ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಕಡಿಮೆಯಾಗದ ಲಂಚಗುಳಿತನ

ವಿಶ್ವದ ಹಲವು ರಾಷ್ಟ್ರಗಳನ್ನು ಕಾಡುತ್ತಿರುವ ಭ್ರಷ್ಟಾಚಾರ ಪಿಡುಗು
Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬರ್ಲಿನ್‌ (ಪಿಟಿಐ):  ಭಾರತವು ಜಗತ್ತಿನ ಅತ್ಯಂತ ಲಂಚಗುಳಿತನದ ರಾಷ್ಟ್ರವಾಗಿ ಮುಂದುವರಿದಿದ್ದು, ಶುದ್ಧಹಸ್ತದ ವಿಷಯದಲ್ಲಿ 177 ದೇಶಗಳ ಪೈಕಿ 94ನೇ ಸ್ಥಾನದಲ್ಲಿ ನಿಂತಿದೆ.

ಭ್ರಷ್ಟಾಚಾರವು ಜಗತ್ತಿನ ಬಹು­ಪಾಲು ರಾಷ್ಟ್ರಗಳನ್ನು ಕಿತ್ತುತಿನ್ನುತ್ತಿರುವ ಪಿಡುಗಾಗಿರುವುದು ‘ಟ್ರಾನ್‌್ಸಪರೆನ್ಸಿ ಇಂಟರ್‌ನ್ಯಾಷನಲ್‌’ ಸ್ಥಂಸ್ಥೆಯ ಸಮೀಕ್ಷೆಯಿಂದ ಸ್ಪಷ್ಟವಾಗಿದೆ. ಒಟ್ಟು 177 ರಾಷ್ಟ್ರಗಳ ಪೈಕಿ 118ಕ್ಕಿಂತ ಹೆಚ್ಚು ರಾಷ್ಟಗಳ ಸ್ಥಿತಿ ಶೋಚನೀಯವಾಗಿದ್ದು, ಗರಿಷ್ಠ 50ಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿವೆ.

ಕೆಲವು ಆಂದೋಲನಗಳ ನಂತರವೂ ಭಾರತದಲ್ಲಿ ಭ್ರಷ್ಟತೆಯ ಮಟ್ಟವೇನೂ ಕಡಿಮೆಯಾಗಿಲ್ಲ. ಕಳೆದ ಸಾಲಿನಲ್ಲಿ 94ನೇ ಸ್ಥಾನದಲ್ಲಿದ್ದ ಅದು ಈ ವರ್ಷವೂ ಅದೇ ಸ್ಥಾನದಲ್ಲಿ ಮುಂದು ವ­ರಿ­ದಿದೆ ಎಂದು ಸ್ಥಂಸ್ಥೆ ತಿಳಿಸಿದೆ.

ಡೆನ್ಮಾರ್ಕ್‌ ಮತ್ತು ನ್ಯೂಜಿಲೆಂಡ್‌ ಅತ್ಯಂತ ಸ್ವಚ್ಛ ರಾಷ್ಟ್ರಗಳಾಗಿ ಮುಂಚೂಣಿಯಲ್ಲಿದ್ದರೆ ಕಡಲ್ಗಳ್ಳರಿಗೆ ಕುಖ್ಯಾತಿಯಾದ ಸೊಮಾಲಿಯಾ, ಉತ್ತರ ಕೊರಿಯಾ ಮತ್ತು ತಾಲಿಬಾನ್‌ ಹಿಡಿತದಲ್ಲಿರುವ ಆಫ್ಘಾನಿಸ್ತಾನಕ್ಕೆ ಭ್ರಷ್ಟಾತಿಭ್ರಷ್ಟ ರಾಷ್ಟ್ರಗಳೆಂಬ ಕಪ್ಪುಚುಕ್ಕೆ ಮೆತ್ತಿಕೊಂಡಿದೆ.
ವಿವಿಧ ಮಾನದಂಡಗಳಡಿ ನಿಗದಿ ಮಾಡಲಾಗಿದ್ದ ಗರಿಷ್ಠ 100 ಅಂಕಗಳಿಗೆ ಭಾರತ 36 ಅಂಕಗಳನ್ನಷ್ಟೇ ಪಡೆದಿದೆ. ಯಾವ ಅಂಕವನ್ನೂ ಪಡೆಯಲಾಗದೆ ಸೊನ್ನೆ (0) ಸುತ್ತುವ ರಾಷ್ಟ್ರ ‘ಪರಮ ಭ್ರಷ್ಟ’ವಾದರೆ 100 ಅಂಕ ಗಳಿಸುವ ರಾಷ್ಟ್ರ ‘ಅತ್ಯಂತ ಶುದ್ಧ’ ಎಂದು ಪರಿಗಣಿಸಲಾಗುತ್ತದೆ.

91 ಅಂಕಗಳನ್ನು ಪಡೆದಿರುವ ಡೆನ್ಮಾರ್ಕ್‌ ಮತ್ತು ನ್ಯೂಜಿಲೆಂಡ್‌ಗಳು ಮೊದಲ ಸ್ಥಾನದಲ್ಲಿದ್ದು, ಇಲ್ಲಿ ಭ್ರಷ್ಟಾಚಾರ ತುಂಬಾ ಕಡಿಮೆ ಇದೆ.
ಸೊಮಾಲಿಯಾ, ಉತ್ತರ ಕೊರಿಯಾ ಮತ್ತು ಆಫ್ಘಾನಿಸ್ತಾನಗಳು ಕೇವಲ 8 ಅಂಕಗಳನ್ನಷ್ಟೇ ಪಡೆದಿವೆ. ಇವುಗಳ ಹಿಂದೆಯೇ ಸೂಡಾನ್‌, ಲಿಬಿಯಾ, ಇರಾಕ್‌, ಉಜ್ಬೆಕಿಸ್ತಾನ, ಸಿರಿಯಾ, ಹೈಟಿ, ವೆನೆಜುವೆಲಾ, ಜಿಂಬಾಬ್ವೆ ಮತ್ತು ಮ್ಯಾನ್ಮಾರ್‌ಗಳು ಭ್ರಷ್ಟ್ರತೆಯ ಸಾಲಿನಲ್ಲಿ ನಿಂತಿವೆ.

ಮತ್ತೊಂದೆಡೆ ಶುದ್ಧ ರಾಷ್ಟ್ರಗಳ ಸಾಲಿನಲ್ಲಿ ಡೆನ್ಮಾರ್ಕ್‌, ನ್ಯೂಜಿಲೆಂಡ್‌ ಬೆನ್ನ ಹಿಂದೆ ಫಿನ್ಲೆಂಡ್‌, ಸ್ವೀಡನ್‌, ಸಿಂಗಪುರ, ಸ್ವಿಟ್ಜರ್‌ಲೆಂಡ್‌, ನೆದರ್‌ಲೆಂಡ್‌, ಆಸ್ಟ್ರೇಲಿಯಾ ಮತ್ತು ಕೆನಡಾ ಇವೆ. ಜರ್ಮನಿಯು 12ನೇ ಸ್ಥಾನದಲ್ಲಿದ್ದರೆ ಬ್ರಿಟನ್‌ 14ನೇ, ಹಾಂಕಾಂಗ್‌ 15ನೇ, ಜಪಾನ್‌ 18ನೇ ಮತ್ತು ಅಮೆರಿಕ 19ನೇ ಸ್ಥಾನಗಳಲ್ಲಿವೆ.

ಭಾರತವು 94ನೇ ಸ್ಥಾನದಲ್ಲಿದ್ದರೆ, ಅದರ ಸಾಂಪ್ರದಾಯಿಕ ಎದುರಾಳಿ ನೆರೆ ರಾಷ್ಟ್ರ ಪಾಕಿಸ್ತಾನ 127ನೇ ಸ್ಥಾನದಲ್ಲಿದೆ. ಥಾಯ್ಲೆಂಡ್‌ 102, ಮೆಕ್ಸಿಕೊ 106, ಈಜಿಪ್ಟ್‌ 114, ನೇಪಾಳ 116, ವಿಯೆಟ್ನಾಂ 116, ಬಾಂಗ್ಲಾದೇಶ 136 ಮತ್ತು ಇರಾನ್‌ 144ನೇ ಸ್ಥಾನಗಳಲ್ಲಿವೆ.
ಭಾರತ ಹೊರತುಪಡಿಸಿದರೆ ‘ಬ್ರಿಕ್‌’ ರಾಷ್ಟ್ರಗಳ ಕೂಟದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು  ಬ್ರೆಜಿಲ್‌ 72ನೇ, ಚೀನಾ 80ನೇ ಹಾಗೂ ರಷ್ಯಾ 127ನೇ ಸ್ಥಾನದಲ್ಲಿವೆ.

ಅಧಿಕಾರ ದುರ್ಬಳಕೆ, ಒಳ ಒಪ್ಪಂದ, ಲಂಚಗುಳಿತನಗಳು ಜಗತ್ತಿನ ಹಲವು ರಾಷ್ಟ್ರಗಳನ್ನು ಕಾಡುತ್ತಿರುವ ಜ್ವಲಂತ ಪಿಡುಗಾಗಿದೆ ಎಂಬುದನ್ನು 2013ನೇ ಸಾಲಿನ ‘ಭ್ರಷ್ಟಾಚಾರ ಸೂಚ್ಯಂಕ ಪಟ್ಟಿ’ ಸೂಚಿಸುತ್ತದೆ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT