’ಗಳನ್ನು (‘reasonable restri­ctions’)  ಪಟ್ಟೀ ಮಾಡುತ್ತದೆ: “Nothing prevents the State from making any law in the interests of the sovereignty and integrity of India, the security of the state... Public order, Decency or Morality, Defamation or incitement to an offence” (ರಾಷ್ಟ್ರದ ಸಾರ್ವಭೌಮತ್ವ ಮತ್ತು ಏಕತೆ, ರಾಷ್ಟ್ರದ ಸುಭದ್ರತೆ, ಸಾರ್ವಜನಿಕ ಶಾಂತಿ, ನೈತಿಕತೆ, ಚಾರಿತ್ರ್ಯ ಹನನ, ಮತ್ತು ಅಪರಾಧಕ್ಕೆ ಉತ್ತೇಜನ– ಇವುಗಳನ್ನು ಲಕ್ಷಿಸಿ, ರಾಷ್ಟ್ರವು ಯಾವುದೇ ಕಾನೂನನ್ನೂ ರಚಿಸಲು (ಮೇಲೆ ಹೇಳಿದ ಅಭಿವ್ಯಕ್ತಿ ಸ್ವಾತಂತ್ರ್ಯದ) ಮೂಲಭೂತ ಹಕ್ಕು ಅಡ್ಡಿ ಬರುವುದಿಲ್ಲ.)

೧೯೭೨ರಲ್ಲಿ, ಮೇಲೆ ಹೇಳಿದ ‘ಉಚಿತ ಅಥವಾ ಸಕಾರಣ  ನಿರ್ಬಂಧ’ಗಳನ್ನು ಕುರಿತು ಅಲ್ಲಿಯ­ವರೆಗೆ ಇದ್ದ ಇಂಡಿಯನ್ ಪೀನಲ್ ಕೋಡ್  ಸೆಕ್ಷನ್ ೧೫೩ನ್ನು ಕೈಬಿಟ್ಟು,  ಅದಕ್ಕೆ ಬದಲಾಗಿ, ಸೆಕ್ಷನ್ ೧೫೩ ಎ ಮತ್ತು ೧೫೩ ಬಿ ಸೇರಿಸ­ಲಾಯಿತು.  ಈ ಕಲಮುಗಳು ಎಷ್ಟು ವ್ಯಾಪಕ­ವಾಗಿವೆಯೆಂದರೆ, ಇವುಗಳ (ಹಾಗೂ ಮೊದಲೇ ಇದ್ದ ೨೯೫–-೨೯೮) ಕಾರಣದಿಂದ ವಾಸ್ತವದಲ್ಲಿ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯವು ಸರಿ ಸುಮಾರು ಇಲ್ಲವೇ ಇಲ್ಲವಾಗಿದೆ.

ಸೆಕ್ಷನ್ ೧೫೩ ಎ ಮತ್ತು ೧೫೩ ಬಿ (ಮತ್ತು ೨೯೫--–-೨೯೮) ಎಷ್ಟು ಕಠೋರವಾಗಿವೆಯೆಂದು ನಿದರ್ಶಿಸಲು ‘೧೫೩ ಎ’ ಅನ್ನು ಪ್ರಾತಿನಿಧಿಕವಾಗಿ ನೋಡಬಹುದು.

೧೫೩ ಎ: (೧) ಎ:
‘‘ಯಾರು ಮಾತು ಅಥವಾ ಬರವಣಿಗೆ ಅಥವಾ ಸಂಜ್ಞೆಗಳು ಅಥವಾ ದೃಶ್ಯ ಚಿಹ್ನೆಗಳು ಅಥವಾ ಇನ್ನಿತರ ಯಾವುದೇ ರೀತಿ­ಯಲ್ಲಿ,  ಮತ, ಜನಾಂಗ, ಜನ್ಮಸ್ಥಳ, ನೆಲೆಸಿರುವ ಸ್ಥಳ, ಭಾಷೆ, ಜಾತಿ ಅಥವಾ ಸಮುದಾಯ, ಅಥವಾ ಇನ್ನಿತರ ನೆಲೆಗಳಲ್ಲಿ ಮತೀಯ, ಜನಾಂಗಿಕ, ಭಾಷಿಕ ಅಥವಾ ಪ್ರಾದೇಶಿಕ ಗುಂಪು­ಗಳು ಅಥವಾ ಜಾತಿ­ಗಳು ಅಥವಾ ಸಮುದಾಯ­ಗಳು ಇವುಗಳ ನಡುವೆ ಅನೈಕ್ಯ ಅಥವಾ ಶತ್ರುತ್ವದ ಭಾವನೆ­ಗಳನ್ನು, ದ್ವೇಷ ಅಥವಾ ಅಸಂತೋಷ­ಗಳನ್ನು ಪ್ರಚೋದಿಸು­ತ್ತಾರೋ ಅಥವಾ ಪ್ರಚೋದಿಸಲು ಪ್ರಯತ್ನಿಸುತ್ತಾರೋ, ಅಥವಾ,

ಬಿ: ಯಾರು ವಿಭಿನ್ನ ಮತೀಯ, ಜನಾಂಗಿಕ, ಭಾಷಿಕ ಅಥವಾ ಪ್ರಾದೇಶಿಕ ಗುಂಪುಗಳ ಅಥವಾ ಜಾತಿಗಳ   ಅಥವಾ ಸಮುದಾಯಗಳ ಸಾಮ­ರಸ್ಯಕ್ಕೆ ಭಂಗ ತರುವ ಕೆಲಸವನ್ನು ಮಾಡು­ತ್ತಾರೋ ಮತ್ತು ಅಂತಹ ಕೃತ್ಯ ಸಾರ್ವಜನಿಕ ಶಾಂತಿಯನ್ನು ಭಂಗ ಮಾಡುತ್ತದೋ ಅಥವಾ ಭಂಗ ಮಾಡುವ ಸಂಭವವಿದೆಯೋ, ಅಥವಾ,

ಸಿ: ಯಾರು, ಯಾವುದೇ ವಿಧದ (ಸಾಮೂ­ಹಿಕ) ದೈಹಿಕ ಶಿಕ್ಷಣ, ಚಲನೆ, ಡ್ರಿಲ್ ಅಥವಾ ಅಂತಹ ಇತರ ಕಾರ್ಯಗಳನ್ನು, ಇವುಗಳಲ್ಲಿ ಭಾಗವಹಿಸಿದವರು ಹಿಂಸೆ ಅಥವಾ ಮಾರಕ ಶಕ್ತಿಯನ್ನು (criminal force) ಯಾವುದೇ ಮತೀಯ, ಜನಾಂಗಿಕ, ಭಾಷಿಕ, ಅಥವಾ ಪ್ರಾದೇಶಿಕ ಅಥವಾ ಜಾತೀಯ ಅಥವಾ ಸಮು­ದಾಯದ ವಿರುದ್ಧ ಉಪಯೋಗಿಸುವ ಸಾಧ್ಯತೆ­ಯಿಂದ (ಹಿಂದೆ ಹೇಳಿದ ಕಾರ್ಯಗಳನ್ನು) ಯೋಜಿಸುತ್ತಾರೆಯೋ ಮತ್ತು ಅಂತಹ ಕಾರ್ಯ ಯಾವುದೇ ಕಾರಣಕ್ಕಾಗಿ (ಮೇಲೆ ಹೇಳಿದ) ಮತೀಯ, ಜನಾಂಗಿಕ, ಭಾಷಿಕ, ಅಥವಾ ಸಮುದಾಯದ ಸದಸ್ಯರಲ್ಲಿ ಭೀತಿ ಅಥವಾ ಅಸ್ಥಿರತೆಯ ಭಾವನೆಯನ್ನು ಉಂಟು­ಮಾಡು ­­ತ್ತದೆ­ಯೋ ಅಥವಾ ಉಂಟುಮಾಡುವ ಸಾಧ್ಯತೆ ಇದೆಯೋ, ಅಂತಹವರು ಶಿಕ್ಷಾ­ರ್ಹರು (ಶಿಕ್ಷೆ ಮೂರು ವರ್ಷ ಕಾರಾಗೃಹ ವಾಸ ಅಥವಾ ದಂಡ ಅಥವಾ ಎರಡೂ).

ಐಪಿಸಿ ೨೯೫–-೨೯೮ ಇಷ್ಟೇ ವ್ಯಾಪಕವಾಗಿ ಮತೀಯ ಸಾಮರಸ್ಯಕ್ಕೆ ಮೀಸಲಾಗಿವೆ; ಮತ್ತು ಮತೀಯ ಸಾಮರಸ್ಯವನ್ನು ಕದಡುವ ಎಲ್ಲಾ ಬಗೆಯ ಮಾತು, ಬರವಣಿಗೆ, ಕಾರ್ಯ ಇತ್ಯಾದಿ ಕೃತ್ಯಗಳನ್ನು ಅಥವಾ ಅಂತಹ ಪ್ರಯತ್ನಗಳನ್ನು ದಂಡನಾರ್ಹ ಅಪರಾಧಗಳನ್ನಾಗಿ ಪರಿಗಣಿ­ಸುತ್ತವೆ (ಮೂಲ ಕಲಮುಗಳು ತುಂಬಾ ದೀರ್ಘವಾಗಿದ್ದು, ಆಸಕ್ತರು ಸೆಕ್ಷನ್ ೧೫೩ ಎ ಮತ್ತು ಬಿ,  ೨೯೫, ೨೯೫ ಎ, ೨೯೬-–೨೯೮ ಇವುಗಳನ್ನು ಐಪಿಸಿಯಲ್ಲಿ ನೋಡಬಹುದು). 

ಉದ್ದೇಶ:  ಸೆಕ್ಷನ್ ೧೫೩ ಎ ಮತ್ತು ೧೫೩ ಬಿ ಇವುಗಳು ಬಹುಧರ್ಮೀಯ, ಬಹು ಭಾಷಿಕ ಮತ್ತು ಬಹು ಸಾಂಸ್ಕೃತಿಕ ರೂಪದ ಭಾರತೀಯ ಸಮಾಜದಲ್ಲಿ ಶಾಂತಿ, ಏಕತೆ, ಮತ್ತು ಸಾಮರಸ್ಯ­ಗಳನ್ನು ಕಾಪಾಡುವ ಹಾಗೂ ಬೆಳೆಸುವ ಉದ್ದೇಶವನ್ನು ಹೊಂದಿವೆ.

ಸಂದರ್ಭ: ೧೯೭೦-೭೨ ಈ ಅವಧಿಯ ಭಾರತದ ರಾಜಕೀಯ ಪರಿಸ್ಥಿತಿಯನ್ನು ನಾವು ಗಮನಿಸಿದರೆ  (ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಯುದ್ಧ; ಶಿವಸೇನೆ, ಅಸ್ಸಾಂ ಗಣ ಪರಿ­ಷತ್ತು, ಇವೇ ಮುಂತಾದ ಉಗ್ರ ಧೋರಣೆಯ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ; ಹೆಚ್ಚಿದ ಆರ್. ಎಸ್. ಎಸ್., ಜಮಾತ್-ಎ–ಇಸ್ಲಾಂ ಇತ್ಯಾದಿ ಧಾರ್ಮಿಕ, ಸಾಂಸ್ಕೃತಿಕ ಪಕ್ಷಗಳ ಚಟು­ವಟಿಕೆಗಳು...), ಈ ಶಾಸನಗಳ ವ್ಯಾಪ್ತಿ ಮತ್ತು ಅಂದಿದ್ದ ಅವಶ್ಯಕತೆ ಇವುಗಳ ಅರಿವಾಗುತ್ತದೆ. ಆದರೆ ಆ ಪರಿಸ್ಥಿತಿಗೆ ಆಗಿನ ಕೇಂದ್ರ ಸರ್ಕಾರವು ಮಿತಿ­ಮೀರಿದ ಪ್ರತಿಕ್ರಿಯೆಯನ್ನು (over reaction) ಪ್ರದರ್ಶಿ­ಸಿತು ಎಂಬುದು ಈ ತಿದ್ದುಪಡಿ­ಗಳಿಂದ ಗೊತ್ತಾಗು­ತ್ತದೆ.  ಈ ಸೆಕ್ಷನ್‌ಗಳನ್ನು ಪದಶಃ ಜಾರಿ­ಗೊಳಿಸಿದರೆ ಯಾವ ಪಕ್ಷವೂ, ಯಾವ ಚುನಾವಣಾ ಭಾಷಣ­ವೂ, ಯಾವ ಸಾಹಿತ್ಯಕ–-ಕಲಾತ್ಮಕ ಕೃತಿಯೂ  ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.

ತಾತ್ವಿಕ ನೆಲೆಯಲ್ಲಿ, ಈ ಕಾಯ್ದೆಯ ಅಡಿ ಅಪರಾಧವೆಂದು ಪರಿಗಣಿಸಲು ಆರೋಪಿಯ ಉದ್ದೇಶ (Intention) ಮತ್ತು ಪರಿಣಾಮ (Result) ಮುಖ್ಯವಾಗುತ್ತವೆ.  ಎಂದರೆ, ಆರೋಪಿ­­ಯ ಕೃತ್ಯದ ಹಿಂದೆ ಮತೀಯ, -ಭಾಷಿಕ ಇತ್ಯಾದಿ ಸಮಾಜದ ಭಿನ್ನ ವರ್ಗಗಳ ನಡುವೆ ದ್ವೇಷವನ್ನುಂಟು ಮಾಡುವ ಉದ್ದೇಶವಿರಬೇಕು; ಮತ್ತು ಅಂತಹ ಉದ್ದೇಶ ವಾಸ್ತವವಾಗಿಯೂ ಸಾರ್ವಜನಿಕ ಶಾಂತಿಯನ್ನು ಭಂಗಗೊಳಿಸಿರ­ಬೇಕು.  ಈ ಉದ್ದೇಶವಿಲ್ಲದಿದ್ದರೆ, ಆರೋಪಿಯ ಕೃತ್ಯ (ಮಾತು, ಬರವಣಿಗೆ, ಸಂಜ್ಞೆ, ಇತ್ಯಾದಿ) ಅಪರಾಧವಾಗುವುದಿಲ್ಲ.

 ಎಂದರೆ, ತಾತ್ವಿಕ ನೆಲೆಯಲ್ಲಿ, ಈ ಅಂಶಗಳು ಅಭಿವ್ಯಕ್ತಿ ಸ್ವಾತಂತ್ರ್ಯ­ವನ್ನು ಮೊಟಕುಗೊಳಿಸುವುದಿಲ್ಲ; ಆದರೆ, ವಾಸ್ತವಿಕ ನೆಲೆಯಲ್ಲಿ, ‘ಉದ್ದೇಶ’ವನ್ನು ಗುರುತಿ­ಸಲು ಅಸಾಧ್ಯವಾದುದರಿಂದ ಮತ್ತು ಅದು ಕೇವಲ ಊಹೆಯನ್ನು ಆಧರಿಸಿರುವುದರಿಂದ (speculative), ಮತ್ತು  public order   ಹಾಗೂ  morality  ಪರಿಕಲ್ಪನೆಗಳು ತುಂಬಾ ಅಮೂರ್ತವಾದುದರಿಂದ, ೧೫೩ ಎ ಮತ್ತು ೧೫೩ ಬಿ ಸೆಕ್ಷನ್‌ಗಳ (ಮತ್ತು ೨೯೫-–೨೯೮ ಸೆಕ್ಷನ್‌ಗಳ)  ಅಡಿಯಲ್ಲಿ, ಕಳೆದ ನಾಲ್ಕು ದಶಕಗಳಲ್ಲಿ ಅಕ್ಷರಶಃ ನೂರಾರು ಸಂಶೋಧಕರು,  ಸಾಹಿತಿಗಳು, ಭಾಷಣಕಾರರು ಅಪರಾಧಿ­ಗಳೆಂದು ಪರಿಗಣಿಸಲ್ಪಟ್ಟು  ಅಪಾರ ಮಾನಸಿಕ ಹಿಂಸೆಗೆ ಹಾಗೂ ಹೆಚ್ಚಿನ ಸಂದರ್ಭಗಳಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. 

ಸಲ್ಮಾನ್ ರಶ್ದಿ ಅವರ ‘ಸಟಾನಿಕ್ ವರ್ಸಸ್’ ಕೃತಿಯು ಜಗತ್ತಿ­ನಾದ್ಯಂತ ಮುಸ್ಲಿಮ್ ಸಮುದಾಯದ ಆಕ್ರೋಶ­ಕ್ಕೊಳಗಾದುದು, ಮತ್ತು ಎಂ. ಎಫ್‌. ಹುಸೇನರು ತಮ್ಮ ಹಿಂದೂ ದೇವತೆಗಳ ಚಿತ್ರಗಳ ಕಾರಣದಿಂದ ಈ ದೇಶವನ್ನೇ ಬಿಡಬೇಕಾಗಿ ಬಂದುದು ಎಲ್ಲರಿಗೂ ಗೊತ್ತು; ಆದರೆ, ಅಷ್ಟು ಪ್ರಸಿದ್ಧವಲ್ಲದ ಆದರೆ ಅಷ್ಟೇ ಮಾನಸಿಕ,- ದೈಹಿಕ ಹಿಂಸೆಯನ್ನು ಅನುಭವಿಸಿದ,  ಸೆಕ್ಷನ್ ೧೫೩ ಎ , ಽಬಿ ಅಡಿಯಲ್ಲಿ ಅಥವಾ  ೨೯೫–-೨೯೮ ಇವುಗಳೊಡನೆ ಅಪರಾಧಿ­ಗಳೆಂದು ಪರಿಗಣಿಸಲ್ಪಟ್ಟ,  ಬಂಧಿಸಲ್ಪಟ್ಟ ಬರಹ­ಗಾರರ, ಕಲಾವಿದರ ಇತ್ತೀಚಿನ ಕೆಲವು ನಿದರ್ಶನಗಳು ಹೀಗಿವೆ: 

* ಆಗಸ್ಟ್ ೨೦೧೩: ಯೋಗೇಶ್ ಮಾಸ್ಟರ್, ‘ಢುಂಢಿ’ ಕಾದಂಬರಿ (ಕರ್ನಾಟಕ; ಆರೋಪ: ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ; ಮೊಕದ್ದಮೆ ದಾಖಲು, ಬಂಧನ).

* ಮೇ ೨೦೧೩: ಕೆ. ಸೆಂದಿಲ್ ಮಲ್ಲನ್, ‘ಮೀಂಡೆಜ಼ುಮ್ ಪಾಂಡಿಯರ್ ವರಲಾರು’ (ತಮಿಳುನಾಡು; ಸಂಶೋಧನಾ ಗ್ರಂಥ; ಆರೋಪ: ಜಾತಿ ಹಾಗೂ ಸಮುದಾಯಗಳ ನಡುವೆ ಅಶಾಂತಿ ಹಾಗೂ ದ್ವೇಷವನ್ನು ಹುಟ್ಟು ಹಾಕುತ್ತದೆ; ಮೊಕದ್ದಮೆ ದಾಖಲು ಮತ್ತು ಪುಸ್ತಕದ ಮುಟ್ಟುಗೋಲು).

* ನವೆಂಬರ್ ೨೦೧೨: ಶಹೀನ್ ಧಾಡ ಮತ್ತು ರೇಣು ಶ್ರೀನಿವಾಸನ್, ‘ಫೇಸ್‌ಬುಕ್‌ನಲ್ಲಿ ಬಾಳ ಠಾಕ್ರೆಯ ಅಂತಿಮ ಯಾತ್ರೆಯ ಸಂದರ್ಭ­ದಲ್ಲಿ ಇಡೀ ಮುಂಬಯಿ -ಬಂದ್‌ನ್ನು ಪ್ರಶ್ನಿಸಿದ್ದಕ್ಕೆ’ (ಮಹಾರಾಷ್ಟ್ರ ಸರ್ಕಾರ; ಆರೋಪ: ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ; ೨೯೫ ಎ ಮತ್ತು ಐ. ಟಿ. ಕಾಯ್ದೆ ೬೬ ಎ ಅಡಿ ಬಂಧನ).

* ಫೆಬ್ರುವರಿ ೨೦೦೯: ರವೀಂದ್ರ ಕುಮಾರ್ ಮತ್ತು ಅನಿಲ್ ಸಿನ್ಹಾ, “Why should I respect oppressive religions?”  ಲೇಖನ (ಪಶ್ಚಿಮ ಬಂಗಾಳ; ಮೊದಲು  ‘ದ ಇಂಡಿ­ಪೆಂ­ಡೆಂಟ್’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಜೋಹಾನ್ ಹರಿ ಎಂಬುವವರು ಬರೆದಿದ್ದ ಲೇಖನದ ಪುನರ್‌ ಮುದ್ರಣ, ‘ದ ಸ್ಟೇಟ್ಸ್‌­ಮನ್’ ಪತ್ರಿಕೆಯಲ್ಲಿ; ಆರೋಪ: ಮುಸ್ಲಿಮ್ ಸಮುದಾಯದ ಭಾವನೆ­ಗಳಿಗೆ ಧಕ್ಕೆ; ಮೊಕದ್ದಮೆ ದಾಖಲು.)

* ಜುಲೈ ೨೦೦೮: ಆಶಿಶ್ ನಂದಿ, ‘‘Critically Analysing the Outcome of the 2007 Polls”   (ಗುಜರಾತ್ ಸರ್ಕಾರ: ಲೇಖನ; ಆರೋಪ: ಭಾಷಿಕ, -ಧಾರ್ಮಿಕ ಸಮು­ದಾಯಗಳ ನಡುವೆ ದ್ವೇಷ­ವನ್ನು ಹುಟ್ಟುಹಾಕುವ ಸಂಭಾವ್ಯತೆ; ಮೊಕದ್ದಮೆ ದಾಖಲು,  ಸುಪ್ರೀಂ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು).

* ಡಿಸೆಂಬರ್ ೨೦೦೮: ಲೆನಿನ್ ರಾಯ್ (ನಕ್ಸಲ್ ಪರ ಲೇಖನಗಳನ್ನು ಬರೆದರೆಂಬ ಆಪಾದನೆ; ಒಡಿಶಾ, ಮೊಕದ್ದಮೆ ದಾಖಲು ಮತ್ತು ಬಂಧನ).

* ಜನವರಿ ೨೦೦೭: ಆರ್.ವಿ. ಭಸೀನ್, “Islam: A Concept of Political World Invasion by Muslims”;೨೦೦೩ರಲ್ಲಿ ಪ್ರಕಟವಾಗಿದ್ದ ಈ ಕೃತಿಯ ಹಿಂದಿ ಅನುವಾದ (ಮಹಾರಾಷ್ಟ್ರ; ಆರೋಪ: ಮುಸ್ಲಿಮ್ ಸಮು­ದಾಯದ ಅವಹೇಳನ; ಮೊಕದ್ದಮೆ ದಾಖಲು ಮತ್ತು ಪುಸ್ತಕದ ಮುಟ್ಟುಗೋಲು).

ಮಾರ್ಚ್ ೨೦೦೭: ಬಿ. ವಿ. ಸೀತಾ­ರಾಮ್, ‘ಕರಾವಳಿ ಅಲೆ’ ಮತ್ತು ಇತರ ಪತ್ರಿಕೆಗಳಲ್ಲಿ ಲೇಖನ (ಕರ್ನಾಟಕ; ಆರೋಪ: ಜೈನ ಧರ್ಮದ ಮತ್ತು ಜೈನ ಧರ್ಮೀಯರ ಅವಹೇಳನ; ಮೊಕದ್ದಮೆ ದಾಖಲು ಮತ್ತು ಬಂಧನ).

* ಮೇ ೨೦೦೭: ಚಂದ್ರಮೋಹನ್ ಶ್ರೀಮಂತುಲ, ಲಲಿತ ಕಲಾ ಅಕಾಡೆಮಿಯ ವಿದ್ಯಾರ್ಥಿ (ಗುಜರಾತ್; ಆರೋಪ: ಅವನು ರಚಿಸಿದ ದೇವತೆಗಳ ಮೂರ್ತಿಗಳು ಅಶ್ಲೀಲ ಹಾಗೂ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ; ಮೊಕದ್ದಮೆ ದಾಖಲು ಮತ್ತು ಬಂಧನ).

* ಏಪ್ರಿಲ್ ೧೯೯೪: ನ್ಯಾನ್ಸಿ ಅಡಾಜಾನಿಯ (ಮುಂಬಯಿ ವಿ.ವಿಯ ೨೨ ವರ್ಷದ ವಿದ್ಯಾರ್ಥಿನಿ; “Myth And Super Myth”  ಎಂಬ ಗಂಭೀರ ಹಾಗೂ ಸಂಶೋಧನೆಯನ್ನು ಆಧರಿಸಿದ ಲೇಖನ ಏಪ್ರಿಲ್ ೧೦–-೧೬, ೧೯೯೩ರ ‘ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ವಾರಪತ್ರಿಕೆಯಲ್ಲಿ ಪ್ರಕಟ;  ‘ನೂತನ ರಾಷ್ಟ್ರಗಳು ತಮ್ಮ ಅಸ್ಮಿತೆಯನ್ನು ಕಟ್ಟಿಕೊಳ್ಳುವುದಕ್ಕಾಗಿ ಗತದ ನಾಯಕರನ್ನು ವೈಭವೀಕರಿಸಿ ಅವರನ್ನು ವಿಗ್ರಹಗಳಂತೆ-– Icons– -ಸೃಷ್ಟಿಸುತ್ತಾರೆ’ ಎಂಬ ವಾದದ ಸಮರ್ಥನೆಗೆ  ಶಿವಾಜಿ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಮತ್ತು ರಾಜ ಗಂಗಾಧರ ರಾವ್ ಅವರ ನಿಜ-–ಕಲ್ಪಿತ ವ್ಯಕ್ತಿತ್ವಗಳ ವಿಶ್ಲೇಷಣೆ.   ಮಹಾರಾಷ್ಟ್ರದ ಉದ್ದಕ್ಕೂ ಪ್ರತಿಭಟನೆಗಳು ನಡೆದು, ಆ ಪತ್ರಿಕೆಯ ಪ್ರತಿಗಳು ಸುಡಲ್ಪಟ್ಟು, ಕೂಡಲೇ ಅಡಾಜಾನಿಯಾ ಬಂಧನ; ‘ವೀಕ್ಲಿ’ಯ ಸಂಪಾದಕರ ಸಾರ್ವಜನಿಕ ಕ್ಷಮಾಪಣೆ).

ಇದು ಮುಗಿಯದ ಪಟ್ಟಿ; ಕೇವಲ ಕರ್ನಾಟಕ­ದಲ್ಲಿಯೇ ಈ ಪಟ್ಟಿಯಲ್ಲಿ  ಮಾಸ್ತಿ (ಎರಡೂ ಕಾದಂಬರಿಗಳು; ವೀರಶೈವರ ಭಾವನೆಗಳಿಗೆ ಧಕ್ಕೆ), ಶಿವರಾಮ ಕಾರಂತ (‘ಓದುವ ಆಟ’; ವಿಶ್ವಕರ್ಮ ಸಮುದಾಯದ ಅವಹೇಳನ), ಕೆ.ಎಸ್. ಭಗವಾನ್, (‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’; ಹಿಂದೂ ಧಾರ್ಮಿಕ ನಾಯಕರ ಅವಹೇಳನ), ಎಚ್. ಎಸ್. ಶಿವಪ್ರಕಾಶ್ (‘ಮಹಾಚೈತ್ರ’),  ಪಿ. ವಿ. ನಾರಾಯಣ (‘ಧರ್ಮಕಾರಣ’), ಬಂಜಗೆರೆ ಜಯಪ್ರಕಾಶ್ (‘ಆನು ದೇವಾ ಹೊರಗಿನವನು’; ಈ ಮೂರೂ ಕೃತಿಗಳಿಂದ ವೀರಶೈವ ಸಮು­ದಾಯದ ಭಾವನೆಗಳಿಗೆ ಧಕ್ಕೆ), ಎಚ್.ಎಸ್. ನಾಗವೇಣಿ (‘ಗಾಂಧಿ ಬಂದ’; ವಿಶ್ವಕರ್ಮ ಸಮುದಾಯದ ಅವಹೇಳನ), ಭಗವಾನ್ ಮತ್ತು ಗೋವಿಂದರಾವ್ (ಸಾರ್ವಜನಿಕ ಭಾಷಣ; ವೀರಶೈವ ಸಮುದಾಯದ ಅವ­ಹೇಳನ), ಮುಂತಾದವರು ಸೇರುತ್ತಾರೆ.

ಐ.ಪಿ.ಸಿ ಸೆಕ್ಷನ್ ೧೫೩ ಎ ಮತ್ತು ಬಿ ಎಷ್ಟು ವ್ಯಾಪಕವಾಗಿವೆ ಮತ್ತು ದುರುಪಯೋಗಕ್ಕೆ ಎಷ್ಟು ಆಸ್ಪದ ಕೊಡುತ್ತವೆ ಎಂಬುದನ್ನು ಈ ಒಂದು ಘಟನೆ ದಾಖಲಿಸುತ್ತದೆ.  ಅಕ್ಟೋಬರ್ ೨೦೧೧­ರಲ್ಲಿ, ಜನತಾ ಪಾರ್ಟಿಯ ಅಧ್ಯಕ್ಷರಾದ ಡಾ. ಸುಬ್ರಹ್ಮಣ್ಯ ಸ್ವಾಮಿ ನವದೆಹಲಿಯಲ್ಲಿ, ಯುಪಿಎ ಮುಖ್ಯಸ್ಥೆ  ಸೋನಿಯಾ ಗಾಂಧಿ ವಿರುದ್ದ ಇದೇ ಕಲಮುಗಳ ಆಧಾರದ ಮೇಲೆ ಮೊಕದ್ದಮೆ ಹೂಡಿ­­ದರು.  ಆರೋಪ: ಸೋನಿಯಾ ಗಾಂಧಿ­ಯವರು ಪಾರ್ಲಿಮೆಂಟ್‌­ನಲ್ಲಿ ತರಲು ಉದ್ದೇಶಿ­ಸಿದ್ದ ‘‘Prevention of Communal and Targeted Violence Bill, 2011”  ಎಂಬ ಮಸೂದೆಯ ಕರಡು ಪ್ರತಿಯನ್ನು ತಮ್ಮ ಪಕ್ಷದ ಪ್ರಮುಖರಿಗೆ ಪರಿ­ಶೀಲನೆಗೆ ಕಳುಹಿಸಿದುದು ‘ಹಿಂದೂ ಸಮು­ದಾಯ­ದ ವಿರುದ್ಧ ದ್ವೇಷವನ್ನು ಪ್ರಚೋದಿಸುತ್ತದೆ’.

ನ್ಯಾನ್ಸಿ ಅಡಾಜಾನಿಯಾ ಮತ್ತು ಇತರ ಆರೋಪಿಗಳ ಜಾಮೀನು ಅರ್ಜಿಯ ಬಗ್ಗೆ ತೀರ್ಪು ನೀಡಿದ ಜಸ್ಟಿಸ್ ಎಂ. ಸಾಲ್ಡಾನಾ ಅವರು ಈ ಘಟನೆಯನ್ನು “Distressing, mis­guided, and misdirected”  ಎಂದು ವರ್ಣಿಸಿ, ಸೆಕ್ಷನ್ ೧೫೩ ಎ ಅಡಿ, ವಿಶೇಷವಾಗಿ ಲೇಖಕರು ಹಾಗೂ ಪತ್ರಕರ್ತರ ವಿರುದ್ಧ ಮೊಕದ್ದಮೆ ಹೂಡುವಾಗ, ಸಂಬಂಧಿಸಿದ ಅಧಿ­ಕಾರಿ­ಗಳು ಬಹಳ ಎಚ್ಚರಿಕೆ­ಯಿಂದ ಆಪಾದನೆ­ಗಳನ್ನು ಪರೀಕ್ಷಿಸಬೇಕೆಂದು  ಹೇಳುತ್ತಾ, ಏಪ್ರಿಲ್ ೨೩, ೧೯೯೩ರಂದು ಹೀಗೆ ತೀರ್ಪಿತ್ತರು: “This is very necessary if constitutional guarantees are to be safeguarded and concepts that hold good in the dark ages are not to be allowed to turn the clock backwards”  (‘ಸಾಂವಿಧಾನಿಕ ಭರವಸೆಗಳನ್ನು ಕಾಪಾಡಲು ಮತ್ತು ಕತ್ತಲೆಯುಗದ ಪರಿಕಲ್ಪನೆಗಳು ಗಡಿ­ಯಾರವನ್ನು ಹಿನ್ನಡೆಸದಂತೆ ನೋಡಿಕೊಳ್ಳಲು [ಮೊಕದ್ದಮೆ ಹೂಡುವಾಗ ಅಧಿಕಾರಿಗಳು ವಹಿಸ­ಬೇಕಾದ] ಈ ಬಗೆಯ ಎಚ್ಚರಿಕೆ ಬಹಳ ಮುಖ್ಯ’). ಮೇಲೆ ಉಲ್ಲೇಖಿಸಿದ ಘಟನೆಗಳನ್ನು ಪರಿಶೀಲಿಸಿ­ದರೆ, ಅಂತಹ ಎಚ್ಚರಿಕೆ ಆಡಳಿತ–ಪೊಲೀಸ್ ಅಧಿಕಾರಿಗಳಲ್ಲಾಗಲೀ, ಸಾರ್ವಜನಿಕ­ರಲ್ಲಾಗಲೀ ಕಂಡುಬರುತ್ತಿಲ್ಲವೆನ್ನುವುದು ದುರದೃಷ್ಟಕರ.

ಈಗ ಮಾಡಬೇಕಾದುದು: ಐಪಿಸಿ ಸೆಕ್ಷನ್ಸ್ ೧೫೩ ಎ ಮತ್ತು ಬಿ, ಸೆಕ್ಷನ್ಸ್ ೨೯೫–2-೯೮ ಇವುಗಳ ತಿದ್ದುಪಡಿಯಾಗಲು ಅಥವಾ ಇವುಗಳ ಆಧಾರವಾದ ‘ಪಬ್ಲಿಕ್ ಆರ್ಡರ್’ ಮತ್ತು ‘ಡೀಸೆನ್ಸಿ ಹಾಗೂ ಮೊರಾಲಿಟಿ’ ಎಂಬ ಪರಿ­ಕಲ್ಪನೆ­ಗಳ ಎಲ್ಲೆಗಳನ್ನು (‘limts of applicability’)  ಗುರುತಿಸಲು, ಸಾರ್ವಜನಿಕ ಅಭಿಪ್ರಾಯ ಹಾಗೂ ಒತ್ತಡವನ್ನು ರೂಪಿಸುವುದು.  ಇದು ಭಾರತದ ಎಲ್ಲಾ ಲೇಖಕರ, ಚಿಂತಕರ, ನ್ಯಾಯವಾದಿಗಳ ಮತ್ತು ಶಾಸಕರ ಕರ್ತವ್ಯ.

(ಈ ಲೇಖನದ ವಿಷಯಕ್ಕೆ ಸಂಬಂಧಪಟ್ಟಂತೆ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶವಿದೆ.)
‌editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT